ಏಷ್ಯಾ ಕಪ್: ವ್ಯಾಘ್ರಪಡೆಯ ಅಬ್ಬರಕ್ಕೆ ಬೆದರಿದ ಸಿಂಹಳೀಯರಿಗೆ ಹೀನಾಯ ಸೋಲು

ಲಸಿತ್ ಮಾಲಿಂಗ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಎಗರಿಸಿದ್ದಲ್ಲದೆ, ೩ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ಪುಟಿದೆದ್ದ ಪರಿ ಬೆರಗು ಮೂಡಿಸಿತು. ಆದರೆ, ಬಾಂಗ್ಲಾದೇಶದ ಚೇತೋಹಾರಿ ಆಟದೆದುರು ಶ್ರೀಲಂಕಾ ತಂಡ ಮಂಕಾಯಿತಲ್ಲದೆ, 137 ರನ್ ದಯನೀಯ ಸೋಲನುಭವಿಸಿತು

ಬಾಂಗ್ಲಾದೇಶ ಪ್ರಬಲ ಕ್ರಿಕೆಟ್ ಶಕ್ತಿಯಾಗಿ ರೂಪು ತಳೆದು ವರ್ಷಗಳೇ ಉರುಳುತ್ತಿವೆ. ಕ್ರಿಕೆಟ್ ಜಗತ್ತಿನಲ್ಲಿ ದುರ್ಬಲ ತಂಡವೆಂದೇ ಕರೆಸಿಕೊಂಡಿದ್ದ ಬಾಂಗ್ಲಾದೇಶ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲೂ ವಿಜೃಂಭಿಸುವ ಕಾಲ ಶುರುವಾಗಿದೆ ಎಂಬುದನ್ನು ಅದು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿಯೇ ಅದು ನಿರೂಪಿತವಾಗಿದೆ.

ಶನಿವಾರ (ಸೆ.೧೫) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ, ೧೩೭ ರನ್‌ಗಳಿಂದ ಐದು ಬಾರಿಯ ಏಷ್ಯಾ ಚಾಂಪಿಯನ್ ಶ್ರೀಲಂಕಾವನ್ನು ಮಣಿಸಿದ ಮುಷ್ಪೀಕರ್ ರಹೀಮ್ ಸಾರಥ್ಯದ ಬಾಂಗ್ಲಾದೇಶ ತಂಡ, ಟೂರ್ನಿಯಲ್ಲಿ ತಾನೆಷ್ಟು ಅಪಾಯಕಾರಿ ತಂಡವೆಂಬುದನ್ನು ಮುಂತಿಳಿಸಿದೆ.

ಬಾಂಗ್ಲಾದೇಶ ನೀಡಿದ ೨೬೨ ರನ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, ಕೇವಲ ೩೫.೨ ಓವರ್‌ಗಳಲ್ಲಿ ೧೨೪ ರನ್‌ಗಳಿಗೆ ಸರ್ವಪತನ ಕಂಡಿತಲ್ಲದೆ, ಬಾಂಗ್ಲಾ ಬೌಲರ್‌ಗಳ ದಾಳಿಯಿಂದ ಕಂಗೆಟ್ಟಿತು. ಮೇಲಿನ, ಮಧ್ಯಮ ಇಲ್ಲವೇ ಕೆಳ ಕ್ರಮಾಂಕದವರೆಗೂ ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದ ಏಂಜೆಲೊ ಮ್ಯಾಥ್ಯೂಸ್ ಸಾರಥ್ಯದ ಶ್ರೀಲಂಕಾ ತಂಡ, ಟೂರ್ನಿಯಲ್ಲಿ ನಿರಾಶಾದಾಯಕ ಆರಂಭ ಕಂಡಿತು.

ಇದನ್ನೂ ಓದಿ : ಏಷ್ಯಾ ಕಪ್ ಕ್ರಿಕೆಟ್: ಟಾಪ್ ಫೈವ್ ಬೌಲರ್‌ಗಳಲ್ಲಿ ಸಿಂಹಳೀಯರದ್ದೇ ಸಿಂಹಪಾಲು!

