ಸೆರೆನಾ ಮಹದಾಸೆ ಹೊಸಕಿ ಹಾಕಿದ ಒಸಾಕಗೆ ಚೊಚ್ಚಲ ಗ್ರಾಂಡ್‌ಸ್ಲಾಮ್ ಸಿರಿ

ಒಂದರ ಹಿಂದೊಂದರಂತೆ ಎರಡು ಗ್ರಾಂಡ್‌ಸ್ಲಾಮ್‌ಗಳನ್ನು ಎರಡು ತಿಂಗಳಲ್ಲಿ ಕಳೆದುಕೊಂಡ ಸೆರೆನಾ ವಿಲಿಯಮ್ಸ್ ಖಿನ್ನರಾದರು. ವಿಶ್ವದ ಅಗ್ರಮಾನ್ಯ ಆಟಗಾರ್ತಿ ಎದುರು ಸೆಣಸುತ್ತಿದ್ದೇನೆ ಎಂಬ ಪರಿವೆಯಿಲ್ಲದೆ ಅತ್ಯಂತ ನಿರ್ಭಿಡೆ ಆಟವಾಡಿದ ಒಸಾಕ ಚೊಚ್ಚಲ ಗ್ರಾಂಡ್‌ಸ್ಲಾಮ್‌ಗೆ ಮುತ್ತಿಟ್ಟು ಸಂಭ್ರಮಿಸಿದರು

ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಟೆನಿಸ್ ಅಂಗಣ ಭರ್ತಿಯಾಗಿತ್ತು. ಎಲ್ಲರ ಕಣ್ಣು ಸೆರೆನಾ ವಿಲಿಯಮ್ಸ್ ಮತ್ತು ಜಪಾನ್ ಆಟಗಾರ್ತಿ ನವೊಮಿ ಒಸಾಕ ಮೇಲೆಯೇ. ಚೊಚ್ಚಲ ಗ್ರಾಂಡ್‌ಸ್ಲಾಮ್ ಫೈನಲ್ ಆಡುತ್ತಿರುವ ಒಸಾಕ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿ ಕೃಷ್ಣಸುಂದರಿಗೆ ಮಣಿಯುವುದು ನಿಶ್ಚಿತ ಎಂದುಕೊಂಡಿದ್ದವರ ಲೆಕ್ಕಾಚಾರಗಳು ಬುಡಮೇಲಾದವು. ಸೆರೆನಾಗಿಂತ ೧೬ ವರ್ಷ, ೨೦ ದಿನ ಕಿರಿಯಳಾದ ಒಸಾಕ ವಿಶ್ವ ಚಾಂಪಿಯನ್ ವಿರುದ್ಧ ಗೆಲುವು ಪಡೆದರು. ೧೯೯೧ರಲ್ಲಿ ಮಾರ್ಟಿನಾ ನವ್ರಾಟಿಲೋವಾ ವಿರುದ್ಧ ಮೋನಿಕಾ ಸೆಲೆಸ್ ಗೆದ್ದ ರೀತಿಯಲ್ಲಿ ಒಸಾಕ, ಸೆರೆನಾ ಎದುರು ವಿಜೃಂಭಿಸಿದರು.

೨೩ ಗ್ರಾಂಡ್‌ಸ್ಲಾಮ್‌ ಪ್ರಶಸ್ತಿಗಳ ಒಡತಿ ಸೆರೆನಾ ಜಪಾನ್‌ನ ಉದಯೋನ್ಮುಖ ಟೆನಿಸ್ ತಾರೆ ಒಸಾಕ ಎದುರು ೨-೬, ೪-೬ ನೇರ ಸೆಟ್‌ಗಳಲ್ಲಿ ಸೋತು ಆಘಾತ ಅನುಭವಿಸಿದರು. ಒಸಾಕ ಕೈ ಮೇಲಾಗುತ್ತಿದ್ದಂತೆ ಅಸಹನೆಯಿಂದ ಚೀರಿದ ಸೆರೆನಾಗೆ ರೆಫರಿ ಪೆನಾಲ್ಟಿ ವಿಧಿಸುತ್ತಿದ್ದಂತೆ ರ್ಯಾಕೆಟ್ ಅನ್ನು ಅಂಗಣಕ್ಕೆ ಕುಟ್ಟಿದ್ದೂ ನಿಯಮ ಉಲ್ಲಂಘನೆಯಾಯಿತು. ಆದರೆ, ಅಂತಿಮವಾಗಿ ವಾಸ್ತವ ಅರಿತ ಸೆರೆನಾ ತನ್ನನ್ನು ತಾನು ಸಾಂತ್ವನಿಸಿಕೊಂಡದ್ದು ಪ್ರಶಸ್ತಿ ನೀಡಿಕೆಯ ಸಂದರ್ಭದಲ್ಲಿ. ಜತೆಗೆ ನಿಂತಿದ್ದ ಒಸಾಕ ಆನಂದಬಾಷ್ಪ ಸುರಿಸುತ್ತಿದ್ದಾಗ ಆಕೆಯನ್ನು ಅಪ್ಪಿ ಹಿಡಿದ ಸೆರೆನಾ ಕ್ರೀಡಾಸ್ಫೂರ್ತಿ ಮೆರೆದರು!

