ಚೀನಾ ಓಪನ್ ಬ್ಯಾಡ್ಮಿಂಟನ್| ಮೊದಲ ಸುತ್ತಲ್ಲೇ ಹೊರಬಿದ್ದ ಸೈನಾ ನೆಹ್ವಾಲ್

ಇತ್ತೀಚೆಗೆ ಮುಕ್ತಾಯ ಕಂಡ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಚೀನಾ ಓಪನ್ ಬ್ಯಾಡ್ಮಿಂಟನ್‌ನ ಮೊದಲ ಸುತ್ತಲ್ಲೇ ನಿರ್ಗಮಿಸಿದ್ದಾರೆ. ಆದರೆ, ಏಷ್ಯಾಡ್ ರಜತ ವಿಜೇತೆ ಪಿ ವಿ ಸಿಂಧು ಪ್ರೀಕ್ವಾರ್ಟರ್‌ ತಲುಪುವಲ್ಲಿ ಯಶಸ್ವಿಯಾದರು

ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ. ಏಷ್ಯಾಡ್‌ನಲ್ಲಿ ಭಾಗವಹಿಸಿದ ನಂತರ ನಡೆದ ಜಪಾನ್ ಓಪನ್‌ನಿಂದ ವಿಶ್ರಾಂತಿ ಪಡೆದಿದ್ದ ಸೈನಾ ನೆಹ್ವಾಲ್, ಚೀನಾ ಓಪನ್‌ನಲ್ಲಿ ಪ್ರಶಸ್ತಿ ಸುತ್ತು ತಲುಪುವ ವಿಶ್ವಾಸದಲ್ಲಿದ್ದರಾದರೂ, ಆಕೆ ಕೊರಿಯಾ ಆಟಗಾರ್ತಿ ಸುಂಗ್ ಜಿ ಹ್ಯುನ್ ವಿರುದ್ಧದ ಹಣಾಹಣಿಯಲ್ಲಿ ೧೩-೨೧, ೨೧-೧೩, ೨೧-೧೨ರಿಂದ ಸೋಲನುಭವಿಸಿದರು.

೪೮ ನಿಮಿಷಗಳ ಕಾದಾಟದಲ್ಲಿ ಸೈನಾ ಮೊದಲ ಗೇಮ್‌ನಲ್ಲಿ ಸೋತರೂ, ಎರಡನೇ ಗೇಮ್‌ನಲ್ಲಿ ಪುಟಿದೆದ್ದರು. ಆದರೆ, ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಆಕೆ ನೀರಸ ಪ್ರದರ್ಶನ ನೀಡಿದರು. ಕೊರಿಯಾ ಆಟಗಾರ್ತಿ ಸೈನಾ ಅವರಲ್ಲಿನ ದೌರ್ಬಲ್ಯವನ್ನು ಲಾಭವಾಗಿಸಿಕೊಂಡು ಜಯಭೇರಿ ಬಾರಿಸಿದರು.

ಇನ್ನು, ಚಾಂಗ್ಜೌನಲ್ಲಿ ಮಂಗಳವಾರ (ಸೆ ೧೮) ಶುರುವಾದ ಪಂದ್ಯಾವಳಿಯಲ್ಲಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನ ರಜತ ವಿಜೇತೆ ಸಿಂಧು ಮೊದಲ ಸುತ್ತಲ್ಲಿ ಸುಲಭ ಗೆಲುವು ಸಾಧಿಸಿದರು. ವಿಶ್ವದ ೩೯ನೇ ಶ್ರೇಯಾಂಕಿತ ಆಟಗಾರ್ತಿ ಜಪಾನ್‌ನ ಸಯೀನಾ ಕವಾಕಮಿ ವಿರುದ್ಧ ೨೧-೧೫, ೨೧-೧೩ರ ಎರಡು ನೇರ ಗೇಮ್‌ಗಳಲ್ಲಿ ಸಿಂಧು ಜಯಭೇರಿ ಬಾರಿಸಿದರು.

