ಚೀನಾ ಓಪನ್‌ ಬ್ಯಾಡ್ಮಿಂಟನ್: ಚಿಂತೆ ಹೆಚ್ಚಿಸಿದ ಕಿಡಾಂಬಿ ಶ್ರೀಕಾಂತ್ ಅಸ್ಥಿರ ಆಟ

ಕಳೆದ ವರ್ಷ ನಾಲ್ಕು ಸೂಪರ್ ಸಿರೀಸ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದಿದ್ದ ಕಿಡಾಂಬಿ ಶ್ರೀಕಾಂತ್ ಈ ಋತುವಿನಲ್ಲಿ ಅಸ್ಥಿರ ಆಟದಿಂದ ಕಂಗೆಟ್ಟಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ಶ್ರೀಕಾಂತ್, ಸೂಪರ್ ಸಿರೀಸ್ ಪ್ರಶಸ್ತಿಗಳಲ್ಲಿ ವೈಫಲ್ಯ ಅನುಭವಿಸುತ್ತಿರುವುದು ಆತಂಕ ತರಿಸಿದೆ

ಪ್ರತಿಷ್ಠಿತ ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಮಂಗಳವಾರದಿಂದ (ಸೆ.೧೮) ಆರಂಭವಾಗುತ್ತಿದ್ದು, ಭಾರತದ ಅಗ್ರ ಕ್ರಮಾಂಕಿತ ಆಟಗಾರರಾದ ಕಿಡಾಂಬಿ ಶ್ರೀಕಾಂತ್, ಪಿ ವಿ ಸಿಂಧು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಋತುವಿನಲ್ಲಿ ಕಾಮನ್ವೆಲ್ತ್, ಏಷ್ಯಾ ಕ್ರೀಡಾಕೂಟ ಸೇರಿದಂತೆ ಪ್ರಮುಖ ಪಂದ್ಯಾವಳಿಗಳಲ್ಲಿ ಆಡಿ ಸಾಕಷ್ಟು ದಣಿದಿರುವ ಭಾರತದ ಸ್ಟಾರ್ ಆಟಗಾರರು ಇದೀಗ ಚೀನಾ ಸವಾಲಿಗೆ ಅಣಿಯಾಗಬೇಕಿದೆ.

ಕಳೆದ ವಾರವಷ್ಟೇ ಮುಕ್ತಾಯ ಕಂಡ ಜಪಾನ್ ಓಪನ್‌ನಲ್ಲಿ ಸಿಂಧು ಎರಡನೇ ಸುತ್ತಿಗೇ ನಿರ್ಗಮಿಸಿದ್ದರು. ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್‌ನಲ್ಲಿ ಮೊದಲ ಸುತ್ತಿನಿಂದಲೇ ನಿರ್ಗಮಿಸಿದ್ದ ಬಳಿಕ ಟೂರ್ನಿಯೊಂದರಲ್ಲಿ ಕ್ವಾರ್ಟರ್‌ಫೈನಲ್‌ ಅನ್ನೂ ತಲುಪಲಾಗದೆ ನಿರ್ಗಮಿಸಿದ್ದು ಈ ಋತುವಿನಲ್ಲೇ. ಹೀಗಾಗಿ ಸಿಂಧುವಿನ ಮೇಲೆ ಅಧಿಕ ಪಂದ್ಯಾವಳಿಗಳ ಒತ್ತಡ ಮತ್ತು ಬಳಲಿಕೆ ನೇರ ಪ್ರಭಾವ ಬೀರಿದೆ ಎಂಬುದರಲ್ಲಿ ಸಂದೇಹವಿಲ್ಲ.

೨೩ರ ಹರೆಯದ ಸಿಂಧು ಈ ಋತುವಿನಲ್ಲಿ ನಡೆದ ಪ್ರತಿಷ್ಠಿತ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಜಕಾರ್ತ ಏಷ್ಯಾಡ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇನ್ನು, ಇಂಡಿಯಾ ಓಪನ್ ಮತ್ತು ಥಾಯ್ಲೆಂಡ್ ಓಪನ್‌ನಲ್ಲಿಯೂ ಫೈನಲ್ ತಲುಪಿದ್ದ ಸಿಂಧು ರನ್ನರ್‌ಅಪ್ ಆಗಿದ್ದರು.

