ಏಷ್ಯಾಕಪ್: ಐದು ಬಾರಿಯ ಚಾಂಪಿಯನ್ ಶ್ರೀಲಂಕಾವನ್ನು ಹೊರದಬ್ಬಿದ ಆಪ್ಘಾನಿಸ್ತಾನ!

ಪ್ರತಿಷ್ಠಿತ ಏಷ್ಯಾಕಪ್ ಪಂದ್ಯಾವಳಿಯಿಂದ ಐದು ಬಾರಿಯ ಶ್ರೀಲಂಕಾ ಹೊರಬಿದ್ದಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ಏಂಜೆಲೊ ಮ್ಯಾಥ್ಯೂಸ್ ಬಳಗ ಆಘಾತಕಾರಿ ಸೋಲಿನೊಂದಿಗೆ ತವರಿನತ್ತ ಮುಖ ಮಾಡಿದೆ. ಇತ್ತ, ೯೧ ರನ್ ಜಯ ಸಾಧಿಸಿದ ಆಫ್ಘಾನಿಸ್ತಾನ ಶುಭಾರಂಭ ಮಾಡಿದೆ

ಮತ್ತೊಮ್ಮೆ ಆಫ್ಘಾನಿಸ್ತಾನ ಬೌಲಿಂಗ್‌ನಲ್ಲಿ, ವಿಶೇಷವಾಗಿ ಸ್ಪಿನ್ ಬೌಲಿಂಗ್‌ನಲ್ಲಿ ತಾನೆಷ್ಟು ಪ್ರಬಲ ಎಂಬುದನ್ನು ನಿರೂಪಿಸಿತು. ಅತ್ಯಂತ ಅನುಭವಿ ತಂಡ ಶ್ರೀಲಂಕಾ ವಿರುದ್ಧ ನಿರ್ಭಿಡೆ ಆಟವಾಡಿದ ಆಫ್ಘಾನಿಸ್ತಾನ, ಸಿಂಹಳೀಯರನ್ನು ಹೀನಾಯವಾಗಿ ಮಣಿಸಿ ಟೂರ್ನಿಯಿಂದ ಹೊರದಬ್ಬಿತು. 250 ರನ್ ಗುರಿ ಬೆನ್ನತ್ತಿದ ಶ್ರೀಲಂಕಾಗೆ ಮುಜೀಬ್ ಉರ್ ರೆಹಮಾನ್ (೩೨ಕ್ಕೆ ೨), ಮೊಹಮದ್ ನಬಿ (೩೦ಕ್ಕೆ ೨) ಮತ್ತು ರಶೀದ್ ಖಾನ್ (೨೬ಕ್ಕೆ ೨) ಮಾರಕರಾದರು. ಈ ಸ್ಪಿನ್‌ತ್ರಯರ ಕೈಗೆ ಸಿಲುಕಿದ ಸಿಂಹಳೀಯರು ಟೂರ್ನಿಯಲ್ಲಿ ಸತತ ಎರಡನೇ ಹೀನಾಯ ಸೋಲನುಭವಿಸಿದರು.

ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ೧೩೭ ರನ್‌ಗಳಿಂದ ಸೋತಿದ್ದ ಶ್ರೀಲಂಕಾ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ, ಶುರುವಿನಿಂದಲೂ ಸಿಂಹಪಡೆಗೆ ಮೂಗುದಾರ ಹಾಕಿದ ಆಫ್ಘನ್ನರು ಆಟದ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶವನ್ನೇ ಕಲ್ಪಿಸಲಿಲ್ಲ. ಅಂತಿಮವಾಗಿ, ೪೧.೧ ಓವರ್‌ಗಳಲ್ಲಿ ೧೫೮ ರನ್‌ಗಳಿಗೆ ಶ್ರೀಲಂಕಾ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಫ್ಘನ್ನರ ಎದುರು ಸೋಲೊಪ್ಪಿಕೊಂಡಿತು.

