ಏಷ್ಯಾ ಕಪ್: ಹಾಂಕಾಂಗ್ ಎದುರು ಸುಲಭ ಗೆಲುವು ಸಾಧಿಸಿದ ಪಾಕಿಸ್ತಾನ

ಏಷ್ಯಾ ಕಪ್ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ, ದುರ್ಬಲ ಹಾಂಕಾಂಗ್ ತಂಡವನ್ನು ೮ ವಿಕೆಟ್‌ಗಳಿಂದ ಮಣಿಸಿತು. ಆರಂಭಿಕ ಇಮಾಮ್ ಉಲ್ ಹಕ್ (೫೦*) ದಾಖಲಿಸಿದ ಚೊಚ್ಚಲ ಅರ್ಧಶತಕ ಮತ್ತು ಉಸ್ಮಾನ್ ಖಾನ್ (೧೯ಕ್ಕೆ ೩) ಪರಿಣಾಮಕಾರಿ ಬೌಲಿಂಗ್‌ನಿಂದ ಪಾಕ್ ಶುಭಾರಂಭ ಮಾಡಿತು

ನಿರೀಕ್ಷೆಯಂತೆಯೇ ಹಾಂಕಾಂಗ್ ತಂಡದ ವಿರುದ್ಧ ಪಾಕಿಸ್ತಾನ ಸುಲಭ ಗೆಲುವಿನೊಂದಿಗೆ ಏಷ್ಯಾ ಕಪ್‌ನಲ್ಲಿ ಶುಭಾರಂಭ ಮಾಡಿದೆ. ಪಾಕ್ ತಂಡದ ನಿಖರ ವೇಗ ಮತ್ತು ಸ್ಪಿನ್ ಸುಳಿಗೆ ಸಿಲುಕಿದ ಹಾಂಕಾಂಗ್ ತಂಡ, ಏಷ್ಯಾ ಕಪ್‌ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರೀಕ್ಷಿತ ಸೋಲುಂಡಿತು.

ಭಾನುವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕೇವಲ ೧೧೭ ರನ್ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡವು, ೨೩.೪ ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ೧೨೦ ರನ್‌ ಗಳಿಸುವುದರೊಂದಿಗೆ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ (೫೦: ೬೯ ಎಸೆತ, ೩ ಬೌಂಡರಿ, ೧ ಸಿಕ್ಸರ್) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಚೊಚ್ಚಲ ಅಜೇಯ ಅರ್ಧಶತಕ ತಂಡದ ಸುಲಭ ಗೆಲುವಿಗೆ ನೆರವಾಯಿತು.

ಫಕಾರ್ ಜಮಾನ್ (೨೪) ಮತ್ತು ಬಾಬರ್ ಆಜಮ್ (೩೩) ಎಹ್ಸನ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಸ್ಕಾಟ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದ ಬಳಿಕ ಅನುಭವಿ ಆಟಗಾರ ಶೋಯೆಬ್ ಮಲಿಕ್ (೯) ಜೊತೆಗೂಡಿ ಇಮಾಮ್ ಅಜೇಯರಾಗುಳಿದರು. ಏತನ್ಮಧ್ಯೆ, ಬಾಬರ್ ಆಜಮ್‌ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರೂ, ಏಕದಿನ ಕ್ರಿಕೆಟ್‌ನಲ್ಲಿ ೨ ಸಾವಿರ ರನ್ ಪೂರೈಸಿದ ಆಟಗಾರನಾಗಿ ಗಮನ ಸೆಳೆದರು.

ಇದನ್ನೂ ಓದಿ : ಏಷ್ಯಾ ಕಪ್: ವ್ಯಾಘ್ರಪಡೆಯ ಅಬ್ಬರಕ್ಕೆ ಬೆದರಿದ ಸಿಂಹಳೀಯರಿಗೆ ಹೀನಾಯ ಸೋಲು

ಇದಕ್ಕೂ ಮುನ್ನ, ೧೦ ವರ್ಷಗಳ ಬಳಿಕ ಏಷ್ಯಾ ಕಪ್‌ನಲ್ಲಿ ಆಡಲು ಅವಕಾಶ ಪಡೆದಿರುವ ಹಾಂಕಾಂಗ್‌ ತಂಡ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ನಾಲ್ಕು ಓವರ್‌ಗಳವರೆಗೆ ಪಾಕಿಸ್ತಾನದ ವೇಗದ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ ಆರಂಭಿಕ ಬ್ಯಾಟ್ಸ್‌ಮನ್‌ಗಳು ನಂತರ ತಡವರಿಸಿದರು. ಐದನೇ ಓವರ್‌ನಲ್ಲಿ ನಿಜಾಕತ್ ಖಾನ್ ರನೌಟ್‌ ಆದರೆ, ಒಂಬತ್ತನೇ ಓವರ್‌ನಲ್ಲಿ ನಾಯಕ ಅಂಶುಮನ್ ರಾಠ್‌ ಕೂಡ ವಾಪಸಾದರು. ಮಧ್ಯಮ ವೇಗಿ ಫಾಹೀಮ್ ಅಶ್ರಫ್ ಎಸೆತದಲ್ಲಿ ಅಂಶುಮನ್ ಪಾಕ್ ತಂಡದ ನಾಯಕ ಮತ್ತು ವಿಕೆಟ್ ಕೀಪರ್‌ ಸರ್ಫರಾಜ್‌ ಅಹಮದ್‌ಗೆ ಕ್ಯಾಚ್ ನೀಡಿ ಮರಳಿದರು.

