ಚೀನಾ ಓಪನ್ ಬ್ಯಾಡ್ಮಿಂಟನ್: ಶುಭಾರಂಭ ಮಾಡಿದ ಶ್ರೀಕಾಂತ್, ಪ್ರಣಯ್‌ಗೆ ಆಘಾತ

ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಿಡಾಂಬಿ ಶ್ರೀಕಾಂತ್ ಶುಭಾರಂಭ ಮಾಡಿದರು. ಅಂತೆಯೇ, ಮಿಶ್ರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಜೋಡಿ ಕೂಡ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ ಮುನ್ನಡೆ ಗಳಿಸಿತು

ಅಸ್ಥಿರ ಆಟದಿಂದ ಕಂಗೆಟ್ಟು ಹೋಗಿರುವ ಭಾರತದ ಸ್ಟಾರ್ ಆಟಗಾರ ಕಿಡಾಂಬಿ ಶ್ರೀಕಾಂತ್ ಚೀನಾ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೆ ಕಾಲಿರಿಸಿದರು. ಬುಧವಾರ (ಸೆ ೧೯) ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಡೆನ್ಮಾರ್ಕ್‌ ಆಟಗಾರ ರಾಸ್ಮುಸ್ ಗೆಮ್ಕೆ ವಿರುದ್ಧ ೨೧-೯, ೨೧-೧೯ರ ಎರಡು ನೇರ ಗೇಮ್‌ಗಳಲ್ಲಿ ಶ್ರೀಕಾಂತ್ ಗೆಲುವು ಸಾಧಿಸಿದರು.

ಏಳನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ವಿಶ್ವದ ೨೮ನೇ ಶ್ರೇಯಾಂಕಿತ ಆಟಗಾರ ಸಪ್ಪನ್ಯು ಅವಿಹಿಂಗ್‌ಸನೋನ್ ವಿರುದ್ಧ ಕಾದಾಡಲಿದ್ದಾರೆ. ಇದಕ್ಕೂ ಮುನ್ನ ದಿನದ ಮೊದಲಲ್ಲಿ ನಡೆದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಜೋಡಿ ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆಯಿತು.

ಇಂಡೋನೇಷ್ಯಾದ ವಿಶ್ವದ ೧೨ನೇ ಶ್ರೇಯಾಂಕಿತ ಜೋಡಿ ಮಾರ್ಕುಸ್ ಎಲ್ಲಿಸ್ ಹಾಗೂ ಲೌರೆನ್ ಸ್ಮಿತ್ ವಿರುದ್ಧ ೨೧-೧೩, ೨೨-೨೨, ೨೧-೧೭ರಿಂದ ಪೊನ್ನಪ್ಪ ಜೋಡಿ ಗೆಲುವು ಪಡೆಯಿತು. ಮೊದಲ ಗೇಮ್‌ನಲ್ಲಿ ಸುಲಭ ಗೆಲುವು ಪಡೆದ ಪೊನ್ನಪ್ಪ ಮತ್ತು ರಂಕಿರೆಡ್ಡಿ ಜೋಡಿಗೆ ಎರಡನೇ ಗೇಮ್‌ನಲ್ಲಿ ಇಂಡೋನೇಷ್ಯಾ ಜೋಡಿ ಪ್ರಬಲ ಪೈಪೋಟಿ ಒಡ್ಡಿ ಸಮಬಲ ಸಾಧಿಸಿತು. ಇನ್ನು, ನಿರ್ಣಾಯಕ ಗೇಮ್‌ನಲ್ಲಿಯೂ ಮಾರ್ಕುಸ್ ಜೋಡಿ ಅಶ್ವಿನಿ ಜೋಡಿಗೆ ಮುಳುವಾಗುವ ಸೂಚನೆ ನೀಡಿತು. ಆದರೆ, ಒತ್ತಡದ ಸಂದರ್ಭವನ್ನು ಅಶ್ವಿನಿ ಮತ್ತು ರಂಕಿರೆಡ್ಡಿ ಯಶಸ್ವಿಯಾಗಿ ಹತ್ತಿಕ್ಕಿ ಎರಡನೇ ಸುತ್ತಿಗೆ ಮುನ್ನಡೆದರು.

