ಯುಎಸ್ ಓಪನ್‌ಗೂ ಸೆರೆನಾ ಅಸಹನೆಗೂ ಇದೆ ಅವಿನಾಭಾವ ನಂಟು!

ಯುಎಸ್ ಓಪನ್ ಟೂರ್ನಿಯ ವನಿತೆಯರ ಸಿಂಗಲ್ಸ್ ಫೈನಲ್ ವಿವಾದದೊಂದಿಗೆ ಮುಗಿದಿದೆ. ಜಪಾನ್ ಆಟಗಾರ್ತಿ ನವೊಮಿ ವಿರುದ್ಧದ ಪಂದ್ಯದಲ್ಲಿನ ಸೆರೆನಾ ವರ್ತನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೆನಿಸ್ ಕೋರ್ಟ್‌ನಲ್ಲಿ ಸೆರೆನಾ ಸಹನೆ ಕಳೆದುಕೊಂಡ ಹಿನ್ನೋಟ ಇಲ್ಲಿದೆ

"ನೀನು ಕಳ್ಳ, ಮಹಾನ್‌ ಸುಳ್ಳುಗಾರ. ಇನ್ನು ಮುಂದೆ ಎಂದೂ ನನ್ನ ಕಣ್ಣೆದುರಿಗೆ ಬರಬೇಡ. ಪಂದ್ಯ ಮುಗಿದ ನಂತರ ನನ್ನ ಹತ್ತಿರ ಬಂದು ಕ್ಷಮೆ ಕೇಳಿ ಹೋಗು...”

-ಅಮೆರಿಕ ಓ‍ಪನ್‌ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಫ್ರಾನ್ಸ್‌ನ ಕಾರ್ಲೋಸ್ ರಾಮೊಸ್ ಅವರತ್ತ ಸೆರೆನಾ ವಿಲಿಯಮ್ಸ್ ಸ್ಫೋಟಿಸಿದ ಪರಿ ಇದು. ಅಂದಹಾಗೆ, ಸೆರೆನಾ ಅವರ ಈ ವರ್ತನೆ ಸಂಬಂಧ ಟೆನಿಸ್ ಜಗತ್ತು ಇಬ್ಭಾಗವಾಗಿದೆ; ಕೆಲವರು ಅವರನ್ನು ಬೆಂಬಲಿಸಿದರೆ, ಅಂಪೈರ್ ನಿರ್ಣಯವನ್ನು ಪ್ರಶ್ನಿಸುವುದು ತಪ್ಪು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕೇಳಿಬಂದಿದೆ.

ಟೆನಿಸ್ ಅಂಗಣದಲ್ಲಿ ಸೆರೆನಾ ಹೀಗೆ ಕ್ರುದ್ಧಗೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಅವರು ಸಹನೆ ಕಳೆದುಕೊಂಡು ವರ್ತಿಸಿದ್ದಕ್ಕೆ ಟೆನಿಸ್ ಇತಿಹಾಸದ ಪುಟಗಳು ಪುರಾವೆ ಒದಗಿಸುತ್ತವೆ. ಮುಖ್ಯವಾಗಿ, ಸೆರೆನಾ ವೃತ್ತಿಬದುಕಿನ ಬಹುತೇಕ ವಿವಾದಗಳು ಯುಎಸ್ ಓಪನ್‌ನಲ್ಲೇ ಘಟಿಸಿರುವುದು ವಿಶೇಷ. ಏತನ್ಮಧ್ಯೆ, ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ೨೩ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ ಘಟನೆಯ ಕುರಿತು ಸವಿಸ್ತಾರವಾಗಿ ಮಾತನಾಡಿದ್ದಾರೆ.

