ಏಷ್ಯಾ ಕಪ್: ಹ್ಯಾಟ್ರಿಕ್ ಕನವರಿಕೆಯಲ್ಲಿರುವ ಭಾರತ ತಂಡಕ್ಕೆ ಗಾಯದ ಸಮಸ್ಯೆ 

ಪ್ರತಿಷ್ಠಿತ ಏಷ್ಯಾಕಪ್ ಪಂದ್ಯಾವಳಿಯ ಪ್ರಶಸ್ತಿ ಫೇವರಿಟ್ ಭಾರತ ತಂಡ ಈಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಗುರಿ ಹೊತ್ತಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಇದೀಗ ಬಾಂಗ್ಲಾದೇಶ ವಿರುದ್ಧದ ಸೂಪರ್ ೪ರ ಘಟ್ಟದ ಪಂದ್ಯಕ್ಕೆ ಸರ್ವಸನ್ನದ್ಧವಾಗಿದೆ

ದುರ್ಬಲ ಹಾಂಕಾಂಗ್ ಎದುರು ತಡಬಡಾಯಿಸಿ ಗೆದ್ದ ಭಾರತ ತಂಡ, ಮರುದಿನ ನಡೆದ ಮಹತ್ವಪೂರ್ಣ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡವನ್ನು ಮಣಿಸಿದ ಪರಿಗೆ ಕ್ರಿಕೆಟ್ ಲೋಕ ಮಾರುಹೋಗಿದೆ. ಪಾಕ್‌ನಂಥ ಪ್ರಚಂಡ ತಂಡವನ್ನು ಆಲ್ರೌಂಡ್ ಆಟದಿಂದ ಕಟ್ಟಿಹಾಕಿದ ರೋಹಿತ್ ಪಡೆಗೆ ಸದ್ಯ ಗಾಯದ ಸಮಸ್ಯೆ ಕಾಡುತ್ತಿದ್ದರೂ, ಆತ್ಮವಿಶ್ವಾಸದೊಂದಿಗೆ ಸೂಪರ್ ನಾಲ್ಕರ ಸವಾಲನ್ನು ಮೆಟ್ಟಿನಿಲ್ಲಲು ಅಣಿಯಾಗಿದೆ.

ಶುಕ್ರವಾರ (ಸೆ ೨೧) ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಆಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಗಾಯಗೊಂಡು ಟೂರ್ನಿಯಿಂದಲೇ ನಿರ್ಗಮಿಸಿರುವುದು ತಂಡಕ್ಕೆ ತುಸು ಅಧೈರ್ಯ ತಂದಿದೆಯಾದರೂ, ಬದಲಿ ಆಟಗಾರರ ನೆರವಿನೊಂದಿಗೆ ಗೆಲುವಿನ ಯಾನ ಮುಂದುವರೆಸುವ ಗುರಿ ಹೊತ್ತಿದೆ.

ಅಂದಹಾಗೆ, ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳನ್ನು ಆಡಿರುವ ವೇಗಿ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡುವ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಚಿಂತಿಸಿದ್ದು, ಅವರ ಬದಲಿಗೆ ಎಡಗೈ ವೇಗಿ ಖಲೀಲ್ ಅಹಮ್ಮದ್ ಅವರನ್ನು ಕಣಕ್ಕೆ ಇಳಿಸುವ ನಿರ್ಧಾರದಲ್ಲಿದೆ. ಇನ್ನು, ಅಕ್ಷರ್ ಪಟೇಲ್ ಬದಲಿಗೆ ರವೀಂದ್ರ ಜಡೇಜ ಅವರಿಗೆ ಮತ್ತು ಶಾರ್ದೂಲ್‌ ಠಾಕೂರ್ ಬದಲಿಗೆ ಸಿದ್ಧಾರ್ಥ್ ಕೌಲ್‌ಗೆ ಸ್ಥಾನ ನೀಡುವುದಾಗಿ ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಮನೀಶ್ ಪಾಂಡೆಗೆ ಸ್ಥಾನ?

ಇದನ್ನೂ ಓದಿ : ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

ಕೆಳ ಬೆನ್ನು ನೋವಿನಿಂದ ಪಾಕಿಸ್ತಾನ ವಿರುದ್ಧದ ಬಹುಪಾಲು ಪಂದ್ಯದಿಂದ ವಂಚಿತವಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ಕನ್ನಡಿಗ ಮನೀಶ್ ಪಾಂಡೆಗೆ ಟೀಂ ಇಂಡಿಯಾ ಸ್ಥಾನ ಕಲ್ಪಿಸುತ್ತೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಪಾಂಡ್ಯ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಸಾಗಿಸಿದ ಬಳಿಕ ಅವರ ಸ್ಥಾನದಲ್ಲಿ ಫೀಲ್ಡಿಂಗ್ ಮಾಡಿದ್ದ ಪಾಂಡೆ, ಪಾಕ್ ಕಪ್ತಾನ ಸರ್ಫರಾಜ್ ಅಹಮದ್ ಅವರನ್ನು ಅಭೂತಪೂರ್ವ ಕ್ಯಾಚ್‌ನೊಂದಿಗೆ ಪೆವಿಲಿಯನ್‌ಗೆ ಅಟ್ಟಿದ್ದರು.