೨೦ರ ಹರೆಯದ ಒಸಾಕ ಚೊಚ್ಚಲ ಗ್ರಾಂಡ್‌ಸ್ಲಾಮ್ ಗೆಲ್ಲುತ್ತಿದ್ದಂತೆ ಜಪಾನ್ ಟೆನಿಸ್‌ನಲ್ಲಿ ಹೊಸ ದಾಖಲೆ ಬರೆದರು. ಈ ಸಾಧನೆ ಮೆರೆದ ಮೊಟ್ಟಮೊದಲ ಜಪಾನ್ ಆಟಗಾರ್ತಿ ಎನಿಸಿಕೊಂಡ ಒಸಾಕ, ಅನುಭವಿ ಆಟಗಾರ್ತಿಯ ಎದುರು ವೃತ್ತಿಬದುಕಿನಲ್ಲಿ ಎರಡನೇ ಬಾರಿಗೆ ಜಯಶಾಲಿಯಾದರು. ಇತ್ತ, ರೆಫರಿಯ ತಾರತಮ್ಯ ನಡೆಯಿಂದ ತನಗೆ ಸೋಲಾಯಿತೆಂದುಕೊಂಡ ಸೆರೆನಾ, ಪಂದ್ಯ ಮುಗಿದ ನಂತರದಲ್ಲಿ ಅಂಪೈರ್ ಕಾರ್ಲೋಸ್ ರಾಮೊಸ್ ಅವರ ಕೈಕುಲುಕಲು ಕೂಡಾ ಮುಂದೆ ಬರಲಿಲ್ಲ.

ಸೋಲು ಮರೆತು ಅಭಿನಂದಿಸಿದ ಸೆರೆನಾ

೨೪ನೇ ಗ್ರಾಂಡ್‌ಸ್ಲಾಮ್ ಗೆದ್ದು ಸಾರ್ವಕಾಲಿಕ ದಾಖಲೆ ಸರಿಗಟ್ಟಲು ಮುಂದಾಗಿದ್ದ ಸೆರೆನಾ ಕನಸು ಮತ್ತೊಮ್ಮೆ ನುಚ್ಚುನೂರಾಯಿತು. ವಾಸ್ತವವಾಗಿ, ಜುಲೈ ತಿಂಗಳಿನಲ್ಲಿ ನಡೆದ ವಿಂಬಲ್ಡನ್ ಚಾಂಪಿಯನ್‌ಶಿಪ್ ಫೈನಲ್ ವೇಳೆಯೂ ಸೆರೆನಾ, ಇದೇ ರೀತಿ ಭ್ರಮನಿರಸನಗೊಂಡಿದ್ದರು. ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ಆಕ್ರಮಣಕಾರಿ ಆಟಕ್ಕೆ ತಲ್ಲಣಿಸಿ ಹೋಗಿದ್ದ ಸೆರೆನಾ, ಕೂದಲೆಳೆಯ ಅಂತರದಲ್ಲಿ ಪ್ರಶಸ್ತಿ ವಂಚಿತರಾದರು.

