ಏಷ್ಯಾ ಕಪ್| ಆಲ್ರೌಂಡರ್‌ಗಳ ಭಾರತಕ್ಕೆ ಸಾಟಿಯಾಗದ ಪಾಕ್‌ಗೆ ಹೀನಾಯ ಸೋಲು!

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಭುತ್ವ ಮೆರೆದ ಭಾರತ ತಂಡ, ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಬುಧವಾರ (ಸೆ ೧೯) ನಡೆದ ಮಹತ್ವಪೂರ್ಣ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಲ್ರೌಂಡ್ ಆಟದೊಂದಿಗೆ ೮ ವಿಕೆಟ್ ಗೆಲುವು ಪಡೆದು ಬೀಗಿತು

ಈ ಬಾರಿಯ ಏಷ್ಯಾಕಪ್ ವೇಳಾಪಟ್ಟಿ ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ವೇಳಾಪಟ್ಟಿಗೆ ಬಿಸಿಸಿಐ ಅಪಸ್ವರ ತೆಗೆದಿತ್ತು. ಕಾರಣ ಒಂದರ ಹಿಂದೊಂದರಂತೆ ಎರಡು ಪಂದ್ಯಗಳನ್ನು ಆಡಬೇಕಾದದ್ದಕ್ಕೆ ಬಿಸಿಸಿಐ ತಗಾದೆ ತೆಗೆದಿತ್ತು. ಅದಕ್ಕೆ ತಕ್ಕಂತೆ ಭಾರತ ತಂಡ ಕೂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ತುಸು ಪ್ರಯಾಸದಾಯಕ ಗೆಲುವನ್ನೇ ಕಂಡಿತ್ತು. ಒಂದೊಮ್ಮೆ ಪಾಕ್ ವಿರುದ್ಧ ಭಾರತ ತಂಡ ಏನಾದರೂ ಸೋತಿದ್ದರೆ ವೇಳಾಪಟ್ಟಿಯ ಕುರಿತು ಇನ್ನಷ್ಟು ವಾಗ್ವಾದ ನಡೆಯುತ್ತಿತ್ತು.

ಸದ್ಯ, ಅದಾವುದಕ್ಕೂ ಆಸ್ಪದವಿಲ್ಲದಂತೆ ಭಾರತ ತಂಡ, ಪಾಕ್ ತಂಡವನ್ನು ಮಣಿಸುವುದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ ಪಾಕ್ ನೀಡಿದ್ದ ೧೬೩ ರನ್ ಗುರಿಯನ್ನು ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ, ಆರಂಭಿಕರನ್ನು ಕಳೆದುಕೊಂಡರೂ, ಬಳಿಕ ೮ ವಿಕೆಟ್‌ಗಳ ಸುನಾಯಾಸ ಗೆಲುವಿನೊಂದಿಗೆ ನಗೆಬೀರಿತು.

ಅಂದಹಾಗೆ, ಟೂರ್ನಿಯ ಆರಂಭಿಕ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್ ವಿರುದ್ಧ ತಡಬಡಾಯಿಸಿ ಕೇವಲ ೨6 ರನ್ ಅಂತರದಿಂದ ಗೆದ್ದು ನಿಡುಸುಯ್ದಿದ್ದ ರೋಹಿತ್ ಶರ್ಮಾ ಪಡೆ, ಎರಡನೇ ಪಂದ್ಯದಲ್ಲಿ ಸಂಪೂರ್ಣ ಬೇರೆಯದೇ ಸ್ವರೂಪದಲ್ಲಿ ಕಾದಾಡಿದ್ದು ಗಮನಾರ್ಹ. 286 ರನ್ ಗುರಿ ನೀಡಿದರೂ, ಹಾಂಕಾಂಗ್‌ ಎದುರು ಇದೇ ಬೌಲಿಂಗ್ ಪಡೆ ತಡವರಿಸಿತ್ತು. ಹಾಂಕಾಂಗ್ ವೀರೋಚಿತ ಹೋರಾಟ ನಡೆಸಿ ಭಾರತದಂಥ ಬಲಿಷ್ಠ ತಂಡದೆದುರು ಅಲ್ಪ ರನ್‌ಗಳಿಂದ ಸೋತಿತ್ತು. ಆದರೆ, ಸಕಾಲದಲ್ಲಿ ಭಾರತ ತಂಡ ಪುಟಿದೆದ್ದದ್ದು ಅದೂ ಪಾಕ್ ತಂಡದೆದುರು ಆಲ್ರೌಂಡ್ ಆಟದಿಂದ ಮಿಂಚಿದ್ದು ಸ್ಮರಣೀಯವೆನಿಸಿತು.

