ಶ್ರೀಕಾಂತ್ ಸೋಲಿನೊಂದಿಗೆ ಜಪಾನ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸವಾಲಿಗೆ ತೆರೆ

ದ. ಕೊರಿಯಾದ ಲೀ ಡಾಂಗ್ ಎದುರು ೨೧-೧೯, ೧೬-೨೧, ೧೮-೨೧ರಿಂದ ಕಿಡಾಂಬಿ ಶ್ರೀಕಾಂತ್ ಸೋಲುವುದರೊಂದಿಗೆ ಜಪಾನ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ. ಪಿ ವಿ ಸಿಂಧು ಮತ್ತು ಎಚ್ ಎಸ್ ಪ್ರಣಯ್ ಪ್ರೀಕ್ವಾರ್ಟರ್‌ನಲ್ಲೇ ಸೋತರೂ, ಶ್ರೀಕಾಂತ್ ಎಂಟರ ಘಟ್ಟಕ್ಕೇರಿದ್ದರು

ವಿಶ್ವದ ಎಂಟನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಪಟು ಕಿಡಾಂಬಿ ಶ್ರೀಕಾಂತ್ ಅವರ ಜಪಾನ್ ಬ್ಯಾಡ್ಮಿಂಟನ್ ಓಪನ್ ಹೋರಾಟ ಅಂತ್ಯ ಕಂಡಿದೆ. ಟೂರ್ನಿಯಲ್ಲಿ ಭಾರತದ ಏಕಾಂಗಿ ಸ್ಪರ್ಧಿಯಾಗಿ ಉಳಿದುಕೊಂಡಿದ್ದ ಶ್ರೀಕಾಂತ್, ಶುಕ್ರವಾರ (ಸೆ.೧೪) ಬೆಳಗ್ಗೆ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಆಟಗಾರ ಲೀ ಡಾಂಗ್ ಕೆಯುನ್ ವಿರುದ್ಧ ಪರಾಜಿತರಾದರು.

ತನಗಿಂತ ಕೆಳ ಕ್ರಮಾಂಕಿತ ಆಟಗಾರನ ಎದುರು ನಿರೀಕ್ಷೆಯಂತೆಯೇ ಪಂದ್ಯದಲ್ಲಿ ಶುಭಾರಂಭ ಮಾಡಿದ ಶ್ರೀಕಾಂತ್, ಅಂತಿಮವಾಗಿ ಮೂರು ಗೇಮ್‌ಗಳ ಜಿದ್ದಾಜಿದ್ದಿ ಕಾದಾಟದಲ್ಲಿ ೧-೨ರಿಂದ ಆಘಾತಕಾರಿ ಸೋಲನುಭವಿಸಿದರು. ದಿನದ ಹಿಂದಷ್ಟೇ ವನಿತೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಕ್ರಮವಾಗಿ ಪಿ ವಿ ಸಿಂಧು ಮತ್ತು ಎಚ್ ಎಸ್ ಪ್ರಣಯ್ ಪರಾಭವಗೊಂಡಿದ್ದರು.

ಪಿ ವಿ ಸಿಂಧು, ಚೀನಾ ಆಟಗಾರ್ತಿ ಹಾಗೂ ವಿಶ್ವದ ೧೪ನೇ ಶ್ರೇಯಾಂಕಿತೆ ಗಾವೊ ಫಾಂಗ್‌ಜಿ ವಿರುದ್ಧ ೧೮-೨೧, ೧೯-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದರೆ; ಪ್ರಣಯ್, ವಿಶ್ವದ ೧೦ನೇ ಶ್ರೇಯಾಂಕಿತ ಇಂಡೋನೇಷ್ಯಾದ ಆಂಟನಿ ಗಿಂಟಿಂಗ್ ವಿರುದ್ಧ ೧೪-೨೧, ೧೭-೨೧ರಿಂದ ಪರಾಭವಗೊಂಡರು. ಇತ್ತೀಚೆಗಷ್ಟೇ ಮುಗಿದ ಏಷ್ಯಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು, ಚೀನಿ ಆಟಗಾರ್ತಿಯ ಎದುರು ಪ್ರಬಲ ಪೈಪೋಟಿ ನಡೆಸಿದರಾದರೂ, ಕೆಲವೇ ಪಾಯಿಂಟ್ಸ್‌ಗಳ ಅಂತರದಲ್ಲಿ ಸೋಲನುಭವಿಸಿದರು.

