ಹಾಂಕಾಂಗ್ ಹಣಿಯಲು ಸಜ್ಜಾಗಿರುವ ರೋಹಿತ್ ಪಡೆಗೆ ಪಾಕ್‌ನದ್ದೇ ಗುಂಗು

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯ ಹೈವೋಲ್ಟೇಜ್ ಪಂದ್ಯ ಬುಧವಾರ (ಸೆ.೧೯) ಜರುಗಲಿದೆ. ಭಾರತ ಮತ್ತು ಪಾಕಿಸ್ತಾನ ತಂಡ ಮುಖಾಮುಖಿ ಆಗುತ್ತಿರುವ ಈ ಪಂದ್ಯಕ್ಕೆ ಏಷ್ಯಾ ಮಾತ್ರವಲ್ಲ, ಕ್ರಿಕೆಟ್ ಜಗತ್ತೇ ಕಾದಿದೆ. ಇದೆಲ್ಲದರ ಮಧ್ಯೆ ಭಾರತ ತಂಡ ಹಾಂಕಾಂಗ್ ಪಂದ್ಯಕ್ಕೆ ಅಣಿಯಾಗಿದೆ

ಈಗಾಗಲೇ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ೮ ವಿಕೆಟ್ ಸೋಲನುಭವಿಸಿದ ಹಾಂಕಾಂಗ್ ವಿರುದ್ಧದ ಪಂದ್ಯದೊಂದಿಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ. ಆದರೆ, ಮಂಗಳವಾರ (ಸೆ.೧೮) ನಡೆಯಲಿರುವ ಈ ಪಂದ್ಯವನ್ನು ಭಾರತ ತಂಡ, ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಪೂರ್ವಭಾವಿ ಅಭ್ಯಾಸವೆಂದೇ ಪರಿಗಣಿಸಿದೆ.

ಹಾಂಕಾಂಗ್ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಹೀನಾಯವಾಗಿ ಸೋತಿತ್ತು. ಭಾನುವಾರ (ಸೆ.೧೬) ನಡೆದ ಪಂದ್ಯದಲ್ಲಿ ಹಾಂಕಾಂಗ್‌ ಯಾವ ವಿಭಾಗದಲ್ಲೂ ಸಾಮರ್ಥ್ಯ ತೋರಲಿಲ್ಲ. ಕೇವಲ 116 ರನ್‌ ಸೇರಿಸಿದ್ದ ಹಾಂಕಾಂಗ್ ಎದುರು ಪಾಕಿಸ್ತಾನ ತಂಡ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಇದೀಗ ಭಾರತ ತಂಡ ಹಾಂಕಾಂಗ್‌ ಅನ್ನು ಟೂರ್ನಿಯಿಂದ ಹೊರದಬ್ಬಲು ಮುಂದಾಗಿದೆ.

ಅಂದಹಾಗೆ, ಇಂಗ್ಲೆಂಡ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದರೂ, ತಂಡವನ್ನು ಗೆಲುವಿನತ್ತ ಮುನ್ನಡೆಸಲು ವಿಫಲವಾದ ವಿರಾಟ್ ಕೊಹ್ಲಿ ಪ್ರಸ್ತುತ ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ಕಾರಣ, ತಂಡದ ಸಾರಥ್ಯವನ್ನು ರೋಹಿತ್ ಶರ್ಮಾ ಹೊತ್ತುಕೊಂಡಿದ್ದಾರೆ. ಏತನ್ಮಧ್ಯೆ, 43 ಡಿಗ್ರಿ ಸೆಲ್ಶಿಯಸ್‌ ತಾಪಮಾನದಿಂದ ಕೂಡಿರುವ ದುಬೈ ವಾತಾವರಣಕ್ಕೆ ಹೊಂದಿಕೊಂಡು ಆಡಲು ಮಂಗಳವಾರದ ಪಂದ್ಯ ಭಾರತ ತಂಡಕ್ಕೆ ಪೂರಕವಾಗಿರಲಿದೆ ಎಂದೇ ಅಂದಾಜಿಸಲಾಗಿದೆ.

