ಫಾರ್ಮುಲಾ ಪ್ರಶಸ್ತಿ ರೇಸ್‌ನಲ್ಲಿ ವೆಟಲ್ ಹಿಂದಿಕ್ಕಿ ಮುನ್ನಡೆ ಸಾಧಿಸಿದ ಹ್ಯಾಮಿಲ್ಟನ್

ಸಿಂಗಪುರ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಚಾಂಪಿಯನ್ ಆಗುವುದರೊಂದಿಗೆ ಮರ್ಸಿಡೆಸ್ ಚಾಲಕ ಹ್ಯಾಮಿಲ್ಟನ್ ಫಾರ್ಮುಲಾ ಒನ್ ರೇಸ್‌ ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡರು. ಫೆರಾರಿ ಚಾಲಕ ಸೆಬಾಸ್ಟಿಯನ್ ವೆಟಲ್‌ಗಿಂತ ೪೦ ಪಾಯಿಂಟ್ಸ್ ಮುನ್ನಡೆ ಗಳಿಸುವಲ್ಲಿ ಸಫಲವಾದರು

ವಿಶ್ವ ಫಾರ್ಮುಲಾ ಚಾಂಪಿಯನ್‌ಶಿಪ್‌ಗಾಗಿ ನಡೆಯುತ್ತಿರುವ ರೇಸ್‌ನಲ್ಲಿ ಬ್ರಿಟನ್ ಚಾಲಕ ಹಾಗೂ ಮರ್ಸಿಡೆಸ್‌ನ ಲೂಯಿಸ್ ಹ್ಯಾಮಿಲ್ಟನ್ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ಭಾನುವಾರ (ಸೆ ೧೬) ನಡೆದ ಸಿಂಗಪುರ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಹ್ಯಾಮಿಲ್ಟನ್ ಜಯಭೇರಿ ಬಾರಿಸುತ್ತಿದ್ದಂತೆ ಫೆರಾರಿ ಚಾಲಕ ಹಾಗೂ ಜರ್ಮನಿಯ ಸೆಬಾಸ್ಟಿಯನ್ ವೆಟಲ್‌ಗಿಂತ ೪೦ ಪಾಯಿಂಟ್ಸ್ ಮುನ್ನಡೆ ಪಡೆಯುವಲ್ಲಿ ಹ್ಯಾಮಿಲ್ಟನ್ ಯಶ ಕಂಡರು.

ಸಿಂಗಪುರ ಗ್ರ್ಯಾನ್ ಪ್ರೀ ರೇಸ್‌ನ ಶುರುವಿನಿಂದಲೂ ಹ್ಯಾಮಿಲ್ಟನ್‌ಗೆ ಪ್ರಬಲ ಪೈಪೋಟಿ ನೀಡಿದ ರೆಡ್‌ಬುಲ್‌ನ ಮ್ಯಾಕ್ಸ್ ವೆಸ್ಟಾಪ್ಪೆನ್ ದ್ವಿತೀಯ ಸ್ಥಾನಕ್ಕೆ ತೃಪ್ತರಾದರು. ಇನ್ನು, ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಹ್ಯಾಮಿಲ್ಟನ್ ಜತೆಗೆ ಜಿದ್ದಿಗೆ ಬಿದ್ದಿರುವ ಫೆರಾರಿ ಚಾಲಕ ಸೆಬಾಸ್ಟಿಯನ್ ವೆಟಲ್ ತೃತೀಯ ಸ್ಥಾನ ಅಲಂಕರಿಸಿದರು.

