ಏಷ್ಯಾ ಕಪ್ | ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಪಾಕ್ ಸಮರಕ್ಕೆ ಸಜ್ಜಾದ ಭಾರತ

ಮತ್ತೊಂದು ಆಲ್ರೌಂಡ್ ಪ್ರದರ್ಶನದಿಂದ ಮಿಂಚು ಹರಿಸಿದ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ ೭ ವಿಕೆಟ್ ಜಯ ಸಾಧಿಸಿ ಪಾಕ್ ವಿರುದ್ಧದ ಎರಡನೇ ಹಣಾಹಣಿಗೆ ಸಜ್ಜಾಗಿದೆ. ಜಡೇಜಾ (೨೯ಕ್ಕೆ ೪) ಜಾದೂ ಬಳಿಕ ರೋಹಿತ್ ಶರ್ಮಾ (೮೩) ಅಜೇಯ ಅರ್ಧಶತಕ ಭಾರತಕ್ಕೆ ಸುಲಭ ಜಯ ತಂದಿತ್ತಿತು

ಬಾಂಗ್ಲಾದೇಶ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದಾಗಲೇ ಭಾರತ ತಂಡದ ಗೆಲುವು ಖಚಿತವಾಗಿತ್ತು. ಆ ಗೆಲುವಿಗೆ ಅಧಿಕೃತ ಮುದ್ರೆ ಒತ್ತಿದ್ದು ರೋಹಿತ್ ಶರ್ಮಾ ಅಜೇಯ ಬ್ಯಾಟಿಂಗ್. ಒಟ್ಟಾರೆ ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ ಅವರ ಮನೋಜ್ಞ ಆಟದೊಂದಿಗೆ ಭಾರತ ತಂಡ, ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು, ಇದೀಗ ಪಾಕಿಸ್ತಾನ ವಿರುದ್ಧ ಭಾನುವಾರ (ಸೆ.೨೩) ನಡೆಯಲಿರುವ ಸೂಪರ್ ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಗೆಲುವು ಸಾಧಿಸಲು ತುಡಿಯುತ್ತಿದೆ.

ಶುಕ್ರವಾರ (ಸೆ.೨೧) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ, ಏಳು ವಿಕೆಟ್‌ ಗೆಲುವು ಪಡೆಯಿತು. ಕೇವಲ ೧೭೪ ರನ್ ಗುರಿ ಪಡೆದಿದ್ದ ಭಾರತ, ೩೬.೨ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ೧೭೪ ರನ್‌ ಗಳಿಸುವುದರೊಂದಿಗೆ ಜಯಶಾಲಿಯಾಯಿತು.

ಸಾಮಾನ್ಯ ಮೊತ್ತವನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಕಂಡಿತು. ಆರಂಭಿಕರಾದ ರೋಹಿತ್ ಶರ್ಮಾ (೮೩: ೧೦೪ ಎಸೆತ, ೫ ಬೌಂಡರಿ, ೩ ಸಿಕ್ಸರ್) ಹಾಗೂ ಶಿಖರ್ ಧವನ್ (೪೦: ೪೭ ಎಸೆತ, ೪ ಬೌಂಡರಿ, ೧ ಸಿಕ್ಸರ್) ಮೊದಲ ವಿಕೆಟ್‌ಗೆ ೬೧ ರನ್ ಕಲೆಹಾಕಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ೧೫ನೇ ಓವರ್‌ನ ಎರಡನೇ ಎಸೆತದಲ್ಲಿ ಆಲ್ರೌಂಡರ್ ಶಕೀಬ್ ಅಲ್ ಹಸನ್, ಧವನ್ ಅವರನ್ನು ಎಲ್‌ಬಿ ಬಲೆಗೆ ಸಿಲುಕಿಸಿದ ಬಳಿಕ ಬಂದ ಅಂಬಟಿ ರಾಯುಡು (೧೩) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಇದನ್ನೂ ಓದಿ : ಏಷ್ಯಾ ಕಪ್ | ಜಡೇಜಾ ಜಾದೂಗೆ ತಲೆದೂಗಿ ಸಾಧಾರಣ ಮೊತ್ತಕ್ಕೆ ಕುಸಿದ ಬಾಂಗ್ಲಾ

