ಏಷ್ಯಾ ಕಪ್ | ಜಡೇಜಾ ಜಾದೂಗೆ ತಲೆದೂಗಿ ಸಾಧಾರಣ ಮೊತ್ತಕ್ಕೆ ಕುಸಿದ ಬಾಂಗ್ಲಾ

ಸ್ಪಿನ್ ಮಾಂತ್ರಿಕ ರವೀಂದ್ರ ಜಡೇಜಾ ಸ್ಪಿನ್ ಸುಳಿಗೆ ಸಿಲುಕಿದ ಬಾಂಗ್ಲಾದೇಶ,  ಏಷ್ಯಾ ಕಪ್ ಟೂರ್ನಿಯ ಸೂಪರ್ ೪ರ ಘಟ್ಟದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ೧೭೩ ರನ್‌ಗಳಿಗೆ ಆಲೌಟ್ ಆಯಿತು. ಬುಮ್ರಾ (೩೭ಕ್ಕೆ ೩) ಮತ್ತು ಭುವನೇಶ್ವರ್ (೩೨ಕ್ಕೆ ೩) ಕೂಡ ಬಾಂಗ್ಲಾ ಇನ್ನಿಂಗ್ಸ್‌ಗೆ ಮಾರಕರಾದರು 

ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಸೂಪರ್ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿರುವ ಭಾರತ ತಂಡ, ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಜಯಭೇರಿ ಬಾರಿಸಲು ಬೌಲರ್‌ಗಳು ಮತ್ತೊಮ್ಮೆ ಮನೋಜ್ಞ ಮುನ್ನುಡಿ ಬರೆದರು. ಸ್ಪಿನ್ ಜಾದೂಗಾರ ರವೀಂದ್ರ ಜಡೇಜಾ ಜತೆಗೆ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ನಡೆಸಿದ ಕರಾರುವಾಕ್ ವೇಗದ ದಾಳಿಗೆ ಬಾಂಗ್ಲಾದೇಶ ನಲುಗಿತು.

ವೇಗಿಗಳಿಗಿಂತಲೂ ಮಿಗಿಲಾಗಿ ಬಾಂಗ್ಲಾದೇಶದ ಇನ್ನಿಂಗ್ಸ್‌ಗೆ ಬಲುದೊಡ್ಡ ಪ್ರಹಾರ ನೀಡಿದ್ದು ರವೀಂದ್ರ ಜಡೇಜಾ. ಸರಿಸುಮಾರು ಒಂದು ವರ್ಷದ ಬಳಿಕ ಏಕದಿನ ಕ್ರಿಕೆಟ್ ಆಡಿದ ಜಡೇಜಾ, ಶುಕ್ರವಾರ (ಸೆ ೨೧) ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೊದಲ ಮೂರು ಎಸೆತಗಳಲ್ಲಿ ೧೧ ರನ್ ನೀಡಿದರೂ, ಆನಂತರದಲ್ಲಿ ಅವರ ಸ್ಪಿನ್ ಬೌಲಿಂಗ್‌ಗೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಗಿರಕಿ ಹೊಡೆದರು.

ಕೆಳ ಕ್ರಮಾಂಕದಲ್ಲಿ ನಾಯಕ ಮಶ್ರಫ್ ಮೊರ್ತಜಾ (೨೬: ೩೨ ಎಸೆತ, ೨ ಬೌಂಡರಿ) ಮತ್ತು ಮೆಹಿದಿ ಹಸನ್ (೪೨: ೫೦ ಎಸೆತ, ೨ ಬೌಂಡರಿ, ೨ ಸಿಕ್ಸರ್) ನೀಡಿದ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನದಿಂದ ಬಾಂಗ್ಲಾದೇಶ ತಂಡ, ಅಲ್ಪ ಮೊತ್ತವನ್ನು ಪೇರಿಸಿತಾದರೂ, ಅಂತಿಮವಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ನಿಗದಿತ ೫೦ ಓವರ್‌ಗಳನ್ನು ಮುಗಿಸಲಾಗದೆ ೧೭೩ ರನ್‌ಗಳಿಗೆ ಆಲೌಟ್ ಆಯಿತು.

ಜಡೇಜಾ ಜಾದೂ!

ಇದನ್ನೂ ಓದಿ : ಏಷ್ಯಾ ಕಪ್| ಆಲ್ರೌಂಡರ್‌ಗಳ ಭಾರತಕ್ಕೆ ಸಾಟಿಯಾಗದ ಪಾಕ್‌ಗೆ ಹೀನಾಯ ಸೋಲು!

