ವಿರಾಟ್ ಕೊಹ್ಲಿ ಮತ್ತು ಮೀರಾಬಾಯಿ ಚಾನುಗೆ ಜಂಟಿ ಖೇಲ್‌ ರತ್ನಕ್ಕೆ ಶಿಫಾರಸು

ಕೇಂದ್ರ ಸರ್ಕಾರದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹೆಸರನ್ನು ಜಂಟಿಯಾಗಿ ಶಿಫಾರಸು ಮಾಡಲಾಗಿದೆ. ೨೯ರ ಹರೆಯದ ಕೊಹ್ಲಿ, ಎರಡು ವರ್ಷಗಳ ಹಿಂದೆಯೂ ಇದೇ ಪ್ರಶಸ್ತಿಗೆ ಶಿಫಾರಸುಗೊಂಡಿದ್ದರು

ಪ್ರಸಕ್ತ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಕುರಿತು ಬಿಸಿಸಿಐನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಹೊತ್ತಲ್ಲಿ, ಕೇಂದ್ರ ಸರ್ಕಾರದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಅತ್ಯಮೋಘ ಫಾರ್ಮ್‌ನಲ್ಲಿದ್ದಾರೆ. ಒಂದೊಮ್ಮೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್ ಏನಾದರೂ, ಈ ಸಾಲಿನ ಖೇಲ್ ರತ್ನ ಪ್ರಶಸ್ತಿಯನ್ನು ಜಂಟಿಯಾಗಿ ಕೊಹ್ಲಿಗೂ ನೀಡಲು ಸಮ್ಮತಿಸಿದ್ದೇ ಆದಲ್ಲಿ ವಿರಾಟ್ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೂರನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ೧೯೯೭ರಲ್ಲಿ ಮೊಟ್ಟಮೊದಲ ಬಾರಿಗೆ ಸಚಿನ್ ಈ ಪ್ರಶಸ್ತಿ ಪಡೆದರೆ, ೨೦೦೭ರಲ್ಲಿ ಎಂ ಎಸ್ ಧೋನಿ ಖೇಲ್‌ರತ್ನಧಾರಿಯಾಗಿದ್ದರು.

“ಹೌದು, ವಿರಾಟ್ ಕೊಹ್ಲಿ ಮತ್ತು ಮೀರಾಬಾಯಿ ಚಾನುಗೆ ಖೇಲ್ ರತ್ನ ನೀಡುವಂತೆ ಪ್ರಶಸ್ತಿ ಸಮಿತಿ ಶಿಫಾರಸು ಮಾಡಿರುವ ಸಂಗತಿ ಉನ್ನತ ಮೂಲಗಳಿಂದ ಖಚಿತವಾಗಿದೆ,’’ ಎಂದು ಪಿಟಿಐ ವರದಿ ಸ್ಪಷ್ಟಪಡಿಸಿದೆ. ಅಂದಹಾಗೆ, ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಕಿಡಾಂಬಿ ಶ್ರೀಕಾಂತ್ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಕಳೆದ ಸಾಲಿನಲ್ಲಿ ನಾಲ್ಕು ಸೂಪರ್ ಸಿರೀಸ್ ಗೆದ್ದಿದ್ದರಿಂದ ಕಿಡಾಂಬಿ ಹೆಸರನ್ನು ಆಯ್ಕೆಸಮಿತಿ ಗಂಭೀರವಾಗಿ ಪರಿಗಣಿಸಿತ್ತು. ಆದರೆ, ೨೪ರ ಹರೆಯದ ಮೀರಾಬಾಯಿ ಕಿಡಾಂಬಿಯನ್ನು ಹಿಂದಿಕ್ಕಿದರು ಎಂದು ಗೊತ್ತಾಗಿದೆ.

ಇದನ್ನೂ ಓದಿ : ಖೇಲ್ ರತ್ನ ರೇಸ್‌ನಲ್ಲಿ ನೀರಜ್ ಚೋಪ್ರಾ ಹಾಗೂ ಮೀರಾಬಾಯಿ ಚಾನು 

೨೯ರ ಹರೆಯದ ಕಿಡಾಂಬಿ ಶ್ರೀಕಾಂತ್ ೭೧ ಟೆಸ್ಟ್ ಪಂದ್ಯಗಳಲ್ಲಿ ೨೩ ಶತಕ ಸೇರಿದ ೬೧೪೭ ರನ್ ಗಳಿಸಿದ್ದರೆ, ೨೧೧ ಏಕದಿನ ಪಂದ್ಯಗಳಲ್ಲಿ ೩೫ ಶತಕ ಸೇರಿದ ೯೭೭೯ ರನ್ ಕಲೆಹಾಕಿದ್ದಾರೆ. ಎರಡನ್ನೂ ಒಳಗೊಂಡಂತೆ ೫೮ ಅಂತಾರಾಷ್ಟ್ರೀಯ ಶತಕಗಳ ಸರದಾರನಾಗಿರುವ ಕೊಹ್ಲಿ ಸಚಿನ್ ತೆಂಡೂಲ್ಕರ್ (೧೦೦) ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಆಟಗಾರನೆನಿಸಿದ್ದಾರೆ.

ಅಂದಹಾಗೆ, ಕಳೆದ ಸಾಲಿನ ಖೇಲ್ ರತ್ನವನ್ನು ಹಾಕಿ ಆಟಗಾರ ಹಾಗೂ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಸರ್ದಾರ್ ಸಿಂಗ್ ಮತ್ತು ಪ್ಯಾರಾಥ್ಲೀಟ್ ದೇವೇಂದ್ರ ಜಝಾರಿಯಾಗೆ ಪ್ರದಾನ ಮಾಡಲಾಗಿತ್ತು. ೨೦೧೭ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನವಾದ ಕೊಹ್ಲಿ, ತವರಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದರೆ, ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ವಿದೇಶದಲ್ಲಿ ಸರಣಿ ಗೆಲುವು ತಂದಿತ್ತಿದ್ದರು.

ಇನ್ನು, ಮಹಿಳಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೆಳ ಬೆನ್ನು ನೋವಿನಿಂದಾಗಿ ಏಷ್ಯಾಡ್‌ನಿಂದ ವಂಚಿತವಾದರೂ, ಅದಕ್ಕೂ ಮುಂಚೆ ನಡೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದಿದ್ದರು. ೨೦೨೦ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More