ಖೇಲ್ ರತ್ನ ರೇಸ್‌ನಲ್ಲಿ ನೀರಜ್ ಚೋಪ್ರಾ ಹಾಗೂ ಮೀರಾಬಾಯಿ ಚಾನು 

ಜಾವೆಲೆನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಾತ್ರವಲ್ಲದೆ ಏಷ್ಯಾಡ್‌ನಲ್ಲಿಯೂ ನೀರಜ್ ಚಿನ್ನ ಗೆದ್ದರೆ, ಮೀರಾ ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು

ಕೇಂದ್ರ ಸರ್ಕಾರ ನೀಡುವ ಈ ಸಾಲಿನ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ ರಾಜೀವ್‌ಗಾಂಧಿ ಖೇಲ್‌ರತ್ನಕ್ಕೆ ಜಾವೆಲಿನ್ ಪಟು ನೀರಜ್ ಚೋಪ್ರಾ ಮತ್ತು ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಆಯ್ಕೆಯಾಗುವ ಸಂಭವವಿದೆ. ಈ ಇಬ್ಬರಷ್ಟೇ ಅಲ್ಲದೆ ಏಷ್ಯಾ ಕ್ರೀಡಾಕೂಟದ ಸ್ವರ್ಣ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಕೂಡ ಪ್ರತಿಷ್ಠಿತ ಪ್ರಶಸ್ತಿ ರೇಸ್‌ನಲ್ಲಿರುವ ಮತ್ತೊರ್ವ ಅಥ್ಲೀಟ್.

ಇದೇ ಸೆಪ್ಟೆಂಬರ್ ೨೫ರಂದು ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದು, ಇದಕ್ಕೆಂದೇ ಕೇಂದ್ರ ಕ್ರೀಡಾ ಸಚಿವಾಲಯ ಅರ್ಹ ಅಥ್ಲೀಟ್‌ಗಳ ಹೆಸರನ್ನು ಸೂಚಿಸಬೇಕೆಂದು ಖೇಲ್‌ರತ್ನ, ಅರ್ಜುನ, ಧ್ಯಾನ್‌ಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಾಗಿ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಆಯ್ಕೆಸಮಿತಿಯೊಂದನ್ನು ನೇಮಿಸಿದೆ.

ಸಾಮಾನ್ಯವಾಗಿ, ಕ್ರೀಡಾ ಪ್ರಶಸ್ತಿಯನ್ನು ಭಾರತ ಹಾಕಿ ತಂಡದ ಮಾಜಿ ನಾಯಕ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟುದಿನವಾದ ಆಗಸ್ಟ್ ೨೯ರಂದು ನೀಡುತ್ತಾ ಬರಲಾಗುತ್ತಿದೆ. ಆದರೆ, ಜಕಾರ್ತ ಮತ್ತು ಪಾಲೆಂಬಾಂಗ್‌ನಲ್ಲಿ ಈ ಬಾರಿ ಏಷ್ಯಾಡ್ ಕ್ರೀಡಾಕೂಟ ನಡೆದ ಹಿನ್ನೆಲೆಯಲ್ಲಿ ಪ್ರಶಸ್ತಿ ವಿತರಣೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ : ಸುಶೀಲ್ ನಿರಾಸೆ ಹೋಗಲಾಡಿಸಿ ಬಂಗಾರದ ಭವ್ಯ ಇತಿಹಾಸ ಬರೆದ ಬಜರಂಗ್

ಈ ಬಾರಿ ಖೇಲ್ ರತ್ನ ಮತ್ತು ಅರ್ಜುನ ಕ್ರೀಡಾ ಪ್ರಶಸ್ತಿ ನೀಡಿಕೆಗೆ ಇದ್ದ ನಿಯಮಗಳನ್ನು ಕ್ರೀಡಾ ಸಚಿವಾಲಯ ತಿದ್ದುಪಡಿ ಮಾಡಿ, ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್ ಮತ್ತು ಇತ್ತೀಚಿನ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದವರೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ, ಖೇಲ್‌ರತ್ನ ಪ್ರಶಸ್ತಿಗೆ ಮೂವರು ಪ್ರಮುಖ ಸ್ಪರ್ಧಿಗಳು ಪೈಪೋಟಿ ನಡೆಸುತ್ತಿದ್ದಾರೆ.

ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗಾಗಿ ಅರ್ಹರನ್ನು ಸೂಚಿಸುವ ಸಲುವಾಗಿ ಕ್ರೀಡಾ ಸಚಿವಾಲಯ ದೆಹಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಇಂದರ್‌ಮೀಟ್ ಕೌಲ್ ಕೊಚ್ಚಾರ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಮಾಜಿ ಅಥ್ಲೀಟ್‌ಗಳಾದ ಅಶ್ವಿನಿ ನಾಚಪ್ಪ, ಕಮಲೇಶ್ ಮೆಹ್ತಾ, ಸಮರೇಶ್ ಜಂಗ್ ಮತ್ತು ವಿಮಲ್ ಕುಮಾರ್ ಸದಸ್ಯರಾಗಿದ್ದಾರೆ.

ಇನ್ನು, ದ್ರೋಣಾಚಾರ್ಯ ಹಾಗೂ ಧ್ಯಾನ್‌ಚಂದ್ ಪ್ರಶಸ್ತಿಗಾಗಿ ಪಂಜಾಬ್ ಮತ್ತು ಹರ್ಯಾಣ ರಾಜ್ಯದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮುಕುಲ್ ಮುದ್ಗಲ್ ನೇತೃತ್ವದ ೧೧ ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ. ನ್ಯಾಯಾಧೀಶರ ನೇತೃತ್ವದಲ್ಲಿ ಕ್ರೀಡಾಪಟುಗಳನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆರಿಸುತ್ತಿರುವುದು ಬಹುಶಃ, ಭಾರತೀಯ ಕ್ರೀಡಾ ಪ್ರಶಸ್ತಿ ನೀಡಿಕೆಯಲ್ಲೇ ಹೊಸ ಬೆಳವಣಿಗೆಯಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More