ಕುಕ್-ರೂಟ್ ಡಬಲ್ ಶತಕದ ಆಟ; ಸೋಲು ತಪ್ಪಿಸಿಕೊಳ್ಳಲು ಭಾರತ ಹೆಣಗಾಟ

ಮನೋಜ್ಞ ಇನ್ನಿಂಗ್ಸ್‌ನೊಂದಿಗೆ ವಿದಾಯದ ಪಂದ್ಯದಲ್ಲಿ ಮಿಂಚು ಹರಿಸಿದ ಅಲಸ್ಟೇರ್ ಕುಕ್ (೧೪೭) ಒಂದೆಡೆಯಾದರೆ, ಕಳಪೆ ಫಾರ್ಮ್‌ನಿಂದ ಪುಟಿದೆದ್ದ ರೂಟ್ (೧೨೫) ಶತಕ ಮತ್ತೊಂದೆಡೆ. ಈ ಇಬ್ಬರ ಜಂಟಿ ಶತಕದಿಂದಾಗಿ ಭಾರತ ತಂಡ, ಕೆನ್ನಿಂಗ್ಟನ್ ಓವಲ್‌ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಹೆಣಗುತ್ತಿದೆ

ಓರ್ವ ಆಟಗಾರನ ವೃತ್ತಿಬದುಕನ್ನೂ ಹೀಗೂ ಮುಗಿಸಬಹುದು ಎಂಬುದಕ್ಕೆ ಕುಕ್ ಅಕ್ಷರಶಃ ಸಾಕ್ಷ್ಯ ಒದಗಿಸಿದರು. ಪದಾರ್ಪಣೆ ಪಂದ್ಯದಲ್ಲಿ ಮಾತ್ರವಲ್ಲ, ನಿರ್ಗಮನದ ಪಂದ್ಯದಲ್ಲೂ ಶತಕ ದಾಖಲಿಸಿದ ಅಪರೂಪದ ಸಾಧಕರಲ್ಲಿ ಕುಕ್ ಒಬ್ಬರೆನಿಸಿದರು. ಕೇವಲ ಮೂರು ರನ್ ಅಂತರದಲ್ಲಿ ೧೫೦ ರನ್ ಸಾಧನೆ ತಪ್ಪಿಸಿಕೊಂಡ ಕುಕ್‌, ಹನುಮ ವಿಹಾರಿ ಹಾಕಿದ 95ನೇ ಓವರ್‌ನ ಎರಡನೇ ಆಫ್ ಬ್ರೆಕ್ ಎಸೆತವನ್ನು ಕಟ್ ಮಾಡಲು ಯತ್ನಿಸಿದರಾದರೂ, ಚೆಂಡು ಬ್ಯಾಟಿನ ಅಂಚಿಗೆ ಸವರಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಕೈ ಸೇರುತ್ತಿದ್ದಂತೆ ಕುಕ್ ವೃತ್ತಿಬದುಕಿನ ಕಡೆಯ ಇನ್ನಿಂಗ್ಸ್‌ಗೆ ತೆರೆಬಿದ್ದಿತು!

ಕುಕ್ ಔಟಾಗುತ್ತಿದ್ದಂತೆ ಗ್ಯಾಲರಿಗಳಲ್ಲಿ ತುಂಬಿದ್ದ ಕ್ರಿಕೆಟ್ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರೆ, ಭಾರತದ ಆಟಗಾರರೆಲ್ಲರೂ ಕುಕ್ ಬಳಿ ಧಾವಿಸಿದರು. ಅವರ ಬೆನ್ನು ತಟ್ಟಿ ಅಭಿನಂದಿಸಿದರು. ಇಂಗ್ಲೆಂಡ್‌ನ ಸರ್ವಾಧಿಕ ರನ್ ಸ್ಕೋರರ್ ಕುಕ್ ಇನ್ನಿಂಗ್ಸ್‌ಗೆ ಈ ಬಗೆಯಲ್ಲಿ ತಡೆಬಿದ್ದಿತು.

