ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್

೨೦೨೦ರ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸುವ ಇಚ್ಛೆ ಇದೆ ಎಂದು ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾಡ್ ವೇಳೆ ನುಡಿದಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆಲ್ಲಲಾಗಲಿಲ್ಲ ಎಂಬ ಬೇಸರವನ್ನೂ ಸರ್ದಾರ್ ಹೊರಗೆಡಹಿದ್ದಾರೆ

ಬರೋಬ್ಬರಿ ಹನ್ನೆರಡು ವರ್ಷಗಳ ವೃತ್ತಿಬದುಕಿಗೆ ಸರ್ದಾರ್ ಸಿಂಗ್ ಬುಧವಾರ (ಸೆ ೧೨) ವಿದಾಯ ಹೇಳಿದ್ದಾರೆ. ಪ್ರತಿಭಾನ್ವಿತ ಮಿಡ್‌ಫೀಲ್ಡರ್ ಸರ್ದಾರ್, ಯುವ ಆಟಗಾರರಿಗೆ ಅವಕಾಶ ಕಲ್ಪಿಸುವುದಕ್ಕೆ ಇದು ಸಕಾಲವಾಗಿದ್ದು, ನಿವೃತ್ತಿ ನಿರ್ಧಾರ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಏಷ್ಯಾ ಕ್ರೀಡಾಕೂಟದಲ್ಲಿ ಹಾಲಿ ಚಾಂಪಿಯನ್ನರಾದ ನಾವು ಪ್ರಶಸ್ತಿ ಉಳಿಸಿಕೊಳ್ಳಲಾಗಲಿಲ್ಲ ಎಂಬ ಬೇಸರದ ನಂತರ ಈ ನಿರ್ಧಾರಕ್ಕೆ ಬಂದಿದ್ದೆ ಎಂತಲೂ ಹೇಳಿಕೊಂಡಿದ್ದಾರೆ.

“ಹೌದು, ನಾನು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ. ನನ್ನ ಜೀವಿತದಲ್ಲಿ ೧೨ ವರ್ಷಗಳಷ್ಟು ಸುದೀರ್ಘವಾಗಿ ರಾಷ್ಟ್ರಕ್ಕಾಗಿ ಸಾಕಷ್ಟು ಆಡಿದ್ದೇನೆ. ಈಗ ನಿವೃತ್ತಿಗೆ ಇದು ಸಕಾಲವೆನಿಸಿದೆ. ಜತೆಗೆ, ಭವಿಷ್ಯದ ತಾರೆಗಳಿಗೆ ಅವಕಾಶ ಮಾಡಿಕೊಡಲು ಇದು ಸೂಕ್ತ ಸಮಯ,’’ ಎಂದು ಸರ್ದಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಸರ್ದಾರ್ ಸಿಂಗ್ ದಿಢೀರ್ ನಿರ್ಧಾರದ ಹಿಂದೆ ಮತ್ತೊಂದು ಕಾರಣವೂ ಇದೆ. ಇದೇ ಸೆಪ್ಟೆಂಬರ್ ೧೬ರಿಂದ ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಶಿಬಿರ ನಡೆಯಲಿದ್ದು, ೨೫ ಸದಸ್ಯರ ತಂಡವನ್ನು ಆರಿಸಲಾಗಿದೆ. ಆದರೆ, ಈ ೨೫ ಮಂದಿ ತಂಡದಲ್ಲಿ ಸರ್ದಾರ್ ಸಿಂಗ್ ಅವರನ್ನು ಉಪೇಕ್ಷಿಸಲಾಗಿದ್ದು, ಇದುವೇ ಅವರ ನಿವೃತ್ತಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇನ್ನೂ ಹಲವಾರು ವರ್ಷಗಳವರೆಗೆ ಸ್ಪರ್ಧಾತ್ಮಕ ಹಾಕಿ ಪಂದ್ಯಗಳನ್ನು ಆಡುವಷ್ಟು ಬಲಿಷ್ಠವಾಗಿದ್ದೇನೆ. ಹೀಗಾಗಿ, ನಿವೃತ್ತಿ ನಿರ್ಧಾರಕ್ಕೆ ಫಿಟ್ನೆಸ್ ಕಾರಣವಲ್ಲ. ಆದರೆ, ಪ್ರತಿಯೊಂದಕ್ಕೂ ಒಂದು ಸಮಯವಿದ್ದು, ನಿವೃತ್ತಿಗೆ ಇದು ಸುಸಮಯವಷ್ಟೆ
ಸರ್ದಾರ್ ಸಿಂಗ್, ಭಾರತ ತಂಡದ ಮಾಜಿ ನಾಯಕ

