ಏಷ್ಯಾ ಕಪ್ | ಶೋಯೆಬ್ ಮಲಿಕ್ ಮೋಹಕ ಆಟದಲ್ಲೂ ಮತ್ತೆ ಕುಸಿದ ಪಾಕ್

ಮತ್ತೊಮ್ಮೆ ಮನಮೋಹಕ ಬ್ಯಾಟಿಂಗ್ ನಡೆಸಿದ ಅನುಭವಿ ಆಟಗಾರ ಶೋಯೆಬ್ ಮಲಿಕ್ (೭೮), ಪಾಕಿಸ್ತಾನದ ಇನ್ನಿಂಗ್ಸ್‌ಗೆ ಜೀವ ತುಂಬಿದರು. ಆದರೆ, ನಿರ್ಣಾಯಕ ಘಟ್ಟದಲ್ಲಿ ಮಲಿಕ್ ಜೊತೆಗೆ ಆಸಿಫ್ ಅಲಿ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಮತ್ತೆ ಹಿನ್ನಡೆ ಅನುಭವಿಸಿದರೆ, ಭಾರತ ಪುಟಿದೆದ್ದಿತು

ಕೆಲವೇ ದಿನಗಳ ಹಿಂದೆ ನಡೆದ ಇದೇ ಏಷ್ಯಾ ಕಪ್ ಪಂದ್ಯಾವಳಿಯ ಗುಂಪು ಹಂತದ ಪಂದ್ಯಕ್ಕೆ ಹೋಲಿಸಿದರೆ, ಭಾರತ ಮತ್ತು ಪಾಕಿಸ್ತಾನ ನಡುವಣದ ಎರಡನೇ ಹಂತದ ಪಂದ್ಯದಲ್ಲಿ ಅಷ್ಟೇನೂ ವ್ಯತ್ಯಾಸ ಕೂಡಿರಲಿಲ್ಲ. ಮೊದಲ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್‌ಮನ್‌ಗಳು ಅನುಭವಿಸಿದ ಪಡಿಪಾಟಲು ಮತ್ತೊಮ್ಮೆ ಪುನರಾವರ್ತಿಸಿತು. ಆದಾಗ್ಯೂ, ಮಧ್ಯಮ ಕ್ರಮಾಂಕದಲ್ಲಿ ಶೋಯೆಬ್ ಮಲಿಕ್ (೭೮: ೯೦ ಎಸೆತ, ೪ ಬೌಂಡರಿ, ೨ ಸಿಕ್ಸರ್) ದಾಖಲಿಸಿದ ಅರ್ಧಶತಕ, ನಾಯಕ ಸರ್ಫರಾಜ್ ಖಾನ್ (೪೪: ೬೬ ಎಸೆತ, ೨ ಬೌಂಡರಿ) ಪಾಕಿಸ್ತಾನದ ಮೊತ್ತವನ್ನು ತುಸು ಹಿಗ್ಗಿಸಿತು.

ಭಾನುವಾರ (ಸೆ ೨೩) ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ ನಾಲ್ಕರ ಘಟ್ಟದ ಮೂರನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಪರಿಣಾಮಕಾರಿ ದಾಳಿಯಿಂದಾಗಿ ಪಾಕಿಸ್ತಾನ ನಿಗದಿತ ೫೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೨೩೭ ರನ್‌ ಗಳಿಸಿತು. ಭಾರತದಂಥ ಬಲಾಢ್ಯ ಬ್ಯಾಟಿಂಗ್ ತಂಡಕ್ಕೆ ಈ ಮೊತ್ತ ಅಷ್ಟೇನೂ ದುಬಾರಿಯಲ್ಲ ಎಂಬುದು ನಿಚ್ಚಳವಾಗಿದ್ದರ ಹಿನ್ನೆಲೆಯಲ್ಲಿ ಪಾಕ್ ಬೌಲಿಂಗ್ ಪಡೆಯನ್ನು ನೆಚ್ಚಿಕೊಳ್ಳುವಂತಾಯಿತು.