ಘಟನೆ ೧

ಅದು ಡಬ್ಲ್ಯೂಟಿಎ ಟೂರ್ ಪಂದ್ಯಾವಳಿಯಾದ ಇಂಡಿಯನ್ ವೆಲ್ಸ್‌ ಫೈನಲ್. ಎದುರಿಗೆ ಇದ್ದುದು ಬೇರಾರೂ ಅಲ್ಲ, ಎರಡು ವರ್ಷ ಹಿರಿಯಳಾದ ವೀನಸ್. ಅಕ್ಕ-ತಂಗಿಯರು ಇಬ್ಬರೂ ಆಡಿ ಬೆಳೆದ ಕ್ಯಾಲಿಫೋರ್ನಿಯಾದಲ್ಲಿ ಮುಖಾಮುಖಿಯಾಗಬೇಕಿದ್ದ ಸಂದರ್ಭ. ಆದರೆ, ಕೊನೇ ಘಟ್ಟದಲ್ಲಿ ವೀನಸ್ ಪಂದ್ಯದಿಂದ ಹಿಮ್ಮೆಟ್ಟಿದಾಗ ಅಭಿಮಾನಿಗಳು ಸಹಜವಾಗಿಯೇ ಬೇಸರಗೊಂಡಿದ್ದರು. ಇತ್ತ, ಬೆಲ್ಜಿಯಂ ಆಟಗಾರ್ತಿ ಕಿಮ್ ಕ್ಲಿಸ್ಟರ್ಸ್ ವಿರುದ್ಧ ಸೆರೆನಾ ಆಡುವಾಗ ಅಭಿಮಾನಿಗಳು ಆಕೆಯನ್ನು ಕಿಚಾಯಿಸುತ್ತಿದ್ದರು. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವೀನಸ್ ಮತ್ತು ಆಕೆಯ ತಂದೆ ರಿಚರ್ಡ್ಸ್ ತಮ್ಮನ್ನು ಜನಾಂಗೀಯವಾಗಿ ನಿಂದಿಸಲಾಯಿತು ಎಂದು ದೂರಿದರು. ಈ ಘಟನೆಯಿಂದ ಕುಪಿತಗೊಂಡ ಸೆರೆನಾ, ೨೦೧೫ರವರೆಗೂ ಕ್ಯಾಲಿಫೋರ್ನಿಯಾದಲ್ಲಿ ಆಡಲಿಲ್ಲ. ಇನ್ನು, ವೀನಸ್ ಅಂತೂ ೨೦೧೬ರವರೆಗೂ ಕ್ಯಾಲಿಫೋರ್ನಿಯಾ ಟೂರ್ನಿಗೆ ಕಾಲಿಡಲಿಲ್ಲ.

ಇದನ್ನೂ ಓದಿ : ಸೆರೆನಾ ಮಹದಾಸೆ ಹೊಸಕಿ ಹಾಕಿದ ಒಸಾಕಗೆ ಚೊಚ್ಚಲ ಗ್ರಾಂಡ್‌ಸ್ಲಾಮ್ ಸಿರಿ

ಘಟನೆ ೨

೨೦೦೪ರ ಯುಎಸ್ ಓಪನ್. ಜೆನ್ನಿಫರ್ ಕೇಪ್ರಿಯಾಟಿ ವಿರುದ್ಧದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೆರೆನಾ ಸೆಣಸಾಡಬೇಕಿತ್ತು. ಪಂದ್ಯದ ವೇಳೆ ಹಲವಾರು ಲೈನ್ ಕರೆಗಳು ಸೆರೆನಾ ವಿರುದ್ಧವಾಗಿದ್ದವು. ಅಂಪೈರ್ ಮಾರ್ಟಿನಾ ಆಲ್ವೆಸ್ ತೀರ್ಪಿನ ವಿರುದ್ಧ ಸೆರೆನಾ ಕುಪಿತರಾಗಿದ್ದರು. ಒಂದು ಹಂತದಲ್ಲಿ ಆಲ್ವೆಸ್ ವಿರುದ್ಧ ವಾಗ್ವಾದಕ್ಕೂ ಇಳಿದರು. ಆನಂತರದಲ್ಲಿ ಆಲ್ವೆಸ್ ಅವರನ್ನು ಟೂರ್ನಿಯ ಉಳಿದ ಪಂದ್ಯಗಳಿಂದ ದೂರ ಇಡಲಾಯಿತು.

