ಏಷ್ಯಾ ಕಪ್: ಸಾಂಪ್ರದಾಯಿಕ ಸಮರಕ್ಕೆ ಅಣಿಯಾದ ಭಾರತ ಹಾಗೂ ಪಾಕಿಸ್ತಾನ

ಜೂನ್ ೨೦೧೭ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಕ್ರಿಕೆಟ್ ಅಂಗಣದಲ್ಲಿ ಎದುರಾಗುತ್ತಿವೆ. ಹೆಚ್ಚೂಕಮ್ಮಿ ವರ್ಷದ ಬಳಿಕದ ಮುಖಾಮುಖಿಯಲ್ಲಿ ಕೊಹ್ಲಿ ಇಲ್ಲದ ಟೀಂ ಇಂಡಿಯಾವನ್ನು ಹಣಿಯಲು ಪಾಕ್ ಉತ್ಸುಕವಾಗಿದೆ

ಭಾರತ ಮತ್ತು ಪಾಕಿಸ್ತಾನ ನಡುವಣದ ಸಾಂಪ್ರದಾಯಿಕ ಕ್ರಿಕೆಟ್ ಕದನದ ಅಂಕಿ-ಅಂಶಗಳನ್ನು ಅವಲೋಕಿಸಿದರೆ ಪಾಕಿಸ್ತಾನವೇ ಮುಂದಿದೆ. ಶಾರ್ಜಾದಲ್ಲಿ ನಡೆದ ಅದೆಷ್ಟೋ ಪಂದ್ಯಗಳು ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ರಸದೌತಣಕ್ಕೆ ಸಾಕ್ಷಿ ಒದಗಿಸಿವೆ. ಪ್ರಸಕ್ತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿಯೂ ಇತ್ತಂಡಗಳು ರೋಚಕ ಸೆಣಸಾಟ ನಡೆಸಿವೆಯಾದರೂ, ಭಾರತ ಗೆಲುವಿನ ಅಂತರದಲ್ಲಿ ಮೇಲುಗೈ ಸಾಧಿಸಿದೆ.

ಸದ್ಯ ಬುಧವಾರ (ಸೆ.೧೯) ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸುವ ಅದಮ್ಯ ವಿಶ್ವಾಸದಲ್ಲಿದೆ ಪಾಕಿಸ್ತಾನ ತಂಡ. ಇದಕ್ಕೆ ಪ್ರಮುಖ ಕಾರಣ, ವಿರಾಟ್ ಕೊಹ್ಲಿ ಈ ಟೂರ್ನಿಗೆ ಅಲಭ್ಯವಾಗಿರುವುದು. ಇಂಗ್ಲೆಂಡ್ ಸರಣಿಯ ಬಳಿಕ ಏಷ್ಯಾ ಕಪ್‌ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿಯ ಈ ಅನುಪಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಪಾಕ್ ತಂಡ ಸನ್ನಾಹ ನಡೆಸಿದೆ.

ಅಂದಹಾಗೆ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಒಟ್ಟು ೧೨೯ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು, ಈ ಪೈಕಿ ಪಾಕಿಸ್ತಾನ ೭೩ರಲ್ಲಿ ಗೆದ್ದಿದ್ದರೆ, ಭಾರತ ಗೆದ್ದಿರುವುದು ೫೨ ಪಂದ್ಯಗಳನ್ನು. ಉಳಿದ ನಾಲ್ಕು ಪಂದ್ಯಗಳು ಫಲಿತಾಂಶ ರಹಿತವಾಗಿವೆ. ಒಟ್ಟಾರೆ, ಅಂಕಿ ಅಂಶಗಳು ಪಾಕ್ ತಂಡದ ಪ್ರಾಬಲ್ಯವನ್ನು ಹೇಳುವುದಾದರು, ಇತ್ತೀಚಿನ ಅಂದರೆ ಒಂದು ದಶಕದಿಂದೀಚಿನ ಮುಖಾಮುಖಿಯಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ರೋಚಕ ಗೆಲುವು ಸಾಧಿಸಿತಾದರೂ, ಕಳೆದೊಂದು ದಶಕದಲ್ಲಿ ಎದುರುಬದುರಾದ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಒಟ್ಟಾರೆ ನಡೆದಿರುವ ಹನ್ನೊಂದು ಪಂದ್ಯಗಳಲ್ಲಿ ಭಾರತ ತಂಡ ೭ರಲ್ಲಿ ಗೆಲುವು ಸಾಧಿಸುವುದು ಗಮನಾರ್ಹ.

