ವಿಶ್ವ ಆಲ್ರೌಂಡರ್‌ ಪಟ್ಟಿಗೆ ಸೇರಲು ತುಡಿಯುತ್ತಿರುವ ಆಫ್ಘನ್ ಕ್ರಿಕೆಟಿಗ ರಶೀದ್

ವಿಶ್ವ ಟಿ೨೦ ಬೌಲರ್‌ಗಳ ಪಟ್ಟಿಯಲ್ಲಿ ನಂ.೧ ಸ್ಥಾನದಲ್ಲಿರುವ ರಶೀದ್ ಖಾನ್, ಜಗತ್ತಿನ ಶ್ರೇಷ್ಠ ಆಲ್ರೌಂಡ್ ಆಟಗಾರರ ಪಟ್ಟಿಗೆ ಸೇರಲು ತುಡಿಯುತ್ತಿರುವುದು ಪ್ರತಿಯೊಂದು ಪಂದ್ಯದಲ್ಲೂ ವ್ಯಕ್ತವಾಗುತ್ತಿದೆ. ಈ ಮಾತಿಗೆ ಪುಷ್ಟಿ ನೀಡಿದ್ದು ಏಷ್ಯಾ ಕಪ್ ಪಂದ್ಯಾವಳಿಯಲ್ಲಿನ ಬಾಂಗ್ಲಾದೇಶ ವಿರುದ್ಧದ ಅವರ ಆಟ

ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಷ್ಟೆ ಕಣ್ಣುಬಿಡುತ್ತಿರುವ ಹಸುಗೂಸಿನಂತಿರುವ ಆಫ್ಘಾನಿಸ್ತಾನ ಕ್ರಿಕೆಟ್ ತಂಡ, ಸೀಮಿತ ಓವರ್‌ಗಳ ಸರಣಿಯಲ್ಲಿ ಮಿಂಚು ಹರಿಸುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಅಲ್ಲದೆ, ಫೀಲ್ಡಿಂಗ್‌ನಲ್ಲಿಯೂ ಆಕ್ರಮಣಕಾರಿಯಾಗಿ ಮುನ್ನಡೆಯುತ್ತಿರುವ ಆಫ್ಘಾನಿಸ್ತಾನ ತಂಡಕ್ಕೆ ರಶೀದ್ ಖಾನ್‌ರಂಥವರು ಇನ್ನಷ್ಟು ಬಲ ತುಂಬಿದ್ದಾರೆ.

ಆಫ್ಘನ್ ತಂಡದಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ರಶೀದ್ ಖಾನ್, ಇತ್ತೀಚಿಗೆ ಬ್ಯಾಟಿಂಗ್‌ನಲ್ಲಿಯೂ ಪ್ರಖರವಾಗಿ ಮುನ್ನಡೆಯುತ್ತಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅಮೋಘ ಪ್ರದರ್ಶನ ನೀಡಿದ್ದ ರಶೀದ್ ಖಾನ್, ಗುರುವಾರ (ಸೆ.೨೦) ನಡೆದ ಏಷ್ಯಾ ಕಪ್ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್ ಆಟದಿಂದ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

“ಅಭ್ಯಾಸದ ವೇಳೆ ಪ್ರತಿಯೊಂದು ಎಸೆತವನ್ನೂ ಲೆಕ್ಕಾಚಾರದೊಂದಿಗೆ ಹಾಕುವುದು ನನ್ನ ಹವ್ಯಾಸ. ಬ್ಯಾಟಿಂಗ್ ಆಗಲೀ ಇಲ್ಲವೇ ಬೌಲಿಂಗ್ ಆಗಲೀ ಈ ಎರಡರಲ್ಲೂ ಅದೃಷ್ಟ ಜೊತೆಗಿದ್ದರಷ್ಟೇ ಯಶ ಗಳಿಸಬಹುದು. ಆದರೆ, ಫೀಲ್ಡಿಂಗ್‌ ಮಾತ್ರ ನಮ್ಮ ಕೈಯಲ್ಲೇ ಇರುತ್ತದೆ. ಫಲಿತಾಂಶದ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೆ ಶೇ.೧೦೦ರಷ್ಟು ಫೀಲ್ಡಿಂಗ್‌ಗೆ ಆದ್ಯತೆ ನೀಡಿದರೆ ಯಶಸ್ಸನ್ನು ಸುಲಭವಾಗಿ ನಿರೀಕ್ಷಿಸಬಹುದು,’’ ಎಂದು, ಬಾಂಗ್ಲಾದೇಶ ವಿರುದ್ಧದ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಬರ್ತ್‌ಡೇ ಬಾಯ್ ರಶೀದ್ ಖಾನ್ ತಿಳಿಸಿದರು.

ಬರ್ತ್ ಡೇ ಬಾಯ್ !

