ಏಷ್ಯಾ ಕಪ್: ಗಾಯಾಳು ಹಾರ್ದಿಕ್ ಪಾಂಡ್ಯ ಜೊತೆಗೆ ಅಕ್ಷರ್, ಶಾರ್ದೂಲ್ ನಿರ್ಗಮನ 

ಬುಧವಾರ (ಸೆ.೧೯) ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬೆನ್ನುನೋವಿಗೆ ಗುರಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್ ಪಂದ್ಯಾವಳಿಯಿಂದಲೇ ವಂಚಿತರಾಗಿದ್ದಾರೆ. ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಅವರೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ್ದಾರೆ

ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಅಪ್ರಿಯ ಸಮಾಚಾರವೊಂದು ರಾಚಿದೆ. ಆಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ವಂಚಿತವಾಗಿದ್ದು, ದಾಖಲೆಯ ಏಳನೇ ಏಷ್ಯಾ ಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ ಪಡೆಗೆ ಕೊಂಚ ಹಿನ್ನಡೆ ತಂದಿದೆ.

ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಫೀಲ್ಡಿಂಗ್‌ನಲ್ಲಿ ನಿರತವಾಗಿದ್ದ ವೇಳೆ ಹಾರ್ದಿಕ್ ಪಾಂಡ್ಯ ಬೆನ್ನುನೋವಿನಿಂದಾಗಿ ಮೈದಾನದಲ್ಲೇ ಕುಸಿದುಬಿದ್ದಿದ್ದರು. ಎದ್ದು ನಡೆಯಲೂ ಆಗದ ಅವರನ್ನು ಸ್ಟ್ರೆಚರ್‌ನ ಸಹಾಯದೊಂದಿಗೆ ಸಿಬ್ಬಂದಿ ಮೈದಾನದಾಚೆ ಕರೆದೊಯ್ದಿದ್ದರು.

ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ಯುವ ಮಧ್ಯಮ ವೇಗಿ ದೀಪಕ್ ಚಾಹರ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಗುರುವಾರವೇ (ಸೆ.೨೦) ದುಬೈಗೆ ಪಯಣಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ ಇನ್ನಿಂಗ್ಸ್‌ನ ೧೮ನೇ ಓವರ್‌ ವೇಳೆ ಹಾರ್ದಿಕ್ ಗಾಯಗೊಂಡಿದ್ದರು. ತನ್ನ ಐದನೇ ಓವರ್‌ನ ಐದನೇ ಎಸೆತ ಪೂರೈಸುತ್ತಿದ್ದಂತೆಯೇ ಅಸ್ವಸ್ಥಗೊಂಡ ಹಾರ್ದಿಕ್, ಮೈದಾನದಲ್ಲೇ ಕುಸಿದರು.

ಇದನ್ನೂ ಓದಿ : ಏಷ್ಯಾ ಕಪ್| ಆಲ್ರೌಂಡರ್‌ಗಳ ಭಾರತಕ್ಕೆ ಸಾಟಿಯಾಗದ ಪಾಕ್‌ಗೆ ಹೀನಾಯ ಸೋಲು!

ಏತನ್ಮಧ್ಯೆ, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಗಾಯಾಳುವಾಗಿದ್ದಾರೆ. ಎಡಗೈನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಅವರು, ಏಷ್ಯಾ ಕಪ್‌ನಿಂದ ಹೊರನಡೆದಿದ್ದಾರೆ. ಇದೇ ಪಾಕ್ ವಿರುದ್ಧದ ಪಂದ್ಯದಲ್ಲೇ ಅಕ್ಷರ್ ಕೂಡ ಗಾಯಗೊಂಡಿದ್ದರು. ಎಕ್ಸ್‌ರೇ ವರದಿ ಹೇಳಿರುವಂತೆ ಅವರು ಟೂರ್ನಿಗೆ ಅಲಭ್ಯವಾಗಿದ್ದಾರೆ. ಅಕ್ಷರ್ ಪಟೇಲ್ ಬದಲಿಗೆ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾ ಕಪ್‌ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇನ್ನು, ಬಲಗೈ ವೇಗಿ ಶಾರ್ದೂಲ್ ಠಾಕೂರ್ ಬಲ ನಡುವಿನ ಸ್ನಾಯು ಸಮಸ್ಯೆಗೆ ಸಿಲುಕಿದ್ದಾರೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಶಾರ್ದೂಲ್, ಪಾಕ್ ಪಂದ್ಯಕ್ಕೆ ಲಭ್ಯವಿರಲಿಲ್ಲ. ಹೀಗಾಗಿ, ಅವರು ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದು, ಟೂರ್ನಿಯಿಂದಲೇ ವಂಚಿತವಾಗಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More