೩೦೦ ಪಂದ್ಯಗಳ ಸರದಾರನ ಬಿಡದ ವಿವಾದ

ನಿವೃತ್ತಿ ಕುರಿತ ನಿರ್ಧಾರವನ್ನು ಸರ್ದಾರ್ ಸಿಂಗ್, ಕೋಚ್ ಹರೇಂದ್ರ ಸಿಂಗ್ ಮತ್ತು ಹಾಕಿ ಇಂಡಿಯಾಗೆ ತಿಳಿಸಿದ್ದಾರೆಯಲ್ಲದೆ, ಮುಂದಿನ ದಿನಗಳಲ್ಲಿ ದೇಶೀಯ ಪಂದ್ಯಗಳಲ್ಲಿ ವಿಶೇಷವಾಗಿ ಹಾಕಿ ಇಂಡಿಯಾ ಲೀಗ್‌ನಂಥ ಪಂದ್ಯಾವಳಿಗಳಲ್ಲಿ ಆಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಸರ್ದಾರ್ ಸಿಂಗ್ ಇತ್ತೀಚೆಗಷ್ಟೇ ೩೦೦ ಮತ್ತು ಅದಕ್ಕೂ ಹೆಚ್ಚಿನ ಪಂದ್ಯಗಳನ್ನಾಡಿದ ಕೆಲವೇ ಕೆಲವು ಭಾರತೀಯ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ : ಪಾಕ್ ಮಣಿಸಿ ಕಂಚು ಗೆದ್ದು ಏಷ್ಯಾಡ್‌ ಇತಿಹಾಸದಲ್ಲೇ ದಾಖಲೆ ಪದಕ ಗೆದ್ದ ಭಾರತ

೨೦೦೬ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ್ದ ಸರ್ದಾರ್, ಎಲ್ಲ ವಯೋಮಾನದ ಟೂರ್ನಿಗಳನ್ನೂ ಒಳಗೊಂಡಂತೆ ಭಾರತದ ಪರ ೩೫೦ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ೨೦೦೮ರಿಂದ ೨೦೧೬ರವರೆಗೆ ಭಾರತ ತಂಡವನ್ನು ಮುನ್ನಡೆಸಿದ ಸರ್ದಾರ್ ಸಿಂಗ್ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಅಂದಹಾಗೆ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತಂಡದಿಂದ ಕೈಬಿಡಲ್ಪಟ್ಟಿದ್ದ ಸರ್ದಾರ್, ತದನಂತರ ಕಠಿಣ ತರಬೇತಿಯೊಂದಿಗೆ ಮತ್ತೆ ತಂಡಕ್ಕೆ ವಾಪಸಾಗಿದ್ದರಲ್ಲದೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಗೆದ್ದ ತಂಡದಲ್ಲಿದ್ದರು.

ಏತನ್ಮಧ್ಯೆ, ಸರ್ದಾರ್ ಸಿಂಗ್ ವಿವಾದದಿಂದ ಮುಕ್ತವಾಗಿರಲಿಲ್ಲ. ಭಾರತ ಮೂಲದ ಬ್ರಿಟನ್ ಹಾಕಿ ಆಟಗಾರ್ತಿ ಅಶ್ಪಾಲ್ ಎಂಬುವರನ್ನು ವಂಚಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರೆಂಬುದು ಭಾರತೀಯ ಹಾಕಿಯಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಕುರಿತು ಅಶ್ಪಾಲ್ ಸ್ವತಃ ಭಾರತಕ್ಕೆ ಬಂದು ಪೊಲೀಸ್ ದೂರು ದಾಖಲಿಸಿದ್ದರು. ಆದರೆ, ಈ ಆರೋಪವನ್ನು ಸರ್ದಾರ್ ಅಲ್ಲಗಳೆದಿದ್ದರಲ್ಲದೆ, ಆನಂತರದಲ್ಲಿ ಲೂಧಿಯಾನ ಪೊಲೀಸರು ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.

ಸರ್ದಾರ್ ಸಿಂಗ್ ಕಿರು ಪರಿಚಯ

  • ಹೆಸರು: ಸರ್ದಾರ್ ಸಿಂಗ್
  • ವಯಸ್ಸು: ೩೨
  • ಮೂಲ: ಹರ್ಯಾಣ
  • ಅನುಭವ: ೦೮ ವರ್ಷಗಳ ಕಾಲ ಭಾರತ ತಂಡದ ಸಾರಥ್ಯ
  • ಪ್ರಶಸ್ತಿ: ೨೦೧೨ರಲ್ಲಿ ಅರ್ಜುನ ಹಾಗೂ ೨೦೧೫ರಲ್ಲಿ ಪದ್ಮಶ್ರೀ
  • ಹಿರಿಮೆ: ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸರ್ದಾರ್
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More