ಇದನ್ನೂ ಓದಿ : ಚೀನಾ ಓಪನ್ ಬ್ಯಾಡ್ಮಿಂಟನ್| ಮೊದಲ ಸುತ್ತಲ್ಲೇ ಹೊರಬಿದ್ದ ಸೈನಾ ನೆಹ್ವಾಲ್

ಅಶ್ವಿನಿಗೆ ಮಿಶ್ರಫಲ

ಮಿಶ್ರ ಡಬಲ್ಸ್‌ನಲ್ಲಿ ಗೆಲುವು ಸಾಧಿಸಿದರೂ, ವನಿತೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ನಿರಾಸೆ ಅನುಭವಿಸಿದರು. ದಕ್ಷಿಣ ಕೊರಿಯಾದ ಕಿಮ್ ಸೊ ಯಿಯೊಂಗ್ ಮತ್ತು ಕಾಂಗ್ ಹೀ ಯೊಂಗ್ ವಿರುದ್ಧ ಅಶ್ವಿನಿ ಪೊನ್ನಪ್ಪ ಮತ್ತು ಸಿಕಿ ರೆಡ್ಡಿ ಜೋಡಿ ೧೦-೨೧, ೧೮-೨೧ರ ಎರಡು ನೇರ ಗೇಮ್‌ಗಳಲ್ಲಿ ಸೋಲನುಭವಿಸಿತು.

ಇನ್ನು, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತ ಆರಂಭಿಕ ಸುತ್ತಿನಿಂದಲೇ ಹೊರಬಿದ್ದಿತು.. ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ೧೯-೨೧, ೨೦-೨೨ರ ಎರಡು ನೇರ ಗೇಮ್‌ಗಳಲ್ಲಿ ಮಲೇಷ್ಯಾದ ಗೊಹ್ ವಿ ಶೆಮ್ ಮತ್ತು ಟಾನ್ ವೀ ಕಿಯೊಂಗ್ ವಿರುದ್ಧ ಚಿರಾಗ್ ಜೋಡಿ ಸೋಲನುಭವಿಸಿತು. ಎರಡೂ ಗೇಮ್‌ಗಳಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರಾದರೂ, ಮಲೇಷಿಯಾ ಜೋಡಿ ಕೂದಲೆಳೆಯ ಅಂತರದಲ್ಲಿ ಗೆಲುವು ಸಾಧಿಸಿತು.

ನಿರ್ಗಮಿಸಿದ ಪ್ರಣಯ್

ಇತ್ತ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್ ಎಸ್ ಪ್ರಣಯ್ ಕೂಡ ಸೋಲಿಗೆ ಪಕ್ಕಾದರು. ಹಾಂಕಾಂಗ್ ಆಟಗಾರ ಕಾ ಲಾಂಗ್ ಆ್ಯಂಗುಸ್ ವಿರುದ್ಧದ ಹಣಾಹಣಿಯಲ್ಲಿ ೧೬-೨೧, ೧೨-೨೧ರಿಂದ ಪ್ರಣಯ್ ಪರಾಭವಗೊಂಡರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಹಾಂಕಾಂಗ್ ಆಟಗಾರನ ಎದುರು ಪ್ರಣಯ್ ಪಂದ್ಯದ ಯಾವುದೇ ಹಂತದಲ್ಲೂ ಪುಟಿದೇಳಲಿಲ್ಲ.

ವಿಶ್ವದ ಹನ್ನೊಂದನೇ ಶ್ರೇಯಾಂಕಿತ ಆಟಗಾರ ಆ್ಯಂಗುಸ್, ಹದಿಮೂರನೇ ಶ್ರೇಯಾಂಕಿತ ಆಟಗಾರನ ವಿರುದ್ಧ ಶುರುವಿನಿಂದಲೇ ಆಕ್ರಮಣಕಾರಿಯಾದರು. ಪ್ರಣಯ್ ಪಂದ್ಯದಲ್ಲಿ ಪುಟಿದೇಳಲು ಅವಕಾಶವೇ ಇಲ್ಲದಂತೆ ಕೇವಲ ೩೪ ನಿಮಿಷಗಳಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡು ಮುನ್ನಡೆ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More