ವಿಶ್ವ ಶೂಟಿಂಗ್: ಬಂಗಾರದ ಪದಕಕ್ಕೆ ಗುರಿ ಇಟ್ಟ ಅವಳಿ ಸೋದರರು

ದಕ್ಷಿಣ ಕೊರಿಯಾದ ಚಾಂಗ್ವನ್‌ನಲ್ಲಿ ನಡೆಯುತ್ತಿರುವ ೫೨ನೇ ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. ಪಟಿಯಾಲದ ಉದಯ್‌ವೀರ್ ಸಿಧು, ವಿಜಯ್‌ವೀರ್ ಸಿಧು ಚಿನ್ನದ ಪದಕ ಗೆದ್ದರೆ, ಟೂರ್ನಿಯಲ್ಲಿ ವಿಜಯ್‌ವೀರ್ ಒಟ್ಟು 3 ಪದಕ ಗೆದ್ದ ಸಾಧನೆ ಮಾಡಿದರು

ಕೇವಲ ಹದಿನಾರರ ಹರೆಯದ ಉದಯ್‌ವೀರ್, ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮೆರೆದಿದ್ದಾರೆ. ಜೂನಿಯರ್ ಪುರುಷರ ೨೫ ಮೀ. ಪಿಸ್ತೂಲ್ ಶೂಟಿಂಗ್‌ನ ವೈಯಕ್ತಿಕ ವಿಭಾಗದಲ್ಲಿ ಉದಯ್‌ವೀರ್ ಬಂಗಾರದ ಪದಕ ಗೆದ್ದರು. ಇನ್ನು, ಇದೇ ವಿಭಾಗದ ಟೀಂ ಈವೆಂಟ್‌ನಲ್ಲಿಯೂ ಅವಳಿ ಸೋದರ ವಿಜಯ್‌ವೀರ್ ಸಿಧು ಮತ್ತು ರಾಜ್‌ಕನ್ವರ್ ಸಂಧು ಜೊತೆಗೂಡಿ ಚಿನ್ನದ ಪದಕಕ್ಕೆ ಗುರಿ ಇಟ್ಟರು.

ಮಾನ್ಸ ಮೂಲದ ಉದಯ್‌ವೀರ್, ನಿಖರತೆ ಮತ್ತು ವೇಗದ ಈ ಎರಡೂ ವಿಭಾಗಗಳಲ್ಲಿ ಕ್ರಮವಾಗಿ ೨೯೧ ಮತ್ತು ೨೯೬ ಪಾಯಿಂಟ್ಸ್ ಗಳಿಸುವುದರೊಂದಿಗೆ, ಒಟ್ಟು ೫೮೭ ಸ್ಕೋರ್ ಮಾಡಿ ಚಿನ್ನದ ಪದಕ ಜಯಿಸಿದರು. ಇತ್ತ, ವೈಯಕ್ತಿಕ ವಿಭಾಗದಲ್ಲಿಯೂ ಉದಯ್‌ವೀರ್, ಅಮೆರಿಕ ಶೂಟರ್ ಹೆನ್ರಿ ಲೆವೆರೆಟ್ (೫೮೪) ಮತ್ತು ದಕ್ಷಿಣ ಕೊರಿಯಾದ ಲೀ ಜಾಕ್ಯೂನ್ (೫೮೨) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಜಯ್‌ವೀರ್, ೫೮೧ ಸ್ಕೋರ್‌ನೊಂದಿಗೆ ನಾಲ್ಕನೇ ಸ್ಥಾನ ಗಳಿಸಿದರೆ; ಭಾರತದ ಮತ್ತೋರ್ವ ಶೂಟರ್ ರಾಜ್‌ಕನ್ವರ್, ೫೬೮ ಸ್ಕೋರ್‌ನೊಂದಿಗೆ ೨೦ನೇ ಸ್ಥಾನ ಗಳಿಸಿದರು. ಏತನ್ಮಧ್ಯೆ, ಟೀಂ ಈವೆಂಟ್‌ನಲ್ಲಿ ಭಾರತದ ಗುರಿಕಾರರು ೧,೭೩೬ ಪಾಯಿಂಟ್ಸ್ ಗಳಿಸಿದರೆ, ಚೀನಾ (೧೭೩೦) ಮತ್ತು ದಕ್ಷಿಣ ಕೊರಿಯಾ ತಂಡ (೧೭೨೧) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿತು.

ಇದನ್ನೂ ಓದಿ : ವಿಶ್ವ ಶೂಟಿಂಗ್: ಸ್ಕೀಟ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ರಜತ ಪದಕ

ಅವಳಿ ಸೋದರರ ಕುರಿತು

ಸಿಧು ಸೋದರರು ಮೂಲತಃ ಮಾನ್ಸದವರಾದರೂ, ೨೦೧೫ರಲ್ಲಿ ಕುಟುಂಬ ಚಂಡೀಗಢಕ್ಕೆ ಸ್ಥಳಾಂತರಗೊಂಡಿದೆ. ೨೦೧೦ರಿಂದ ಶೂಟಿಂಗ್‌ ಅಭ್ಯಾಸ ಮಾಡುತ್ತಿರುವ ಈ ಸೋದರರು, ಸರ್ಕಾರಿ ಮಾದರಿ ಹಿರಿಯ ಮಾಧ್ಯಮಕ ಶಾಲೆಯಲ್ಲಿ ಹನ್ನೆರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸಿಧು ಸೋದರರು ತಮ್ಮ ತಂದೆ ಗುರ್‌ಪ್ರೀತ್ ಸಿಂಗ್ ಸಿಧು ಅವರನ್ನು ಕಳೆದುಕೊಂಡರು. ಮಾನ್ಸದ ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿಯಾಗಿ ಗುರ್‌ಪ್ರೀತ್ ಸೇವೆ ಸಲ್ಲಿಸುತ್ತಿದ್ದರು.

“ಅಮೆರಿಕ ಮತ್ತು ಕೊರಿಯಾ ಶೂಟರ್‌ಗಳು ತೀವ್ರ ಪ್ರತಿಸ್ಪರ್ಧೆ ಒಡ್ಡಿದರಲ್ಲದೆ, ನನ್ನನ್ನು ಹಿಂದಿಕ್ಕಲು ಶ್ರಮಿಸಿದರು. ಆದರೆ, ನಾನು ಒತ್ತಡಕ್ಕೆ ಒಳಗಾಗದೆ ಸಹನೆಯಿಂದಲೇ ಗುರಿ ಇಟ್ಟೆ. ನಿಖರ ಗುರಿಗಿಂತಲೂ ಮಿಗಿಲಾಗಿ, ವೇಗದ ಸ್ಪರ್ಧೆಯಲ್ಲಂತೂ ನಾನು ನಿರೀಕ್ಷಿತ ಪ್ರದರ್ಶನವನ್ನೇ ನೀಡಿದೆ. ದೇಶಕ್ಕಾಗಿ ಚಿನ್ನ ಗೆದ್ದೆ ಎಂಬ ಹೆಮ್ಮೆ ನನ್ನನ್ನು ಸಂತಸಗೊಳಿಸಿದೆ,’’ ಎಂದು ಉದಯ್‌ವೀರ್ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More