ಪೆಚ್ಚಾದ ಪಾಕ್ ಕಪ್ತಾನ!

ಇದನ್ನೂ ಓದಿ : ಏಷ್ಯಾಕಪ್ ವಿಡಿಯೋ | ೧೬೨ ರನ್‌ಗಳಿಗೆ ಪಾಕ್ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದ ಭಾರತದ ಬೌಲರ್‌ಗಳು

ಪ್ರಸ್ತುತ ಟೂರ್ನಿಗೆ ವಿರಾಟ್ ಕೊಹ್ಲಿ ಅಲಭ್ಯವಾಗಿರುವುದರಿಂದ ಸುಲಭವಾಗಿ ಭಾರತದ ವಿರುದ್ಧ ಗೆಲುವು ಸಾಧಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ಪಾಕ್ ತಂಡ, ಭಾರತದ ಆಲ್ರೌಂಡ್ ಆಟದೆದುರು ಮಂಕಾಯಿತು. ಸರ್ಫರಾಜ್ ಅಹಮದ್ ಅಂತೂ, ಪಂದ್ಯದ ಮೂರೂ ವಿಭಾಗಗಳಲ್ಲೂ ಭಾರತ ತಂಡದ ಆಕ್ರಮಣಕಾರಿ ಆಟಕ್ಕೆ ಸಿಲುಕಿದ್ದನ್ನು ಕಂಡು ಕಕ್ಕಾಬಿಕ್ಕಿಯಾದರು.

ರೋಹಿತ್ ಶರ್ಮಾ ಆಕ್ರಮಣಕಾರಿ ಆಟದಲ್ಲೇ ಮನೋಜ್ಞ ಅರ್ಧಶತಕ ಸಿಡಿಸಿ ಇನ್ನಿಂಗ್ಸ್‌ನ ೧೪ನೇ ಓವರ್‌ನ ಮೊದಲ ಎಸೆತದಲ್ಲಿ ಶಾದಾಬ್ ಖಾನ್‌ಗೆ ಬೌಲ್ಡ್ ಆಗಿ ಹೊರನಡೆದರೆ, ಕೇವಲ ನಾಲ್ಕು ರನ್‌ಗಳ ಅಂತರದಿಂದ ಧವನ್ ಅರ್ಧಶತಕ ವಂಚಿತರಾದರು. ಫಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಬಾಬರ್ ಆಜಮ್‌ಗೆ ಧವನ್ ಕ್ಯಾಚಿತ್ತು ನಿರ್ಗಮಿಸಿದ ನಂತರ ಅಂಬಟಿ ರಾಯುಡು (೩೧: ೪೬ ಎಸೆತ, ೩ ಬೌಂಡರಿ), ದಿನೇಶ್ ಕಾರ್ತಿಕ್ (೩೧: ೩೭ ಎಸೆತ, ೨ ಬೌಂಡರಿ, ೧ ಸಿಕ್ಸರ್) ಮೂರನೇ ವಿಕೆಟ್‌ಗೆ ಅಜೇಯ ೬೦ ರನ್ ಕಲೆಹಾಕಿ ಭಾರತಕ್ಕೆ ಭವ್ಯ ಗೆಲುವು ತಂದಿತ್ತರು.