ಪಾಕ್ ಇನ್ನಿಂಗ್ಸ್‌ ಸ್ಪರ್ಧಾತ್ಮಕ ಮೊತ್ತದತ್ತ ಕಾಲಿಡುತ್ತಿದ್ದಾಗಲೇ ಜಾರಿಬಿದ್ದದ್ದು ಪಂದ್ಯಕ್ಕೆ ಮೊದಲ ತಿರುವು ನೀಡಿತು. ಒಂದು ಹಂತದಲ್ಲಿ ಅಂದರೆ, ೪೪ ಓವರ್‌ಗಳ ಹೊತ್ತಿಗೆ ೫ ವಿಕೆಟ್ ನಷ್ಟಕ್ಕೆ ೨೦೩ ರನ್ ಗಳಿಸಿದ್ದ ಪಾಕಿಸ್ತಾನ, ಕೊನೆಯ ಐದು ಓವರ್‌ಗಳಲ್ಲಿ ಇನ್ನಷ್ಟು ರನ್ ಕಲೆಹಾಕುವ ಸಾಧ್ಯತೆ ಇತ್ತಾದರೂ, ಈ ಅವಕಾಶವನ್ನು ಅದು ಕೈಚೆಲ್ಲಿತು. ಆಕ್ರಮಣಕಾರಿ ಆಟದಿಂದ ತಂಡದ ಮೊತ್ತವನ್ನು ಸವಾಲಿನತ್ತ ಕೊಂಡೊಯ್ಯುವ ಸುಳಿವು ನೀಡಿದ್ದ ಆಸಿಫ್ ಅಲಿ (೩೦: ೨೧ ಎಸೆತ, ೧ ಬೌಂಡರಿ, ೨ ಸಿಕ್ಸರ್) ೪೫ನೇ ಓವರ್‌ನ ಐದನೇ ಎಸೆತದಲ್ಲಿ ಯಜುವೇಂದ್ರ ಚಾಹಲ್‌ಗೆ ಬೌಲ್ಡ್ ಆಗಿ ಹೊರನಡೆದದ್ದು ಒಂದಾದರೆ, ಅದಕ್ಕೂ ಮುನ್ನ ೪೪ನೇ ಓವರ್‌ನಲ್ಲಿ ಶೋಯೆಬ್ ಮಲಿಕ್ ವಿಕೆಟ್ ಕಳೆದುಕೊಂಡದ್ದು ಭಾರತ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾಯಿತು.

ಶೋಯೆಬ್ ಮನೋಜ್ಞ ಬ್ಯಾಟಿಂಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಪಾಕಿಸ್ತಾನ, ಮತ್ತದೇ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಇಮಾಮ್ ಉಲ್ ಹಕ್ (೧೦) ಚಾಹಲ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದಾಗ ೮ ಓವರ್‌ಗಳಲ್ಲಿ ಪಾಕ್ ಮೊತ್ತ ೨೪ ರನ್‌ಗಳಷ್ಟೆ. ಕಳೆದ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಫಖಾರ್ ಜಮಾನ್ (೩೧: ೪೪ ಎಸೆತ, ೧ ಬೌಂಡರಿ, ೧ ಸಿಕ್ಸರ್) ಒಂದಷ್ಟು ಭರವಸೆ ಮೂಡಿಸಿದರೂ, ಅವರು ೧೫ನೇ ಓವರ್‌ನಲ್ಲಿ ನಿರ್ಗಮಿಸಿದರು.

೫೫ ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಪಾಕಿಸ್ತಾನ, ಮೂರು ರನ್ ಕಲೆಹಾಕುವಷ್ಟರಲ್ಲಿ ಬಾಬರ್ ಆಜಮ್ (೯) ಅವರನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಈ ಹಂತದಲ್ಲಿ ಜತೆಯಾದ ಸರ್ಫರಾಜ್ ಅಹಮದ್ ಮತ್ತು ಶೋಯೆಬ್ ಮಲಿಕ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ಕಲೆಹಾಕಿದ ೧೦೭ ರನ್‌ಗಳು ಕುಸಿಯುತ್ತಿದ್ದ ಪಾಕ್‌ಗೆ ನವಚೇತನ ನೀಡಿತು. ಆದರೆ, ಅರ್ಧಶತಕದ ಅಂಚಿನಲ್ಲಿದ್ದ ಸರ್ಫರಾಜ್, ಕುಲದೀಪ್ ಯಾದವ್‌ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ಹೊರನಡೆದರು.