ಇದನ್ನೂ ಓದಿ : ಐತಿಹಾಸಿಕ ಅವಕಾಶ ಕೈಚೆಲ್ಲಿ ಮತ್ತೆ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡ ಸಿಂಧು

ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಸಿಂಧು, ೨೦೧೬ರ ಚೀನಾ ಓಪನ್‌ನಲ್ಲಿ ೭೦೦,೦೦೦ ಡಾಲರ್ ಬಹುಮಾನ ಗೆದ್ದಿದ್ದರು. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ ೧೦೦೦ ಟೂರ್ನಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಈಗಲೂ ಪ್ರಶಸ್ತಿ ಫೇವರಿಟ್. ಆದರೆ, ಇತ್ತೀಚಿನ ಸತತ ಪಂದ್ಯಾವಳಿಗಳು ಆಕೆಯನ್ನು ಸಾಕಷ್ಟು ಬಳಲುವಂತೆ ಮಾಡಿದೆ. ಪ್ರಸಕ್ತ ಟೂರ್ನಿಯ ಮೊದಲ ಸುತ್ತಿನಲ್ಲಿ ಆಕೆ, ಹಾಂಕಾಂಗ್‌ನ ಚೆಯುಂಗ್ ನಾನ್ ಯಿ ವಿರುದ್ಧ ಕಾದಾಡಲಿದ್ದಾರೆ.

ಇತ್ತ, ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಸೈನಾ ನೆಹ್ವಾಲ್, ಜಕಾರ್ತ ಏಷ್ಯಾಡ್‌ನಲ್ಲಿ ಕಂಚು ಗೆದ್ದ ಬಳಿಕ ಜಪಾನ್ ಓಪನ್‌ನಿಂದ ಹಿಂದೆ ಸರಿದಿದ್ದರು. ಸೈನಾ, ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಸುಂಗ್ ಜಿ ಹ್ಯುನ್ ವಿರುದ್ಧ ಕಾದಾಡಲಿದ್ದಾರೆ. ೨೦೧೪ರಲ್ಲಿ ಚೀನಾ ಓಪನ್‌ನಲ್ಲಿ ಚಾಂಪಿಯನ್ ಆದ ಸೈನಾ, ಸುಂಗ್ ವಿರುದ್ಧದ ವೃತ್ತಿಬದುಕಿನ ಕಾದಾಟದಲ್ಲಿ ೮-೨ ಮುನ್ನಡೆ ಸಾಧಿಸಿದ್ದಾರೆ.

ಏತನ್ಮಧ್ಯೆ, ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಈ ಬಾರಿ ಸಾಕಷ್ಟು ಹಿನ್ನಡೆ ಕಂಡಿದ್ದಾರೆ. ಮೊದಲ ಸುತ್ತಿನಲ್ಲಿ ಅವರು, ಡೆನ್ಮಾರ್ಕ್ ಆಟಗಾರ ರಾಸ್ಮುಸ್ ಗೆಮ್ಕೆ ವಿರುದ್ಧ ಸೆಣಸಲಿದ್ದಾರೆ. ಆದರೆ, ಅವರ ಚೀನಾ ಓಪನ್‌ ಗೆಲ್ಲುವ ಬಯಕೆಗೆ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ಅಡ್ಡಗಾಲಾಗಿದ್ದಾರೆ. ಮಲೇಷ್ಯಾ ಮತ್ತು ಇಂಡೋನೇಷ್ಯಾ ಓಪನ್‌ನಲ್ಲಿ ಇದೇ ಶ್ರೀಕಾಂತ್ ಎದುರು ಮೊಮೊಟಾ ಭರ್ಜರಿ ಗೆಲುವು ಸಾಧಿಸಿದ್ದರು.

ಇನ್ನು, ಎಚ್ ಎಸ್ ಪ್ರಣಯ್ ಹಾಂಕಾಂಗ್‌ನ ಕಾ ಲಾಂಗ್ ಆ್ಯಂಗುಸ್ ವಿರುದ್ಧ ಮೊದಲ ಸುತ್ತಿನಲ್ಲಿ ಸೆಣಸಲಿದ್ದರೆ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್ ಸಿಕಿ ರೆಡ್ಡಿ ಜೋಡಿ ಕೊರಿಯಾದ ಕಿಮ್ ಸೊ ಯಿಯೊಂಗ್ ಮತ್ತು ಕಾಂಗ್ ಹೀ ಯೊಂಗ್ ವಿರುದ್ಧ ಕಾದಾಡಲಿದೆ. ಅಂತೆಯೇ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮಲೇಷ್ಯಾದ ಗೊಹ್ ವಿ ಶೆಮ್ ಮತ್ತು ಟಾನ್ ವೀ ಕಿಯೊಂಗ್ ವಿರುದ್ಧ ಅಭಿಯಾನ ಆರಂಭಿಸಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More