308.706 ಕಿ.ಮೀ. ದೂರದ ಒಟ್ಟು ೬೧ ಲ್ಯಾಪ್‌ಗಳನ್ನು ಕ್ರಮಿಸಲು ಲೂಯಿಸ್ ಹ್ಯಾಮಿಲ್ಟನ್ ೧ ತಾಸು, ೫೧ ನಿಮಿಷ ಮತ್ತು ೧೧.೬೧೧ ಸೆ.ಗಳನ್ನು ತೆಗೆದುಕೊಂಡರೆ, ಹಾಲೆಂಡ್‌ನ ಮ್ಯಾಕ್ಸ್ ವೆರ್ಸ್ಟಾಪ್ಪೆನ್ (೧:೫೧:೨೦.೫೭೨ ಸೆ.) ಮತ್ತು ಸೆಬಾಸ್ಟಿಯನ್ ವೆಟಲ್ (೧:೫೧:೫೧.೫೫೬ ಸೆ.) ಸಮಯದಲ್ಲಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಇದನ್ನೂ ಓದಿ : ಸರ್ವ ಟೀಕೆಗಳಿಗೂ ಶತಕವೇ ಮದ್ದು ಎಂದ ವಿರಾಟ್ ಆಟಕ್ಕೆ ಸುಸ್ತಾದ ಇಂಗ್ಲೆಂಡ್

ಹ್ಯಾಮಿಲ್ಟನ್‌ ಬಿಗಿಹಿಡಿತ

ವಿಶ್ವ ಫಾರ್ಮುಲಾ ಒನ್ ಪ್ರಶಸ್ತಿ ರೇಸ್‌ನಲ್ಲಿ ಹ್ಯಾಮಿಲ್ಟನ್ ಇನ್ನಷ್ಟು ಪ್ರಗತಿ ಸಾಧಿಸಿದ್ದಾರೆ. ಸಿಂಗಪುರ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಚಾಂಪಿಯನ್ ಆಗುವುದರೊಂದಿಗೆ ಅವರು ೩೩ರ ಹರೆಯದ ಹ್ಯಾಮಿಲ್ಟನ್ ಮುನ್ನಡೆ ಸಾಧಿಸಿದ್ದಾರೆ. ಇನ್ನೂ, ಆರು ರೇಸ್‌ಗಳು ಬಾಕಿ ಇದ್ದು, ೧೫೦ ಪಾಯಿಂಟ್ಸ್ ಗಳಿಸಲು ಅವಕಾಶವಿದೆ. ಪ್ರತಿಸ್ಪರ್ಧಿಗಳಿಗಿಂತ ಮುಖ್ಯವಾಗಿ ವೆಟಲ್‌ ಅವರಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ವಾಸ್ತವವಾಗಿ, ಸಿಂಗಪುರದ ಕೇಂದ್ರ ಸ್ಥಾನ ಮರಿನಾ ಬೇ ಸರ್ಕೀಟ್ ಮರ್ಸಿಡೆಸ್‌ಗಿಂತಲೂ ಫೆರಾರಿ ಕಾರಿಗೆ ಪ್ರಶಸ್ತ ಸ್ಥಳ. ಆದರೆ, ಇಲ್ಲಿಯೂ ಹ್ಯಾಮಿಲ್ಟನ್ ಮಿಂಚು ಹರಿಸಿದ್ದು ಅವರ ವಿಶ್ವ ಚಾಂಪಿಯನ್‌ಶಿಪ್‌ಗೆ ಇನ್ನಷ್ಟು ಬಲ ತಂದಿತ್ತಿತು.

