ಎ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಸ್ಪೆಲ್‌ನಿಂದ ವಿಶ್ವದಾಖಲೆ ಬರೆದ ನದೀಮ್

ಎರಡು ದಶಕದಷ್ಟು ಹಳೆಯ ಎ ದರ್ಜೆ ಕ್ರಿಕೆಟ್ ದಾಖಲೆಯನ್ನು ಶಾಬಾಜ್ ನದೀಮ್ ಮುರಿದಿದ್ದಾರೆ. ಜಾರ್ಖಂಡ್ ರಾಜ್ಯದ ಈ ಸ್ಪಿನ್ ಬೌಲರ್‌, ಆಟದ ಎಲ್ಲ ವಿಭಾಗಗಳಲ್ಲೂ ಅಮೋಘ ನಿರ್ವಹಣೆ ನೀಡುತ್ತಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇವಲ ೧೦ ರನ್‌ಗೆ ೮ ವಿಕೆಟ್ ಗಳಿಸಿದ್ದಾರೆ

ಜಾರ್ಖಂಡ್ ಸ್ಪಿನ್ ಮಾಂತ್ರಿಕ ಶಾಬಾಜ್ ನದೀಮ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅಪೂರ್ವ ಸ್ಪೆಲ್‌ನಿಂದ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾದರು. ಚೆನ್ನೈನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಡಗೈ ಸ್ಪಿನ್ನರ್ ನದೀಮ್, ರಾಜಸ್ಥಾನ ವಿರುದ್ಧ ನಡೆಸಿದ ಚಮತ್ಕಾರಿ ಬೌಲಿಂಗ್‌ನಿಂದಾಗಿ ಜಾರ್ಖಂಡ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು.

ಎಡಗೈ ಸ್ಪಿನ್ನರ್ ನದೀಮ್ ಭಾರತ ತಂಡದ ಬಾಗಿಲನ್ನು ಈ ಮೂಲಕ ತಟ್ಟುವಲ್ಲಿ ಯಶಸ್ವಿಯಾದರು. ಅವರ ಈ ಮಾರಕ ಸ್ಪೆಲ್‌ಗೆ ಸಿಲುಕಿದ ರಾಜಸ್ಥಾನ ೨೮.೩ ಓವರ್‌ಗಳಲ್ಲಿ ಕೇವಲ ೭೩ ರನ್‌ಗಳಿಗೆ ಸರ್ವಪತನ ಕಂಡಿತು. ೧೦ ಓವರ್‌ಗಳಲ್ಲಿ ನಾಲ್ಕು ಮೇಡನ್ ಸೇರಿದಂತೆ ೧೦ ರನ್‌ಗಳಿಗೆ ೮ ವಿಕೆಟ್ ಪಡೆದ ನದೀಮ್, ತಂಡದ ೭ ವಿಕೆಟ್‌ ಅಮೋಘ ಗೆಲುವಿನಲ್ಲಿ ಸಿಂಹಪಾಲು ಪಡೆದರು.

ಅಂದಹಾಗೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ನ ಈ ಹಿಂದಿನ ಅತ್ಯುತ್ತಮ ಸ್ಪೆಲ್ ಎಂದರೆ, ದೆಹಲಿಯ ಎಡಗೈ ಸ್ಪಿನ್ನರ್ ರಾಹುಲ್ ಸಾಂಘ್ವಿಯದು. ೧೯೯೭-೯೮ರಲ್ಲಿ ಹಿಮಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ೧೫ ರನ್‌ಗಳಿಗೆ ೮ ವಿಕೆಟ್ ಗಳಿಸಿದ್ದರು. ಸಾಂಘ್ವಿ ಭಾರತದ ಪರ ೨೦೦೧ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಆಡಿದ್ದು, ಬಿಟ್ಟರೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲಾಗಿಲ್ಲ.

