ಇಂಡೋ-ಪಾಕ್ ಕ್ರಿಕೆಟ್ ಕಾದಾಟದ ರೋಚಕ ಕ್ಷಣಗಳ ಐತಿಹಾಸಿಕ ಹಿನ್ನೋಟ 

ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಕಾದಾಟಕ್ಕೆ ವೇದಿಕೆ ಒದಗಿಸಿರುವ ಏಷ್ಯಾಕಪ್‌ನ ಆರಂಭಿಕ ಪಂದ್ಯವನ್ನು ಭಾರತ ತಂಡ ದುರ್ಬಲ ಹಾಂಕಾಂಗ್ ವಿರುದ್ಧ ೨೬ ರನ್ ಪ್ರಯಾಸದ ಜಯ ಸಾಧಿಸಿದೆ. ಭಾರತ ಹಾಗೂ ಪಾಕ್ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಹಿಂದಿನ ಕೆಲ ಆಯ್ದ ಪಂದ್ಯಗಳ ಸಂಕ್ಷಿಪ್ತ ಚಿತ್ರಣವಿಲ್ಲಿದೆ

ಭಾರತ ಮತ್ತು ಪಾಕಿಸ್ತಾನ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಿಸದೆ ಇರುವುದು ಇಂಡೋ-ಪಾಕ್ ತಂಡಗಳ ಕ್ರಿಕೆಟ್‌ ಅನ್ನೂ ಮಸುಕಾಗಿಸಿದೆ. ಹೀಗಾಗಿ ಈ ಸಾಂಪ್ರದಾಯಿಕ ಸ್ಪರ್ಧಿಗಳ ಕ್ರಿಕೆಟ್ ಕಾದಾಟಕ್ಕೆ ಐಸಿಸಿ ಮತ್ತು ಎಸಿಸಿಯ ಪಂದ್ಯಾವಳಿಗಳಷ್ಟೇ ವೇದಿಕೆಯಾಗಿದೆ. ಕ್ರಿಕೆಟ್ ಮೈದಾನದಲ್ಲಿ ಇಂಡೋ-ಪಾಕ್ ಪ್ರತಿ ಬಾರಿ ಮುಖಾಮುಖಿಯಾದಾಗಲೂ ಪಂದ್ಯ ಉದ್ವಿಗ್ನತೆಯ ಹಾಗೂ ಉದ್ರಿಕ್ತತೆಯ ಗೂಡಾಗಿರುತ್ತದೆ. ಏಷ್ಯಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಹಿಂದೆ ಐದು ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಒಂದೊಂದು ಪಂದ್ಯಗಳೂ ಒಂದೊಂದು ಕತೆ ಹೇಳುತ್ತವೆ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್

ಕಳೆದ ವರ್ಷ ಜೂನ್ ೧೮ರಂದು ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಡೆಯ ಬಾರಿಗೆ ಎದುರಾಗಿದ್ದವು. ಮತ್ತದೇ ಉದ್ವಿಗ್ನತೆಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, ೫೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೩೩೮ ರನ್ ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಭಾರತ ತಂಡ, ಪಾಕ್ ಬೌಲರ್‌ಗಳ ಪ್ರಚಂಡ ದಾಳಿಗೆ ಸಿಲುಕಿ ೩೦.೩ ಓವರ್‌ಗಳಲ್ಲಿ ೧೫೮ ರನ್‌ಗಳಿಗೆ ಸರ್ವಪತನ ಕಂಡಿತ್ತು. ಪಾಕಿಸ್ತಾನ ೧೮೦ ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಐಸಿಸಿ ಟ್ರೋಫಿ ಎತ್ತಿಹಿಡಿದಿತ್ತು.

ಇದನ್ನೂ ಓದಿ : ಇಂಡೋ-ಪಾಕ್ ಕ್ರಿಕೆಟ್‌ ವೈಷಮ್ಯದ್ದಲ್ಲ; ಗೆಳೆತನದ ಕೊಂಡಿಯೂ ಹೌದು 

ಶತಕ ವಂಚಿತರಾದರೂ ಭಾರತ ಗೆಲ್ಲಿಸಿದ ರೋಹಿತ್

ಇದೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಗುಂಪು ಹಂತದಲ್ಲಿ ಜೂನ್ ೪ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಜಯಭೇರಿ ಬಾರಿಸಿತ್ತು. ಮಳೆಯಿಂದಾಗಿ ೪೮ ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ೩ ವಿಕೆಟ್ ಗೆ ೩೧೯ ರನ್ ಗಳಿಸಿತು. ೧೧೯ ಎಸೆತಗಳಲ್ಲಿ ೯೧ ರನ್ ಗಳಿಸಿದ ರೋಹಿತ್ ಶರ್ಮಾ ಟಾಪ್ ಸ್ಕೋರರ್ ಎನಿಸಿದರು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ, ೩೩.೪ ಓವರ್‌ಗಳಲ್ಲಿ ೧೬೪ ರನ್‌ ಗಳಿಸಲಷ್ಟೇ ಶಕ್ತವಾಯಿತು. ಅಜರ್ ಅಲಿ ೫೦ ರನ್ ಗಳಿಸಿದ್ದು ಬಿಟ್ಟರೆ ಮಿಕ್ಕ ಆಟಗಾರರು ಯಶಸ್ವಿ ಪ್ರದರ್ಶನ ನೀಡಲಿಲ್ಲ. ಉಮೇಶ್ ಯಾದವ್ ೩೦೦ಕ್ಕೆ ೩ ವಿಕೆಟ್ ಉರುಳಿಸಿದರು. ಅಂತಿಮವಾಗಿ ಡಕ್‌ವರ್ತ್ ನಿಯಮಾನುಸಾರ ಭಾರತ ೧೨೪ ರನ್ ಗೆಲುವು ಪಡೆಯಿತು.

