ಏಷ್ಯಾ ಕಪ್ | ಆಫ್ಘನ್ ವಿರುದ್ಧ ರೋಚಕ ಜಯ ಪಡೆದ ಪಾಕ್‌ಗೆ ಈಗ ಭಾರತದ್ದೇ ಚಿಂತೆ

ಹಿರಿಯ ಹಾಗೂ ಅನುಭವಿ ಆಟಗಾರ ಶೋಯೆಬ್ ಮಲಿಕ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ನಾಲ್ಕರ ಘಟ್ಟದಲ್ಲಿ ಪಾಕಿಸ್ತಾನ ರೋಚಕ ಜಯ ಪಡೆಯಿತು. ಆಫ್ಘಾನಿಸ್ತಾನ ವಿರುದ್ಧ ಕೊನೇ ಓವರ್‌ನಲ್ಲಿ ಗೆದ್ದ ಪಾಕಿಸ್ತಾನಕ್ಕೀಗ ಭಾರತ ತಂಡದ್ದೇ ಚಿಂತೆಯಾಗಿದೆ

ಕೌತುಕದ ಅಂಚಿಗೆ ಬಂದುನಿಂತಿದ್ದ ಪಂದ್ಯಕ್ಕೆ ರೋಚಕ ತಿರುವು ನೀಡಿದ ಪಾಕ್, ಆಫ್ಘಾನಿಸ್ತಾನ ಒಡ್ಡಿದ ಪ್ರಬಲ ಪ್ರತಿರೋಧವನ್ನು ಮೆಟ್ಟಿನಿಂತಿತು. ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ, ಮಹತ್ವಪೂರ್ಣ ಪಂದ್ಯದಲ್ಲಿ ಪುಟಿದೆದ್ದಿದ್ದು, ಇದೀಗ ಭಾನುವಾರ (ಸೆ.೨೩) ನಡೆಯಲಿರುವ ಭಾರತ ವಿರುದ್ಧದ ವಿರುದ್ಧದ ಮತ್ತೊಂದು ಸುತ್ತಿನ ಹಣಾಹಣಿಗೆ ಅಣಿಯಾಗಿದೆ.

ಶುಕ್ರವಾರ (ಸೆ.೨೧) ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ ನಾಲ್ಕರ ಘಟ್ಟದ ಎರಡನೇ ಪಂದ್ಯದಲ್ಲಿ ಗೆಲ್ಲಲು ೨೫೮ ರನ್ ಗುರಿ ಪಡೆದಿದ್ದ ಪಾಕಿಸ್ತಾನ, ಆಫ್ಘನ್ ಬೌಲರ್‌ಗಳ ದಾಳಿಯಲ್ಲಿ ಕಳೆದುಹೋಗುವ ಅಪಾಯಕ್ಕೆ ಸಿಲುಕಿತ್ತು. ಪಂದ್ಯದ ಕೊನೇ ಓವರ್‌ನಲ್ಲಿ ಗೆಲುವು ಪಡೆದ ಪಾಕಿಸ್ತಾನ ತಂಡ ನಿಟ್ಟುಸಿರುಬಿಟ್ಟರೆ, ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ್ದಕ್ಕಾಗಿ ಆಫ್ಘಾನಿಸ್ತಾನ ತಂಡ ಪರಿತಪಿಸಿತು.

ಆಫ್ಘನ್ ನೀಡಿದ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ, ಆರಂಭಿಕ ಫಖಾರ್ ಜಮಾನ್ (೦) ಅವರನ್ನು ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಕಳೆದುಕೊಂಡಿತು. ಯಾವುದೇ ರನ್ ಗಳಿಸದೆ ಮೊದಲ ವಿಕೆಟ್ ಬಲಿಗೊಟ್ಟ ಪಾಕಿಸ್ತಾನಕ್ಕೆ ಇಮಾಮ್ ಉಲ್ ಹಕ್ (೮೦: ೧೦೪ ಎಸೆತ, ೫ ಬೌಂಡರಿ, ೧ ಸಿಕ್ಸರ್) ಹಾಗೂ ಬಾಬರ್ ಆಜಮ್ (೬೬: ೯೪ ಎಸೆತ, ೪ ಬೌಂಡರಿ, ೧ ಸಿಕ್ಸರ್) ಮನೋಜ್ಞ ಜೊತೆಯಾಟ ಚೇತರಿಕೆ ನೀಡಿತು.

