ಜಪಾನ್ ಓಪನ್ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್, ಪ್ರಣಯ್ ದ್ವಿತೀಯ ಸುತ್ತಿಗೆ

ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪ್ರಮುಖ ಆಟಗಾರರು ಶುಭಾರಂಭ ಮಾಡಿದ್ದಾರೆ. ವನಿತೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಫೇವರಿಟ್ ಪಿ ವಿ ಸಿಂಧು ಮತ್ತು ಪುರುಷರ ವಿಭಾಗದಲ್ಲಿ ಶ್ರೀಕಾಂತ್, ಪ್ರಣಯ್ ಎರಡನೇ ಸುತ್ತಿಗೆ ನಡೆದರು

ವಿಶ್ವದ ಮೂರನೇ ಶ್ರೇಯಾಂಕಿತೆ ಹಾಗೂ ಭಾರತದ ಅಗ್ರ ಕ್ರಮಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಜಪಾನ್ ಓಪನ್‌ನಲ್ಲಿ ಜಯದ ಆರಂಭ ಕಂಡಿದ್ದಾರೆ. ಮಂಗಳವಾರ (ಸೆ ೧೧) ಶುರುವಾದ ಪಂದ್ಯಾವಳಿಯಲ್ಲಿ ಸಿಂಧು ಯೋಜನಾಬದ್ಧ ಆಟದೊಂದಿಗೆ ಆಡಿದರಾದರೂ, ಮೊದಲ ಸುತ್ತಿನಲ್ಲಿ ಸಯಾಕ ಟಕಾಹಶಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು.

೧೩ನೇ ಶ್ರೇಯಾಂಕಿತೆ ಹಾಗೂ ಸ್ಥಳೀಯ ಆಟಗಾರ್ತಿ ಸಯಾಕ ಒಡ್ಡಿದ ಪ್ರಬಲ ಪ್ರತಿರೋಧವನ್ನು ಸಿಂಧು, ೫೮ ನಿಮಿಷಗಳ ಕಾದಾಟದ ನಂತರ ೨೧-೧೭, ೭-೨೧, ೨೧-೧೩ರಿಂದ ಜಯಿಸಿ ದ್ವಿತೀಯ ಸುತ್ತಿಗೆ ನಡೆದರು. ಮೊದಲ ಗೇಮ್‌ನಲ್ಲಿ ಸೋತ ಸಯಾಕ, ಎರಡನೇ ಗೇಮ್‌ನಲ್ಲಂತೂ ಆರ್ಭಟಿಸಿದರು. ಆಕೆಯ ಬಿರುಸಿನ ಆಟಕ್ಕೆ ತಬ್ಬಿಬ್ಬುಗೊಂಡ ಸಿಂಧು ಗೆದ್ದದ್ದು ಕೇವಲ ೭ ಪಾಯಿಂಟ್ಸ್‌ಗಳನ್ನಷ್ಟೆ. ಆದರೆ, ತೃತೀಯ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಸಿಂಧು ಜಾಗ್ರತೆ ವಹಿಸಿ ಜಪಾನ್ ಆಟಗಾರ್ತಿಗೆ ಸೋಲುಣಿಸಿದರು.

ಮುಂದಿನ ಸುತ್ತಿನಲ್ಲೀಗ ಸಿಂಧು ಚೀನಿ ಆಟಗಾರ್ತಿ ಫಾಂಗ್ಜಿ ಗಾವೊ ವಿರುದ್ಧ ಕಾದಾಡಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಫಾಂಗ್ಜಿ, ಭಾರತದ ಜೆ ವೈಷ್ಣವಿ ರೆಡ್ಡಿ ವಿರುದ್ಧ ೨೧-೧೦, ೨೧-೮ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದರು.