ಘಟನೆ ೩

೨೦೦೯ರ ಯುಎಸ್ ಓಪನ್ ಪಂದ್ಯಾವಳಿಯ ಕಿಮ್ ಕ್ಲಿಸ್ಟರ್ಸ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸೆರೆನಾ ಸ್ಫೋಟಿಸಿದ್ದರು. ಎರಡನೇ ಸೆಟ್‌ ವೇಳೆ ೫-೬ ಹಾಗೂ ೧೫-೩೦ರಿಂದ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ಎರಡನೇ ಸರ್ವ್ ವೇಳೆ ಸೆರೆನಾ ಫುಟ್ ಫಾಲ್ಟ್ ಎಸಗಿದ್ದರು. ಇದರಿಂದ ಅಂಪೈರ್, ಕಿಮ್ ಕ್ಲಿಸ್ಟರ್ಸ್‌ಗೆ ಪಾಯಿಂಟ್ಸ್ ಅನ್ನು ಬಳುವಳಿಯಾಗಿ ನೀಡಿದರು. ಇದರಿಂದ ಕೆರಳಿದ್ದ ಸೆರೆನಾ, ಚೆಂಡನ್ನು ಗಂಟಲಿನ ಕೆಳಗೆ ತೂರುವ ಬೆದರಿಕೆ ಒಡ್ಡಿದ್ದರು. ಈ ಅಶಿಸ್ತಿನ ವರ್ತನೆಗಾಗಿ ಪಾಯಿಂಟ್ ಪೆನಾಲ್ಟಿಗೆ ಗುರಿಯಾಗಿ ಪಂದ್ಯವನ್ನು ಕಳೆದುಕೊಂಡಿದ್ದರು. ಘಟನೆಯಿಂದಾಗಿ ೮೨, ೫೦೦ ಡಾಲರ್‌ ದಂಡ ತೆರುವಂತಾದ ಸೆರೆನಾ, ಎರಡು ವರ್ಷಗಳ ಕಾಲ ಪ್ರಾಯೋಗಿಕ ಪರೀಕ್ಷೆಗೂ ಗುರಿಯಾಗಿದ್ದರು.

ಘಟನೆ ೪

೨೦೧೧ರ ಯುಎಸ್ ಓಪನ್ ಫೈನಲ್‌ ತಲುಪಿದ್ದ ಸೆರೆನಾ ವಿಲಿಯಮ್ಸ್, ಇದೇ ಫ್ಲಶಿಂಗ್ ಮೆಡೋಸ್‌ನಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ವಿರುದ್ಧ ಸೆಣಸುವಾಗಲೂ ವಿವಾದ ಎಬ್ಬಿಸಿದ್ದರು. ಬ್ರೇಕ್ ಪಾಯಿಂಟ್ ಗಳಿಸುವ ಸಂದರ್ಭದಲ್ಲಿ ಫೋರ್‌ಹ್ಯಾಂಡ್ ಶಾಟ್ ಬಾರಿಸಿದ ಸೆರೆನಾ, ‘ಕಮ್ ಆನ್’ ಎಂದು ಚೀರಿದರು. ಅಂಪೈರ್ ಈವಾ ಅಸ್ಟೆರಕಿ ಸೆರೆನಾ ವರ್ತನೆ ಪ್ರತಿಸ್ಪರ್ಧಿಯ ದಿಕ್ಕು ತಪ್ಪಿಸುವ ತಂತ್ರವೆಂದು ಸ್ಟಾಸರ್‌ಗೆ ಪಾಯಿಂಟ್ಸ್ ನೀಡಿದರು. ಇದರಿಂದ ಕನಲಿದ ಸೆರೆನಾ, ಈವಾ ಅವರನ್ನು ‘ಓರ್ವ ದ್ವೇಷಿ’ ಎಂದು ಜರೆದಿದ್ದರಲ್ಲದೆ, ‘ಒಳಗೆ ಆಕರ್ಷಣೆ ಇಲ್ಲದವಳು’ ಎಂದು ಮೂದಲಿಸಿದರು. ಈ ವರ್ತನೆ ಕ್ರೀಡಾಸ್ಫೂರ್ತಿಗೆ ಧಕ್ಕೆ ತಂದಿದ್ದರಿಂದ ಹಾಗೂ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯ ಆಟದ ನಿಯಮವನ್ನು ಉಲ್ಲಂಘಿಸಿದ ತಪ್ಪಿಗಾಗಿ ೨,೦೦೦ ಡಾಲರ್ ದಂಡ ವಿಧಿಸಲಾಗಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More