ಏಷ್ಯಾ ಕಪ್ | ಫೈನಲ್ ಗುರಿ ಹೊತ್ತಿರುವ ರೋಹಿತ್ ಬಳಗಕ್ಕೆ ಮತ್ತೊಮ್ಮೆ ಪಾಕ್ ಸವಾಲು

ಏಳನೇ ಬಾರಿಗೆ ಪ್ರತಿಷ್ಠಿತ ಏಷ್ಯಾ ಕಪ್ ಟ್ರೋಫಿ ಗೆಲ್ಲುವ ಗುರಿ ಹೊತ್ತಿರುವ ಭಾರತ ತಂಡ ಪಾಕ್ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ಸಜ್ಜಾಗಿದೆ. ಗುಂಪು ಹಂತದಲ್ಲಿ ಹೀನಾಯ ಸೋಲನುಭವಿಸಿದ ಬೇಗುದಿಯಲ್ಲಿರುವ ಪಾಕ್, ಭಾನುವಾರ (ಸೆ.೨೩) ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಂಕಲ್ಪ ತೊಟ್ಟಿದೆ

ಒಂದರ ಹಿಂದೊಂದರಂತೆ ಸತತ ಮೂರು ಪಂದ್ಯ ಗೆದ್ದ ಭಾರತ ತಂಡ, ಇದೀಗ ಏಷ್ಯಾ ಕಪ್ ಫೈನಲ್‌ನತ್ತ ಚಿತ್ತ ಹರಿಸಿದೆ. ರೋಹಿತ್ ಶರ್ಮಾ ಸಾರಥ್ಯದ ತಂಡ ಅಮೋಘ ನಿರ್ವಹಣೆ ನೀಡುತ್ತಿದ್ದು, ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ರಯಾಸದ ಗೆಲುವು ಕಂಡ ನಂತರದ ಎರಡೂ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಕಂಡಿದೆ.

ಈ ಪೈಕಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧದ ೮ ವಿಕೆಟ್ ಅಂತರದ ಗೆಲುವು ಮುಖ್ಯವಾದುದು. ಆದರೆ, ಸೂಪರ್ ನಾಲ್ಕರ ಘಟ್ಟದಲ್ಲಿ ಆಫ್ಘಾನಿಸ್ತಾನ ವಿರುದ್ಧ ಮೂರು ವಿಕೆಟ್‌ ರೋಚಕ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ, ಇದೀಗ ಭಾರತದ ವಿರುದ್ಧ ನಡೆಯಲಿರುವ ನಿರ್ಣಾಯಕ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಪಾಕ್‌ ತಂಡದ ಸದ್ಯದ ಸ್ಥಿತಿ ಭಾರತ ತಂಡಕ್ಕಿಂತ ತೀರಾ ನಿಕೃಷ್ಟ ಎನ್ನುವಂತಿಲ್ಲ. ಆದಾಗ್ಯೂ, ರೋಹಿತ್ ಪಡೆಯ ವಿರುದ್ಧ ಮೊದಲ ಪಂದ್ಯದಲ್ಲಿ ಅದು ಅತೀವ ಒತ್ತಡಕ್ಕೆ ಸಿಲುಕಿದ್ದು ಸ್ಪಷ್ಟವಾಗಿತ್ತು.

ಸರ್ಫರಾಜ್ ಅಹಮದ್ ಸಾರಥ್ಯದ ಪಾಕ್ ತಂಡ ಅಸ್ಥಿರ ಆಟದಿಂದಲೇ ಭಾರತದ ವಿರುದ್ಧ ಗುಂಪು ಹಂತದಲ್ಲಿ ಸೋಲನುಭವಿಸಿತ್ತು. ದುರ್ಬಲ ಹಾಂಕಾಂಗ್ ವಿರುದ್ಧ ಬಹುದೊಡ್ಡ ಗೆಲುವು ಸಾಧಿಸಿದ ಅದು, ಆಫ್ಘಾನಿಸ್ತಾನ ವಿರುದ್ಧವಂತೂ ತಿಣುಕಿತ್ತು. ಇದು ಆ ತಂಡದಲ್ಲಿನ ಕೊರತೆಯನ್ನು ನಿಚ್ಚಳವಾಗಿ ಸಾರಿದೆ. ಆದರೆ, ಹಾಂಕಾಂಗ್ ಪಂದ್ಯದ ಬಳಿಕ ಭಾರತ ತಂಡ ಆಲ್ರೌಂಡ್ ಪ್ರದರ್ಶನದಿಂದ ಪುಟಿದೆದ್ದು ನಿಂತಿದೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವಣದ ಬಹುದೊಡ್ಡ ವ್ಯತ್ಯಾಸವಿದು.