ಧೋನಿ ಮೇಲೆ ಎಲ್ಲರ ಕಣ್ಣು

ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡದ ಬ್ಯಾಟಿಂಗ್ ಮತ್ತೆ ಸಹಜ ಸ್ಥಿತಿಗೆ ಮರಳಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ, ವಿರಾಟ್ ಕೊಹ್ಲಿ ಅಲಭ್ಯತೆಯ ಕೊರತೆ ತಂಡದ ಬ್ಯಾಟಿಂಗ್ ಅನ್ನು ಬಾಧಿಸದಂತೆ ನೋಡಿಕೊಳ್ಳಬೇಕಿದೆ. ಇನ್ನು, ವೇಗದ ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದರೆ, ಸ್ಪಿನ್ ವಿಭಾಗದಲ್ಲಿ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ. ಬೆನ್ನು ನೋವಿನಿಂದಾಗಿ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಿಂದ ವಂಚಿತವಾಗಿದ್ದ ಭುವನೇಶ್ವರ್ ಕುಮಾರ್ ಹಾಂಕಾಂಗ್ ಎದುರಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

ಇದೆಲ್ಲಕ್ಕೂ ಮಿಗಿಲಾಗಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಎಲ್ಲರ ಚಿತ್ತ ಹರಿದಿದೆ. ಇತ್ತೀಚಿನ ಪಂದ್ಯಗಳಲ್ಲಿ ಅವರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿರುವುದು ಭಾರತ ತಂಡವನ್ನು ದಿಗಿಲುಗೊಳಿಸಿದೆ. ಮುಖ್ಯವಾಗಿ, ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಧೋನಿ ಈ ಟೂರ್ನಿಯಲ್ಲಿ ನೀಡುವ ಪ್ರದರ್ಶನ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದೇ ಹೇಳಲಾಗಿದೆ.

ಇದನ್ನೂ ಓದಿ : ಸಚಿನ್, ಕೊಹ್ಲಿಗಿಂತಲೂ ಧೋನಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗ

ಮಧ್ಯಮ ಕ್ರಮಾಂಕದ ಗೊಂದಲಕ್ಕೆ ತೆರೆ ಬಿದ್ದೀತೆ?

ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಎದ್ದಿರುವ ಗೊಂದಲ ಇನ್ನೂ ಮುಂದುವರಿದಿದೆ. ಏಷ್ಯಾಕಪ್‌ನಲ್ಲಿ ಧೋನಿ ಯಾವ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಸಹ ಇದೇ ಕಾರಣಕ್ಕೆ ಕುತೂಹಕ ಕೆರಳಿಸಿದೆ. ಅವರು ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರೆ ಕೇದಾರ್ ಜಾಧವ್ ಅಥವಾ ಮನೀಷ್ ಪಾಂಡೆ ಐದನೇ ಕ್ರಮಾಂಕದಲ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಂಭವವಿದೆ. ಒಟ್ಟಾರೆ, ಧೋನಿ ಕ್ರಮಾಂಕ ತಂಡದ ಮಧ್ಯಮ ಕ್ರಮಾಂಕದ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಏತನ್ಮಧ್ಯೆ, ಕನ್ನಡಿಗ ಕೆ ಎಲ್‌ ರಾಹುಲ್‌ ಮೂರನೇ ಕ್ರಮಾಂಕದಲ್ಲಿ ಇಳಿಯುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಅಂಬಟಿ ರಾಯುಡು / ಮನೀಶ್ ಪಾಂಡೆ, ಎಂ ಎಸ್ ಧೋನಿ, ದಿನೇಶ್ ಕಾರ್ತಿಕ್ / ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್ ಮತ್ತು ಖಲೀಲ್ ಅಹಮದ್.

ಹಾಂಕಾಂಗ್: ನಿಜ್‌ಕತ್ ಖಾನ್, ಅನ್ಶುಮಾನ್ ರಾತ್, ಬಾಬರ್ ಹಯಾತ್, ಕ್ರಿಸ್ಟೋಫರ್ ಕಾರ್ಟರ್, ಕಿಂಚಿತ್ ಶಾ, ಎಹ್ಸನ್ ಖಾನ್, ಏಜಾಜ್ ಖಾನ್, ಸ್ಕಾಟ್ ಮೆಕೆಂಚಿ, ತನ್ವೀರ್ ಅಫ್ಜಲ್, ಎಹ್ಸನ್ ನವಾಜ್ ಮತ್ತು ನದೀಮ್ ಅಹಮದ್.

ಪಂದ್ಯ ಆರಂಭ: ಸಂಜೆ ೫.೦೦ | ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ | ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More