ಇದನ್ನೂ ಓದಿ : ರಿಲೇ ತಂಡದ ಚಿನ್ನ-ಬೆಳ್ಳಿ ಸಾಧನೆಯ ಮಧ್ಯೆ ಕಾಡಿದ ಭಾರತ ಹಾಕಿ ತಂಡದ ಸೋಲು

ಮೊದಲ ಗೇಮ್‌ನಲ್ಲಿ ಶ್ರೀಕಾಂತ್ ಗೆಲುವು ಸಾಧಿಸಿದರಾದರೂ, ಲೀ ಡಾಂಗ್ ಕೂಡ ಪ್ರಬಲ ಪೈಪೋಟಿ ಒಡ್ಡಿದ್ದರು. ಹೀಗಾಗಿ ಕೇವಲ ಮೂರು ಪಾಯಿಂಟ್ಸ್‌ಗಳ ಅಂತರದಲ್ಲಿ ಶ್ರೀಕಾಂತ್ ಜಯಭೇರಿ ಬಾರಿಸಿದ್ದರು. ಪ್ರತಿಸ್ಪರ್ಧಿಯ ಈ ಪ್ರಬಲ ಸವಾಲನ್ನು ಎರಡನೇ ಗೇಮ್‌ನಲ್ಲಿಯೂ ಮೆಟ್ಟಿನಿಲ್ಲುವಲ್ಲಿ ಶ್ರೀಕಾಂತ್ ಎಡವಿದರು. ಪಂದ್ಯವನ್ನು ಜೀವಂತವಾಗಿಡಲು ಈ ಗೇಮ್ ಅನ್ನು ಗೆಲ್ಲದೆ ಗತ್ಯಂತರವಿಲ್ಲ ಎಂದುಕೊಂಡ ಡಾಂಗ್ ಎರಡನೇ ಗೇಮ್‌ನ ಮಧ್ಯಂತರದಲ್ಲೇ ೧೧-೫ ಮುನ್ನಡೆ ಗಳಿಸಿದರು. ಶ್ರೀಕಾಂತ್ ಕೂಡ ತಿರುಗೇಟು ನೀಡಲು ಯತ್ನಿಸಿದರಾದರೂ, ಪಾಯಿಂಟ್ಸ್ ಗಳಿಕೆಯಲ್ಲಿ ಸಾಕಷ್ಟು ಮುಂದೆ ಹೋಗಿದ್ದ ಡಾಂಗ್ ೧-೧ರಿಂದ ಸಮಬಲಗೊಳಿಸಿದರು.

ಇನ್ನು, ನಿರ್ಣಾಯಕವಾದ ಮೂರನೇ ಗೇಮ್‌ ಇಬ್ಬರಿಗೂ ಮಾಡು ಇಲ್ಲವೇ ಮಡಿ ಎಂಬಂತಾಯಿತು. ಇಲ್ಲಿಯೂ ಡಾಂಗ್ ಶುರುವಿನಲ್ಲೇ ಆಕ್ರಮಣಕಾರಿಯಾದರು. ೬-೪ ಮುನ್ನಡೆ ಪಡೆದ ಡಾಂಗ್, ಮೇಲುಗೈ ಸಾಧಿಸುವ ಸ್ಪಷ್ಟ ಸುಳಿವು ನೀಡಿದರು. ಆದರೆ, ಶ್ರೀಕಾಂತ್ ಕೂಡ ಈ ಹಂತದಲ್ಲಿ ತನ್ನ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಿದರಲ್ಲದೆ, ೯-೯ ಸಮಾಂತರ ಸಾಧಿಸಿದರು. ಆದರೆ, ಗೇಮ್‌ನ ಮಧ್ಯಂತರದ ಹೊತ್ತಿಗೆ ಮುನ್ನಡೆ ಪಡೆಯಲು ಸಾಧ್ಯವಾಗದೆ ಮತ್ತೆ ಹಿನ್ನಡೆ ಕಾಣುವಂತಾಯಿತು.

ಇಬ್ಬರ ನಡುವೆ ಮತ್ತೆ ಮಾರಾಮಾರಿ ಹೋರಾಟ ನಡೆದು ೧೫-೧೫ ಸಮಬಲದಿಂದ ಪಂದ್ಯ ರೋಚಕ ಹಾದಿ ಹಿಡಿಯಿತು. ಏತನ್ಮಧ್ಯೆ, ಕೊರಿಯಾ ಆಟಗಾರ ಒಂದರ ಹಿಂದೊಂದರಂತೆ ಇನ್ನೆರಡು ಪಾಯಿಂಟ್ಸ್‌ಗಳನ್ನು ಕಲೆಹಾಕಿ ೧೭-೧೫ ಮುನ್ನಡೆ ಸಾಧಿಸುತ್ತಲೇ ಶ್ರೀಕಾಂತ್ ತುಸು ಒತ್ತಡಕ್ಕೆ ಒಳಗಾದರು. ಪುಟಿದೇಳಬೇಕೆಂಬ ಅವರ ಹವಣಿಕೆಯನ್ನು ಲೀ ಡಾಂಗ್ ಯಶಸ್ವಿಯಾಗಿ ಹತ್ತಿಕ್ಕಿದ್ದಲ್ಲದೆ, ಅಂತಿಮವಾಗಿ, ೨೧-೧೮ರಿಂದ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ತಲುಪಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More