ಜಡೇಜಾ-ವಿಹಾರಿ ಆಟದಲ್ಲಿ ಪುಟಿದೆದ್ದರೂ, ಭಾರತದ ವಿರುದ್ಧ ಇಂಗ್ಲೆಂಡ್ ಮೇಲುಗೈ 

ಪದಾರ್ಪಣೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಹನುಮ ವಿಹಾರಿ (೫೬) ಆಲ್ರೌಂಡರ್ ರವೀಂದ್ರ ಜಡೇಜ (೮೬*) ಕೆಳಕ್ರಮಾಂಕದಲ್ಲಿ ನಡೆಸಿದ ಆಮೋಘ ಬ್ಯಾಟಿಂಗ್‌ನಿಂದ ಭಾರತ ಪುಟಿದೆದ್ದಿತು. ಆದರೆ, ೪೦ ರನ್ ಇನ್ನಿಂಗ್ಸ್ ಮುನ್ನಡೆ ಪಡೆದ ಇಂಗ್ಲೆಂಡ್, ೩ನೇ ೨ ವಿಕೆಟ್‌ಗೆ ೧೧೪ ರನ್ ಗಳಿಸಿತು

ಆತಿಥೇಯ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 332 ರನ್‌ಗಳಿಗೆ ಉತ್ತರವಾಗಿ ಭಾರತ ತಂಡ 95 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್‌ಗಳಿಗೆ 160 ರನ್‌ ಗಳಿಸಿತ್ತಾದರೂ, ಹನುಮ ವಿಹಾರಿ (56; 124ಎಸೆತ, 7ಬೌಂಡರಿ, 1ಸಿಕ್ಸರ್) ಮತ್ತು ಅವರೊಂದಿಗೆ ಕ್ರೀಸ್‌ನಲ್ಲಿದ್ದ ರವೀಂದ್ರ ಜಡೇಜ (86*; 156 ಎಸೆತ, 11 ಬೌಂಡರಿ, 1 ಸಿಕ್ಸರ್) ತೋರಿದ ಮನಮೋಹಕ ಬ್ಯಾಟಿಂಗ್‌ನಿಂದ ಭಾರತ ಪುಟಿದೆದ್ದಿತು.

ಆದರೆ, ಈ ಜೋಡಿಯ ಅಮೋಘ ಹೋರಾಟದ ಮಧ್ಯೆಯೂ ೪೦ ರನ್ ಮುನ್ನಡೆ ಪಡೆದ ಇಂಗ್ಲೆಂಡ್, ಎರಡನೇ ಇನಿಂಗ್ಸ್‌ ಆರಂಭಿಸಿರುವ ಅದು ಮೂರನಾ ದಿನಾಂತ್ಯಕ್ಕೆ ೪೩ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೧೪ ರನ್ ಗಳಿಸಿ ಆ ಮೂಲಕ ಪಂದ್ಯದಲ್ಲಿ ಇನ್ನಷ್ಟು ಬಿಗಿಹಿಡಿತ ಸಾಧಿಸಿತು. ಆಟ ನಿಂತಾಗ ಆರಂಭಿಕ ಹಾಗೂ ವಿದಾಯದ ಪಂದ್ಯವನ್ನಾಡುತ್ತಿರುವ ಅಲಸ್ಟೇರ್ ಕುಕ್ (೪೬) ಮತ್ತು ನಾಯಕ ಜೋ ರೂಟ್ ೨೬ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ವಿಹಾರಿ-ಜಡೇಜಾ ಮಿಂಚು

ಇಂಗ್ಲೆಂಡ್ ಬೌಲರ್‌ಗಳ ಮೇಲಾಟದಲ್ಲಿ ಭಾರತ ಮಹಾನ್ ಹಿನ್ನಡೆ ಅನುಭವಿಸುವುದು ಗ್ಯಾರಂಟಿ ಎನ್ನುವಂಥ ಸಂದಿಗ್ಧ ಸಂದರ್ಭದಲ್ಲಿ ಹನುಮ ವಿಹಾರಿ ಮತ್ತು ರವೀಂದ್ರ ಜಡೇಜಾ ಅಮೋಘ ಜತೆಯಾಟದೊಂದಿಗೆ ಭರವಸೆ ಮೂಡಿಸಿದರು. ಇವರಿಬ್ಬರೂ ಏಳನೇ ವಿಕೆಟ್‌ ಜತೆಯಾಟದಲ್ಲಿ 77 ರನ್‌ ಸೇರಿಸಿದರು. ಇದರಿಂದಾಗಿ ತಂಡ ಮುನ್ನಡೆ ಗಳಿಸುವ ಸುಳಿವು ನೀಡಿತ್ತು. ಆದರೆ, ಹನುಮ ವಿಹಾರಿ ಅವರನ್ನು ಮೊಯಿನ್ ಅಲಿ ಔಟ್ ಮಾಡುವುದರೊಂದಿಗೆ ಈ ಜೋಡಿಯ ಜತೆಯಾಟ ಬೇರ್ಪಟ್ಟಿತು.