ಬಳಿಕ ಬಾಬರ್ ಹಯಾತ್ ಮತ್ತು ಕಾರ್ಟರ್‌ ಜೋಡಿ ನಿಧಾನಗತಿಯಲ್ಲಿ ರನ್‌ ಗಳಿಸಲು ಯತ್ನಿಸಿತಾದರೂ, 14ನೇ ಓವರ್‌ನಲ್ಲಿ ಕಾರ್ಟರ್‌ ಔಟಾದರು. ಎರಡು ಓವರ್‌ಗಳಲ್ಲಿ ಶಾಬಾದ್ ಖಾನ್‌ ಎರಡು ವಿಕೆಟ್ ಗಳಸಿದರು. ಅವರಿಗೆ ಬಾಬರ್ ಹಯಾತ್ ಮತ್ತು ಇಶಾನ್ ಖಾನ್‌ ಬಲಿಯಾದರು. ಕೇವಲ ೪೪ ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ತತ್ತರಿಸಿದ ಹಾಂಕಾಂಗ್‌ಗೆ ಕಿಂಚಿತ್ ಶಾ ಮತ್ತು ಎಜಾಜ್ ಖಾನ್ ಜೋಡಿ ತುಸು ಚೇತನ ನೀಡಿತು.

ಐದನೇ ಕ್ರಮಾಂಕದ ಕಿಂಚಿತ್ ಶಾ ಮತ್ತು ಏಳನೇ ಕ್ರಮಾಂಕದ ಎಜಾಜ್ ಖಾನ್‌ ಆರನೇ ವಿಕೆಟ್‌ಗೆ 53 ರನ್‌ ಸೇರಿಸಿ ಮೂರಂಕಿ ಮೊತ್ತದ ಸನಿಹ ತಲುಪಿಸಿದರು. ಆದರೆ, ಒಂದೊಮ್ಮೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು. 31ನೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದ ಮಧ್ಯಮ ವೇಗಿ ಉಸ್ಮಾನ್ ಖಾನ್‌, ಹಾಂಕಾಂಗ್ ತಂಡದ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದರು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ಇಶಾನ್ ನವಾಜ್ ಮತ್ತು ನದೀಮ್ ಅಹಮ್ಮದ್‌ ಪ್ರತಿರೋಧ ಒಡ್ಡಿ 17 ರನ್ ಸೇರಿಸಿದರಾದರೂ, ಪಾಕ್‌ನಂಥ ಬಲಿಷ್ಠ ತಂಡಕ್ಕೆ ಸವಾಲಿನ ಗುರಿ ನೀಡಲು ಹಾಂಕಾಂಗ್ ವಿಫಲವಾಯಿತು.

ಸಂಕ್ಷಿಪ್ತ ಸ್ಕೋರ್

ಹಾಂಕಾಂಗ್: ೩೭.೧ ಓವರ್‌ಗಳಲ್ಲಿ ೧೧೬ (ಕಿಂಚಿತ್ ಶಾ ೨೬, ಏಜಾಜ್ ಖಾನ್ ೨೭; ಉಸ್ಮಾನ್ ಖಾನ್ ೧೯ಕ್ಕೆ ೩, ಹಸನ್ ಅಲಿ ೧೯ಕ್ಕೆ ೨, ಶಾದಾಬ್ ಖಾನ್ ೩೧ಕ್ಕೆ ೨) ಪಾಕಿಸ್ತಾನ: ೨೩.೪ ಓವರ್‌ಗಳಲ್ಲಿ ೧೨೦/೨ (ಇಮಾಮ್ ಉಲ್ ಹಕ್ ೫೦*, ಫಕಾರ್ ಜಮಾನ್ ೨೪, ಬಾಬರ್ ಆಜಮ್ ೩೩, ಶೋಯೆಬ್ ಮಲಿಕ್ ೬*; ಎಹ್ಸನ್ ಖಾನ್ ೩೪ಕ್ಕೆ ೨) ಫಲಿತಾಂಶ: ಪಾಕಿಸ್ತಾನಕ್ಕೆ ೮ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಉಸ್ಮಾನ್ ಖಾನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More