ಮಧ್ಯಮ ಕ್ರಮಾಂಕದ ಅಸ್ಥಿರತೆ

ಕಳೆದ ಒಂದೂವರೆ ವರ್ಷಗಳಿಂದ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಅಸ್ಥಿರ ಆಟದಿಂದ ಕಂಗೆಟ್ಟಿದೆ. ಈ ಮಧ್ಯಮ ಕ್ರಮಾಂಕದಲ್ಲಿನ ಅಸ್ಥಿರ ಆಟದ ಕೊರತೆ ಮೆಟ್ಟಿನಿಲ್ಲುವ ಸವಾಲು ಎದುರಾಗಿದೆ. ಮಧ್ಯಮ ಕ್ರಮಾಂಕದಲ್ಲಿನ ಅಸ್ಥಿರ ಆಟವನ್ನು ಸರಿದೂಗಿಸಲು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ೧೦ಕ್ಕೂ ಹೆಚ್ಚು ಆಟಗಾರರನ್ನು ಕಣಕ್ಕಿಳಿಸಿದೆ. ಆದರೆ, ಎಂ ಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಮಿಕ್ಕವರು ತಡಬಡಾಯಿಸುತ್ತಿದ್ದಾರೆ. ಆದಾಗ್ಯೂ, ಧೋನಿ ಕೂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ವಿಫಲವಾಗಿದ್ದುದು ಮಧ್ಯಮ ಕ್ರಮಾಂಕದ ವೈಫಲ್ಯವನ್ನು ಎತ್ತಿತೋರಿತ್ತು.

ಕ್ರಮಾಂಕವನ್ನು ಹಲವಾರು ಬಾರಿ ಬದಲಿಸಿದರೂ, ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದು ಒಮ್ಮೆ ಮಾತ್ರ. ಮುಂಬರುವ ವಿಶ್ವಕಪ್ ಹಿನ್ನೆಲೆಯಲ್ಲಿಯೂ ಧೋನಿಯ ಕ್ರಮಾಂಕ ಟೀಂ ಇಂಡಿಯಾ ಪಾಲಿಗೆ ನಿರ್ಣಾಯಕ ಎನಿಸಿದೆ. ವಿಶ್ವಕಪ್‌ಗೆ ಸಶಕ್ತ ತಂಡವನ್ನು ರೂಪಿಸಲು ಹೆಣಗಾಡುತ್ತಿರುವ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮಧ್ಯಮ ಕ್ರಮಾಂಕದತ್ತಲೇ ಹೆಚ್ಚಿನ ಗಮನ ವಹಿಸಿದೆ.