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮತ್ತೊಮ್ಮೆ ಆರಂಭಿಕರಾದ ಲಿಟನ್ ದಾಸ್ (೭) ಮತ್ತು ನಜ್ಮುಲ್ ಹುಸೇನ್ ಶಾಂಟೊ (೭) ಕ್ರಮವಾಗಿ ೫ ಮತ್ತು ಆರನೇ ಓವರ್‌ನಲ್ಲಿ ಭುವನೇಶ್ವರ್ ಮತ್ತು ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ವಿಕೆಟ್ ಒಪ್ಪಿಸಿ ಕ್ರೀಸ್ ತೊರೆದರು. ಆದರೆ, ಬಾಂಗ್ಲಾದೇಶ ನಿಜವಾಗಿಯೂ ತತ್ತರಗೊಂಡಿದ್ದು, ಆರಂಭಿಕರನ್ನು ಕಳೆದುಕೊಂಡ ಬಳಿಕವೇ.

ಅಪಾಯಕಾರಿ ಬ್ಯಾಟ್ಸ್‌ಮನ್‌ ಮುಷ್ಪೀಕರ್ ರಹೀಮ್ (೨೧: ೪೫ ಎಸೆತ, ೧ ಬೌಂಡರಿ) ಸೇರಿದಂತೆ ಆಲ್ರೌಂಡರ್ ಶಕೀಬ್ ಅಲ್ ಹಸನ್ (೧೭) ಮತ್ತು ಮೊಹಮದ್ ಮಿಥುನ್ (೯) ವಿಕೆಟ್ ಎಗರಿಸಿದ ಜಡೇಜಾ, ಭಾರತದ ಕೈ ಮೇಲಾಗುವಂತೆ ಮಾಡಿದರು. ಆನಂತರದಲ್ಲಿ ಮಹಮುದುಲ್ಲಾ (೨೫), ಮೊಸಾದೆಕ್ ಹುಸೇನ್ (೧೨) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಮೊರ್ತಜಾ-ಮೆಹೆದಿ ಜತೆಯಾಟ

ಏಳು ವಿಕೆಟ್ ನಷ್ಟಕ್ಕೆ ಕೇವಲ ೧೦೧ ರನ್‌ಗಳಿಗೆ ಸರ್ವಪತನ ಕಂಡಿದ್ದ ಬಾಂಗ್ಲಾದೇಶದ ಮೊತ್ತವನ್ನು ತುಸು ಹಿಗ್ಗಿಸಿದ್ದು ಹಾಗೂ ಗೌರವದಾಯಕವಾಗಿಸಿದ್ದು ಮೆಹೆದಿ ಹಸನ್ ಮತ್ತು ಮೊರ್ತಜಾ. ಈ ಜೋಡಿ ಎಂಟನೇ ವಿಕೆಟ್‌ಗೆ ೫೪ ರನ್‌ಗಳ ಅರ್ಧಶತಕದ ಆಟವಾಡಿ ಬಾಂಗ್ಲಾ ಇನ್ನಿಂಗ್ಸ್‌ಗೆ ಕಿಂಚಿತ್ ಜೀವ ತುಂಬಿದರು. ೪೭ನೇ ಓವರ್‌ನ ಮೂರನೇ ಎಸೆತದಲ್ಲಿ ಭುವನೇಶ್ವರ್ ಬೌಲಿಂಗ್‌ನ ಮೊದಲ ಎರಡು ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ ಮೊರ್ತಜಾ, ಮರು ಎಸೆತವನ್ನೂ ಸಿಕ್ಸರ್‌ಗೆ ಎತ್ತಲು ಯತ್ನಿಸಿದರಾದರೂ, ಬುಮ್ರಾಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಅವರ ನಿರ್ಗಮನದ ನಂತರದಲ್ಲಿ ಹಸನ್ ಕೂಡ ಮರು ಓವರ್‌ನಲ್ಲಿ ಔಟಾದರು. ಬುಮ್ರಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಹಸನ್, ಶಿಖರ್ ಧವನ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಮುಸ್ತಾಫಿಜುರ್ ರೆಹಮಾನ್ (೩) ಕೂಡ ಇದೇ ಬುಮ್ರಾ ಬೌಲಿಂಗ್‌ನಲ್ಲಿ ಧವನ್‌ಗೆ ಕ್ಯಾಚ್ ನೀಡುತ್ತಿದ್ದಂತೆ ಬಾಂಗ್ಲಾ ಇನ್ನಿಂಗ್ಸ್‌ಗೆ ತೆರೆಬಿದ್ದಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More