ವಿಂಬಲ್ಡನ್‌ನಲ್ಲಿ ವೈಫಲ್ಯ ಅನುಭವಿಸಿದರೂ, ಮನೆಯಂಗಣದಲ್ಲಿ ಮಹತ್ವದ ದಾಖಲೆ ಬರೆಯುವ ಅವಕಾಶ ಬಂದೊದಗಿದೆ ಎಂದು ಸಂಭ್ರಮಿಸಿದ್ದ ಸೆರೆನಾ ಮಹದಾಸೆಯನ್ನು ಒಸಾಕ ಹೊಸಕಿಹಾಕಿತು. ಎರಡು ಅವಕಾಶಗಳನ್ನು ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡದ್ದಕ್ಕಾಗಿ ಸೆರೆನಾ ಮೊಗ ಕಪ್ಪಿಟ್ಟಿತು! ಉಕ್ಕಿಬರುತ್ತಿದ್ದ ಕಂಬನಿಯನ್ನು ಆಕೆಯಿಂದ ಹತ್ತಿಕ್ಕಲಾಗಲಿಲ್ಲ. ಕಡೆಗೆ, ತನ್ನನ್ನು ತಾನು ಸಾಂತ್ವನಿಸಿಕೊಂಡ ಸೆರೆನಾ, ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಒಸಾಕಳನ್ನು ಅಪ್ಪಿ ಅಭಿನಂದಿಸಿದ್ದು ಸೆರೆನಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇತ್ತ, ಐತಿಹಾಸಿಕ ಸಾಧನೆ ಮೆರೆದ ಒಸಾಕಗೆ ಟೆನಿಸ್ ಜಗತ್ತು ಅಭಿನಂದನೆಗಳ ಮಹಾಮಳೆಯನ್ನೇ ಸುರಿಸಿದೆ. ಸರ್ಬಿಯಾ ಆಟಗಾರ್ತಿ ಹಾಗೂ ಮಾಜಿ ವಿಶ್ವ ನಂ ೧ ಅನಾ ಇವಾನೊವಿಚ್, “ಎಂಥಾ ಅದ್ಭುತ ಆಟ! ಒಸಾಕ ಆಟದ ಸಂಯೋಜನೆ ಹಾಗೂ ಶಕ್ತಿಶಾಲಿ ಬೆರಗು ಹುಟ್ಟಿಸುತ್ತದೆ. ಹಾಗೆಯೇ ಚಾಂಪಿಯನ್ ಸೆರೆನಾ ಮಹಾನ್ ಆಟಗಾರ್ತಿ,’’ ಎಂದು ಟ್ವಿಟರ್‌ನಲ್ಲಿ ಉದ್ಗರಿಸಿದ್ದಾರೆ.

ಈ ಸಂದರ್ಭದಲ್ಲಿ ಜಪಾನ್ ಆಟಗಾರ್ತಿ ನವೊಮಿ ವಿರುದ್ಧ ಪ್ರೇಕ್ಷಕರು ‘ಬೂ..’ ಎಂದು ಗೇಲಿ ಮಾಡಿದರು. ಆಗ ಮಧ್ಯಪ್ರವೇಶಿಸಿದ ಸೆರೆನಾ, ‘ಜಪಾನ್ ಆಟಗಾರ್ತಿ ಶ್ರೇಷ್ಠ ಆಟವಾಡಿದ್ದಾರೆ. ಅವರು ಗೆಲುವಿಗೆ ಅರ್ಹರಾಗಿದ್ದಾರೆ. ಅವರನ್ನು ನಿಂದಿಸಬೇಡಿ, ದಯವಿಟ್ಟು ಅಭಿನಂದಿಸಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ತಾವು ನವೊಮಿ ಬಳಿ ತೆರಳಿ ಕೈಕುಲುಕಿ, ಅಪ್ಪಿಕೊಂಡು ಅಭಿನಂದಿಸಿದರು.

ಅಂದಹಾಗೆ, ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಜಪಾನ್ ಆಟಗಾರ್ತಿ ನವೊಮಿ ವಿರುದ್ಧ ಪ್ರೇಕ್ಷಕರು ‘ಬೂ..’ ಎಂದು ಲೇವಡಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸೆರೆನಾ, ‘ಜಪಾನ್ ಆಟಗಾರ್ತಿ ಶ್ರೇಷ್ಠ ಆಟವಾಡಿದ್ದಾರೆ. ಆಕೆ ಗೆಲುವಿಗೆ ಅರ್ಹರಾಗಿದ್ದಾರೆ. ಅವರನ್ನು ನಿಂದಿಸಬೇಡಿ, ದಯವಿಟ್ಟು ಅಭಿನಂದಿಸಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರಲ್ಲದೆ, ನವೊಮಿ ಬಳಿ ತೆರಳಿ ಕೈಕುಲುಕಿ, ಅಪ್ಪಿಕೊಂಡು ಅಭಿನಂದಿಸಿದರು.

ಇದನ್ನೂ ಓದಿ : ಸಾರ್ವಕಾಲಿಕ ದಾಖಲೆ ಸನಿಹ ಸಾಗಿದ ಸೆರೆನಾಗೆ ಫೈನಲ್‌ನಲ್ಲಿ ಒಸಾಕ ಸವಾಲು

ಕೆರಳಿದ ಕಪ್ಪು ಸುಂದರಿ!