ಬಾಂಗ್ಲಾದೇಶದ ಸಂಘಟಿತ ದಾಳಿ

ಕುಶಾಲ್ ಮೆಂಡಿಸ್ (೦) ಎರಡನೇ ಓವರ್‌ನ ಕೊನೇ ಎಸೆತದಲ್ಲಿ ವೇಗಿ ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗುವುದರೊಂದಿಗೆ ಶುರುವಾದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್, ಅಂತಿಮವಾಗಿ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಅಮಿಲಾ ಅಪೊನ್ಸೊ, ಹುಸೇನ್ ಸ್ಯಾಂಟೊಗೆ ಕ್ಯಾಚಿತ್ತು ನಿರ್ಗಮಿಸುವುದರಲ್ಲಿ ಪರ್ಯವಸಾನ ಕಂಡಿತು.

ಆಕ್ರಮಣಕಾರಿ ಆಟದ ಸುಳಿವು ನೀಡಿದ ಉಪುಲ್ ತರಂಗ (೨೭: ೧೬ ಎಸೆತ, ೪ ಬೌಂಡರಿ, ೧ ಸಿಕ್ಸರ್) ಮೂರನೇ ಓವರ್‌ನ ಕಡೇ ಎಸೆತದಲ್ಲಿ ಮಶ್ರಫೆ ಮೊರ್ತಜಾಗೆ ಬೌಲ್ಡ್ ಆದ ನಂತರ ಶ್ರೀಲಂಕಾ ಒಂದೊಳ್ಳೆ ಜೊತೆಯಾಟ ಕಾಣಲು ವಿಫಲವಾಯಿತು. ವಿಕೆಟ್‌ ಕೀಪರ್ ಕುಶಾಲ್ ಪೆರೇರಾ (೧೧), ನಾಯಕ ಏಂಜೆಲೊ ಮ್ಯಾಥ್ಯೂಸ್ (೧೬), ದಿಲ್ರುವಾನ್ ಪೆರೇರಾ (೨೯) ಹಾಗೂ ಸುರಂಗ ಲಕ್ಮಲ್ (೨೦) ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲಿಲ್ಲ.

ಸಂಯೋಜಿತ ಬೌಲಿಂಗ್ ಸಂಘಟಿಸಿದ ಬಾಂಗ್ಲಾದೇಶದ ಪರ ಮಶ್ರಫೆ ಮೊರ್ತಜಾ (೨೫ಕ್ಕೆ ೨), ಮುಸ್ತಾಫಿಜುರ್ ರೆಹಮಾನ್ (೨೦ಕ್ಕೆ ೨), ಮೆಹಿದಿ ಹಸನ್ (೨೧ಕ್ಕೆ ೨) ತಲಾ ಎರಡು ವಿಕೆಟ್ ಗಳಿಸಿದರೆ, ಶಕೀಬ್ ಅಲ್ ಹಸನ್, ರೂಬೆಲ್ ಹುಸೇನ್ ಮತ್ತು ಮೊಸಾದಕ್ ಹುಸೇನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ರಹೀಂ ಭರ್ಜರಿ ಶತಕ

ಇದಕ್ಕೂ ಮುನ್ನ, ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶದ ಆರಂಭ ಆಕ್ರಂದನಕಾರಿಯಾಗಿತ್ತು. ಲಸಿತ್ ಮಾಲಿಂಗ ಮೊದಲ ಓವರ್‌ನ ಕೊನೆಯ ಎರಡೂ ಎಸೆತಗಳಲ್ಲಿ ಲಿಟನ್ ದಾಸ್ (೦) ಮತ್ತು ಶಕೀಬ್ ಅಲ್ ಹಸನ್ (೦) ಅವರನ್ನು ಪೆವಿಲಿಯನ್‌ಗೆ ಅಟ್ಟಿ ಬಾಂಗ್ಲಾಗೆ ಆಘಾತ ನೀಡಿದರು. ಇದಕ್ಕೂ ಮುನ್ನ ಆರಂಭಿಕ ತಮೀಮ್ ಇಕ್ಬಾಲ್ ಗಾಯಗೊಂಡು ಹೊರನಡೆದಿದ್ದರು.