ಇದನ್ನೂ ಓದಿ : ಏಷ್ಯಾಕಪ್‌ನ ಇಂಡೋ-ಪಾಕ್ ಪಂದ್ಯದ ವೇಳಾಪಟ್ಟಿ ಬದಲಿಸುವಂತೆ ಬಿಸಿಸಿಐ ಬಿಗಿಪಟ್ಟು

ಜವಾಬ್ದಾರಿಯುತ ಆಟದ ಅನಿವಾರ್ಯತೆ

ವಿರಾಟ್ ಕೊಹ್ಲಿಯ ಅಲಭ್ಯತೆಯು ತಂಡವನ್ನು ಬಾಧಿಸದಂತೆ ನೋಡಿಕೊಳ್ಳುವ ಅನಿವಾರ್ಯತೆ ಭಾರತ ತಂಡಕ್ಕೆ ಎದುರಾಗಿದೆ. ಮುಖ್ಯವಾಗಿ, ಮುಂಬೈ ಬ್ಯಾಟ್ಸ್‌ಮನ್ ಹಾಗೂ ನಾಯಕ ರೋಹಿತ್ ಶರ್ಮಾ ಅಲ್ಲದೆ, ಮಾಜಿ ನಾಯಕ ಎಂ ಎಸ್ ಧೋನಿ ಮತ್ತು ಆರಂಭಿಕ ಶಿಖರ್ ಧವನ್ ಮೇಲೆ ಹೆಚ್ಚಿನ ಜವಾಬ್ದಾರಿ ಹೆಗಲೇರಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಭಾರತ ತಂಡ ೨೧ ಏಕದಿನ ಪಂದ್ಯಗಳನ್ನಾಡಲಿದ್ದು, ಪ್ರಮುಖವಾಗಿ ಮಧ್ಯಮ ಕ್ರಮಾಂಕದತ್ತ ಹೆಚ್ಚು ಲಕ್ಷ್ಯ ವಹಿಸಬೇಕಿದೆ.

ಪಾಕ್‌ನ ಬೌಲಿಂಗ್ ಅಸ್ತ್ರ

View this post on Instagram

#indiavspakistan

A post shared by @ hitman_mi45 on

ಭಾರತ ಮತ್ತು ಪಾಕಿಸ್ತಾನ ತಂಡಗಳ ಕ್ರಿಕೆಟ್ ಕದನ ಕೌತುಕ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವಣದ ನೇರ ಹಣಾಹಣಿ ಎಂದೇ ಪ್ರಸಿದ್ಧಿ ಪಡೆದಿದೆ. ಮುಖ್ಯವಾಗಿ, ಎಡಗೈ ವೇಗಕ್ಕೆ ಭಾರತದ ಬ್ಯಾಟಿಂಗ್ ಕ್ರಮಾಂಕ ತಡಬಡಾಯಿಸುವ ಹಿನ್ನೆಲೆಯಲ್ಲಿ ಈ ಬಾರಿಯ ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಬೌಲರ್‌ಗಳಲ್ಲಿ ನಾಲ್ವರು ಎಡಗೈ ವೇಗಿಗಳೇ ತುಂಬಿರುವುದು ಗಮನಾರ್ಹ. ಈ ಎಡಗೈ ಬೌಲರ್‌ಗಳ ಸವಾಲನ್ನು ಹತ್ತಿಕ್ಕಲು ರೋಹಿತ್ ಪಡೆ ಯಾವ ತಂತ್ರವನ್ನು ಅನುಸರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನು, ಯುವ ಆಟಗಾರ ಇಮಾಮ್ ಉಲ್ ಹಕ್, ಫಕಾರ್ ಜಮಾನ್‌ರಂಥ ಬ್ಯಾಟ್ಸ್‌ಮನ್‌ಗಳು ಸಾಧ್ಯವಾದಷ್ಟೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಾಬರ್ ಆಜಮ್ ಮುಂತಾದವರು ಗಮನ ಸೆಳೆದಿದ್ದಾರೆ. ಇತ್ತ, ಮಧ್ಯಮ ಕ್ರಮಾಂಕದಲ್ಲಿ ೩೬ರ ಹರೆಯದ ಶೋಯೆಬ್ ಮಲಿಕ್ ಅಮೋಘ ಫಾರ್ಮ್‌ನಲ್ಲಿದ್ದು, ಭಾರತದ ಬೌಲರ್‌ಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದ್ದಾರೆ.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಮನೀಶ್ ಪಾಂಡೆ, ಎಂ ಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನ: ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಬಾಬರ್ ಆಜಮ್, ಆಸಿಫ್ ಅಲಿ, ಶೋಯೆಬ್ ಮಲಿಕ್, ಸರ್ಫರಾಜ್ ಅಹಮದ್, ಶಾದಾಬ್ ಖಾನ್, ಹಸನ್ ಅಲಿ, ಮೊಹಮದ್ ಆಮೀರ್, ಜುನೈದ್ ಖಾನ್, ಉಸ್ಮಾನ್ ಖಾನ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More