ಕುಕ್ (147; 286 ಎಸೆತ, 14 ಬೌಂಡರಿ) ಮತ್ತು ನಾಯಕ ಜೋ ರೂಟ್‌ (125; 190 ಎಸೆತ, 1 ಸಿಕ್ಸರ್‌, 12 ಬೌಂಡರಿ) ದಾಖಲಿಸಿದ ಶತಕ ಹಾಗೂ ಇವರಿಬ್ಬರು ಮೂರನೇ ವಿಕೆಟ್‌ಗೆ ಸೇರಿಸಿದ 259 ರನ್‌ಗಳ ಬಲದಿಂದ ಇಂಗ್ಲೆಂಡ್ ತಂಡ ಐದನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ಎರಡನೇ ಇನಿಂಗ್ಸ್‌ ಅನ್ನು 423 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿರುವ ಜೋ ರೂಟ್ ಪಡೆ, ಒಟ್ಟಾರೆ 463 ರನ್‌ ಮುನ್ನಡೆ ಸಾಧಿಸಿ ಭಾರತಕ್ಕೆ ಕಠಿಣ ಗುರಿ ನೀಡಿತು.

ಜಿಮ್ಮಿಗೆ ಕಡೆಗೂ ಕೊಹ್ಲಿ ವಿಕೆಟ್ ಸಿಗಲಿಲ್ಲ!

ಈ ಬಾರಿಯ ಇಂಡೋ-ಆಂಗ್ಲೋ ಟೆಸ್ಟ್ ಸರಣಿಯನ್ನು ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವಣದ ಕಾದಾಟವೆಂದು ಬಿಂಬಿಸಲಾಗಿತ್ತು. ಇದಕ್ಕೆ ಕಾರಣ, ಕಳೆದ ಬಾರಿ ಕೊಹ್ಲಿಯ ರನ್ ಗಳಿಕೆಗೆ ಜಿಮ್ಮಿ ಅಡ್ಡಿಯಾಗಿದ್ದರು. ಆದರೆ, ಈ ಐದು ಪಂದ್ಯಗಳ ಸರಣಿಯ ಕಡೆಯ ಇನ್ನಿಂಗ್ಸ್‌ನಲ್ಲೂ ಕೊಹ್ಲಿ ವಿಕೆಟ್ ಪಡೆಯಲು ಜಿಮ್ಮಿಗೆ ಸಾಧ್ಯವಾಗಲಿಲ್ಲ.

ಪೂಜಾರ ನಿರ್ಗಮನದ ನಂತರ ಆಡಲಿಳಿದ ಕೊಹ್ಲಿ, ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೋಗೆ ಕ್ಯಾಚಿತ್ತು ನಿರ್ಗಮಿಸಿದರು. ಕೆನ್ನಿಂಗ್ಟನ್ ಓವಲ್‌ ಪಂದ್ಯದ ನಾಲ್ಕನೇ ದಿನದಂದೂ ಬೌಲಿಂಗ್‌ನಲ್ಲಿ ಮಿಂಚಿದ ಜಿಮ್ಮಿ, ಕೊಹ್ಲಿ ವಿಕೆಟ್ ಮೇಲೆ ಕಣ್ಣಿಟ್ಟಿದ್ದರಾದರೂ, ಅದು ಸಾಕಾರಗೊಳ್ಳಲಿಲ್ಲ.

ಇದನ್ನೂ ಓದಿ : ಬಟ್ಲರ್ ಬೊಂಬಾಟ್ ಬ್ಯಾಟಿಂಗ್ ಬಳಿಕ ಜಿಮ್ಮಿ ಬಿರುದಾಳಿಗೆ ನಲುಗಿದ ಕೊಹ್ಲಿ ಪಡೆ

ಒಂದೇ ಓವರ್‌ನಲ್ಲಿ ಶಿಖರ್ ಧವನ್ (೧) ಮತ್ತು ಚೇತೇಶ್ವರ ಪೂಜಾರ (೦) ಅವರನ್ನು ಎಲ್‌ಬಿ ಬಲೆಗೆ ಕೆಡವಿ ಎರಡು ವಿಕೆಟ್‌ಗಳನ್ನು ಎಗರಿಸಿದ ಜಿಮ್ಮಿ, ತಂಡಕ್ಕೆ ಗೆಲುವಿನ ಆಸೆ ಚಿಮ್ಮಿಸಿದರು. ಅಂದಹಾಗೆ, ಜಿಮ್ಮಿಯ ಈ ಎರಡು ದಾಳಿಗಳಲ್ಲಿ ನಲುಗಿದ ಭಾರತ ತಂಡ ನಿಧಾನಕ್ಕೆ ಚೇತರಿಸಿಕೊಳ್ಳುವ ಸುಳಿವು ನೀಡಿತು. ಕೊಹ್ಲಿ ಕ್ರೀಸ್ ತೊರೆದ ನಂತರದಲ್ಲಿ ಕನ್ನಡಿಗ ರಾಹುಲ್ (೪೬) ಮತ್ತು ಅಜಿಂಕ್ಯ ರಹಾನೆ (೧೦) ನಾಲ್ಕನೇ ವಿಕೆಟ್‌ಗೆ ಮುರಿಯದ ೫೬ ರನ್ ಕಲೆಹಾಕಿ ಹೋರಾಟದ ಮುನ್ಸೂಚನೆ ನೀಡಿದರು.

