ಸಂಸತ್ ಚುನಾವಣೆ ಹಿನ್ನೆಲೆ; ೨೦೧೯ರ ಐಪಿಎಲ್ ದಕ್ಷಿಣ ಆಫ್ರಿಕಾದಲ್ಲಿ?

ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತೊಮ್ಮೆ ಭಾರತದಾಚೆ ನಡೆಯುವ ಸಂಭವವಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ೨೦೧೯ರ ಐಪಿಎಲ್ ನಡೆಸಲು ಬಿಸಿಸಿಐ ಚಿಂತಿಸಿದೆ ಎನ್ನಲಾಗಿದೆ

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣಾ ದಿನಾಂಕಕ್ಕಾಗಿ ದೇಶದ ರಾಜಕೀಯ ಪಕ್ಷಗಳಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಕಾತರದಿಂದ ಕಾಯುತ್ತಿದೆ. ಒಂದೊಮ್ಮೆ ಚುನಾವಣಾ ಆಯೋಗ ಪ್ರಕಟಿಸುವ ದಿನಾಂಕವು ಐಪಿಎಲ್ ವೇಳಾಪಟ್ಟಿಯೊಂದಿಗೆ ಘರ್ಷಣೆಗೆ ಬಿದ್ದರೆ, ಹನ್ನೆರಡನೇ ಐಪಿಎಲ್ ಪಂದ್ಯಾವಳಿಯನ್ನು ಭಾರತದಾಚೆ ನಡೆಸಲು ಬಿಸಿಸಿಐ ಮುಂದಾಗಲಿದೆ ಎಂದು ‘ಮುಂಬೈ ಮಿರರ್’ ವರದಿಯೊಂದು ಮುಂತಿಳಿಸಿದೆ.

ಈ ಹಿಂದೆ, ೨೦೦೯ರ ಐಪಿಎಲ್ ಪಂದ್ಯಾವಳಿಯು ದಕ್ಷಿಣ ಆಫ್ರಿಕಾದಲ್ಲಿ ನಡೆದರೆ, ೨೦೧೪ರಲ್ಲಿ ಕೆಲವೊಂದು ಪಂದ್ಯಗಳು ದುಬೈನಲ್ಲಿ ಜರುಗಿದ್ದವು. ಸದ್ಯ, ೨೦೧೯ರ ಟೂರ್ನಿಗಾಗಿ ಬಿಸಿಸಿಐ ಈಗಿನಿಂದಲೇ ಸಿದ್ಧತಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಮತ್ತು ಸಿಇಒ ರಾಹುಲ್ ಜೊಹ್ರಿ ಹಾಗೂ ಐಪಿಎಲ್ ಸಿಒಒ ಹೇಮಂಗ್ ಅಮಿನ್, ಟೂರ್ನಿ ಆಯೋಜನೆಗಾಗಿ ಎ, ಬಿ ಮತ್ತು ಸಿ ಎಂದು ಮೂರು ವಿಧದ ಯೋಜನೆಗೆ ತಯಾರಿ ನಡೆಸುತ್ತಿದ್ದಾರೆ.

ಒಂದೊಮ್ಮೆ ಪಂದ್ಯಾವಳಿ ಭಾರತದಾಚೆ ನಡೆಯುವುದೇ ಅನಿವಾರ್ಯವಾದರೆ, ದಕ್ಷಿಣ ಆಫ್ರಿಕಾ ಸೂಕ್ತ ಸ್ಥಳ ಎಂದು ಈಗಾಗಲೇ ನಿರ್ಧರಿಸಲಾಗಿದೆ. ಟೂರ್ನಿಯ ಅರ್ಧದಷ್ಟು ಪಂದ್ಯಗಳು ಮಾತ್ರ ಬೇರೆಡೆ ನಡೆಯಬೇಕಾದರೆ, ದುಬೈ ನೆಚ್ಚಿನ ತಾಣವಾಗಿರಲಿದೆ. ಇಂಗ್ಲೆಂಡ್ ಕೂಡ ಮೂರನೇ ಆತಿಥ್ಯದ ತಾಣವಾಗಿ ಗುರುತಿಸಲ್ಪಟ್ಟಿದ್ದು, ಇಲ್ಲಿ ಟೂರ್ನಿ ನಡೆಸಲು ಅಧಿಕ ವೆಚ್ಚ ತಗಲುವುದರಿಂದ ಇದನ್ನು ಮೂರನೇ ಮತ್ತು ಕೊನೆಯ ತಾಣವನ್ನಾಗಿ ಯೋಜನೆ ಪಟ್ಟಿಯಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : ಮದುವೆ ಫಸ್ಟ್, ಐಪಿಎಲ್ ನೆಕ್ಸ್ಟ್ ಎಂದ ಆಸೀಸ್ ಕ್ರಿಕೆಟಿಗ ಏರಾನ್ ಫಿಂಚ್

