ಅಲಸ್ಟೇರ್ ಕುಕ್‌ ವಿದಾಯಕ್ಕೆ ಸರಣಿ ಜಯದ ಉಡುಗೊರೆ ನೀಡಿದ ಇಂಗ್ಲೆಂಡ್‌

ಇಂಗ್ಲೆಂಡ್ ಪರ ಸರ್ವಾಧಿಕ ರನ್ ದಾಖಲೆ ಬರೆದು ನಿವೃತ್ತಿಯಾದ ಅಲಸ್ಟೇರ್ ಕುಕ್‌ಗೆ ಇಂಗ್ಲೆಂಡ್ ತಂಡ ಗೆಲುವಿನ ಉಡುಗೊರೆ ನೀಡಿದೆ. ಕಡೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಎನಿಸಿದ ಕುಕ್, ಮಿಂಚು ಹರಿಸಿದರೆ, ೧-೪ ರಿಂದ ಸರಣಿ ಸೋತ ಭಾರತ ತಂಡ, ವಿದೇಶಿ ನೆಲದಲ್ಲಿನ ಯಶಸ್ಸಿಗೆ ಬೇರೆ ಮಾರ್ಗ ಹಿಡಿಯಬೇಕಿದೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಆಟಗಾರನೊಬ್ಬನಿಗೆ ಈ ಪರಿಯ ವಿದಾಯ ಬಹುತೇಕ ವಿರಳ. ಆದರೆ, ಅಲಸ್ಟೇರ್ ಕುಕ್ ಪಾಲಿಗಂತೂ ಭಾರತ ವಿರುದ್ಧದ ಸರಣಿ ಸದಾ ನೆನಪಿನಲ್ಲುಳಿಯುವಂತೆ ಮಾಡಿದೆ. ತನ್ನ ಪದಾರ್ಪಣೆ ಪಂದ್ಯದಲ್ಲಿ ಇದೇ ಭಾರತ ತಂಡದ ವಿರುದ್ಧ ಭಾರತದ ನೆಲದಲ್ಲೇ ಶತಕ ಬಾರಿಸಿದ್ದ ಕುಕ್, ವಿದಾಯದ ಪಂದ್ಯದಲ್ಲಿ ತನ್ನ ತವರಿನಲ್ಲಿ ಶತಕ ದಾಖಲಿಸಿ ಅಪರೂಪದ ಇನ್ನಿಂಗ್ಸ್‌ನೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.

ಈಗಾಗಲೇ ಭಾರತದ ವಿರುದ್ಧ ೩-೧ರಿಂದ ಸರಣಿ ಗೆದ್ದಿದ್ದೇವೆ. ಆದರೆ, ೪-೧ ಅಂತರದಿಂದ ಸರಣಿಯನ್ನು ಗೆಲ್ಲುವುದು ಇನ್ನಷ್ಟು ಸೊಗಸಿನಿಂದ ಕೂಡಿರುತ್ತದೆ ಎಂದು ಕಡೇ ಪಂದ್ಯಕ್ಕೂ ಮುನ್ನ ನುಡಿದಿದ್ದ ನಾಯಕ ಜೋ ರೂಟ್ ಮಾತನ್ನು ಕುಕ್ ಸೇರಿದಂತೆ ತಂಡ ನಿಜಮಾಡಿತು. ಒಂದು ಹಂತದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ೫ನೇ ವಿಕೆಟ್‌ಗೆ ನೀಡಿದ ದ್ವಿಶತಕ ಇಂಗ್ಲೆಂಡ್‌ನ ಗೆಲುವಿಗೆ ಅಡ್ಡಿಯಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಜೋಡಿ ಬೇರ್ಪಟ್ಟ ನಂತರದಲ್ಲಿ ಪಂದ್ಯದ ಗತಿಯೇ ಬೇರೆಯಾಯಿತು.

ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ (ಸೆ ೧೧) ಮುಕ್ತಾಯ ಕಂಡ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಕೊನೆಯ ದಿನ ರಾಹುಲ್ (149; 224 ಎಸೆತ, 20 ಬೌಂಡರಿ, 1ಸಿಕ್ಸರ್) ಮತ್ತು ರಿಷಭ್ ಪಂತ್ (114; 146 ಎಸೆತ, 15 ಬೌಂಡರಿ, 4 ಸಿಕ್ಸರ್) ಆಮೋಘ ಶತಕಗಳನ್ನು ದಾಖಲಿಸಿದರು. ಆದರೆ, ಆನಂತರದ ನಾಟಕೀಯ ತಿರುವಿನಲ್ಲಿ ಇಂಗ್ಲೆಂಡ್ ೧೧೮ ರನ್ ಅಮೋಘ ಜಯ ಪಡೆಯಿತು. ೫ನೇ ವಿಕೆಟ್‌ಗೆ ರಾಹುಲ್ ಮತ್ತು ಪಂತ್ ೨೦೪ ರನ್ ಜತೆಯಾಟವಾಡಿ ಪಂದ್ಯವನ್ನು ಭಾರತದತ್ತ ಸೆಳೆಯಲು ಯತ್ನಿಸಿದರಾದರೂ, ಅದಿಲ್ ರಶೀದ್ ಮಾರಕ ಎಸೆತವೊಂದರಲ್ಲಿ ರಾಹುಲ್ ಅವರನ್ನು ಬೌಲ್ಡ್ ಮಾಡುತ್ತಲೇ ಭಾರತದ ದುರವಸ್ಥೆ ಶುರುವಾಯಿತು. ರಾಹುಲ್ ನಿರ್ಗಮನದ ಹೊತ್ತಿಗೆ ೬ ವಿಕೆಟ್ ಕಳೆದುಕೊಂಡ ಭಾರತ, ಆನಂತರದ ನಾಲ್ಕು ವಿಕೆಟ್‌ಗಳನ್ನು ಕೇವಲ ೨೦ ರನ್‌ಗಳಿಗೆ ಬಲಿಗೊಟ್ಟಿತು. ಮೊಹಮದ್ ಶಮಿಯನ್ನು ಜೇಮ್ಸ್ ಆ್ಯಂಡರ್ಸನ್ ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಇಂಗ್ಲೆಂಡ್ ಗೆಲುವಿನ ನಗೆಬೀರಿತು.

