ಫಿಫಾ ವಿಶ್ವ ಕಪ್ ಗೆದ್ದ ಕ್ಯಾಪ್ಟನ್ ಹ್ಯೂಗೊ ಲಾರಿಸ್‌ಗೆ ₹ 46.89 ಲಕ್ಷ ದಂಡ

ಅದ್ವಿತೀಯ ಗೋಲ್‌ಕೀಪಿಂಗ್‌ನೊಂದಿಗೆ ಫ್ರಾನ್ಸ್‌ ತಂಡವನ್ನು ವಿಶ್ವ ಚಾಂಪಿಯನ್ ಆಗಿಸಿದ ಕ್ಯಾಪ್ಟನ್ ಹ್ಯೂಗೊ ಲಾರಿಸ್‌ ಲಂಡನ್‌ನಲ್ಲಿ ಕುಡಿದು ವಾಹನ ಚಲಾಯಿಸಿದ ತಪ್ಪಿಗಾಗಿ ಭಾರೀ ದಂಡ ತೆತ್ತಿದ್ದಾರೆ. ಇತ್ತೀಚೆಗಷ್ಟೇ ಪ್ಯಾರಿಸ್‌ನಲ್ಲಿ ನಡೆದ ವಿಶ್ವಕಪ್ ವಿಜಯೋತ್ಸವದಲ್ಲಿ ಹ್ಯೂಗೊ ಭಾಗವಹಿಸಿದ್ದರು

ಎರಡಕ್ಕಿಂತ ಹೆಚ್ಚು ಬಾರಿ ಕುಡಿದು ವಾಹನ ಚಲಾಯಿಸಿದ ಪ್ರಮಾದಕ್ಕಾಗಿ ಫ್ರಾನ್ಸ್ ಫುಟ್ಬಾಲ್ ತಂಡದ ನಾಯಕ ಹ್ಯೂಗೊ ಲಾರಿಸ್‌ಗೆ ಭಾರೀ ದಂಡ ವಿಧಿಸಲಾಗಿದೆ. ಟಾಟೆನ್‌ಹ್ಯಾಮ್ ಮತ್ತು ಫ್ರಾನ್ಸ್ ತಂಡದ ಗೋಲ್‌ಕೀಪರ್ ಹ್ಯೂಗೊ, ಸ್ವತಃ ತನ್ನ ತಪ್ಪನ್ನು ಒಪ್ಪಿಕೊಂಡ ಕಾರಣ ಜೈಲು ಶಿಕ್ಷೆಯಿಂದ ಪಾರಾದರಾದರೂ, ೫೦,೦೦೦ ಪೌಂಡ್‌ಗಳ ದಂಡಕ್ಕೆ ಗುರಿಯಾದರು. ಜತೆಗೆ, ಮುಂದಿನ ೨೦ ತಿಂಗಳ ಕಾಲ ಅವರ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

೩೧ರ ಹರೆಯದ ಹ್ಯೂಗೋ ಬುಧವಾರ (ಸೆ. ೧೨) ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ಗೆ ಹಾಜರಾಗಿ, ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡರು. ಆಗಸ್ಟ್ ೨೪ರಂದು ಅತಿ ಮುಂಜಾನೆ ಲಾರಿಸ್ ಅವರ ಪೋರ್ಶೆ ಪನಾಮೆರಾ ಕಾರನ್ನು ಮೆರ್ಲಿಬೋನ್‌ನ ಗ್ಲೌಸೆಸ್ಟರ್‌ನಲ್ಲಿ ಪೊಲೀಸ್ ಅಧಿಕಾರಿಗಳು ತಡೆದಿದ್ದರು. ಇದಕ್ಕೂ ಮುನ್ನ ಲಾರಿಸ್, ‘ನಿಲುಗಡೆ ವಾಹನಗಳ ತಪಾಸಣೆ’ ಸಂದರ್ಭದಲ್ಲಿ ರೆಡ್ ಲೈಟ್ ಸಿಗ್ನಲ್ ಇದ್ದರೂ, ನಿಯಮ ಉಲ್ಲಂಘಿಸಿ ಮುಂದೆ ಹೋಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಕಾರನ್ನು ನಿಲ್ಲಿಸಿದಾಗ ಲಾರಿಸ್ ವಾಂತಿ ಮಾಡಿಕೊಂಡಿದ್ದಲ್ಲದೆ, ಅವರು ಮತ್ತೊಬ್ಬರಿಂದ ಸಹಾಯ ಪಡೆಯುವ ಸ್ಥಿತಿಯಲ್ಲಿದ್ದರೆಂದು ಪ್ರಾಸಿಕ್ಯೂಟರ್ ಹೆನ್ರಿ ಫಿಚ್ ನ್ಯಾಯಾಲಯಕ್ಕೆ ಅರುಹಿದರು.