ಒಸಾಕ ವಿರುದ್ಧದ ಪಂದ್ಯದ ವೇಳೆ ಸೆರೆನಾ ನಡೆ ಎಲ್ಲರ ಗಮನ ಸೆಳೆಯಿತು. ಅಂಪೈರ್ ರಾಮೊಸ್ ಆಕೆಗೆ ಮೊದಲ ನಿಯಮ ಉಲ್ಲಂಘನೆಯ ಶಿಕ್ಷೆ ವಿಧಿಸಿದರು. ಸೆರೆನಾಗೆ ಕೋಚ್ ಪ್ಯಾಟ್ರಿಕ್ ಅವರಿಂದ ಬಂದ ಸನ್ನೆ ಇದಕ್ಕೆ ಕಾರಣ. ಕೋಚ್ ಆದವರು ತಮ್ಮ ಕ್ರೀಡಾಪಟುಗಳಿಗೆ ಸಲಹೆ-ಸೂಚನೆಗಳನ್ನು ನೀಡುವುದು ಡಬ್ಲ್ಯೂಟಿಎ ಟೂರ್ ಪಂದ್ಯಾವಳಿಯಲ್ಲಿ ಸಾಮಾನ್ಯವಾದರೂ, ಗ್ರಾಂಡ್‌ಸ್ಲಾಮ್‌ ಪಂದ್ಯಾವಳಿಗಳಲ್ಲಿ ಇಂಥದ್ದಕ್ಕೆಲ್ಲಾ ನಿರ್ಬಂಧ ಹೇರಲಾಗಿದೆ.

ಆದಾಗ್ಯೂ, ಸೆರೆನಾ ತಾನು ತನ್ನ ಕೋಚ್‌ನಿಂದ ಯಾವುದೇ ಸಲಹೆ, ಸೂಚನೆಯನ್ನು ಪಡೆಯಲಿಲ್ಲ ಎಂದರಲ್ಲದೆ, ತಾನು ಮೋಸದಾಟದಿಂದ ಗೆಲ್ಲುವ ಬದಲು ಸೋಲನ್ನು ಸ್ವೀಕರಿಸುವಂಥವಳು ಎಂದು ಅಂಪೈರ್ ಬಳಿ ಸಾಗಿ ನುಡಿದರು. ಆದರೆ, ಪಂದ್ಯದ ಬಳಿಕ ಫ್ರಾನ್ಸ್ ಮೂಲದ ಪ್ಯಾಟ್ರಿಕ್, ತಾನು ಸಲಹೆ ನೀಡಿದ್ದನ್ನು ಒಪ್ಪಿಕೊಂಡರು. “ನಾನು ಸೆರೆನಾಗೆ ಕೋಚಿಂಗ್ ನೀಡಿದ್ದು ನಿಜವಾದರೂ, ಆಕೆ ನನ್ನತ್ತ ನೋಡಲಿಲ್ಲವೆಂದೇ ನಾನು ಅಂದುಕೊಂಡಿದ್ದೇನೆ. ಇಷ್ಟಕ್ಕೂ ಒಸಾಕ ಕೋಚ್ ಸಾಶ್ಚಾ ಬಜಿನ್ ಕೂಡಾ ಆಕೆಗೆ ಸಲಹೆ-ಸೂಚನೆ ನೀಡುತ್ತಿದ್ದರು. ಪ್ರತಿಯೊಬ್ಬ ತರಬೇತುದಾರರೂ ತಂತಮ್ಮ ಆಟಗಾರರಿಗೆ ಕೆಲವೊಂದು ಸಲಹೆ-ಸೂಚನೆಗಳನ್ನು ನೀಡುವುದು ಸಾಮಾನ್ಯ,’’ ಎಂದರು.

ಇನ್ನು, ಸೆರೆನಾ ಮತ್ತೊಮ್ಮೆ ಅಂಪೈರ್ ಅವರಿಂದ ಪೆನಾಲ್ಟಿಗೆ ಗುರಿಯಾದದ್ದು ಎರಡನೇ ಸೆಟ್ ವೇಳೆ. ೩-೨ರಲ್ಲಿದ್ದಾಗ ರಾಮೊಸ್, ಸೆರೆನಾ ಪಾಯಿಂಟ್ಸ್‌ಗೆ ಕತ್ತರಿ ಹಾಕಿದರು. ತದನಂತರದ ಗೇಮ್‌ನಲ್ಲಿ ಒಸಾಕ ೧೫-೦ ಮುನ್ನಡೆ ಪಡೆದರು. ಇದರಿಂದ ಕೆಂಡವಾದ ಕಪ್ಪು ಸುಂದರಿ, ನೇರ ರಾಮೋಸ್ ಅವರ ಬಳಿ ಸಾಗಿ, ಅವರ ನಡೆಯನ್ನು ಖಂಡಿಸಿದರು. ತವರು ಅಭಿಮಾನಿಗಳು ಸಹಜವಾಗಿಯೇ ಆಕೆಯ ಬೆಂಬಲಕ್ಕೆ ನಿಂತರು. ಆನಂತರವೂ ಸೆರೆನಾ, ರಾಮೊಸ್ ಅವರತ್ತ ಶಾಂತವಾಗಲಿಲ್ಲ. ಇತ್ತ, ಒಸಾಕ ೪-೩ ಮುನ್ನಡೆಯೊಂದಿಗೆ ಸಾಗಿ ಕೊನೆಗೆ ಐತಿಹಾಸಿಕ ಜಯಭೇರಿ ಬಾರಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More