ಇದನ್ನೂ ಓದಿ : ವಿಶ್ವ ಆಲ್ರೌಂಡರ್‌ ಪಟ್ಟಿಗೆ ಸೇರಲು ತುಡಿಯುತ್ತಿರುವ ಆಫ್ಘನ್ ಕ್ರಿಕೆಟಿಗ ರಶೀದ್

ಅತ್ಯುತ್ತಮ ಬ್ಯಾಟಿಂಗ್‌ನೊಂದಿಗೆ ಶತಕದತ್ತ ದಾಪುಗಾಲಿಟ್ಟಿದ್ದ ಇಮಾಮ್ ಉಲ್ ಹಕ್ ಇನ್ನಿಂಗ್ಸ್‌ನ ೩೪ನೇ ಓವರ್‌ನ ಮೂರನೇ ಎಸೆತದಲ್ಲಿ ನಜೀಬುಲ್ಲಾ ಅವರಿಂದ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಎರಡನೇ ವಿಕೆಟ್‌ಗೆ ೧೫೪ ರನ್‌ಗಳ ಅಮೋಘ ಜೊತೆಯಾಟವನ್ನು ನಜೀಬುಲ್ಲಾ ಬೇರ್ಪಡಿಸಿ ಪಂದ್ಯದಲ್ಲಿ ಆಫ್ಘನ್ ತಿರುಗಿಬೀಳಲು ನೆರವಾದರು. ಇಮಾಮ್ ನಿರ್ಗಮನದ ನಂತರದಲ್ಲಿ ಬಾಬರ್ ಕೂಡ ವಿಕೆಟ್ ಕಳೆದುಕೊಂಡರು. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಎಸೆತವನ್ನು ದಂಡಿಸಲು ಮುಂದಾದ ಅವರನ್ನು ಮೊಹಮದ್ ಶೆಹಜಾದ್ ಸ್ಟಂಪೌಟ್ ಮಾಡುವುದರೊಂದಿಗೆ ಪಾಕ್ ಆತಂಕಗೊಂಡಿತು.

ಇನ್ನು, ಹ್ಯಾರಿಸ್ ಸೊಹೈಲ್ (೧೨) ಮುಜೀಬ್ ಉರ್ ರೆಹಮಾನ್ ಬೌಲಿಂಗ್‌ನಲ್ಲಿ ಇಹ್ಸಾನುಲ್ಲಾಗೆ ಕ್ಯಾಚಿತ್ತು ಕ್ರೀಸ್ ತೊರೆದರು. ತದನಂತರದಲ್ಲಿ ಸರ್ಫರಾಜ್ ಅಹಮದ್ (೮), ಆಸಿಫ್ ಅಲಿ (೭) ಮತ್ತು ಮೊಹಮದ್ ನವಾಜ್ (೧೦) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದಾಗ ಪಾಕ್ ಸಂಕಷ್ಟ ಮತ್ತಷ್ಟು ಹೆಚ್ಚಿತು.

View this post on Instagram

Rashid shines on his birthday, helps #Afghanistan upset #Bangladesh. Afghanistan’s talented #spinner Rashid Khan scored a rapid unbeaten 32-ball 57 with eight fours and a six to lift Afghanistan to an effective 255-7 after their captain Asghar Afghan won the toss and decided to bat at Sheikh Zayed Stadium. He also took 2 #wickets in the 9 overs he bowled, finishing with 2-13 to help his team bundle out the #Bangladeshi Tigers for 119 in 42.1 overs. . . It was Afghanistan's second upset in the tournament following their 91-run win over Sri Lanka which sent the #islanders crashing out in the first round. . . Afghanistan next take on Pakistan in the double-header Super Four game in Abu Dhabi on Friday while title holders India meet Bangladesh in Dubai. . . . PC: AP | TOI #sports #instasport #cricket #odi #oneday #lovecricket #instacricket #cricketer #cricketers #afghanistancricket #cricketafghanistan #bangladeshcricket #cricketbangladesh #bangladeshtigers #icc #banvafg #uae #dubai #abudhabi #asia #asiacup #asiacup2018 #sportster #sportsterindia