ಆರಂಭದಲ್ಲೇ ಆರ್ಭಟ

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸರ್ಫರಾಜ್ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗುವಂತೆ ಮಾಡಿದ್ದು ಭಾರತದ ಬೌಲಿಂಗ್ ಪಡೆ. ಮಧ್ಯಮ ವೇಗಿ ಭುವನೇಶ್ವರ್ ಪ್ರಚಂಡ ಸ್ಪೆಲ್‌ನಲ್ಲಿ ಶುರುವಾದ ಪಾಕ್ ಬ್ಯಾಟಿಂಗ್ ಪಡಿಪಾಟಲು ನಿಗದಿತ ೫೦ ಓವರ್‌ಗಳನ್ನೂ ಮುಗಿಸಲು ಬಿಡಲಿಲ್ಲ. ಶುರುವಿನಲ್ಲಿ ಭುವಿಯ ಕಾಟಕ್ಕೆ ಪತರಗುಟ್ಟಿದ್ದ ಪಾಕ್, ನಿರ್ಣಾಯಕ ಘಟ್ಟದಲ್ಲಿ ಸ್ಪಿನ್ನರ್‌ ಕೇದಾರ್ ಜಾಧವ್ ಕೈಚಳಕಕ್ಕೆ ಸಿಲುಕಿ ಕಂಗೆಟ್ಟಿತು.

ಆರಂಭಿಕರಾದ ಇಮಾಮ್ ಉಲ್ ಹಕ್ (೨) ಮತ್ತು ಫಕಾರ್ ಜಮಾನ್ (೦) ವಿಕೆಟ್ ಕಳೆದುಕೊಂಡ ಪಾಕ್‌ಗೆ ಅನುಭವಿ ಆಟಗಾರ ಶೋಯೆಬ್ ಮಲಿಕ್ ಮತ್ತು ಬಾಬರ್ ಆಜಮ್ ಆಸರೆಯಾದರು. ನಿಧಾನಗತಿಯಲ್ಲಿ ಇವರಿಬ್ಬರೂ ಭಾರತದ ನಿಖರ ಮತ್ತು ಕರಾರುವಾಕ್ ವೇಗ ಮತ್ತು ಸ್ಪಿನ್ ಬೌಲಿಂಗ್‌ಗೆ ದಿಟ್ಟ ಉತ್ತರ ನೀಡುವ ಸುಳಿವು ನೀಡಿದರು. ಆದರೆ, ಕುಲದೀಪ್ ಯಾದವ್, ಬಾಬರ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರೆ, ಶೋಯೆಬ್ ಮಲಿಕ್, ಜಾಧವ್ ಓವರ್‌ನಲ್ಲಿ ರನೌಟ್ ಆಗಿ ಹೊರನಡೆದದ್ದು ಪಾಕ್ ಇನ್ನಿಂಗ್ಸ್‌ ಮತ್ತೆ ಚೇತರಿಸಿಕೊಳ್ಳದಂತೆ ಮಾಡಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: ೪೩.೧ ಓವರ್‌ಗಳಲ್ಲಿ ೧೬೨ (ಬಾಬರ್ ಆಜಮ್ ೪೭, ಶೋಯೆಬ್ ಮಲಿಕ್ ೪೩; ಭುವನೇಶ್ವರ್ ಕುಮಾರ್ ೧೫ಕ್ಕೆ ೩, ಕೇದಾರ್ ಜಾಧವ್ ೨೩ಕ್ಕೆ ೩); ಭಾರತ: ೨೯ ಓವರ್‌ಗಳಲ್ಲಿ ೧೬೪/೨ (ರೋಹಿತ್ ಶರ್ಮಾ ೫೨, ಶಿಖರ್ ಧವನ್ ೪೬, ಅಂಬಟಿ ರಾಯುಡು ೩೧*, ದಿನೇಶ್ ಕಾರ್ತಿಕ್ ೩೧*; ಶಾದಾಬ್ ಖಾನ್ ೬ಕ್ಕೆ ೧, ಫಹೀಮ್ ಅಶ್ರಫ್ ೩೧ಕ್ಕೆ ೧); ಫಲಿತಾಂಶ: ಭಾರತಕ್ಕೆ ೮ ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಶಿಖರ್ ಧವನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More