ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

ಕರ್ನಾಟಕ ಕ್ರಿಕೆಟಿಗ ಮನೀಶ್ ಪಾಂಡೆ ಕ್ಷೇತ್ರರಕ್ಷಣೆಯಲ್ಲಿ ಹಲವಾರು ಬಾರಿ ಸಂಚಲನ ಮೂಡಿಸಿದ್ದಾರೆ. ರಣಜಿ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲೂ ಬೆರಗು ಮೂಡಿಸಿದ್ದಾರೆ. ಸದ್ಯ ಅವರು, ಪಾಕ್ ನಾಯಕ ಸರ್ಫರಾಜ್ ಅವರನ್ನು ಔಟ್ ಮಾಡಿದ ಪರಿ ಅಭಿಮಾನಿಗಳನ್ನು ದಂಗುಬಡಿಸಿದೆ

ಪಾಕಿಸ್ತಾನದ ಇನ್ನಿಂಗ್ಸ್ ಬಹುತೇಕ ತಳ ಕಚ್ಚಿಯಾಗಿತ್ತು. ನಿರ್ಣಾಯಕ ಘಟ್ಟದಲ್ಲಿ ಆಡಲಿಳಿದ ಪಾಕ್ ನಾಯಕ ಸರ್ಫರಾಜ್ ಅಹಮದ್ ತಂಡದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಲು ಯತ್ನಿಸಿದರಾದರೂ, ಅವರ ಹವಣಿಕೆಯನ್ನು ಕನ್ನಡಿಗ ಮನೀಶ್ ಪಾಂಡೆ ಸಂಚಲನಕಾರಿ ಫೀಲ್ಡಿಂಗ್‌ನಿಂದ ಹೊಸಕಿದರು. ಅವರ ಈ ಅಭೂತಪೂರ್ವ ಕ್ಯಾಚ್‌ಗೆ ಮಾಜಿ ಕ್ರಿಕೆಟಿಗ ಮೊಹಮದ್ ಕೈಫ್ ಸೇರಿದಂತೆ ಕ್ರಿಕೆಟ್ ಪ್ರೇಮಿಗಳು ಮಾರುಹೋಗಿ ಮನೀಶ್ ಪಾಂಡೆಯನ್ನು ಅಭಿನಂದಿಸಿದ್ದಾರೆ.

ವಾಸ್ತವವಾಗಿ, ಹದಿನಾಲ್ಕು ತಿಂಗಳ ಬಳಿಕ ಕ್ರಿಕೆಟ್ ಮೈದಾನದಲ್ಲಿ ಎದುರುಬದುರಾಗಿದ್ದ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಈ ಕಾದಾಟದಲ್ಲಿ ಪಾಕ್ ಫೇವರಿಟ್ ಎನಿಸಿತ್ತು. ಆದರೆ, ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಅತ್ಯಮೋಘ ಆಲ್ರೌಂಡ್ ಪ್ರದರ್ಶನದಿಂದ ಪಾಕ್‌ಗೆ ಆಘಾತಕಾರಿ ಸೋಲುಣಿಸಿ ಟೂರ್ನಿಯಲ್ಲಿ ಒಂದರ ಹಿಂದೊಂದರಂತೆ ಎರಡು ಗೆಲುವು ಸಾಧಿಸಿತು.

ಪಂದ್ಯದ ಪ್ರಮುಖ ಘಟ್ಟಗಳ ಪೈಕಿ ಮನೀಶ್ ಪಾಂಡೆಯ ಅಮೋಘ ಫೀಲ್ಡಿಂಗ್ ಕೂಡ ಮಹತ್ವಪೂರ್ಣ ಎನಿಸಿಕೊಂಡಿತು. ಲಾಂಗ್ ಆನ್ ಬೌಂಡರಿಯಲ್ಲಿ ಮನೀಶ್ ಪಾಕ್ ಕಪ್ತಾನನ್ನು ಔಟ್ ಮಾಡಲು ನಡೆಸಿದ ಚಮತ್ಕಾರಿ ಫೀಲ್ಡಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬಹುವಾಗಿ ಶ್ಲಾಘಿಸಲ್ಪಟ್ಟಿದೆ. ಅಂದಹಾಗೆ, ಇದೇ ಭಾನುವಾರ (ಸೆ.೨೩) ನಡೆಯಲಿರುವ ಸೂಪರ್ ನಾಲ್ಕರ ಘಟ್ಟದಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಲಿವೆ.