ಇದನ್ನೂ ಓದಿ : ಶೂನ್ಯ ಸಾಧಕ ಗೇಲ್ ಸಾಧನೆಯನ್ನೂ ಮುರಿದು ವಿಶ್ವ ದಾಖಲೆ ಬರೆದ ಮನ್ರೊ

ಹ್ಯಾಟ್ರಿಕ್ ಸೊಗಸು

“ನಿಜವಾಗಿಯೂ ಬೇರೊಬ್ಬರು ನನಗೆ ಈ ವಿಷಯವನ್ನು ತಿಳಿಸುವ ತನಕ ನಾನು ವಿಶ್ವದಾಖಲೆ ಮುರಿದಿದ್ದೇನೆ ಎಂದು ಗೊತ್ತಿರಲಿಲ್ಲ. ನನ್ನ ರಾಜ್ಯ ತಂಡಕ್ಕಾಗಿ ಇಂಥದ್ದೊಂದು ಅಪೂರ್ವ ಸ್ಪೆಲ್‌ನಿಂದ ನೆರವಾದದ್ದು ನನಗೆ ಸಂತಸ ತಂದಿದೆ. ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು ಕೂಡ ಸಂತಸವನ್ನು ದುಪ್ಪಟ್ಟುಗೊಳಿಸಿದೆ,’’ ಎಂದು ಪಂದ್ಯದ ಬಳಿಕ ನದೀಮ್ ಪ್ರತಿಕ್ರಿಯಿಸಿದರು. ಅಂದಹಾಗೆ, ಈ ಪಂದ್ಯದಲ್ಲಿ ನದೀಮ್ ಹ್ಯಾಟ್ರಿಕ್ ಸಾಧನೆಯನ್ನೂ ಮಾಡಿ ಗಮನ ಸೆಳೆದರು.

ಎಂ ಕೆ ಲಾಮ್ರರ್ (೬), ಸಿ ಡಿ ಬಿಸ್ತ್ (೦) ವಿಕೆಟ್‌ಗಳನ್ನು ೨೦ನೇ ಓವರ್‌ನಲ್ಲಿ ಎಗರಿಸಿದ ನದೀಮ್, ೨೨ನೇ ಓವರ್‌ನ ಮೊದಲ ಎಸೆತದಲ್ಲೇ ಟಿ ಎನ್ ದಿಲ್ಲಾನ್ (೧) ವಿಕೆಟ್ ಪಡೆಯುವಲ್ಲಿ ಸಫಲವಾದರು. “ನನ್ನ ಈ ಸಾಧನೆಗೆ ರಾಷ್ಟ್ರೀಯ ತಂಡದ ಆಟಗಾರರಿಗೆ ಬೌಲ್ ಮಾಡಿ ಪಡೆದ ಅನುಭವವೇ ಕಾರಣ.ಸ್ಟಂಪ್ಸ್ ಮೇಲೆ ಹಾಗೂ ನಿಖರ ಗುರಿಯತ್ತ ಬೌಲ್ ಮಾಡುವುದು ನನ್ನ ಯೋಜನೆ. ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದರೆ ವಿಕೆಟ್ ಪಡೆಯುವುದು ಖಚಿತ ಎಂದರಿತು ಅದರಂತೆ ಬೌಲ್ ಮಾಡಿದೆ,’’ ಎಂತಲೂ ನದೀಮ್ ತಿಳಿಸಿದರು.

೨೯ರ ಹರೆಯದ ನದೀಮ್, ೯೯ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ್ದು, ೨೯.೭೪ ಸರಾಸರಿಯಲ್ಲಿ ೩೭೫ ವಿಕೆಟ್ ಗಳಿಸಿದ್ದಾರೆ. ಅಂತೆಯೇ, ೮೭ ಲಿಸ್ಟ್ ಎ ಪಂದ್ಯಗಳಿಂದ ೧೨೪ ವಿಕೆಟ್ ಗಳಿಸಿರುವ ನದೀಮ್, ೧೦೯ ಟಿ೨೦ ಪಂದ್ಯಗಳಿಂದ ೮೯ ವಿಕೆಟ್ ಎಗರಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More