ಕೊಹ್ಲಿ, ಮೀರಾ ಬಾಯಿ ಚಾನುಗೆ ಖೇಲ್ ರತ್ನ; ಕನ್ನಡಿಗ ಬೋಪಣ್ಣಗೆ ಅರ್ಜುನ

ಕೇಂದ್ರ ಸರ್ಕಾರದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ವೇಟ್‌ಲಿಫ್ಟರ್ ಮೀರಾ ಬಾಯಿ ಭಾಜನರಾಗಿದ್ದಾರೆ. ೨೦ ಮಂದಿ ಕ್ರೀಡಾ ಪುರಸ್ಕೃತರಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಕೂಡ ಸೇರಿದ್ದು, ಮಂಗಳವಾರ (ಸೆ.೨೫) ಪುರಸ್ಕೃತರನ್ನು ಗೌರವಿಸಲಾಗುತ್ತದೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮೆರೆದ ಕ್ರೀಡಾಪಟುಗಳನ್ನು ಪ್ರತಿ ವರ್ಷ ಸನ್ಮಾನಿಸಿ ಗೌರವಿಸುವಂತೆ ಈ ಬಾರಿಯೂ ಹಲವಾರು ಸಾಧಕರನ್ನು ಗುರುತಿಸಿ ಪ್ರತಿಷ್ಠಿತ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ನೀಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಮುಂದಿನ ಮಂಗಳವಾರ ನಡೆಯಲಿರುವ ಸಮಾರಂಭದಲ್ಲಿ ಸಾಧಕರನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಸನ್ಮಾನಿಸಲಿದ್ದಾರೆ.

ಗುರುವಾರ (ಸೆ.೨೦) ಪ್ರಕಟವಾದ ಪ್ರಶಸ್ತಿ ವಿಜೇತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ೨೦ ಮಂದಿ ಅರ್ಜುನ ಕ್ರೀಡಾ ಪ್ರಶಸ್ತಿ ಪುರಸ್ಕೃತರಲ್ಲಿ ಸೇರ್ಪಡೆಯಾಗಿದ್ದರೆ, ಕನ್ನಡಿಗ ಹಾಗೂ ದೇಶದ ಡಬಲ್ಸ್ ಟೆನಿಸ್ ಪಟು ರೋಹನ್ ಬೋಪಣ್ಣಗೂ ಅರ್ಜುನ ಪ್ರಶಸ್ತಿ ಸಂದಿದೆ. ಪ್ರಶಸ್ತಿ ಪ್ರಕಟವಾದ ಹಿಂದಿನ ದಿನದಂದು ಆರ್ಚರಿ ಕೋಚ್ ಜಿವನ್‌ಜೋತ್‌ ಸಿಂಗ್ ತೇಜಾ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿಯಿಂದ ಕೈಬಿಡಲಾಗಿತ್ತು.

ಆಯ್ಕೆ ಸಮಿತಿ ಆರಿಸಿದ್ದ ಐವರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಜೀವನ್‌ಜೊತ್ ಸಿಂಗ್ ಹೆಸರು ಕೂಡ ಇತ್ತು. ಆದರೆ, ಕೊರಿಯಾದಲ್ಲಿ ನಡೆದ ೨೦೧೫ರ ವಿಶ್ವ ವಿವಿ ಕೂಟದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಅವರನ್ನು ಒಂದು ವರ್ಷ ಅಮಾನತುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.

ಇದನ್ನೂ ಓದಿ : ಕ್ರಿಕೆಟಿಗ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ₹ ೮೨.೫ ಲಕ್ಷ ಸಂಭಾವನೆ

ಪ್ರಶಸ್ತಿಗೆ ಅರ್ಹ ಕೊಹ್ಲಿ

ವಿಶ್ವದ ನಂ.೧ ಟೆಸ್ಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಆಯ್ಕೆ ಸಮಿತಿ ತೀರ್ಮಾನಿಸಿದೆ. ವಾಸ್ತವವಾಗಿ ಅವರ ಹೆಸರನ್ನು ೨೦೧೬ ಮತ್ತು ೨೦೧೭ರಲ್ಲಿ ಎರಡು ಬಾರಿ ಬಿಸಿಸಿಐ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ೨೯ರ ಹರೆಯದ ಕೊಹ್ಲಿ, ೭೧ ಟೆಸ್ಟ್ ಪಂದ್ಯಗಳಲ್ಲಿ ೨೩ ಶತಕ ಸೇರಿದ ೬,೧೪೭ ರನ್ ಗಳಿಸಿದ್ದರೆ, ೨೧೧ ಏಕದಿನ ಪಂದ್ಯಗಳಲ್ಲಿ ೩೫ ಶತಕ ಸೇರಿದ ೯,೭೭೯ ರನ್ ಕಲೆಹಾಕಿದ್ದಾರೆ.