ಇದನ್ನೂ ಓದಿ : ರಶೀದ್ ಖಾನ್ ಆಲ್ರೌಂಡ್ ಆಟಕ್ಕೆ ತಲೆಬಾಗಿದ ಕೋಲ್ಕತಾ ನೈಟ್ ರೈಡರ್ಸ್

ಶುಕ್ರವಾರ (ಸೆ.೨೧) ೨೦ನೇ ವಸಂತಕ್ಕೆ ಕಾಲಿರಿಸಿದ ಲೆಗ್‌ ಸ್ಪಿನ್ನರ್ ರಶೀದ್ ಖಾನ್, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೇವಲ ೩೨ ಎಸೆತಗಳಿಂದ ೫೭ ರನ್ ಸಿಡಿಸಿದ್ದರು. ಅಂತೆಯೇ, ಕೇವಲ ೧೩ ರನ್‌ಗಳನ್ನಷ್ಟೇ ನೀಡಿದ ರಶೀದ್ ಖಾನ್, ಎರಡು ವಿಕೆಟ್ ಗಳಿಸಿದ್ದರು. ಒಂದು ಹಂತದಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ನಿರ್ಣಾಯಕ ಘಟ್ಟದಲ್ಲಿ ಬೊಂಬಾಟ್ ಬ್ಯಾಟಿಂಗ್ ನಡೆಸಿದ ರಶೀದ್, ೮ ಬೌಂಡರಿ, ೧ ಸಿಕ್ಸರ್ ಸಿಡಿಸಿದರಲ್ಲದೆ, ೯ ಓವರ್‌ಗಳಲ್ಲಿ ೧೩ ರನ್‌ಗೆ ೨ ವಿಕೆಟ್ ಉರುಳಿಸಿದರು.

ಅವರೊಂದಿಗೆ ಮುಜೀಬ್ ಉರ್ ರೆಹಮಾನ್ ೨೨ಕ್ಕೆ ೨, ಗುಲ್ಬದಿನ್ ನಾಯಿಬ್ ೩೦ಕ್ಕೆ ೨ ವಿಕೆಟ್ ಗಳಿಸಿದರೆ, ಅಫ್ತಾಬ್ ಆಲಮ್, ಮೊಹಮದ್ ನಬಿ ಹಾಗೂ ರಹಮದ್ ಶಾ ತಲಾ ಒಂದೊಂದು ವಿಕೆಟ್ ಗಳಿಸುವುದರೊಂದಿಗೆ ಆಫ್ಘಾನಿಸ್ತಾನ ತಂಡ, ಬಾಂಗ್ಲಾದೇಶವನ್ನು ೧೩೬ ರನ್‌ಗಳಿಂದ ಮಣಿಸಿತು. ಗೆಲ್ಲಲು ೨೫೬ ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ , ಆಫ್ಘನ್ ಬೌಲರ್‌ಗಳ ದಾಳಿಗೆ ಸಿಲುಕಿ ೪೨.೧ ಓವರ್‌ಗಳಲ್ಲಿ ೧೧೯ ರನ್‌ಗಳಿಗೆ ಸರ್ವಪತನ ಕಂಡಿತು.

ಅಂದಹಾಗೆ, ಹದಿನೇಳರ ಹರೆಯದಲ್ಲೇ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ ೧೧ ರನ್‌ಗೆ ಮೂರು ವಿಕೆಟ್ ಗಳಿಸಿದ ರಶೀದ್ ಖಾನ್, ತಾನೋರ್ವ ಅಪಾಯಕಾರಿ ಸ್ಪಿನ್ನರ್ ಎಂಬುದನ್ನು ಮುಂತಿಳಿಸಿದ್ದರು. ಪಂದ್ಯದಿಂದ ಪಂದ್ಯಕ್ಕೆ ಪರಿಣಾಮಕಾರಿ ಆಟದೊಂದಿಗೆ ಮುನ್ನಡೆಯುತ್ತಿರುವ ರಶೀದ್ ಖಾನ್ ಛಾಪು ಮೂಡಿಸುತ್ತಲೇ ಸಾಗಿದ್ದಾರೆ. ಇದೇ ಸ್ಥಿರತೆಯನ್ನು ಕಾಯ್ದುಕೊಂಡು ಹೋದದ್ದೇ ಆದಲ್ಲಿ, ನಿಸ್ಸಂಶಯವಾಗಿಯೂ ವಿಶ್ವದ ಶ್ರೇಷ್ಠ ಬೌಲರ್‌ಗಳ ಟಾಪ್ ಟೆನ್ ಪಟ್ಟಿಗೆ ಲಗ್ಗೆ ಇಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ರಶೀದ್ ಖಾನ್ ಏಕೈಕ ಟೆಸ್ಟ್ ಪಂದ್ಯದಲ್ಲಿ ೨ ವಿಕೆಟ್ ಗಳಿಸಿದ್ದರೆ, ೪೭ ಏಕದಿನ ಪಂದ್ಯಗಳಲ್ಲಿ ೩.೮೬ ಎಕಾನಮಿಯಲ್ಲಿ ೧೧೨ ವಿಕೆಟ್ ಗಳಿಸಿದ್ದಾರೆ. ೩೫ ಟಿ೨೦ ಪಂದ್ಯಗಳಲ್ಲಿ ೬.೦೧ ಎಕಾನಮಿಯಲ್ಲಿ ೬೪ ವಿಕೆಟ್ ಗಳಿಸಿರುವ ಅವರು, ೩೧ ಐಪಿಎಲ್ ಪಂದ್ಯಗಳಲ್ಲಿ ೬.೬೮ ಎಕಾನಮಿಯಲ್ಲಿ ೩೮ ವಿಕೆಟ್ ಉರುಳಿಸಿದ್ದಾರೆ. ಇನ್ನು, ೪೯ ಏಕದಿನ ಪಂದ್ಯಗಳಲ್ಲಿ ಐರ್ಲೆಂಡ್ ವಿರುದ್ಧದ ಗರಿಷ್ಠ ೬೦ ರನ್ ಸೇರಿದ ಮೂರು ಅರ್ಧಶತಕ ಬಾರಿಸಿರುವ ಖಾನ್, ೬೫೯ ರನ್ ಗಳಿಸಿದ್ದರೆ, ೩೫ ಟಿ೨೦ ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧದ ೩೩ ಗರಿಷ್ಠ ರನ್ ಸೇರಿದ ೧೧೬ ರನ್ ಗಳಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More