ಇದನ್ನು ಕೇಳುತ್ತಿದ್ದಂತೆ ಮ್ಯಾಜಿಸ್ಟ್ರೇಟ್ ಅಮಂಡಾ ಬ್ಯಾರನ್, ‘‘ಇದು ಅದೃಷ್ಟವೇ ಸರಿ’ ಬಹುದೊಡ್ಡ ಗಂಡಾಂತರದಿಂದ ಪಾರಾದಂತಾಗಿದೆ. ಆದರೆ, ಇತರೆ ವಾಹನಗಳು ಮತ್ತು ಪಾದಚಾರಿಗಳಿಗೆ ಹಾನಿಯಾಗದಂತೆ, ಹಾಗೂ ಆತನ ಮತ್ತು ಸಹ ಪ್ರಯಾಣಿಕರ ಜೀವನವನ್ನು ಅಪಾಯದಕ್ಕೆ ದೂಡುವುದು ಸಲ್ಲದು ಎಂದರು. ಇನ್ನು, ಪೊಲೀಸರು ತಪಾಸಿಸುವ ಸಂದರ್ಭದಲ್ಲಿ ಲಾರಿಸ್ ೧೦೦ ಮಿಲಿ ಲೀಟರ್ ಉಸಿರಾಟದ ಪ್ರತಿ ೮೦ ಮೈಕ್ರೊಗ್ರಾಂಗಳಷ್ಟು ಮದ್ಯದ ಅಂಶ ಕಂಡುಬಂದಿತ್ತು. ಅಂದಹಾಗೆ, ಇಂಗ್ಲೆಂಡ್ ಮತ್ತು ವೇಲ್ಸ್ ಕಾನೂನು ಮಿತಿ ಕೇವಲ ೩೫ ಮೈಕ್ರೋಗ್ರಾಂಗಳಷ್ಟು ಮಾತ್ರ.

ಇದನ್ನೂ ಓದಿ : ಕ್ರೊವೇಷಿಯಾ ಕನಸು ಚಿವುಟಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಫ್ರಾನ್ಸ್

ಇನ್ನು, ಲಾರಿಸ್ ಪರ ವಾದ ಮಾಡಿದ ವಕೀಲ ಡೇವಿಡ್ ಸೋನ್, ‘’ಲಾರಿಸ್ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಸಹವರ್ತಿಗಳು ಅವರ ಮೇಲೆ ಮದ್ಯವನ್ನು ಚೆಲ್ಲಿದರಷ್ಟೆ. ಇದೇ ಜುಲೈ ೧೫ರಂದು ಭೂಮಂಡಲದಲ್ಲೇ ಅವರು ಹೆಮ್ಮೆಪಡುವ ವ್ಯಕ್ತಿಯಾಗಿದ್ದರು. ಪ್ರತಿಷ್ಠಿತ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡವನ್ನು ಮುನ್ನಡೆಸಿ ಟ್ರೋಫಿ ತಂದಿತ್ತಿದ್ದರು. ಆದರೆ, ಪೊಲೀಸರು ಅವರನ್ನು ಬಂಧಿಸಿ ರಾತ್ರಿಯೆಲ್ಲಾ ಜೈಲಿನಲ್ಲಿ ಕಳೆಯುವಂತೆ ಮಾಡಿದರು,’’ ಎಂದರು.

ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ತೀರ್ಪು ಪ್ರಕಟಿಸುವಾಗ, “ಲಾರಿಸ್ ಎಸಗಿರುವ ಅಪರಾಧ ಮತ್ತು ಕಾನೂನು ಉಲ್ಲಂಘನೆಯು ಅಪರಾಧದ ಗಂಭೀರತೆಯನ್ನು ಎತ್ತಿತೋರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಗೋಲ್‌ಕೀಪರ್‌ನ ಹಣಕಾಸಿನ ಸ್ಥಿತಿಗತಿಯನ್ನೂ ಬಿಂಬಿಸುತ್ತಿದೆ ಎಂದು ಹೇಳಿದರು.

ಲಾರಿಸ್ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಮೋಘ ಗೋಲ್‌ಕೀಪಿಂಗ್‌ನಿಂದ ಗಮನ ಸೆಳೆದಿದ್ದರು. ನಿರ್ಣಾಯಕ ಘಟ್ಟದಲ್ಲಿ ಅದರಲ್ಲೂ ಫೈನಲ್‌ನಲ್ಲಿ ಮೆಕ್ಸಿಕೊ ವಿರುದ್ಧ ಅತ್ಯದ್ಭುತವಾಗಿ ಗೋಲುಪೆಟ್ಟಿಗೆಯನ್ನು ಕಾದಿದ್ದರಲ್ಲದೆ ತನ್ನ ತಂಡಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದರು. ಆದರೆ, ಕುಡಿದು ವಾಹನ ಚಾಲಿಸುವುದರೊಂದಿಗೆ ಅವರು ವೃಥಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More