ಕುಕ್-ರೂಟ್ ಬ್ಯಾಟಿಂಗ್ ಸೊಗಸು

ಅಂದಹಾಗೆ, ಮೂರನೇ ದಿನವಾದ ಭಾನುವಾರದ (ಸೆ. ೯) ಅಂತ್ಯಕ್ಕೆ ತಲಾ 46 ಮತ್ತು 29 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದ ಕುಕ್ ಮತ್ತು ಜೋ ರೂಟ್, ಸೋಮವಾರ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಭಾರತದ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳು ಇವರಿಬ್ಬರನ್ನೂ ಬೇರ್ಪಡಿಸಲು ನಾನಾಬಗೆಯ ಅಸ್ತ್ರ ಪ್ರಯೋಗಿಸಿದರೂ ಕುಕ್ ಮತ್ತು ರೂಟ್ ಜಗ್ಗಲಿಲ್ಲ.

ವಿದಾಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಕುಕ್‌, ಸೋಮವಾರ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಾದರೂ, ಕ್ರಮೇಣ ಆಕ್ರಮಣಕಾರಿ ಹೊಡೆತಗಳೊಂದಿಗೆ ರಂಜಿಸಿದರು. 116 ಎಸೆತಗಳಲ್ಲಿ ಶತಕ ಪೂರೈಸಿದ ಕುಕ್, ಇದರೊಂದಿಗೆ ಪದಾರ್ಪಣೆ ಪಂದ್ಯದಲ್ಲಿ ಮತ್ತು ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್‌ ಎಂದೆನಿಸಿದರು. 2006ರಲ್ಲಿ ನಾಗಪುರದಲ್ಲಿ ಭಾರತದ ವಿರುದ್ಧ ಪದಾರ್ಪಣೆ ಪಂದ್ಯದಲ್ಲೂ ಕುಕ್ ಶತಕ ಸಿಡಿಸಿದ್ದರು.

ಇನ್ನು, ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್‌ನ 12ನೇ ಬ್ಯಾಟ್ಸ್‌ಮನ್ ಎನಿಸಿದರು. 160 ಟೆಸ್ಟ್ ಪಂದ್ಯಗಳಲ್ಲಿ 12,254 ರನ್‌ ಗಳಿಸಿದ ಕುಕ್‌, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎಡಗೈ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಬರೆದರು.

ಇತ್ತ, ಪದಾರ್ಪಣೆ ಪಂದ್ಯ ಆಡಿದ ಹನುಮ ವಿಹಾರಿ 95ನೇ ಓವರ್‌ನಲ್ಲಿ ಮ್ಯಾಜಿಕ್ ಮಾಡಿದರು. ಮೊದಲ ಎಸೆತದಲ್ಲಿ ಜೋ ರೂಟ್ ಅವರ ವಿಕೆಟ್ ಪಡೆದ ಅವರು, ನಂತರದ ಎಸೆತದಲ್ಲಿ ಕುಕ್ ಅವರನ್ನೂ ವಾಪಸ್ ಕಳುಹಿಸಿದರು. ಇವರಿಬ್ಬರೂ ಔಟಾದ ನಂತರ ಸ್ಯಾಮ್ ಕರನ್ ಮತ್ತು ಆದಿಲ್ ರಶೀದ್ ಉತ್ತಮ ಆಟವಾಡಿ ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: ೩೩೨ ಮತ್ತು ೪೨೩/೮ (ಡಿಕ್ಲೇರ್) (ಅಲಸ್ಟೇರ್ ಕುಕ್ ೧೪೭, ಜೋ ರೂಟ್ ೧೨೫; ಹನುಮ ವಿಹಾರಿ ೩೭ಕ್ಕೆ ೩); ಭಾರತ ೨೯೨ ಮತ್ತು ೫೮/೩ (ಕೆ ಎಲ್ ರಾಹುಲ್ ೪೬ ಬ್ಯಾಟಿಂಗ್, ಅಜಿಂಕ್ಯ ರಹಾನೆ ೧೦ ಬ್ಯಾಟಿಂಗ್; ಜೇಮ್ಸ್ ಆ್ಯಂಡರ್ಸನ್ ೨೩ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More