ವಿಹಾರಿ ನಿರ್ಗಮನದ ನಂತರದಲ್ಲಿ ಜಡೇಜಾ ಹೋರಾಟ ಮುಂದುವರಿಸಿದರು. ಆದರೆ ಅವರಿಗೆ ಹೈದರಾಬಾದ್ ಬ್ಯಾಟ್ಸ್‌ಮನ್‌ನಂತೆ ಮಿಕ್ಕವರಿಂದ ಸಂಪೂರ್ಣ ಬೆಂಬಲ ಸಿಗಲಿಲ್ಲ. ಹೀಗಾಗಿ, ಭಾರತ ಕೇವಲ ೪೦ ರನ್‌ಗಳ ಅಂತರದಲ್ಲಿ ಇನ್ನಿಂಗ್ಸ್‌ ಮುನ್ನಡೆ ಅವಕಾಶದಿಂದ ವಂಚಿತವಾಯಿತು.

ಇದನ್ನೂ ಓದಿ : ಲಾರ್ಡ್ಸ್ ಟೆಸ್ಟ್ ತಂಡದ ಆಯ್ಕೆಯಲ್ಲಿ ನಾವು ಎಡವಿರುವುದು ನಿಜ ಎಂದ ವಿರಾಟ್

ಜೇಮ್ಸ್‌ ಆ್ಯಂಡರ್ಸನ್‌ಗೆ ದಂಡ

ಅಂಪೈರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ ಇಂಗ್ಲೆಂಡ್‌ ತಂಡದ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಅವರಿಗೆ ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ವಿಧಿಸಲಾಗಿದೆ. ಭಾರತದ ಮೊದಲ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್‌ನಲ್ಲಿ ಆ್ಯಂಡರ್ಸನ್‌ ಅವರು ಎಸೆದ ಚೆಂಡಿನ ಗತಿಯನ್ನು ವಿರಾಟ್ ಸರಿಯಾಗಿ ಗ್ರಹಿಸಲಿಲ್ಲ. ಹೀಗಾಗಿ, ಚೆಂಡು ಅವರ ಪ್ಯಾಡ್‌ಗೆ ಬಡಿಯಿತು.

ಆ್ಯಂಡರ್ಸನ್‌, ಎಲ್‌ಬಿಡಬ್ಲ್ಯು ನಿರ್ಧಾರಕ್ಕಾಗಿ ಅಂಪೈರ್‌ ಕುಮಾರ್‌ ಧರ್ಮಸೇನಾ ಅವರಿಗೆ ಮನವಿ ಸಲ್ಲಿಸಿದರು. ಆದರೆ, ಅವರ ಮನವಿಯನ್ನು ಧರ್ಮಸೇನಾ ಉಪೇಕ್ಷಿಸಿದರು. ಇದಕ್ಕೆ ಕೂಡಲೇ ಅಸಮಾಧಾನ ವ್ಯಕ್ತಪಡಿಸಿದ ಜಿಮ್ಮಿ, ಧರ್ಮಸೇನಾ ಅವರೊಂದಿಗೆ ವಾದಿಸಿದರು. ‘ಆ್ಯಂಡರ್ಸನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ)ನ ನಿಯಮ 2.1.5 ಉಲ್ಲಂಘನೆ ಮಾಡಿದ್ದಾರೆ’ ಎಂದು ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ತಿಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೩೩೨/೧೦ (ಅಲಸ್ಟೇರ್ ಕುಕ್ ೭೧, ಮೊಯೀನ್ ಅಲಿ ೫೦, ಜೋಸ್ ಬಟ್ಲರ್ ೮೯, ಸ್ಟುವರ್ಟ್ ಬ್ರಾಡ್ ೩೮; ರವೀಂದ್ರ ಜಡೇಜಾ ೭೯ಕ್ಕೆ ೩); ಭಾರತ ಮೊದಲ ಇನ್ನಿಂಗ್ಸ್: ೯೫ ಓವರ್‌ಗಳಲ್ಲಿ ೨೯೨/೧೦ (ಹನುಮ ವಿಹಾರಿ ೫೬, ರವೀಂದ್ರ ಜಡೇಜಾ ೮೬; ಜೇಮ್ಸ್ ಆ್ಯಂಡರ್ಸನ್ ೫೪ಕ್ಕೆ ೨, ಬೆನ್ ಸ್ಟೋಕ್ಸ್ ೫೬ಕ್ಕೆ ೨, ಮೊಯೀನ್ ಅಲಿ ೫೦ಕ್ಕೆ ೨); ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ೪೩ ಓವರ್‌ಗಳಲ್ಲಿ ೧೧೪/೨ (ಅಲಸ್ಟೇರ್ ಕುಕ್ ೪೬ ಬ್ಯಾಟಿಂಗ್, ಜೋ ರೂಟ್ ೨೯ ಬ್ಯಾಟಿಂಗ್; ರವೀಂದ್ರ ಜಡೇಜಾ ೩೬ಕ್ಕೆ ೧, ಮೊಹಮದ್ ಶಮಿ ೩೨ಕ್ಕೆ ೧).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More