ಏಷ್ಯಾ ಕಪ್ ಕ್ರಿಕೆಟ್: ಟಾಪ್ ಫೈವ್ ಬೌಲರ್‌ಗಳಲ್ಲಿ ಸಿಂಹಳೀಯರದ್ದೇ ಸಿಂಹಪಾಲು!

ಕಳೆದ ೧೩ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಟಾಪ್ ಫೈವ್ ಬೌಲರ್‌ಗಳ ಸಾಲಿನಲ್ಲಿ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನ ಪಡೆದರೆ, ನಾಲ್ವರು ಸಿಂಹಳೀಯರೇ ಸಿಂಹಪಾಲು ಪಡೆದಿದ್ದಾರೆ. ಭಾರತದ ಓರ್ವ ಆಟಗಾರ ಕೂಡ ಟಾಪ್ ಫೈವ್ ಬೌಲರ್‌ಗಳಲ್ಲಿ ಗುರುತಿಸಿಕೊಂಡಿಲ್ಲ

ಮುತ್ತಯ್ಯ ಮುರಳೀಧರನ್

೧೯೯೫ರಿಂದ ೨೦೧೦ರವರೆಗೆ ಒಟ್ಟು ೨೪ ಏಷ್ಯಾ ಕಪ್ ಪಂದ್ಯಗಳಲ್ಲಿ ಆಡಿದ್ದ ಮುತ್ತಯ್ಯ ಮುರಳೀಧರನ್, ಟೂರ್ನಿಯಲ್ಲಿ ಇದುವರೆಗೆ ಅತಿಹೆಚ್ಚು ವಿಕೆಟ್ ಗಳಿಸಿದವರ ಪೈಕಿ ಮುಂಚೂಣಿಯಲ್ಲಿದ್ದಾರೆ. ವಿಶ್ವದ ಪ್ರಚಂಡ ಸ್ಪಿನ್ ಬೌಲರ್ ಮುರಳೀಧರನ್, ೩.೭೫ರ ಎಕಾನಮಿಯಲ್ಲಿ ೮೬೫ ರನ್ ನೀಡಿ ೩೦ ವಿಕೆಟ್‌ಗಳನ್ನು ಗಳಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಮುರಳೀಧರನ್ ಅವರ ಅತ್ಯುತ್ತಮ ಸ್ಪೆಲ್ ಎಂದರೆ, ೩೧ಕ್ಕೆ ೫ ವಿಕೆಟ್ ಗಳಿಸಿದ್ದು. ಒಟ್ಟಾರೆ, ೨೩೦.೨ ಓವರ್‌ ಬೌಲಿಂಗ್ ಮಾಡಿರುವ ಮುರಳೀಧರನ್ ೧೩ ಮೇಡನ್ ಸಾಧನೆ ಮಾಡಿದ್ದಾರೆ.

ಆಡಿದ ಪಂದ್ಯ: ೨೪ | ಗಳಿಸಿದ ವಿಕೆಟ್: ೩೦ | ಎಕಾನಮಿ: ೩.೭೫ | ಬೆಸ್ಟ್: ೩೧ಕ್ಕೆ ೫

ಲಸಿತ್ ಮಾಲಿಂಗ

ವಿಶ್ವ ಕ್ರಿಕೆಟ್ ಕಂಡ ಪ್ರಚಂಡ ವೇಗಿಗಳಲ್ಲಿ ಲಸಿತ್ ಮಾಲಿಂಗ ಕೂಡ ಒಬ್ಬರು. ತನ್ನ ವಿಶಿಷ್ಟ ಬೌಲಿಂಗ್ ಶೈಲಿಯಿಂದಲೇ ಬ್ಯಾಟ್ಸ್‌ಮನ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾಲಿಂಗ, ೨೦೦೪ರಿಂದ ೨೦೧೬ರ ಆವೃತ್ತಿಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ. ಹದಿಮೂರು ಏಷ್ಯಾಕಪ್ ಪಂದ್ಯಗಳನ್ನಾಡಿರುವ ಮಾಲಿಂಗ, ೧೯.೦೩ರ ಸರಾಸರಿಯಲ್ಲಿ ೨೮ ವಿಕೆಟ್ ಗಳಿಸಿದ್ದಾರೆ. ೧೧೨.೧ ಓವರ್‌ಗಳಲ್ಲಿ ೪.೭೫ರ ಎಕಾನಮಿಯುಳ್ಳ ಮಾಲಿಂಗ, ೫೩೩ ರನ್ ನೀಡಿದ್ದಾರೆ. ಢಾಕಾದಲ್ಲಿ ನಡೆದ ೨೦೧೪ರ ಫೈನಲ್‌ನಲ್ಲಿ ಪಾಕ್ ವಿರುದ್ಧ ಮಾಲಿಂಗ ೫೬ ರನ್‌ಗಳಿಗೆ ೫ ವಿಕೆಟ್ ಗಳಿಸುವುದರೊಂದಿಗೆ ಶ್ರೀಲಂಕಾ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.