ಕಾಡದ ಕೊಹ್ಲಿ ಅನುಪಸ್ಥಿತಿ

ಪ್ರಮುಖ ಟೂರ್ನಿಯೊಂದರಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿಯ ಅನುಪಸ್ಥಿತಿ ತಂಡವನ್ನು ಬಾಧಿಸದಂತೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿರುವುದು ಪ್ರಮುಖ ಸಂಗತಿ. ಇನ್ನು, ಆರಂಭಿಕನಾಗಿ ಕಳೆದ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಫಾರ್ಮ್‌ನಲ್ಲಿರುವುದು ಪಾಕ್ ಪಡೆಗೆ ತಲೆನೋವಾಗಿ ಪರಿಣಮಿಸಿದೆ.

ರೋಹಿತ್‌ ಜೊತೆಯಾಗಿರುವ ಶಿಖರ್ ಧವನ್ ಕೂಡ ಹಿಂದೆ ಬಿದ್ದಿಲ್ಲ. ಇಂಗ್ಲೆಂಡ್ ಸರಣಿಯ ವೈಫಲ್ಯವನ್ನು ಮೆಟ್ಟಿನಿಂತಿರುವ ಈ ದೆಹಲಿ ಬ್ಯಾಟ್ಸ್‌ಮನ್, ಹಾಂಕಾಂಗ್ ವಿರುದ್ಧ ಭರ್ಜರಿ ಶತಕ ಸೇರಿದಂತೆ ಉಳಿದ ಎರಡೂ ಪಂದ್ಯಗಳಲ್ಲಿಯೂ ಗಮನಾರ್ಹ ಬ್ಯಾಟಿಂಗ್ ನಡೆಸಿದ್ದಾರೆ. ಇನ್ನು, ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯಡು ಮತ್ತು ದಿನೇಶ್ ಕಾರ್ತಿಕ್ ನಿರಾಸೆ ಮೂಡಿಸಿಲ್ಲ. ಇನ್ನು, ಧೋನಿ ಮತ್ತು ಕೇದಾರ್ ಜಾಧವ್ ಕ್ರೀಸ್‌ಗೆ ಇಳಿಯಲೇ ಅವಕಾಶವಿಲ್ಲದಂತೆ ಮುಂಚೂಣಿ ಆಟಗಾರರೇ ಭಾರತಕ್ಕೆ ಗೆಲುವು ತಂದೀಯುತ್ತಿದ್ದಾರೆ.

ಬೌಲಿಂಗ್‌ನಲ್ಲಂತೂ ಭಾರತ ಇನ್ನಷ್ಟು ಪ್ರಭಾವಿಯಾಗಿದೆ. ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಕಳೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಾಕ್ ವಿರುದ್ಧದ ಮೊದಲ ಹಂತದಲ್ಲಿ ಗೆಲುವು ಸಾಧಿಸಲು ಭುವಿಯ ಮಾರಕ ಸ್ಪೆಲ್ ಜತಗೆ ಕೇದಾರ್ ಜಾಧವ್ ಪಾಕ್ ಬ್ಯಾಟಿಂಗ್‌ ಬೆನ್ನೆಲುಬು ಮುರಿದಿದ್ದರು.