ಆದರೆ, ನಂತರದಲ್ಲಿ ಆಡಲಿಳಿದ ಮಾಜಿ ನಾಯಕ ಎಂ ಎಸ್ ಧೋನಿ (೩೩: ೩೭ ಎಸೆತ, ೩ ಬೌಂಡರಿ) ರೋಹಿತ್‌ಗೆ ಉತ್ತಮ ಬೆಂಬಲ ನೀಡಿದರು.. ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ ೬೪ ರನ್ ಪೇರಿಸಿ ಭಾರತದ ಗೆಲುವನ್ನು ಇನ್ನಷ್ಟು ಸುಗಮಗೊಳಿಸಿತು. ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲೇ ಅವಕಾಶ ಸಿಗದ ಧೋನಿ, ಬಾಂಗ್ಲಾ ವಿರುದ್ಧ ಆಕರ್ಷಕ ಆಟವಾಡಿದರು. ತಂಡ ಗೆಲುವಿನ ಅಂಚಿನಲ್ಲಿದ್ದಾಗ ಬಾಂಗ್ಲಾ ನಾಯಕ ಮಶ್ರಫೆ ಮೊರ್ತಜಾ ಬೌಲಿಂಗ್‌ನಲ್ಲಿ ಧೋನಿ ಮಿಥುನ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ತದನಂತರ ದಿನೇಶ್ ಕಾರ್ತಿಕ್ (೧) ಗೆಲುವಿನ ರನ್‌ ಬಾರಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ಜಡೇಜಾ ಹೆಣೆದ ಸ್ಪಿನ್ ಬಲೆಯಲ್ಲಿ ಸಿಲುಕಿ ಅಲ್ಪ ಮೊತ್ತಕ್ಕೆ ಕುಸಿಯಿತು. ಜಡೇಜಾ ನಿರ್ಣಾಯಕ ಘಟ್ಟದಲ್ಲಿ ಬಾಂಗ್ಲಾದೇಶದ ಇನ್ನಿಂಗ್ಸ್‌ಗೆ ಭಾರಿ ಹೊಡೆತ ನೀಡಿದರೆ, ವೇಗಿ ಭುವನೇಶ್ವರ್ ಕುಮಾರ್ (೩೨ಕ್ಕೆ ೩) ಮತ್ತು ಜಸ್ಪ್ರೀತ್ ಬುಮ್ರಾ (೩೭ಕ್ಕೆ ೩) ತಲಾ ಮೂರು ವಿಕೆಟ್‌ ಪಡೆದು ಬಾಂಗ್ಲಾದೇಶವನ್ನು ೧೭೩ ರನ್‌ಗಳಿಗೆ ಕಟ್ಟಿಹಾಕಿದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: ೪೯.೧ ಓವರ್‌ಗಳಲ್ಲಿ ೧೭೩ (ಮಹಮುದುಲ್ಲಾ ೨೫, ಮೊರ್ತಜಾ ೨೬, ಮೆಹಿದಿ ಹಸನ್ ೪೨; ರವೀಂದ್ರ ಜಡೇಜಾ ೨೯ಕ್ಕೆ ೪) ಭಾರತ: ೩೬.೨ ಓವರ್‌ಗಳಲ್ಲಿ ೧೭೪/೩ (ರೋಹಿತ್ ಶರ್ಮಾ ೮೩, ಶಿಖರ್ ಧವನ್ ೪೦; ರೂಬೆಲ್ ಹುಸೇನ್ ೨೧ಕ್ಕೆ ೧) ಫಲಿತಾಂಶ: ಭಾರತಕ್ಕೆ ೭ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More