ಆಡಿದ ಪಂದ್ಯ: ೧೩ | ಗಳಿಸಿದ ವಿಕೆಟ್: ೨೮ | ಎಕಾನಮಿ: ೪.೭೫ | ಬೆಸ್ಟ್: ೫೬ಕ್ಕೆ ೫

ಇದನ್ನೂ ಓದಿ : ಏಷ್ಯಾ ಕಪ್ ಕ್ರಿಕೆಟ್: ಉದ್ಘಾಟನಾ ಪಂದ್ಯದಲ್ಲಿ ಮಾಲಿಂಗಗೆ ದಾಖಲೆ ಬರೆಯುವ ತುಡಿತ

ಅಜಂತ ಮೆಂಡಿಸ್

೨೦೦೮ರಿಂದ ೨೦೧೪ರವರೆಗಿನ ಏಷ್ಯಾ ಕಪ್ ಪಂದ್ಯಗಳಲ್ಲಿ ಮೆಂಡಿಸ್ ಒಟ್ಟು ೨೬ ವಿಕೆಟ್‌ಗಳನ್ನು ಗಳಿಸಿದ್ದಾರೆ. ಮೆಂಡಿಸ್ ಎಂಟು ಏಷ್ಯಾಕಪ್‌ ಪಂದ್ಯಗಳಲ್ಲಿ ಮಾತ್ರ ಆಡಿದ್ದು, ೨೦೦೮ರಲ್ಲಿ ಕರಾಚಿಯಲ್ಲಿ ನಡೆದ ಫೈನಲ್‌ನಲ್ಲಿ ಭಾರತ ವಿರುದ್ಧ ೧೩ ರನ್‌ಗಳಿಗೆ ೬ ವಿಕೆಟ್ ಗಳಿಸಿದ್ದರು. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸ್ಪೆಲ್ ಕೂಡ ಹೌದು. ವಿರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್ ಹಾಗೂ ಆರ್ ಪಿ ಸಿಂಗ್ ವಿಕೆಟ್ ಎಗರಿಸಿದ್ದ ಮೆಂಡಿಸ್, ಭಾರತ ತಂಡ ೧೭೩ ರನ್‌ಗಳಿಗೆ ಆಲೌಟ್ ಆಗುವಂತೆ ಮಾಡಿದ್ದರು. ಶ್ರೀಲಂಕಾ ೧೦೦ ರನ್‌ ಗೆಲುವಿನೊಂದಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು.

ಆಡಿದ ಪಂದ್ಯ: ೮ | ಗಳಿಸಿದ ವಿಕೆಟ್: ೨೬ | ಎಕಾನಮಿ: ೩.೯೮ | ಬೆಸ್ಟ್: ೧೩ಕ್ಕೆ ೬

ಸಯೀದ್ ಅಜ್ಮಲ್

ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನ ಸಿಂಹಳೀಯರ ಪಾಲಾದರೆ, ನಾಲ್ಕನೇ ಸ್ಥಾನ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಅವರದ್ದು. ೨೦೦೮ರಿಂದ ೨೦೧೪ರವರೆಗಿನ ೧೨ ಏಷ್ಯಾಕಪ್ ಪಂದ್ಯಗಳಲ್ಲಿ ಈ ಆಫ್‌ಸ್ಪಿನ್ನರ್ ೪.೨೧ರ ಎಕಾನಮಿಯಲ್ಲಿ ೨೫ ವಿಕೆಟ್ ಗಳಿಸಿದ್ದಾರೆ. ಢಾಕಾದಲ್ಲಿ ನಡೆದ ೨೦೧೪ರ ಏಷ್ಯಾಕಪ್ ಫೈನಲ್‌ನಲ್ಲಿ ಅಜ್ಮಲ್ ೨೬ ರನ್‌ಗಳಿಗೆ ೩ ವಿಕೆಟ್ ಗಳಿಸಿದ್ದರು. ಆದಾಗ್ಯೂ, ಪಾಕ್ ಈ ಪ್ರಶಸ್ತಿ ಸುತ್ತಿನಲ್ಲಿ ಶ್ರೀಲಂಕಾ ವಿರುದ್ಧ ೫ ವಿಕೆಟ್ ಸೋಲನುಭವಿಸಿತ್ತು.

ಆಡಿದ ಪಂದ್ಯ: ೧೨ | ಗಳಿಸಿದ ವಿಕೆಟ್: ೨೫ | ಎಕಾನಮಿ: ೪.೨೧ | ಬೆಸ್ಟ್: ೨೬ಕ್ಕೆ ೩

ಚಮಿಂಡಾ ವಾಸ್

ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಗರಿಷ್ಠ ವಿಕೆಟ್‌ಧಾರಿಗಳ ಟಾಪ್ ಫೈವ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವುದು ಚಮಿಂಡಾ ವಾಸ್. ೧೯೯೫ರಿಂದ ೨೦೦೮ರವರೆಗೆ ಒಟ್ಟು ೧೯ ಏಷ್ಯಾಕಪ್ ಪಂದ್ಯಗಳನ್ನಾಡಿದ ಈ ಮುಂಚೂಣಿ ವೇಗಿ ಒಟ್ಟು ೨೩ ವಿಕೆಟ್‌ಗಳನ್ನು ಗಳಿಸಿದ್ದಾರೆ. ೧೫೨.೨ ಓವರ್‌ ಬೌಲಿಂಗ್ ಮಾಡಿರುವ ವಾಸ್, ೪.೧೯ರ ಎಕಾನಮಿಯಲ್ಲಿ ೨೦ ಮೇಡನ್‌ನಿಂದ ಗಮನ ಸೆಳೆದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಕಂಡ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ವಾಸ್, ೧೯೯೭, ೨೦೦೪ ಹಾಗೂ ೨೦೦೮ರ ಏಷ್ಯಾಕಪ್ ಗೆದ್ದ ಶ್ರೀಲಂಕಾ ತಂಡದ ಸದಸ್ಯನಾಗಿದ್ದಾರೆ.

ಆಡಿದ ಪಂದ್ಯ: ೧೯ | ಗಳಿಸಿದ ವಿಕೆಟ್: ೨೩ | ಎಕಾನಮಿ: ೪.೧೯ | ಮೇಡನ್: ೨೦

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More