ಏಷ್ಯಾ ಕಪ್ ಕ್ರಿಕೆಟ್: ಉದ್ಘಾಟನಾ ಪಂದ್ಯದಲ್ಲಿ ಮಾಲಿಂಗಗೆ ದಾಖಲೆ ಬರೆಯುವ ತುಡಿತ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮರೆಯಾಗಿದ್ದ ಲಸಿತ್ ಮಾಲಿಂಗ ಸ್ವತಃ ತಾನೇ ಅಚ್ಚರಿಗೊಳ್ಳುವಂತೆ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಏಷ್ಯಾ ಕಪ್ ತಂಡಕ್ಕೆ ಸೇರ್ಪಡೆಗೊಳಿಸಿದೆ. ಏಷ್ಯಾ ಕಪ್‌ ಚರಿತ್ರೆಯಲ್ಲೇ ಗರಿಷ್ಠ ವಿಕೆಟ್‌ಧಾರಿಗಳ ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿರುವ ಮಾಲಿಂಗ (೨೮) ದಾಖಲೆ ಸನಿಹದಲ್ಲಿದ್ದಾರೆ

ಹದಿನಾಲ್ಕನೇ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೆಣಸಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಆರು ರಾಷ್ಟ್ರಗಳ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯವೇ ರೋಚಕತೆಯಿಂದ ಕೂಡಿರುವ ಸಾಧ್ಯತೆಗಳನ್ನು ಸೃಷ್ಟಿಸಿದೆ. ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳೆನಿಸಿದರೂ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಅಪಾಯಕಾರಿ ತಂಡಗಳಾಗಿವೆ.

ಮಶ್ರಫೆ ಮೊರ್ತಜಾ ಸಾರಥ್ಯದ ಬಾಂಗ್ಲಾದೇಶ ಅತ್ಯಂತ ಪ್ರತಿಭಾಶಾಲಿ ತಂಡವಾಗಿದ್ದು, ಯಾವ ಹಂತದಲ್ಲಿ ಬೇಕಾದರೂ ಪಂದ್ಯಕ್ಕೆ ತಿರುವು ನೀಡುವಷ್ಟು ಶಕ್ತವಾಗಿದೆ. ಆದಾಗ್ಯೂ ಗಾಯದ ಮನೆಯಂತಾಗಿರುವ ಬಾಂಗ್ಲಾದೇಶ ತಂಡ ಪ್ರಸಕ್ತ ಟೂರ್ನಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಕೌತುಕ ಕೆರಳಿಸಿದೆ. ಆಲ್ರೌಂಡ್ ಆಟಗಾರ ಶಕೀಬ್ ಅಲ್ ಹಸನ್ ಎಡಗೈ ಬೆರಳಿನ ಶಸ್ತ್ರಚಿಕಿತ್ಸೆಗೆ ಗುರಿಯಾಗಬೇಕಿದ್ದರೆ, ತಮೀಮ್ ಇಕ್ಬಾಲ್ ಬಲ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಆಫ್‌ಸ್ಪಿನ್ನರ್ ನಜ್ಮುಲ್ ಹುಸೇನ್ ಕೂಡ ಕೈನೋವಿನಿಂದ ಬಳಲುತ್ತಿದ್ದು, ಟೂರ್ನಿಗೆ ಅಲಭ್ಯವಾಗಿದ್ದಾರೆ.

ಇತ್ತ, ಶ್ರೀಲಂಕಾ ತಂಡ ಕೂಡ ಗಾಯದ ಸಮಸ್ಯೆಯಿಂದ ಮುಕ್ತವಾಗಿಲ್ಲ. ದನುಷ್ಕಾ ಗುಣತಿಲಕ ಕೆಳಬೆನ್ನಿನ ನೋವಿನಿಂದ ಕೂಡಿದ್ದರೆ, ಸ್ಪಿನ್ ಬೌಲರ್ ಹಾಗೂ ಆಲ್ರೌಂಡರ್ ಶೇಹನ್ ಜಯಸೂರ್ಯ ಹಾಗೂ ದಿನೇಶ್ ಚಂಡೀಮಲ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಪಂದ್ಯಾವಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ, ಗಾಯದ ಮನೆಯಂತಾಗಿರುವ ಇತ್ತಂಡಗಳ ಪೈಕಿ ಯಾರು ಶುಭಾರಂಭ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ, ನಿದಾಸ್ ಟ್ರೋಫಿ ಪಂದ್ಯಾವಳಿಯಲ್ಲಿ ಶ್ರೀಲಂಕಾಗೆ ಆಘಾತ ನೀಡಿ ಫೈನಲ್ ತಲುಪಿದ್ದ ಬಾಂಗ್ಲಾದೇಶಕ್ಕೆ ಆಘಾತ ನೀಡಲು ಸಿಂಹಳೀಯರು ಸಜ್ಜಾಗಿದ್ದಾರೆ.