ಪಾಕ್‌ಗೆ ವಿರಾಟ್ ದರ್ಶನ!

೨೦೧೬ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಫೆಬ್ರವರಿ ೨೭ರಂದು ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಇನ್ನೂ ೨೭ ಎಸೆತಗಳು ಬಾಕಿ ಇರುವಂತೆಯೇ ೫ ವಿಕೆಟ್ ಸುಲಭ ಗೆಲುವು ಸಾಧಿಸಿತ್ತು. ಜಸ್ಪ್ರೀತ್ ಬುಮ್ರಾ (೮ಕ್ಕೆ ೧) ಮತ್ತು ಹಾರ್ದಿಕ್ ಪಾಂಡ್ಯ (೮ಕ್ಕೆ ೩) ಪ್ರಚಂಡ ದಾಳಳಿಗೆ ನಲುಗಿದ ಪಾಕ್ ತಂಡ, ನಿರಾಶಾದಾಯಕ ಬ್ಯಾಟಿಂಗ್‌ನಿಂದ ದಯನೀಯ ಸೋಲಪ್ಪಿತು. ೮೪ ರನ್ ಚೇಸಿಂಗ್‌ನಲ್ಲಿ ಭಾರತ ಸುಲಭ ಗೆಲುವು ಸಾಧಿಸುತ್ತದೆ ಎಂದುಕೊಂಡರೂ, ಭಾರತ ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ, ವಿರಾಟ್ ಕೊಹ್ಲಿ (೪೯) ಜವಾಬ್ದಾರಿಯುತ ಸೊಗಾದ ಬ್ಯಾಟಿಂಗ್ ತಂಡಕ್ಕೆ ಗೆಲುವು ತಂದಿತ್ತಿತು.

ವಿಶ್ವಕಪ್‌ನಲ್ಲಿ ಮುಂದುವರೆದ ಅಜೇಯ ಯಾತ್ರೆ

ಐತಿಹಾಸಿಕ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ೧೮ ಓವರ್‌ಗಳ ಪಂದ್ಯದಲ್ಲಿ ಸುಗಮ ಬ್ಯಾಟಿಂಗ್‌ಗೆ ಪಿಚ್ ಯೋಗ್ಯವಾಗಿರಲಿಲ್ಲ. ಅಪಾಯಕಾರಿ ತಿರುವಿನಿಂದ ಕೂಡಿದ್ದ ಪಿಚ್‌ನಲ್ಲಿ ಗೆಲುವು ಯಾರದ್ದಾಗುತ್ತದೆ ಎಂಬುದು ಕೂಡಾ ದಿಗಿಲು ತರಿಸಿತ್ತು. ಇಲ್ಲಿಯೂ ಯುವ ಅಟಗಾರ ಕೊಹ್ಲಿಯ ಎಚ್ಚರಿಕೆ ಮತ್ತು ಜವಾಬ್ದಾರಿಯುತ ಇನ್ನಿಂಗ್ಸ್ ಭಾರತದ ಗೆಲುವಿಗೆ ನೆರವಾಯಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ೫ ವಿಕೆಟ್‌ಗೆ ೧೧೮ ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಕೊಹ್ಲಿ ದಾಖಲಿಸಿದ ಅಜೇಯ ೫೫ ರನ್‌ಗಳಿಂದ ಭಾರತ ತಂಡ ಇನ್ನೂ ೧೩ ಎಸೆತಗಳು ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಇದರೊಂದಿಗೆ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ, ಪಾಕ್ ವಿರುದ್ಧದ ಅಜೇಯ ಯಾತ್ರೆ ಮುಂದುವರೆಸಲು ನೆರವಾಯಿತು.

ಐಸಿಸಿ ವಿಶ್ವಕಪ್‌ನಲ್ಲಿ ಮುಂದುವರೆದ ಪಾಕ್ ಪರದಾಟ!

೨೦೧೫ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ ಭಾರತ ತಂಡ, ೭೬ ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತು. ಈ ಬಾರಿಯಾದರೂ, ವಿಶ್ವಕಪ್‌ನಲ್ಲಿ ಭಾರತದ ಎದುರು ಅನುಭವಿಸಿದ ಸೋಲಿನ ಸರಪಳಿಯನ್ನು ತುಂಡರಿಸುವ ಸಂಕಲ್ಪ ತೊಟ್ಟಿದ್ದ ಪಾಕ್‌ಗೆ ನಿರಾಸೆ ಕಾಡಿತು.. ಈ ಪಂದ್ಯದಲ್ಲಿ ಕೊಹ್ಲಿ ೧೦೭ ರನ್ ಗಳಿಸಿ ೫೦ ಓವರ್‌ಗಳಲ್ಲಿ ಭಾರತ ೭ ವಿಕೆಟ್ ನಷ್ಟಕ್ಕೆ ೩೦೦ ರನ್ ಕಲೆಹಾಕಲು ನೆರವಾದರು. ಭಾರತ ನೀಡಿದ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ, ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆದರೆ, ಅಹಮದ್ ಶೆಹಜಾದ್ ಹಾಗೂ ಹ್ಯಾರಿಸ್ ಸೊಹೈಲ್ ೬೮ ರನ್ ಜತೆಯಾಟದಿಂದ ತಂಡಕ್ಕೆ ಗೆಲುವು ತಂದೀಯುವ ಭರವಸೆ ಮುಡಿಸಿದರೂ, ಅಂತಿಮವಾಗಿ ೨೨೪ ರನ್‌ಗಳಿಗೆ ಆಲೌಟ್ ಆಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More