ವಿಶ್ವ ಶೂಟಿಂಗ್: ಸ್ಕೀಟ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ರಜತ ಪದಕ

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಭಾರತ ಮತ್ತೆರಡು ಪದಕ ಜಯಿಸಿದೆ. ಗುರ್ನಿಹಾಲ್, ಅನಂತ್‌ಜೀತ್ ಮತ್ತು ಆಯುಷ್ ಇದ್ದ ತಂಡ ಭಾರತ ಪುರುಷರ ಕಿರಿಯರ ತಂಡ ಸ್ಕೀಟ್ ವಿಭಾಗದಲ್ಲಿ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದರೆ, ಗುರ್ನಿಹಾಲ್ ಗಾರ್ಚ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದರು

ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ಭಾರತದ ಪದಕ ಗಳಿಕೆಗೆ ಮಂಗಳವಾರ (ಸೆ. ೧೧) ಇನ್ನೆರಡು ಸೇರ್ಪಡೆಯಾದವು. ಮೊದಲಿಗೆ ಕಿರಿಯರ ಪುರುಷರ ವಿಭಾಗದ ಸ್ಕೀಟ್‌ನಲ್ಲಿ ಗುರ್ನಿಹಾಲ್ (೧೧೯), ಅನಂತ್‌ಜೀತ್ ಸಿಂಗ್ ನರುಕಾ (೧೧೭) ಹಾಗೂ ಆಯುಷ್ ರುದ್ರರಾಜು (೧೧೯) ೩೫೫ ಸ್ಕೋರ್‌ನೊಂದಿಗೆ ಎರಡನೇ ಸ್ಥಾನ ಗಳಿಸಿದರು.

೧೯ರ ಹರೆಯದ ಗುರ್ನಿಹಾಲ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ ತಲುಪಿದರೂ, ಅಂತಿಮವಾಗಿ ೪೬ ಪಾಯಿಂಟ್ಸ್ ಗಳಿಸುವುದರೊಂದಿಗೆ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇಟಲಿಯ ಎಲಿಯಾ ಸ್ರುಕಿಯೊಲಿ ೫೫ ಪಾಯಿಂಟ್ಸ್ ಗಳಿಸಿ ಚಿನ್ನದ ಪದಕ ಜಯಿಸಿದರೆ, ಅಮೆರಿಕದ ನಿಕ್ ಮೊಶೆಟಿ ೫೪ ಸ್ಕೋರ್‌ನೊಂದಿಗೆ ರಜತ ಪದಕ ಪಡೆದರು.

ಇನ್ನು, ತಂಡ ವಿಭಾಗದಲ್ಲಿ ಜೆಕ್ ಗಣರಾಜ್ಯದ ಶೂಟರ್‌ಗಳು ೩೫೬ ಪಾಯಿಂಟ್ಸ್ ಗಳಿಸಿ ಕಂಚು ಜಯಿಸಿದರೆ, ಇಟಲಿ ತಂಡ ೩೫೪ ಪಾಯಿಂಟ್ಸ್ ಕಲೆಹಾಕಿ ಕಂಚು ಗೆದ್ದುಕೊಂಡಿತು. ಈ ಎರಡು ಪದಕಗಳೊಂದಿಗೆ ಭಾರತದ ಗುರಿಕಾರರು, ಪ್ರಸ್ತುತ ಟೂರ್ನಿಯಲ್ಲಿ ಏಳು ಚಿನ್ನ, ಎಂಟು ಬೆಳ್ಳಿ ಹಾಗೂ ಏಳು ಕಂಚಿನ ಪದಕಗಳನ್ನೊಳಗೊಂಡ ೨೦ ಪದಕಗಳನ್ನು ಗೆದ್ದಂತಾಗಿದೆ. ಈ ಪಂದ್ಯಾವಳಿಯು ೨೦೨೦ರ ಒಲಿಂಪಿಕ್ಸ್ ಕ್ರೀಡಾಕೂಟದ ಪ್ರಥಮ ಅರ್ಹತಾ ಪಂದ್ಯಾವಳಿಯಾಗಿದೆ.

ಇದನ್ನೂ ಓದಿ : ವಿಶ್ವ ಶೂಟಿಂಗ್: ಡಬಲ್ ಟ್ರ್ಯಾಪ್‌ನಲ್ಲಿ ಅಂಕುಲ್ ಮಿತ್ತಲ್‌ಗೆ ಬಂಗಾರ

ಇತ್ತ, ೫೦ ಮೀಟರ್ ರೈಫಲ್ ೩ ಪೊಸಿಷನ್‌ನಲ್ಲಿ ಭಾರತ ವನಿತಾ ಕಿರಿಯರ ತಂಡ ೩೩೮೩ ಸ್ಕೋರ್‌ನೊಂದಿಗೆ ೧೪ನೇ ಸ್ಥಾನ ಗಳಿಸಿತು. ಭಕ್ತಿ ಖಾಮ್ಕರ್ (೧೧೩೨), ಶಿರಿನ್ ಗೊಡಾರ (೧೧೩೦) ಮತ್ತು ಆಯುಷಿ ಪೊಡೆರ್ (೧೧೨೧) ಪಾಯಿಂಟ್ಸ್ ಗಳಿಸಿದರೆ, ವೈಯಕ್ತಿಕ ವಿಭಾಗದಲ್ಲಿ ಒಬ್ಬರೂ ಫೈನಲ್‌ಗೆ ಅರ್ಹತೆ ಪಡೆಯಲಿಲ್ಲ. ಏತನ್ಮಧ್ಯೆ, ವನಿತೆಯರ ಸ್ಕೀಟ್ ತಂಡದ ವಿಭಾಗದಲ್ಲಿ ಭಾರತದ ಗುರಿಕಾರ್ತಿಯರು ೩೧೯ ಸ್ಕೋರ್‌ನೊಂದಿಗೆ ಒಂಬತ್ತನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ರಶ್ಮಿ ರಾಠೋಡ್ (೧೦೮), ಮಹೇಶ್ವರಿ ಚೌಹಾಣ್ (೧೦೬) ಹಾಗೂ ಗನೇಮತ್ ಸೆಖಾನ್ (೧೦೫) ವೈಯಕ್ತಿಕ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಗಳಿಸಲೇ ಇಲ್ಲ. ಪ್ರಸ್ತುತ ಟೂರ್ನಿಯಲ್ಲಿ ಅಂಜುಮ್ ಮೌಡ್ಗಿಲ್ ಹಾಗೂ ಅಪೂರ್ವಿ ಚಾಂಡೀಲಾ ವನಿತೆಯರ ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ೨೦೨೦ರ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಳಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More