ಬಾಂಗ್ಲಾದೇಶದ ಆರಂಭವನ್ನು ಕಂಡವರು ಶ್ರೀಲಂಕಾ ನಿರಾಯಾಸ ಗೆಲುವು ಸಾಧಿಸುತ್ತದೆ ಎಂದೇ ಅಂದಾಜಿಸಿದ್ದರು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ಮುಷ್ಪೀಕರ್ ರಹೀಮ್ (೧೪೪: ೧೫೦ ಎಸೆತ, ೧೧ ಬೌಂಡರಿ, ೪ ಸಿಕ್ಸರ್) ಮತ್ತು ಮೊಹಮದ್ ಮಿಥುನ್ (೬೩: ೬೮ ಎಸೆತ, ೫ ಬೌಂಡರಿ, ೨ ಸಿಕ್ಸರ್) ಬಾಂಗ್ಲಾ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದರು.

ಅರ್ಧಶತಕದ ನಂತರ ಮಿಥುನ್ ನಿರ್ಗಮಿಸಿದರೂ, ರಹೀಂ ಮಾತ್ರ ಇನ್ನಿಂಗ್ಸ್‌ನ ಕೊನೇ ಕ್ಷಣದವರೆಗೂ ಕ್ರೀಸ್‌ಗೆ ಕಚ್ಚಿನಿಂತು ತಂಡದ ಮೊತ್ತವನ್ನು ಸ್ಪರ್ಧಾತ್ಮಕವಾಗಿಸಿದರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಹೀಂ, ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಬೌಂಡರಿ, ಸಿಕ್ಸರ್‌ಗಳಿಂದ ಭೋರ್ಗರೆದ ರಹೀಂ, ವೃತ್ತಿಬದುಕಿನ ಆರನೇ ಶತಕ ಸಿಡಿಸಿದರು. ಅಂತಿಮವಾಗಿ ಇನ್ನಿಂಗ್ಸ್‌ನ ಕೊನೇ ಓವರ್‌ನಲ್ಲಿ ತಿಸ್ಸಾರ ಪೆರೇರಾ ಬೌಲಿಂಗ್‌ನಲ್ಲಿ ಕುಶಾಲ್‌ ಮೆಂಡಿಸ್‌ಗೆ ಕ್ಯಾಚಿತ್ತ ರಹೀಂ, ಸಾರ್ಥಕ ಇನ್ನಿಂಗ್ಸ್‌ನೊಂದಿಗೆ ಪೆವಿಲಿಯನ್‌ ದಾರಿ ತುಳಿದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: ೪೯.೩ ಓವರ್‌ಗಳಲ್ಲಿ ೨೬೧ (ಮುಷ್ಪೀಕರ್ ರಹೀಂ ೧೪೪, ಮೊಹಮದ್ ಮಿಥುನ್ ೬೩; ಲಸಿತ್ ಮಾಲಿಂಗ ೨೩ಕ್ಕೆ ೪) ಶ್ರೀಲಂಕಾ: ೩೫.೨ ಓವರ್‌ಗಳಲ್ಲಿ ೧೨೪ (ಉಪುಲ್ ತರಂಗ ೨೭, ದಿಲ್ರುವಾನ್ ಪೆರೇರಾ ೨೯; ಮುಸ್ತಾಫಿಜುರ್ ರೆಹಮಾನ್ ೨೦ಕ್ಕೆ ೨, ಮಶ್ರಫೆ ಮೊರ್ತಜಾ ೨೫ಕ್ಕೆ ೨, ಮೆಹಿಡಿ ಹಸನ್ ೨೧ಕ್ಕೆ ೨) ಫಲಿತಾಂಶ: ಬಾಂಗ್ಲಾದೇಶಕ್ಕೆ ೧೩೭ ರನ್ ಗೆಲುವು ಪಂದ್ಯಶ್ರೇಷ್ಠ: ಮುಷ್ಪೀಕರ್ ರಹೀಂ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More