ಅಂದಹಾಗೆ, ಪಾಕಿಸ್ತಾನ ವಿರುದ್ಧ ಆರಂಭಿಕ ಜೋಡಿ ಶಿಖರ್ ಧವನ್‌ ಮತ್ತು ರೋಹಿತ್ ಶರ್ಮಾ ಅಮೋಘ ಪ್ರದರ್ಶನ ನೀಡಿದ್ದರು. ಹಾಂಕಾಂಗ್ ವಿರುದ್ಧ ರೋಹಿತ್ ಶರ್ಮಾ ನಿರಾಸೆ ಮೂಡಿಸಿದರೂ, ಪಾಕ್ ಎದುರು ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು.. ಧವನ್ ಅಂತೂ ಪ್ರಚಂಡ ಫಾರ್ಮ್‌ನಲ್ಲಿರುವುದು ಭಾರತ ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಇನ್ನು, ಅಂಬಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್‌ ಮುತ್ತಮ ಬ್ಯಾಟಿಂಗ್ ಜತೆಗೆ ಮಾಜಿ ನಾಯಕ ಧೋನಿ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದೇ ಆದರೆ, ಬಾಂಗ್ಲಾವನ್ನು ಹಣಿಯುವುದು ಭಾರತಕ್ಕೇನೂ ಕಷ್ಟವಾಗದು.

ಅಪಾಯಕಾರಿ ಬಾಂಗ್ಲಾ!

ಆಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ಹೀನಾಯ ಸೋಲನುಭವಿಸಿದ್ದರೂ, ಆ ತಂಡವನ್ನು ರೋಹಿತ್ ಪಡೆ ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ, ಎಲ್ಲ ವಿಭಾಗದಲ್ಲೂ ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವಷ್ಟು ಪ್ರಚಂಡವಾಗಿದೆ. ಉಭಯರ ಇತ್ತೀಚಿನ ಮುಖಾಮುಖಿ ಎಂದರೆ, ನಿದಾಸ್ ಟ್ರೋಫಿ ಫೈನಲ್‌. ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದ ಇತ್ತಂಡಗಳ ಪೈಕಿ ಭಾರತ, ಬಾಂಗ್ಲಾದೇಶ ಎದುರು ರೋಚಕ ಗೆಲುವು ಸಾಧಿಸಿತ್ತು. ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ಬಾರಿಸಿದ ಮನೋಜ್ಞ ಸಿಕ್ಸರ್ ಬಾಂಗ್ಲೀಯರ ಪ್ರಶಸ್ತಿ ಕನಸನ್ನು ನುಚ್ಚುನೂರಾಗಿಸಿತ್ತು.

ಎಲ್ಲಕ್ಕಿಂತ ಮಿಗಿಲಾಗಿ, ನಾಯಕ ಹಾಗೂ ವೇಗಿ. ಮಷ್ರಫೆ ಮೊರ್ತಜಾ, ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಮ್‌, ಆಲ್ರೌಂಡರ್ ಶಕೀಬ್‌ ಅಲ್ ಹಸನ್‌, ಸ್ಪಿನ್ ಮಾಂತ್ರಿಕ ರುಬೆಲ್ ಹೊಸೇನ್‌ ಮುಂತಾದವರು ಪಂದ್ಯದ ಯಾವುದೇ ಘಟ್ಟದಲ್ಲಿ ಬೇಕಾದರೂ ತಿರುವು ನೀಡುವಷ್ಟು ಅಪಾಯಕಾರಿಗಳು. ಹೀಗಾಗಿ, ಪಾಕಿಸ್ತಾನಕ್ಕಿಂತಲೂ ಮಿಗಿಲಾದ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಭಾರತ ತಂಡದ ಮುಂದಿದೆ

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ಜಸ್ಪ್ರೀತ್ ಬುಮ್ರಾ.

ಬಾಂಗ್ಲಾದೇಶ: ನಜ್ಮುಲ್ ಹುಸೇನ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಷ್ಪೀಕರ್ ರಹೀಮ್, ಮೊಹಮದ್ ಮಿಥುನ್, ಮಹಮುದುಲ್ಲಾ, ಮೊಸಾದಿಕ್ ಹುಸೇನ್, ಮೆಹಿದಿ ಹಸನ್, ಮಶ್ರಫೆ ಮೊರ್ತಜಾ, ರೂಬೆಲ್ ಹುಸೇನ್, ಮುಸ್ತಾಫಿಜುರ್ ರೆಹಮಾನ್ /ಅಬು ಹೈದರ್ ರೋನಿ.

ಪಂದ್ಯ ಆರಂಭ: ಸಂಜೆ ೫.೦೦ | ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More