ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು

ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸ್ಟಾರ್ ಶಟ್ಲರ್‌ಗಳಾದ ಕಿಡಾಂಬಿ ಶ್ರೀಕಾಂತ್ ಮತ್ತು ಪಿ ವಿ ಸಿಂಧು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಮಿಶ್ರ ಡಬಲ್ಸ್ ವಿಭಾಗದ ಅಂತಿಮ ೧೬ರ ಘಟ್ಟದ ಪಂದ್ಯದಲ್ಲಿ ಸೋಲನುಭವಿಸಿದರು

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಒತ್ತಡ ಮೆಟ್ಟಿನಿಂತ ಪಿ ವಿ ಸಿಂಧು, ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ ಎಂಟರ ಘಟ್ಟ ತಲುಪಿದ್ದಾರೆ. ಗುರುವಾರ (ಸೆ.೨೦) ನಡೆದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಗ್‌ಫನ್ ವಿರುದ್ಧ ೨೧-೨೩, ೨೧-೧೩, ೨೧-೧೮ರ ಮೂರು ಗೇಮ್‌ಗಳ ಆಟದಲ್ಲಿ ಸಿಂಧು ಜಯಶಾಲಿಯಾದರು.

ಮೊದಲ ಗೇಮ್‌ನಲ್ಲಿ ಸೋಲನುಭವಿಸಿದರೂ, ಆನಂತರ ಪ್ರಬಲವಾಗಿ ತಿರುಗಿಬಿದ್ದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು, ಸತತ ಎರಡೂ ಗೇಮ್‌ಗಳಲ್ಲಿ ಜಯ ಸಾಧಿಸಿ ಮುನ್ನಡೆ ಪಡೆದರು. ವಿಶ್ವದ ೨೪ನೇ ಶ್ರೇಯಾಂಕಿತೆಯ ಆರಂಭಿಕ ಆರ್ಭಟಕ್ಕೆ ತೆರೆ ಹಾಕಿದ ಸಿಂಧು, ಎಂಟರ ಘಟ್ಟಕ್ಕೆ ಕಾಲಿಟ್ಟರು.

ಇತ್ತ, ಪುರುಷರ ವಿಭಾಗದಲ್ಲಿಯೂ ಏಳನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಕಡು ಪ್ರಯಾಸದಿಂದಲೇ ಪ್ರೀಕ್ವಾರ್ಟರ್ ಸವಾಲನ್ನು ಮೆಟ್ಟಿನಿಂತರು. ಹಾಂಕಾಂಗ್ ಆಟಗಾರ ಸಪ್ಪನ್ಯು ಅವಿಹಿಂಗ್ಸನೋನ್ ವಿರುದ್ಧದ ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ೨೧-೧೨, ೧೫-೨೧, ೨೪-೨೨ರಿಂದ ಶ್ರೀಕಾಂತ್ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಧಾವಿಸಿದರು. ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಂತೂ ಇಬ್ಬರೂ ರೋಚಕ ಸೆಣಸಾಟ ನಡೆಸಿದರು. ಪಂದ್ಯ ಯಾರದ್ದಾಗಿಯಾದರೂ ಬದಲಾಗಬಹುದಿತ್ತಾದರೂ, ಅಂತಿಮವಾಗಿ ಶ್ರೀಕಾಂತ್ ಜಯದ ನಗೆಬೀರಿದರು.

ಇದನ್ನೂ ಓದಿ : ಚೀನಾ ಓಪನ್ ಬ್ಯಾಡ್ಮಿಂಟನ್: ಶುಭಾರಂಭ ಮಾಡಿದ ಶ್ರೀಕಾಂತ್, ಪ್ರಣಯ್‌ಗೆ ಆಘಾತ

ಅಶ್ವಿನಿ ಪೊನ್ನಪ್ಪ ಜೋಡಿಗೆ ನಿರಾಸೆ

ಕನ್ನಡತಿ ಅಶ್ವಿನಿ ಪೊನ್ನಪ್ಪ ವನಿತೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ ಎರಡರಲ್ಲೂ ನಿರಾಸೆ ಅನುಭವಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಜೋಡಿ ಅಗ್ರ ಶ್ರೇಯಾಂಕಿತ ಜೋಡಿ ಚೀನಾದ ಸೀವಿ ಝೆಂಗ್ ಮತ್ತು ಹುವಾಂಗ್ ಯಕಿಯಾಂಗ್ ವಿರುದ್ಧ ಅಂತಿಮ ಹದಿನಾರರ ಹಂತದ ಪಂದ್ಯದಲ್ಲಿ ೧೪-೨೧, ೧೧-೨೧ರಿಂದ ಸೋಲನುಭವಿಸಿತು.

ಬಳಿಕ ನಡೆದ ಮತ್ತೊಂದು ಪಂದ್ಯದಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಸಿಕಿ ರೆಡ್ಡಿ ಹಾಗೂ ಪ್ರಣವ್ ಚೋಪ್ರಾ ಜೋಡಿ ಆರನೇ ಶ್ರೇಯಾಂಕಿತ ಡೆನ್ಮಾರ್ಕ್ ಜೋಡಿಯಾದ ಪಿಡೆರ್ಸೆನ್ ಹಾಗೂ ಮತಿಯಾಸ್ ಕ್ರಿಶ್ಚಿಯನ್‌ಸೆನ್ ವಿರುದ್ಧ ೧೬-೨೧, ೧೦-೨೧ರಿಂದ ಪರಾಭವಗೊಂಡರೆ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಬಿ ಸುಮೀತ್ ರೆಡ್ಡಿ ಜೋಡಿ ಚೆನ್ ಹುಂಗ್ ಲಿಂಗ್ ಹಾಗೂ ವಾಂಗ್ ಚಿ ಲಿನ್ ಜೋಡಿ ಎದುರು ೯-೨೧, ೧೦-೨೧ರಿಂದ ಪರಾಭವಗೊಂಡಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More