ಇದನ್ನೂ ಓದಿ : ಇಂಡೋ-ಪಾಕ್ ಕ್ರಿಕೆಟ್ ಕಾದಾಟದ ರೋಚಕ ಕ್ಷಣಗಳ ಐತಿಹಾಸಿಕ ಹಿನ್ನೋಟ 

ವಿಶ್ವಾಸದಲ್ಲಿ ಪಾಕ್

ಇತ್ತೀಚಿನ ದಿನಗಳಲ್ಲಿ ಅಭೂತಪೂರ್ವ ಪ್ರದರ್ಶನೊಂದಿಗೆ ಗೆಲುವಿನ ಮೇಲೆ ಗೆಲುವು ಸಾಧಿಸುತ್ತ ನಡೆದಿದ್ದ ಪಾಕಿಸ್ತಾನ ತಂಡ, ಪ್ರಸ್ತುತ ಟೂರ್ನಿಯಲ್ಲಿ ತನ್ನ ಸಹಜತೆಗೆ ತಕ್ಕಂತೆ ಆಡಿಲ್ಲ. ಭಾರತ ವಿರುದ್ಧವಂತೂ ಅತೀವ ಒತ್ತಡಕ್ಕೆ ಸಿಲುಕುವ ಅದು, ಈಗಾಗಲೇ ದಯನೀಯ ಸೋಲನುಭವಿಸಿದೆ. ಹೀಗಾಗಿ, ರೋಹಿತ್ ಪಡೆಯ ಕೈಯಲ್ಲಿ ಸತತ ಎರಡನೇ ಸೋಲನುಭವಿಸದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಆರಂಭಿಕ ಫಕಾರ್ ಜಮಾನ್ ಅಸ್ಥಿರ ಬ್ಯಾಟಿಂಗ್‌ನಿಂದ ಕಂಗೆಟ್ಟಿದ್ದರೆ, ಇಮಾಮ್ ಉಲ್ ಹಕ್ ಮತ್ತು ಬಾಬರ್ ಆಜಮ್ ಸಂಪೂರ್ಣ ನಿರಾಸೆ ಮೂಡಿಸಿಲ್ಲ. ಆದರೆ, ನಾಯಕ ಸರ್ಫರಾಜ್ ಅಹಮದ್ ಮಾತ್ರ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶೋಯೆಬ್ ಮಲಿಕ್ ಒಬ್ಬರನ್ನು ಬಿಟ್ಟರೆ ಹ್ಯಾರಿದ್ ಸೊಹೈಲ್, ಹಸನ್ ಅಲಿಯಂಥವರು ಸ್ಥಿರ ಪ್ರದರ್ಶನದ ಬರ ಎದುರಿಸುತ್ತಿದ್ದಾರೆ.

ಬಹುಮುಖ್ಯವಾಗಿ ಪಾಕ್ ತಂಡದ ನೈಜ ಬಲವಾದ ಬೌಲಿಂಗ್ ಅಷ್ಟೇನೂ ಸದ್ದು ಮಾಡಿಲ್ಲ. ಜುನೈದ್ ಖಾನ್, ಮೊಹಮದ್ ಆಮೀರ್, ಆಸಿಫ್ ಅಲಿಯಂಥವರು ಭಾರತದ ವಿರುದ್ಧ ನಿರಾಸೆ ಮೂಡಿಸಿದ್ದರು. ನಾಲ್ವರು ವೇಗಿಗಳಿಗೆ ಆದ್ಯತೆ ನೀಡಿದ್ದ ಪಾಕಿಸ್ತಾನ, ಪರಿಣಾಮಕಾರಿ ಸ್ಪಿನ್ ಬೌಲರ್ ಒಬ್ಬರನ್ನು ಕಣಕ್ಕಿಳಿಸುವ ಅಗತ್ಯವಿದೆ. ಒಟ್ಟಾರೆ, ಭಾರತದ ವಿರುದ್ಧ ಪುಟಿದೇಳುವ ಗುರಿ ಹೊತ್ತಿರುವ ಪಾಕ್, ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲಿ ಸೋತರೂ, ಫೈನಲ್‌ನಲ್ಲಿ ಜಯಭೇರಿ ಬಾರಿಸಿದಂತೆ ಪುಟಿದೇಳುವ ಸಂಕಲ್ಪ ತೊಟ್ಟಿದೆ.

ತಂಡಗಳು ಇಂತಿವೆ

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹಮದ್, ಸಿದ್ಧಾರ್ಥ್ ಕೌಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ದೀಪಕ್ ಚಾಹರ್.

ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಆಜಮ್, ಶಾನ್ ಮಸೂದ್, ಸರ್ಫರಾಜ್ ಅಹಮದ್ (ನಾಯಕ), ಶೋಯೆಬ್ ಮಲಿಕ್, ಹ್ಯಾರಿಸ್ ಸೊಹೈಲ್, ಶಾದಾಬ್ ಖಾನ್, ಮೊಹಮದ್ ನವಾಜ್, ಫಹೀಮ್ ಅಶ್ರಫ್, ಹಸನ್ ಅಲಿ, ಜುನೈದ್ ಖಾನ್, ಉಸ್ಮಾನ್ ಖಾನ್, ಶಾಹೀನ್ ಅಫ್ರಿದಿ, ಆಸೀಫ್ ಅಲಿ ಹಾಗೂ ಮೊಹಮದ್ ಆಮೀರ್.

ಪಂದ್ಯ ಆರಂಭ: ಸಂಜೆ ೫.೦೦ | ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ | ನೇರಪ್ರಸಾರ: ಸ್ಟಾರ್ ನೆಟ್ವರ್ಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More