ಗೆಲುವಿಗಾಗಿ 464 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ ನಾಲ್ಕನೇ ದಿನವಾದ ಸೋಮವಾರ 58 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರಾಹುಲ್ 46 ರನ್ ಮತ್ತು ಅಜಿಂಕ್ಯ ರಹಾನೆ 10 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಆದರೆ ಕೊನೆಯ ದಿನದ ಪಿಚ್‌ನಲ್ಲಿ ಭಾರತ ತಂಡದ ಬ್ಯಾಟಿಂಗ್ ಬೇಗನೆ ಕುಸಿಯುವ ಸಾಧ್ಯತೆ ಇತ್ತು.

ಆದರೆ, ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ರಾಹುಲ್ ಮತ್ತು ಅಜಿಂಕ್ಯ ರಹಾನೆ 117 ರನ್‌ ಸೇರಿಸಿದರು. ಇಬ್ಬರೂ ತಾಳ್ಮೆಯುತ ಬ್ಯಾಟಿಂಗ್ ಮಾಡಿದರು. ಅಜಿಂಕ್ಯ 37 ರನ್‌ ಗಳಿಸಲು 105 ಎಸೆತಗಳನ್ನು ತೆಗೆದುಕೊಂಡರು. ಸ್ಪಿನ್ನರ್ ಮೊಯಿನ್ ಅಲಿ ಈ ಜೊತೆಯಾಟವನ್ನು 36ನೇ ಓವರ್‌ನಲ್ಲಿ ಮುರಿದರು.

ಇನ್ನು, ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಹನುಮ ವಿಹಾರಿ ಈ ಬಾರಿ ಶೂನ್ಯ ಸಾಧನೆಯೊಂದಿಗೆ ಕ್ರೀಸ್ ತೊರೆದರು. ಅವರ ನಂತರದಲ್ಲಿ ಕ್ರೀಸ್‌ಗೆ ಬಂದ ದೆಹಲಿಯ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ರಾಹುಲ್ ಜೊತೆಗೆ ಮನೋಜ್ಞ ಇನಿಂಗ್ಸ್‌ ಕಟ್ಟಿದರು. 30ನೇ ಟೆಸ್ಟ್‌ ಆಡಿದ ಕೆ ಎಲ್ ರಾಹುಲ್ ತಮ್ಮ ವೃತ್ತಿಜೀವನದ ಆರನೇ ಶತಕ ದಾಖಲಿಸಿದರೆ, ಮೂರನೇ ಟೆಸ್ಟ್‌ ಪಂದ್ಯ ಆಡಿದ ರಿಷಬ್ ಚೊಚ್ಚಲ ಶತಕ ಬಾರಿಸಿದರು.

ರಿಷಬ್ ಅವರಿಗೆ ಇದು ಮೊದಲ ಟೆಸ್ಟ್ ಸರಣಿ. ಹೋದ ತಿಂಗಳು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು.  ವಿಕೆಟ್‌ಕೀಪಿಂಗ್‌
ನಲ್ಲಿ ಐದು ಕ್ಯಾಚ್‌ ಪಡೆದು ದಾಖಲೆ ಬರೆದಿದ್ದರು. ಸರಣಿಯ ಮೊದಲ ಎರಡು ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವೈಫಲ್ಯ ಅನುಭವಿಸಿದ್ದರಿಂದ ರಿಷಭ್‌ಗೆ ಸ್ಥಾನ ಕಲ್ಪಿಸಲಾಗಿತ್ತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: ೩೩೨ ಮತ್ತು ೪೨೩/೮ (ಡಿಕ್ಲೇರ್); ಭಾರತ: ೨೯೨ ಮತ್ತು ೩೪೫; ಫಲಿತಾಂಶ: ಇಂಗ್ಲೆಂಡ್‌ಗೆ ೧೧೮ ರನ್ ಗೆಲುವು; ಪಂದ್ಯಶ್ರೇಷ್ಠ ಅಲಸ್ಟೇರ್ ಕುಕ್; ಸರಣಿ ಶ್ರೇಷ್ಠರು: ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕರನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More