ಸೋಮವಾರ ದುಬೈನ ಶೇಖ್ ಜಿಯಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುರಿ ಬೆನ್ನತ್ತಿದ ಶ್ರೀಲಂಕಾ ಆರಂಭದಲ್ಲೇ ಎಡವಿತು. ಕುಶಾಲ್ ಮೆಂಡಿಸ್ (೦) ಮುಜೀಬ್ ಉರ್ ರೆಹಮಾನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ಬಳಿಕ ಉಪುಲ್ ತರಂಗ (೩೬) ಮತ್ತು ಧನಂಜಯ ಡಿಸಿಲ್ವಾ (೨೩) ಕೊಂಚ ಪ್ರತಿರೋಧ ನೀಡಲು ಯತ್ನಿಸಿದರೂ, ಈ ಜೋಡಿ ಹೆಚ್ಚುಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತದನಂತರ ಕುಶಾಲ್ ಪೆರೇರಾ (೧೭), ಏಂಜೆಲೊ ಮ್ಯಾಥ್ಯೂಸ್ (೨೨), ಶೆಹಾನ್ ಜಯಸೂರ್ಯ (೧೪ ರನೌಟ್) ಮತ್ತು ತಿಸಾರ ಪೆರೇರಾ (೨೮) ಆಫ್ಘನ್ ಬೌಲರ್‌ಗಳ ಚಮತ್ಕಾರಕ್ಕೆ ಮಂಕಾದರು. ಮಿಕ್ಕವರಿಂದ ಎರಡಂಕಿ ದಾಟಲೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್‌ನಲ್ಲಿ ಎದುರಾಯಿತೇ ಸಮರ್ಥ ನಾಯಕರ ಕೊರತೆ?

ಧನಂಜಯ ಮ್ಯಾಜಿಕ್

ಇದಕ್ಕೂ ಮುನ್ನ, ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 249 ರನ್‌ ಗಳಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ಆರಂಭಿಕ ಜೋಡಿ ಮೊಹಮ್ಮದ್ ಶೆಹಜಾದ್‌ (೩೪) ಮತ್ತು ಇಹಸಾನುಲ್ಲ (೪೫) ಶ್ರೀಲಂಕಾ ದಾಳಿಯನ್ನು ದಿಟ್ಟವಾಗಿ ಎದುರಿಸಿತು. ಬಾಂಗ್ಲಾದೇಶ ಎದುರಿನ ಮೊದಲ ಪಂದ್ಯದ ಆರಂಭದಲ್ಲಿ ಅಬ್ಬರಿಸಿದ್ದ ವೇಗಿ ಲಸಿತ್ ಮಾಲಿಂಗ ಆಫ್ಘನ್ನರಿಗೆ ಆಘಾತಕಾರಿಯಾಗಲಿಲ್ಲ. ಹೀಗಾಗಿ, ಮೊದಲ ವಿಕೆಟ್‌ ಜೊತೆಯಾಟದಲ್ಲಿ 57 ರನ್‌ ಕಲೆಹಾಕುವಲ್ಲಿ ಆಫ್ಘನ್ನರು ಯಶ ಕಂಡರು.

ಆಫ್ಘನ್ನರ ಆರಂಭಿಕ ಜೋಡಿಯನ್ನು ಆಫ್ ಸ್ಪಿನ್ನರ್‌ ಅಖಿಲ ಧನಂಜಯ ಮುರಿಯುವಲ್ಲಿ ಯಶಸ್ವಿಯಾದರು. ಮೊಹಮ್ಮದ್ ಶೆಹಜಾದ್‌ ಎಲ್‌ಬಿ ಬಲೆಗೆ ಬಿದ್ದರು. ಬಳಿಕ ಇಹಸಾನುಲ್ಲ (45; 65 ಎಸೆತ, 6 ಬೌಂಡರಿ) ಜೊತೆಗೂಡಿದ ರಹಮತ್ ಶಾ (72; 90 ಎ, 5 ಬೌಂ) ಕೂಡ ಅಮೋಘ ಬ್ಯಾಟಿಂಗ್ ಮಾಡಿ ಎರಡನೇ ವಿಕೆಟ್‌ಗೆ 50 ರನ್ ಸೇರಿಸಿದರು. ಇಹಸಾನುಲ್ಲ ಮತ್ತು ನಾಯಕ ಅಸ್ಗರ್‌ ಆಫ್ಘನ್ ಮೂರು ರನ್‌ಗಳ ಅಂತರದಲ್ಲಿ ಔಟಾದರು. ಇಹಸಾನುಲ್ಲ ಅವರನ್ನು ಅಖಿಲ ಧನಂಜಯ ಎಲ್‌ಬಿ ಬಲೆಯಲ್ಲಿ ಕೆಡವಿದರೆ, ಅಸ್ಗರ್‌ ಆಫ್‌ ಬ್ರೇಕ್ ಬೌಲರ್‌ ಜಯಸೂರ್ಯ ಅವರ ಎಲ್‌ಬಿ ಬಲೆಗೆ ಸಿಲುಕಿದರು.