ಇದನ್ನೂ ಓದಿ : ಮತ್ತೊಮ್ಮೆ ಫೈನಲ್ ಸವಾಲನ್ನು ಮೆಟ್ಟಿನಿಲ್ಲದ ಸಿಂಧುಗೆ ಚಾರಿತ್ರಿಕ ರಜತ

ಶ್ರೀಕಾಂತ್-ಪ್ರಣಯ್ ಗೆಲುವು

ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಮತ್ತು ಶ್ರೀಕಾಂತ್ ಗೆಲುವಿನ ಮುನ್ನುಡಿ ಬರೆದರು. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿಯನ್ನು ಪ್ರಣಯ್ ೨೧-೧೮, ೨೧-೧೭ರ ಎರಡು ನೇರ ಗೇಮ್‌ಗಳಲ್ಲಿ ಹಣಿದು ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದರು.

ಇನ್ನು, ಪುರುಷರ ಮತ್ತೊಂದು ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕಿಡಾಂಬಿ ಶ್ರೀಕಾಂತ್, ಚೀನಿ ಆಟಗಾರ ಯುಕ್ಸಿಯಾಂಗ್ ಹುವಾಂಗ್ ವಿರುದ್ಧ ೨೧-೧೩, ೨೧-೧೫ರಿಂದ ಗೆಲುವು ಪಡೆದರು. ಮುಂದಿನ ಸುತ್ತಿನಲ್ಲಿ ಪ್ರಣಯ್ ಇಂಡೋನೇಷ್ಯಾದ ಮತ್ತೋರ್ವ ಆಟಗಾರ ಆಂಟನಿ ಸಿನಿಸುಕಾ ವಿರುದ್ಧ ಸೆಣಸಲಿದ್ದರೆ, ಶ್ರೀಕಾಂತ್, ಹಾಂಕಾಂಗ್‌ನ ವಿನ್ಸೆಂಟ್ ವಾಂಗ್ ವಿಂಗ್ ವಿರುದ್ಧ ಕಾದಾಡಲಿದ್ದಾರೆ.

ಸಮೀರ್-ಅಶ್ವಿನಿ ಜೋಡಿಗೆ ಸೋಲು

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಮೊದಲ ಸುತ್ತಿನಲ್ಲಿ ಭಾರತದ ಸಮೀರ್ ವರ್ಮಾ ಸೋಲನುಭವಿಸಿದರು. ಕೊರಿಯಾ ಆಟಗಾರ ಲೀ ಡಾಂಗ್ ಕೆಯುನ್ ವಿರುದ್ಧದ ಹಣಾಹಣಿಯಲ್ಲಿ ೧೮-೨೧, ೨೨-೨೦, ೧೦-೨೧ರ ಮೂರು ಗೇಮ್‌ಗಳ ಆಟದಲ್ಲಿ ಸಮೀರ್ ಸೋಲನುಭವಿಸಿದರು. ಇತ್ತ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ ಮಿಶ್ರ ಫಲ ಅನುಭವಿಸಿತು.

ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಅವರ ಜತೆಯಾಟಗಾರ ಸಾತ್ವಿಕ್‌ಸಾಯಿ ರೆಡ್ಡಿ ಮೊದಲ ಸುತ್ತಲ್ಲೇ ಹೊರಬಿದ್ದರೆ, ಪ್ರಣವ್ ಜೆರಿ ಚೋಪ್ರಾ ಹಾಗೂ ಎನ್ ಸಿಕಿ ರೆಡ್ಡಿ ಜೋಡಿ ಮುಂದಿನ ಸುತ್ತಿಗೆ ಧಾವಿಸಿತು. ಎರಡನೇ ಶ್ರೇಯಾಂಕಿತ ಜೋಡಿ ಚೀನಾದ ಯಿಲ್ಯು ವಾಂಗ್ ಮತ್ತು ಡಾಂಗ್‌ಪಿಂಗ್ ಹುವಾಂಗ್ ವಿರುದ್ಧ ೧೩-೨೧, ೧೭-೨೧ರಿಂದ ಸೋತರು. ಆದರೆ, ಮಲೇಷ್ಯಾ ಜೋಡಿ ಮ್ಯಾಥ್ಯೂ ಫೊಗಾರ್ಟಿ ಹಾಗೂ ಇಸಬೆಲ್ ಝೊಂಗ್ ಎದುರು ಚೋಪ್ರಾ ಹಾಗೂ ರೆಡ್ಡಿ ಜೋಡಿ ೨೧-೯, ೨೧-೬ರಿಂದ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ನಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More