ಐದನೇ ವಿಶ್ವ ಚಾಂಪಿಯನ್‌ಶಿಪ್ ಮೇಲೆ ಕಣ್ಣಿಟ್ಟಿರುವ ಹ್ಯಾಮಿಲ್ಟನ್, ಒಂದೊಮ್ಮೆ ಪ್ರಶಸ್ತಿ ಜಯಿಸುವಲ್ಲಿ ಸಫಲವಾದರೆ, ಫಾರ್ಮುಲಾ ಇತಿಹಾಸದಲ್ಲೇ ಹ್ಯಾಮಿಲ್ಟನ್ ಅತಿಹೆಚ್ಚು ಪ್ರಶಸ್ತಿ ಪಡೆದ ವಿಶ್ವದ ಎರಡನೇ ಚಾಲಕ ಎನಿಸಿಕೊಳ್ಳಲಿದ್ದಾರೆ. ಮಾತ್ರವಲ್ಲ, ಅರ್ಜೆಂಟೀನಾದ ಫಾರ್ಮುಲಾ ಒನ್ ದಂತಕತೆ ಜುವಾನ್ ಮ್ಯಾನುಯೆಲ್ ಫಂಗಿಯೊ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಅಂದಹಾಗೆ, ಜರ್ಮನಿಯ ಮಾಜಿ ಚಾಲಕ ಮೈಕಲ್ ಶುಮಾಕರ್ ೭ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಪೈಪೋಟಿಯಲ್ಲಿನ ಟಾಪ್ ೧೦ ಚಾಲಕರು

  • ಲೂಯಿಸ್ ಹ್ಯಾಮಿಲ್ಟನ್: ಬ್ರಿಟನ್ ಚಾಲಕ, ಕಾರು: ಮರ್ಸೀಡೆಸ್, ಪಾಯಿಂಟ್ಸ್: ೨೮೧
  • ಸೆಬಾಸ್ಟಿಯನ್ ವೆಟಲ್: ಜರ್ಮನ್ ಚಾಲಕ, ಕಾರು: ಫೆರಾರಿ, ಪಾಯಿಂಟ್ಸ್: ೨೪೧
  • ಕಿಮಿ ರೈಕೊನೆನ್: ಫಿನ್ಲೆಂಡ್ ಚಾಲಕ, ಕಾರು: ಫೆರಾರಿ, ಪಾಯಿಂಟ್ಸ್: ೧೭೪
  • ವಾಲ್ಟೆರಿ ಬೊಟ್ಟಾಸ್: ಫಿನ್ಲೆಂಡ್ ಚಾಲಕ, ಕಾರು: ಮರ್ಸಿಡೆಸ್, ಪಾಯಿಂಟ್ಸ್: ೧೭೧
  • ಮ್ಯಾಕ್ಸ್ ವರ್ಸ್ಟಾಪೆನ್: ಹಾಲೆಂಡ್ ಚಾಲಕ, ಕಾರು: ರೆಡ್ ಬುಲ್, ಪಾಯಿಂಟ್ಸ್: ೧೪೮
  • ಡೇನಿಯಲ್ ರಿಕಾರ್ಡೊ: ಆಸ್ಟ್ರೇಲಿಯಾ ಚಾಲಕ, ಕಾರು: ರೆಡ್ ಬುಲ್, ಪಾಯಿಂಟ್ಸ್: ೧೨೬
  • ನಿಕೋ ಹಲ್ಕೆನ್‌ಬರ್ಗ್: ಜರ್ಮನ್ ಚಾಲಕ, ಕಾರು: ರೆನಾಲ್ಟ್, ಪಾಯಿಂಟ್ಸ್: ೫೩
  • ಫೆರ್ನಾಂಡೊ ಅಲೊನ್ಸೊ: ಸ್ಪಾ ಚಾಲಕ, ಕಾರು: ಮೆಕ್‌ಲಾರೆನ್, ಪಾಯಿಂಟ್ಸ್: ೫೦
  • ಕೆವಿನ್ ಮ್ಯಾಗ್ನುಸೆನ್: ಡೆನ್ಮಾರ್ಕ್ ಚಾಲಕ, ಕಾರು: ಹಾಸ್, ಪಾಯಿಂಟ್ಸ್: ೪೯
  • ಸರ್ಗಿಯೊ ಪೆರೆಜ್: ಮೆಕ್ಸಿಕನ್ ಚಾಲಕ, ಕಾರು: ಫೋರ್ಸ್ ಇಂಡಿಯಾ, ಪಾಯಿಂಟ್ಸ್: ೪೬
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More