ಡೇವಿಸ್ ಕಪ್: ಮೊದಲ ದಿನದ ಎರಡೂ ಸಿಂಗಲ್ಸ್‌ನಲ್ಲಿ ಸೋತ ಭಾರತಕ್ಕೆ ಹಿನ್ನಡೆ

ಪ್ರತಿಷ್ಠಿತ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯ ವಿಶ್ವ ಗುಂಪಿನ ಪ್ಲೇಆಫ್‌ನಲ್ಲಿ ಪ್ರವಾಸಿ ಭಾರತ ತಂಡ ಮೊದಲ ದಿನವೇ ಆಘಾತ ಅನುಭವಿಸಿದೆ. ಸಿಂಗಲ್ಸ್ ವಿಭಾಗದ ಎರಡೂ ಪಂದ್ಯಗಳಲ್ಲಿ ಭಾರತ ಸೋಲಪ್ಪಿದೆ. ರಾಮ್‌ಕುಮಾರ್ ರಾಮನಾಥನ್ ಸೋತರೆ, ಬಳಿಕ ಪ್ರಜ್ಞೇಶ್ ಕೂಡ ಪರಾಭವಗೊಂಡರು

ಈಚೆಗಷ್ಟೇ ಮುಕ್ತಾಯ ಕಂಡ ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಾದ ಯುಎಸ್ ಓಪನ್‌ನಲ್ಲಿ ಚಾಂಪಿಯನ್ ಆದ ನೊವಾಕ್ ಜೊಕೊವಿಚ್ ತವರಿನಲ್ಲಿ ನಡೆಯುತ್ತಿರುವ ಡೇವಿಸ್ ಕಪ್‌ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಈ ಸದವಕಾಶವನ್ನು ಭಾರತ ಕೈಚೆಲ್ಲುವ ಭೀತಿಗೆ ಸಿಲುಕಿದೆ. ಮೊದಲ ದಿನವೇ ಆತಿಥೇಯರ ಎದುರು ೦-೨ ಹಿನ್ನಡೆ ಅನುಭವಿಸಿರುವ ಭಾರತ, ಇದೀಗ ಒತ್ತಡಕ್ಕೆ ಸಿಲುಕಿದೆ. ಶನಿವಾರ (ಸೆ ೧೫) ನಡೆಯಲಿರುವ ಡಬಲ್ಸ್ ವಿಭಾಗದ ಪಂದ್ಯವು ಭಾರತಕ್ಕೆ ನಿರ್ಣಾಯಕವಾಗಿದೆ.

ಶುಕ್ರವಾರ (ಸೆ ೧೪) ನಡೆದ ಪುರುಷರ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ತಮಿಳುನಾಡಿನ ರಾಮ್‌ಕುಮಾರ್ ಲಾಸ್ಲೊ ಜೆರಿ ವಿರುದ್ಧ ೬-೩, ೪-೬, ೬-೭ (೨), ೨-೬ ಸೆಟ್‌ಗಳಲ್ಲಿ ಸೋಲನುಭವಿಸಿದರು. ಮೂರು ತಾಸು ಹಾಗೂ ಹನ್ನೊಂದು ನಿಮಿಷಗಳ ಹಣಾಹಣಿಯಲ್ಲಿ ರಾಮ್‌ಕುಮಾರ್‌ ವೀರೋಚಿತ ಸೋಲನುಭವಿಸಿದರು.

ಕ್ರಾಲ್ಜೆವೊ ಸ್ಪೋರ್ಟ್ಸ್ ಒಳಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ಹಿನ್ನಡೆ ಅನುಭವಿಸಿತು. ವಿಶ್ವ ಟೆನಿಸ್‌ನಲ್ಲಿ ೧೩೫ನೇ ಶ್ರೇಯಾಂಕ ಹೊಂದಿರುವ ರಾಮ್‌ಕುಮಾರ್, ೮೬ನೇ ಶ್ರೇಯಾಂಕಿತ ಆಟಗಾರನ ವಿರುದ್ಧ ಮೊದಲ ಸೆಟ್‌ನಲ್ಲೇ ವಿಜೃಂಭಿಸಿದರು. ಆದರೆ, ಈ ಹಿಂದಿನ ಎರಡೂ ಡೇವಿಸ್ ಕಪ್ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಲಾಸ್ಲೊ, ಭಾರತೀಯ ಆಟಗಾರನ ವಿರುದ್ಧ ತಿರುಗಿಬಿದ್ದು, ಗೆಲುವಿನ ನಗೆಬೀರಿದರು.

ಬಳಿಕ ನಡೆದ ಮತ್ತೊಂದು ಸಿಂಗಲ್ಸ್‌ನಲ್ಲಿ ಭಾರತ ಪುಟಿದೇಳುತ್ತದೆ ಎಂಬ ಊಹೆ ಕೈಕೊಟ್ಟಿತು. ಎಡಗೈ ಆಟಗಾರ ಪ್ರಗ್ನೇಶ್ ಗುಣೇಶ್ವರನ್ ಕೆಲವೊಂದು ಭರಪೂರ ಅವಕಾಶಗಳನ್ನು ಕೈಚೆಲ್ಲಿದ ಫಲವಾಗಿ ಡುಸಾನ್ ಲಜೋವಿಕ್ ವಿರುದ್ಧ ೪-೬, ೩-೬, ೪-೬ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಒಂದು ತಾಸು, ೫೭ ನಿಮಿಷಗಳ ಸೆಣಸಾಟದಲ್ಲಿ ವಿಶ್ವದ ೫೬ನೇ ಶ್ರೇಯಾಂಕಿತ ಆಟಗಾರ ಲಜೊವಿಕ್, ಪ್ರಜ್ಞೇಶ್ ವಿರುದ್ಧ ಸುನಾಯಾಸ ಗೆಲುವು ಸಾಧಿಸಿ ಸರ್ಬಿಯಾಗೆ ೨-೦ ಮುನ್ನಡೆ ತಂದುಕೊಟ್ಟರು.

ಮೊದಲ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋತಿರುವ ಭಾರತ, ಇದೀಗ ಡೇವಿಸ್ ಕಪ್‌ನಲ್ಲಿ ತನ್ನ ಹೋರಾಟವನ್ನು ಮುಂದುವರೆಸಬೇಕಾದರೆ, ಪುರುಷರ ಡಬಲ್ಸ್ ವಿಭಾಗದ ಇಂದಿನ ಪಂದ್ಯದಲ್ಲಿ ಗೆಲುವು ಕಾಣುವುದು ಅನಿವಾರ್ಯವಾಗಿದೆ. ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಜೋಡಿ ನಿಕೋಲ ಮಿಲೊಜೆವಿಕ್ ಹಾಗೂ ಡ್ಯಾನಿಲೊ ಪೆಟ್ರೊವಿಕ್ ಜೋಡಿಯನ್ನು ಮಣಿಸುವ ಮೂಲಕ ೧-೨ರಿಂದ ಪುಟಿದೇಳಬೇಕಿದೆ.

ಏಷ್ಯಾ ಕಪ್: ಹ್ಯಾಟ್ರಿಕ್ ಕನವರಿಕೆಯಲ್ಲಿರುವ ಭಾರತ ತಂಡಕ್ಕೆ ಗಾಯದ ಸಮಸ್ಯೆ 
ಕೊಹ್ಲಿ, ಮೀರಾ ಬಾಯಿ ಚಾನುಗೆ ಖೇಲ್ ರತ್ನ; ಕನ್ನಡಿಗ ಬೋಪಣ್ಣಗೆ ಅರ್ಜುನ
ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು
Editor’s Pick More