ಆದರೆ, ದಿಟ್ಟ ಬ್ಯಾಟಿಂಗ್ ಮುಂದುವರಿಸಿದ ರಹಮತ್‌ ಶಾಗೆ ಅಶ್ಮತ್ ಉಲ್ಲಾ ಶಾಹಿದಿ ಉತ್ತಮ ಬೆಂಬಲ ನೀಡಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 91 ಎಸೆತಗಳಲ್ಲಿ 80 ರನ್‌ ಸೇರಿಸಿತು. ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಶ್ರೀಲಂಕಾ ಫೀಲ್ಡರ್‌ಗಳು ಹಲವು ಜೀವದಾನ ನೀಡಿದರು. ಆದರೆ, 42ನೇ ಓವರ್‌ನಲ್ಲಿ ಚಮೀರ ಎಸೆತದಲ್ಲಿ ರಹಮತ್ ಶಾ ನೀಡಿದ ಕ್ಯಾಚ್‌ ಅನ್ನು ತಿಸಾರ ಪೆರೇರ ಕೈಚೆಲ್ಲಲಿಲ್ಲ. ಸ್ವಲ್ಪದರಲ್ಲೇ ಅಶ್ಮತ್ ಉಲ್ಲಾ ಶಾಹಿದಿ ಕೂಡ ಔಟಾದರು. ಕೊನೆಯ ಆರು ವಿಕೆಟ್‌ಗಳ ಪೈಕಿ ಐದನ್ನು ಬುಟ್ಟಿಗೆ ಹಾಕಿಕೊಂಡ ಅವರು ಮೊಹಮ್ಮದ್ ನಬಿ ಅವರ ಕ್ಯಾಚನ್ನೂ ಪಡೆದರು.

ಸಂಕ್ಷಿಪ್ತ ಸ್ಕೋರ್

ಆಫ್ಘಾನಿಸ್ತಾನ: ೫೦ ಓವರ್‌ಗಳಲ್ಲಿ ೨೪೯ (ಇಹ್ಸಾನುಲ್ಲಾ ೪೫, ರಹಮತ್ ಶಾ ೭೨, ಮೊಹಮದ್ ಶೆಹಜಾದ್ ೩೪, ಹಶ್ಮತುಲ್ಲಾ ಶಾಹಿದಿ ೩೭; ತಿಸ್ಸಾರ ಪೆರೇರಾ ೫೫ಕ್ಕೆ ೫) ಶ್ರೀಲಂಕಾ: ೪೧.೨ ಓವರ್‌ಗಳಲ್ಲಿ ೧೫೮ (ಉಪುಲ್ ತರಂಗ ೩೬, ಧನಂಜಯ ೨೩, ಪೆರೇರಾ ೨೮; ಮುಜೀಬ್ ಉರ್ ರೆಹಮಾನ್ ೩೨ಕ್ಕೆ ೨, ಮೊಹಮದ್ ನಬಿ ೩೦ಕ್ಕೆ ೨, ರಶೀದ್ ಖಾನ್ ೨೬ಕ್ಕೆ ೨) ಫಲಿತಾಂಶ: ಆಫ್ಘಾನಿಸ್ತಾನಕ್ಕೆ ೯೧ ರನ್ ಗೆಲುವು ಪಂದ್ಯಶ್ರೇಷ್ಠ: ರಹಮದ್ ಶಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More