A post shared by Sportster (@sportsterindia) on

ಶೋಯೆಬ್ ಮಿಂಚು

ಸಹ ಆಟಗಾರರು ಅಸ್ಥಿರ ಆಟದಿಂದ ಕ್ರೀಸ್ ತೊರೆಯುತ್ತ ನಡೆದರಾದರೂ, ಮಧ್ಯಮ ಕ್ರಮಾಂಕದಲ್ಲಿ ಅಚಲವಾಗಿ ನಿಂತ ಶೋಯೆಬ್ ಮಲಿಕ್ ಆಫ್ಘಾನಿಸ್ತಾನಕ್ಕೆ ಕಂಟಕರಾದರು. ಬಲು ಎಚ್ಚರಿಕೆಯಿಂದ ಆದರೆ, ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಿದ ಶೋಯೆಬ್, ಇನ್ನಿಂಗ್ಸ್‌ನ ಕೊನೇವರೆಗೂ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟರು. ಅಫ್ತಬ್ ಆಲಂ ನಿರ್ವಹಿಸಿದ ಕೊನೆಯ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಯೊಂದಿಗೆ ವಿಜೃಂಭಿಸಿದ ಶೋಯೆಬ್, ಆಫ್ಘನ್ನರ ಗೆಲುವಿನಾಸೆಗೆ ತಣ್ಣೀರು ಎರಚಿದರು..

ಇದಕ್ಕೂ ಮುನ್ನ, ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಹಶ್ಮತುಲ್ಲಾ ಶಾಹಿದಿ (೯೭*: ೧೧೮ ಎಸೆತ, ೭ ಬೌಂಡರಿ) ಮತ್ತು ನಾಯಕ ಅಸ್ಘರ್ ಅಫ್ಘನ್ (೬೭: ೫೬ ಎಸೆತ, ೨ ಬೌಂಡರಿ, ೫ ಸಿಕ್ಸರ್) ಅವರುಗಳ ಅಮೋಘ ಅರ್ಧಶತಕಗಳ ಬಲದಿಂದ ನಿಗದಿತ ೫೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೫೭ ರನ್ ಕಲೆಹಾಕಿ, ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: ೫೦ ಓವರ್‌ಗಳಲ್ಲಿ ೨೫೭/೬ (ಹಶ್ಮತುಲ್ಲಾ ಶಾಹಿದಿ ೯೭*, ಅಸ್ಘರ್ ಅಫ್ಘನ್ ೬೭; ಮೊಹಮದ್ ನವಾಜ್ ೫೭ಕ್ಕೆ ೩) ಪಾಕಿಸ್ತಾನ: ೪೯.೩ ಓವರ್‌ಗಳಲ್ಲಿ ೨೫೮/೭ (ಇಮಾಮ್ ಉಲ್ ಹಕ್ ೮೦ (ರನೌಟ್), ಬಾಬರ್ ಆಜಮ್ ೬೬, ಶೋಯೆಬ್ ಮಲಿಕ್ ೫೧*; ರಶೀದ್ ಖಾನ್ ೪೬ಕ್ಕೆ ೩; ಮುಜೀಬ್ ಉರ್ ರೆಹಮಾನ್ ೩೩ಕ್ಕೆ ೨) ಫಲಿತಾಂಶ: ಪಾಕಿಸ್ತಾನಕ್ಕೆ ೩ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಶೋಯೆಬ್ ಮಲಿಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More