ಬಳಿಕ ಬಂದ ಆಸಿಫ್ ಅಲಿ ಜತೆಗೂಡಿದ ಶೋಯೆಬ್ ಮಲಿಕ್ ಹೋರಾಟ ಮುಂದುವರೆಸಿದರು. ಮಲಿಕ್ ಆಕ್ರಮಣಕಾರಿ ಜತೆಗೆ ರಕ್ಷಣಾತ್ಮಕವಾಗಿಯೂ ಆಡಿದರೆ, ಅಲಿ ಮಾತ್ರ ನಿರ್ಭಿಡೆ ಆಟವಾಡಿದರು. ೪೨ನೇ ಓವರ್‌ನಲ್ಲಿ ಭುವನೇಶ್ವರ್‌ ಬೌಲಿಂಗ್‌ನಲ್ಲಿ ೧೭ ರನ್ ಕಲೆಹಾಕಿದರು. ಈ ಓವರ್‌ನಲ್ಲಿ ಮಲಿಕ್ ಮತ್ತು ಅಲಿ ಎರಡು ಸಿಕ್ಸರ್, ಎರಡು ಬೌಂಡರಿ ಸೇರಿದ ೨೨ ರನ್ ಕಲೆಹಾಕುವುದರೊಂದಿಗೆ ಭಾತದ ಪಾಳೆಯದಲ್ಲಿ ಆತಂಕ ಸೃಷ್ಟಿಸಿದರು. ಆದರೆ, ಕೇವಲ ಒಂದು ಓವರ್ ಅಂತರದಲ್ಲಿ ಈ ಇವರಿಬ್ಬರ ವಿಕೆಟ್ ಎಗರಿಸಿದ ಭಾರತ, ಹಿಡಿತ ಕಳೆದುಕೊಂಡಿದ್ದ ಪಂದ್ಯದಲ್ಲಿ ಮತ್ತೆ ಪುಟಿದೆದ್ದಿತು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: ೫೦ ಓವರ್‌ಗಳಲ್ಲಿ ೨೩೭/೭ (ಫಖಾರ್ ಜಮಾನ್ ೩೧, ಸರ್ಫರಾಜ್ ಅಹಮದ್ ೪೪, ಶೋಯೆಬ್ ಮಲಿಕ್ ೭೮, ಆಸಿಫ್ ಅಲಿ ೩೦; ಜಸ್ಪ್ರೀತ್ ಬುಮ್ರಾ ೨೯ಕ್ಕೆ ೨, ಯಜುವೇಂದ್ರ ಚಾಹಲ್ ೪೬ಕ್ಕೆ ೨, ಕುಲದೀಪ್ ಯಾದವ್ ೪೧ಕ್ಕೆ ೨)

ಮಹಮುದುಲ್ಲಾ ಮಿಂಚು

ಇದೇ ಭಾನುವಾರ ನಡೆದ ಸೂಪರ್ ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಇಮ್ರುಲ್ ಕಾಯೆಸ್ (೭೨*: ೮೯ ಎಸೆತ, ೬ ಬೌಂಡರಿ) ಮತ್ತು ಮಹಮುದುಲ್ಲಾ (೭೪: ೮೧ ಎಸೆತ, ೩ ಬೌಂಡರಿ, ೨ ಸಿಕ್ಸರ್) ಜತೆಯಾಟ ಬಾಂಗ್ಲಾದೇಶದ ಇನ್ನಿಂಗ್ಸ್‌ ಅನ್ನು ಮೇಲೆತ್ತಿತು. ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿಯ ಪ್ರಚಂಡ ಬ್ಯಾಟಿಂಗ್‌ನಿಂದ ಆಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ನಿಗದಿತ ೫೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೨೪೯ ರನ್ ಕಲೆಹಾಕುವಲ್ಲಿ ಸಫಲವಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More