ಇದನ್ನೂ ಓದಿ : ಸಿಕ್ಕ ಅವಕಾಶ ಕಮ್ಮಿ ಎಂದ ಕನ್ನಡಿಗ ಮನೀಶ್ ಪಾಂಡೆಗೆ ಇನ್ನಷ್ಟು ನೀಡುವ ತುಡಿತ

“ಬದಲಿ ಫೀಲ್ಡರ್ ಆಗಿದ್ದ ಮನೀಶ್ ಪಾಂಡೆ, ಸರ್ಫರಾಜ್ ಅವರನ್ನು ಔಟ್ ಮಾಡುವಲ್ಲಿ ತೋರಿದ ಚಾಣಾಕ್ಷ ಫೀಲ್ಡಿಂಗ್ ಅತ್ಯಮೋಘವಾಗಿತ್ತು. ಅವರು ಕ್ಯಾಚ್ ಹಿಡಿದ ಪರಿಯಂತೂ ಚೇತೋಹಾರಿಯಾಗಿತ್ತು,” ಎಂದು ಮೋಹನ್‌ದಾಸ್ ಮೆನನ್ ಎಂಬುವರು ಟ್ವೀಟ್ ಮಾಡಿದ್ದಾರೆ.

“ಪಾಕ್ ನಾಯಕ ಸರ್ಫರಾಜ್ ಅಹಮದ್ ಸಿಕ್ಸರ್‌ನತ್ತ ಎತ್ತಿದ ಚೆಂಡನ್ನು ಮನೀಶ್ ಪಾಂಡೆ ಹಿಡಿದ ವೈಖರಿ ಅವರಲ್ಲಿನ ಫೀಲ್ಡಿಂಗ್ ಸಮತೋಲನವನ್ನು ಸಾರಿ ಹೇಳುತ್ತಿದೆ. ಅದೂ ಪಂದ್ಯದ ಕ್ಲಿಷ್ಟಕರ ಸಂದರ್ಭದಲ್ಲಿ ಮನೀಶ್ ಪಾಂಡೆಯ ಕ್ಯಾಚ್ ಅದ್ಭುತವಾಗಿತ್ತು,” ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಭಾರತ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಕ್ಷೇತ್ರರಕ್ಷಕ ಮೊಹಮದ್ ಕೈಫ್ ಟ್ವೀಟಿಸಿದ್ದಾರೆ.

“ಅರರೆ....ವಾಹ್... ಎಂಥ ಸ್ಮಾರ್ಟ್ ಕ್ಯಾಚ್. ಇಂಥದ್ದೊಂದು ಕ್ಯಾಚ್ ಪಡೆಯಲು ಮನೀಶ್ ಪಾಂಡೆ ಕ್ಷೇತ್ರರಕ್ಷಣೆಯಲ್ಲಿ ಅದೆಂಥ ಧ್ಯಾನಸ್ಥ ಸ್ಥಿತಿಯಲ್ಲಿದ್ದರೆಂಬುದಕ್ಕೆ ಸಾಕ್ಷಿಯಾಗಿದೆ,” ಎಂದು ವೈಶಾಲಿ ಥಕ್ಕರ್ ಎಂಬುವರು ಟ್ವೀಟ್ ಮಾಡಿದ್ದರೆ, “ಸಂಚಲನಕಾರಿ ಹಾಗೂ ನಂಬಲಸಾಧ್ಯವಾದ ಕ್ಯಾಚ್ ಪಡೆಯುವ ಸಾಹಸಕಾರಿ ಕಲೆಯನ್ನು ಮನೀಶ್ ಹವ್ಯಾಸ ಮಾಡಿಕೊಂಡಂತಿದೆ,’’ ಎಂದು ಮನೀಶ್ ಶರ್ಮಾ ಎಂಬುವರು ಟ್ವೀಟ್ ಮಾಡಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More