ಇದನ್ನೂ ಓದಿ : ಫೆಡರರ್ ನಿಶ್ಚಿಂತೆಯಿಂದ ಮಲಗುವಂತೆ ನನ್ನಿಂದ ಮಲಗಲಾಗಲಿಲ್ಲ: ಸೈನಾ ನೆಹ್ವಾಲ್

ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿ ಕೂಡ ಎರಡನೇ ಸುತ್ತಿಗೆ ಧಾವಿಸಿತು. ರಾಷ್ಟ್ರೀಯ ಚಾಂಪಿಯನ್ ಜೋಡಿ ಮನು ಮತ್ತು ಸುಮೀತ್, ಚೈನೀಸ್ ತೈಪೆ ಜೋಡಿ ಲಿಯಾವೊ ಮಿನ್ ಚುನ್ ಮತ್ತು ಸು ಚಿಂಗ್ ಹೆಂಗ್ ವಿರುದ್ಧ ೧೩-೨೧, ೨೧-೧೩, ೨೧-೧೨ರಿಂದ ಜಯ ಸಾಧಿಸಿದರು.

ಅಂದಹಾಗೆ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ೨೦೧೪ರ ಚಾಂಪಿಯನ್ ಸೈನಾ, ಕೊರಿಯಾ ಆಟಗಾರ್ತಿ ಎದುರು ಮಾನಸಿಕವಾಗಿ ಸ್ಥಿರ ಆಟವಾಡಲು ಸಾಧ್ಯವಾಗದೆ ಸೋತರು. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಗೇಮ್‌ನಲ್ಲಿ ಆಕೆ ತಿರುಗೇಟು ನೀಡಿದರು. ಆದರೆ, ಕೊರಿಯಾ ಆಟಗಾರ್ತಿ ನಿರ್ಣಾಯಕ ಗೇಮ್‌ನಲ್ಲಿ ಆಕ್ರಮಣಕಾರಿಯಾಗಿ ಕಾದಾಡಿದರಲ್ಲದೆ, ಸೈನಾ ಎಸಗಿದ ತಪ್ಪುಗಳನ್ನು ಗೆಲುವಾಗಿ ಪರಿವರ್ತಿಸಿದರು,

ಇತ್ತ, ರಿಯೋ ಒಲಿಂಪಿಕ್ಸ್ ರನ್ನರ್ ಅಪ್ ಸಿಂಧುಗೆ ಸಯೀನಾ ಪ್ರಬಲ ಪೈಪೋಟಿ ನೀಡಿದರು. ಆದಾಗ್ಯೂ, ಮೊದಲ ಗೇಮ್‌ನಲ್ಲಿ ಸಿಂಧು ೧೩-೭ ಮುನ್ನಡೆಯೊಂದಿಗೆ ವಿಜೃಂಭಿಸಿದರು. ಆಕರ್ಷಕ ಹಾಗೂ ಆಕ್ರಮಣಕಾರಿ ರ್ಯಾಲಿಗಳಲ್ಲಿ ವಿಜೃಂಭಿಸಿದ ಸಿಂಧು ಹೆಚ್ಚು ಪ್ರಯಾಸವಿಲ್ಲದೆಯೇ ಮೊದಲ ಗೇಮ್ ಅನ್ನು ವಶಕ್ಕೆ ಪಡೆದರು. ಆದರೆ, ಎರಡನೇ ಗೇಮ್‌ನಲ್ಲಿ ೬-೦ ಯಿಂದ ಸಿಂಧು ವಿಜೃಂಭಿಸಿದರಾದರೂ, ಸಯೀನಾ ಒಡನೆಯೇ ತಿರುಗಿಬಿದ್ದು ೮-೧೦ಕ್ಕೆ ಅಂತರವನ್ನು ಕುಗ್ಗಿಸಿದರು. ಆದರೆ, ವಿರಾಮದ ಹೊತ್ತಿಗೆ ೧೫-೧೧ರಿಂದ ಮುನ್ನಡೆ ಗಳಿಸಿದ ಸಿಂಧು ಆನಂತರ ೨೦-೧೨ರಿಂದ ಪ್ರಭುತ್ವ ಮೆರೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More