ಇದನ್ನೂ ಓದಿ : ಕಡೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ನಿದಾಸ್ ಟ್ರೋಫಿ ತಂದಿತ್ತ ಕಾರ್ತಿಕ್

ಅಂದಹಾಗೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳೆರಡೂ ಈ ಹಿಂದಿನ ಸರಣಿಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಏಷ್ಯಾ ಕಪ್‌ಗೆ ಕಾಲಿಟ್ಟಿವೆ. ಬಾಂಗ್ಲಾದೇಶ, ಕೆರಿಬಿಯನ್ನರ ನೆಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ೨-೧ ಮುನ್ನಡೆ ಗಳಿಸಿ ಸರಣಿ ಗೆದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ತವರಿನಲ್ಲಿ ಐದು ಪಂದ್ಯಗಳ ಸರಣಿಯನ್ನು ೩-೨ರಿಂದ ಗೆಲುವು ಸಾಧಿಸಿ ಏಷ್ಯಾ ಕಪ್‌ಗೆ ಕಾಲಿಟ್ಟಿದೆ.

ಅಂದಹಾಗೆ, ಏಷ್ಯಾಕಪ್‌ನಲ್ಲಿ ಇದುವರೆಗೂ ೨೮ ವಿಕೆಟ್‌ ಗಳಿಸಿರುವ ಲಸಿತ್ ಮಾಲಿಂಗ ಸದ್ಯ ದಾಖಲೆಯ ಹೊಸ್ತಿಲಲ್ಲಿದ್ದಾರೆ. ವಿಶ್ವದ ಮಾಜಿ ಶ್ರೇಷ್ಠ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ೩೦ ವಿಕೆಟ್ ಉರುಳಿಸಿದ್ದು ದಾಖಲೆಯಾಗಿದ್ದು, ಮಾಲಿಂಗ ಈ ಪಂದ್ಯಾವಳಿಯಲ್ಲಿ ತಮ್ಮ ದೇಶದವರೇ ಆದ ಮುರಳೀಧರನ್ ದಾಖಲೆ ಮುರಿಯುವ ಸಂಕಲ್ಪ ತೊಟ್ಟಿದ್ದಾರೆ.

ತಂಡಗಳು ಇಂತಿವೆ

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಮಶ್ರಫೆ ಮೊರ್ತಜಾ (ನಾಯಕ), ಮೊಹಮದ್ ಮಿಥುನ್, ಲಿಟನ್ ದಾಸ್, ಮುಷ್ಪೀಕರ್ ರಹೀಮ್, ಅರಿಫುಲ್ ಹಕ್, ಮಹಮುದುಲ್ಲಾ, ಮೊಸಾದೆಕ್ ಹುಸೇನ್, ಮೆಹಿದಿ ಹಸನ್, ನಜ್ಮುಲ್ ಇಸ್ಲಾಮ್, ರೂಬೆಲ್ ಹುಸೇನ್, ಮುಸ್ತಾಫಿಜುರ್ ರೆಹಮಾನ್, ಅಬು ಹೈದರ್ ರೊನಿ, ನಜ್ಮುಲ್ ಹುಸೇನ್ ಶಾಂಟೊ, ಮೊಮಿನಲ್ ಹಕ್.

ಶ್ರೀಲಂಕಾ: ಆ್ಯಂಜೆಲೊ ಮ್ಯಾಥ್ಯೂಸ್ (ನಾಯಕ), ಕುಶಾಲ್ ಪೆರೆರಾ, ಕುಶಾಲ್ ಮೆಂಡಿಸ್, ಉಪುಲ್ ತರಂಗ, ನಿರೋಷನ್ ಡಿಕ್ವೆಲ್ಲಾ, ದನುಷ್ಕಾ ಗುಣತಿಲಕ, ತಿಸಾರ ಪೆರೆರಾ, ದಾಸುನ್ ಶನಾಕ, ಧನಂಜಯ ಡಿಸಿಲ್ವಾ, ಅಖಿಲ ಧನಂಜಯ, ದಿಲ್ರುವಾನ್ ಪೆರೆರಾ, ಅಮಿಲಾ ಅಪೋನ್ಸೊ, ಕಾಸುನ್ ರಜಿತಾ, ಸುರಂಗ ಲಕ್ಮಲ್, ದುಷ್ಮಂತಾ ಚಮೀರಾ ಮತ್ತು ಲಸಿತ್ ಮಾಲಿಂಗ.

ಪಂದ್ಯ ಆರಂಭ: ಸಂಜೆ ೫.೦೦ | ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ | ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ೧/ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ೧/ಎಚ್‌ಡಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More