ಇನ್ನು, ಕೊಹ್ಲಿಯೊಂದಿಗೆ ಜಂಟಿಯಾಗಿ ಖೇಲ್ ರತ್ನ ಪಡೆದ ಮೀರಾ ಬಾಯಿ ಚಾನು ಕೂಡ ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ವನಿತೆಯರ ೪೮ ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮೆರೆದಿದ್ದರು. ಬಳಿಕ, ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್ ಕೂಟದಲ್ಲಿಯೂ ಬಂಗಾರದ ಪದಕ ಗೆದ್ದ ಚಾನು, ಗಾಯದ ಸಮಸ್ಯೆಯಿಂದಾಗಿ ಏಷ್ಯಾಡ್‌ನಿಂದ ವಂಚಿತವಾಗಿದ್ದರು.

ವಾರ್ಷಿಕ ಕ್ರೀಡಾ ಪ್ರಶಸ್ತಿ ಪುರಸ್ಕೃತರು

ರಾಜೀವ್‌ ಗಾಂಧಿ ಖೇಲ್‌ರತ್ನ: ವಿರಾಟ್ ಕೊಹ್ಲಿ (ಕ್ರಿಕೆಟಿಗ), ಮೀರಾ ಬಾಯಿ ಚಾನು (ವನಿತಾ ವೇಟ್‌ಲಿಫ್ಟರ್)

ಅರ್ಜುನ ಪ್ರಶಸ್ತಿ: ನೀರಜ್ ಚೋಪ್ರಾ (ಜಾವೆಲಿನ್), ಜಿನ್ಸನ್ ಜಾನ್ಸನ್ ಹಾಗೂ ಹಿಮಾ ದಾಸ್ (ಅಥ್ಲೆಟಿಕ್ಸ್), ಎನ್ ಸಿಕಿ ರೆಡ್ಡಿ (ಬ್ಯಾಡ್ಮಿಂಟನ್), ಸತೀಶ್ ಕುಮಾರ್ (ಬಾಕ್ಸಿಂಗ್), ಸ್ಮೃತಿ ಮಂದಾನ (ಕ್ರಿಕೆಟ್), ಶುಭಾಂಕರ್ ಶರ್ಮಾ (ಗಾಲ್ಫ್), ಮನ್ಪ್ರೀತ್ ಸಿಂಗ್, ಸವಿತಾ (ಹಾಕಿ), ರವಿ ರಾಠೋಡ್ (ಪೋಲೊ), ರಾಹಿ ಸರ್ನೋಬತ್, ಅಂಕೂರ್ ಮಿತ್ತಲ್, ಶ್ರೇಯಸಿ ಸಿಂಗ್ (ಶೂಟಿಂಗ್), ಮಣಿಕಾ ಬಾತ್ರಾ, ಜಿ ಸತಿಯಾನ್ (ಟೇಬಲ್ ಟೆನಿಸ್), ರೋಹನ್ ಬೋಪಣ್ಣ (ಟೆನಿಸ್), ಸುಮಿತ್ (ರೆಸ್ಲಿಂಗ್), ಪೂಜಾ ಕಡಿಯಾನ್ (ವುಶು), ಅಂಕೂರ್ ಧಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ-ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ: ಸಿ ಎ ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮಾ (ವೇಟ್‌ ಲಿಫ್ಟಿಂಗ್), ಎ ಶ್ರೀನಿವಾಸ ರಾವ್ (ಟೇಬಲ್ ಟೆನಿಸ್), ಸುಖದೇವ್ ಸಿಂಗ್ ಪನ್ನು (ಅಥ್ಲೆಟಿಕ್ಸ್), ಕ್ಲಾರೆನ್ಸ್ ಲೋಬೊ (ಹಾಕಿ- ಜೀವಮಾನ), ತಾರಕ್ ಸಿನ್ಹಾ (ಕ್ರಿಕೆಟ್- ಜೀವಮಾನ), ಜಿವನ್ ಕುಮಾರ್ ಶರ್ಮಾ (ಜೂಡೋ-ಜೀವಮಾನ), ವಿ ಆರ್ ಬೀಡು (ಅಥ್ಲೆಟಿಕ್ಸ್- ಜೀವಮಾನ).

ಧ್ಯಾನ್‌ಚಂದ್ ಪ್ರಶಸ್ತಿ: ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಕುಮಾರ್ ಚೆಟ್ರಿ (ಹಾಕಿ), ಬಾಬಿ ಅಲಾಸಿಯಸ್ (ಅಥ್ಲೆಟಿಕ್ಸ್), ಚೌಗಲೆ ದಾದು ದತ್ತಾತ್ರೆ (ಕುಸ್ತಿ).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More