ವಿದೇಶದಲ್ಲಿನ ಭಾರತೀಯ ಜನಸಂಖ್ಯೆಗೆ ಅನುಸಾರ ಟೂರ್ನಿ ನಡೆಸುವುದಾದರೆ, ದುಬೈ ಸೂಕ್ತ ಸ್ಥಳವಾಗಿದೆ. ಆದರೆ, ಅಲ್ಲಿನ ಮೂಲಸೌಕರ್ಯ ಐಪಿಎಲ್‌ನಂಥ ಕ್ರಿಕೆಟ್ ಲೀಗ್‌ಗೆ ಯೋಗ್ಯವಲ್ಲ ಎಂಬ ಅಪಸ್ವರವೂ ಇದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಮಾತ್ರ ಸುಸಜ್ಜಿತ ಕ್ರೀಡಾಂಗಣಗಳಿವೆ. ಇಲ್ಲಿ ಟೂರ್ನಿಯ ಅರ್ಧದಷ್ಟು ಪಂದ್ಯಗಳನ್ನಷ್ಟೇ ಆಯೋಜಿಸಬಹುದಾಗಿದೆ. ೬೦ ಪಂದ್ಯಗಳಿರುವ ಬಹುದೊಡ್ಡ ಲೀಗ್‌ಗೆ ದಕ್ಷಿಣ ಆಫ್ರಿಕಾವೇ ಸೂಕ್ತ ಎಂದು ಹೇಳಲಾಗಿದೆ.

ಜೊಹ್ರಿ ಹಾಗೂ ಅಮಿನ್, ಐಪಿಎಲ್ ಸ್ಥಳಾಂತರ ಕುರಿತು ಸದ್ಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಒಂದೆರಡು ಫ್ರಾಂಚೈಸಿಗಳು ಐಪಿಎಲ್ ಸ್ಥಳಾಂತರದ ಸಾಧ್ಯತೆಗಳನ್ನು ಸ್ಪಷ್ಟಪಡಿಸಿವೆ ಎಂದು ಪತ್ರಿಕೆ ತಿಳಿಸಿದೆ. ಇದಕ್ಕೆಂದೇ ಮಂಗಳವಾರ (ಸೆ. ೧೧) ಸಿಒಎ ಮಹತ್ವದ ಸಭೆ ನಡೆಸಲಿದೆ ಎಂತಲೂ ವರದಿಯಲ್ಲಿ ಹೇಳಲಾಗಿದೆ.

ಚುನಾವಣೆಯೊಂದಿಗೆ ಕ್ರಿಕೆಟ್ ಸವಾಲು

ಕೇವಲ ಚುನಾವಣೆ ಮಾತ್ರವಲ್ಲದೆ ಕ್ರಿಕೆಟ್ ಸವಾಲುಗಳನ್ನೂ ಬಿಸಿಸಿಐ ಎದುರಿಸುವಂತಾಗಿದೆ. ಮುಖ್ಯವಾಗಿ, ವಿಶ್ವಕಪ್ ಪಂದ್ಯಾವಳಿಯು ಮೇ ೩೦ರಿಂದ ಶುರುವಾಗಲಿದೆ. ಸಾಮಾನ್ಯವಾಗಿ ಈ ದಿನಾಂಕ ಐಪಿಎಲ್‌ ಟೂರ್ನಿಯು ಪ್ರತಿ ಬಾರಿ ಮುಗಿಯುವ ದಿನವಾಗಿದೆ. ಹನ್ನೆರಡನೇ ಐಪಿಎಲ್ ಆವೃತ್ತಿಯು ಬಹುಶಃ ಮಾರ್ಚ್ ತಿಂಗಳ ಕೊನೇ ವಾರದಲ್ಲಿ ಆರಂಭವಾಗುವ ಸಂಭವವಿದೆ. ಆದಾಗ್ಯೂ, ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಸಾರ್ವತ್ರಿಕ ಚುನಾವಣಾ ದಿನಾಂಕವನ್ನು ಘೋಷಿಸಿದ ನಂತರವಷ್ಟೇ ೧೨ನೇ ಐಪಿಎಲ್ ವೇಳಾಪಟ್ಟಿಯ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನಲಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More