ಆಫ್ಘಾನಿಸ್ತಾನ ವಿರುದ್ದ 3 ರನ್ ರೋಚಕ ಗೆಲುವು ಸಾಧಿಸಿದ ಬಾಂಗ್ಲಾ ಆಸೆ ಜೀವಂತ

ಏಷ್ಯಾ ಕಪ್ ಫೈನಲ್ ತಲುಪುವ ಬಾಂಗ್ಲಾದೇಶದ ಆಸೆ ಜೀವಂತವಾಗಿದೆ. ಮಹಮದುಲ್ಲಾ (೭೪) ಆಲ್ರೌಂಡ್ ಆಟದ ನೆರವಿನಲ್ಲಿ ಸೂಪರ್ ಫೋರ್ ನಾಲ್ಕರ ಘಟ್ಟದ ನಾಲ್ಕನೇ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಬಾಂಗ್ಲಾದೇಶ ೩ ರನ್‌ಗಳಿಂದ ಮಣಿಸಿತು. ಬುಧವಾರ (ಸೆ.೨೬) ಪಾಕಿಸ್ತಾನ ವಿರುದ್ಧ ಸೆಣಸಲಿದೆ

ಮತ್ತೊಮ್ಮೆ ಗೆಲುವಿನ ಅಂಚಿನಲ್ಲಿ ಆಫ್ಘಾನಿಸ್ತಾನ ಎಡವಿತು. ಒತ್ತಡದಿಂದ ತುಂಬಿದ್ದ ಕಡೇ ಓವರ್‌ಗಳಲ್ಲಿ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಬಾಂಗ್ಲಾದೇಶ ತಂಡ, ಆಫ್ಘನ್ನರನ್ನು ಕೂದಲೆಳೆಯ ಅಂತರದಿಂದ ಮಣಿಸಿ ಜಯದ ಕೇಕೆ ಹಾಕಿತು. ಜಯದ ಹಾದಿಯತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇರಿಸಿದ್ದ ಆಫ್ಘಾನಿಸ್ತಾನ ಪಂದ್ಯದ ಕೊನೆಯ ಹತ್ತು ಓವರ್‌ಗಳಲ್ಲಿ ಬಾಂಗ್ಲಾ ಬೌಲರ್‌ಗಳ ನಿಖರ ದಾಳಿಯನ್ನು ಮೆಟ್ಟಿ ನಿಲ್ಲಲಾಗಲಿಲ್ಲ.

ಅಪಾಯಕಾರಿ ಆಟಗಾರ ರಶೀದ್ ಖಾನ್ (೫) ಅವರನ್ನು ಮುಸ್ತಾಫಿಜುರ್ ರೆಹಮಾನ್ ಕಾಟ್ ಅಂಡ್ ಬೌಲ್ಡ್ ಮಾಡುತ್ತಿದ್ದಂತೆ ಆಫ್ಘಾನಿಸ್ತಾನದ ಅವಸಾನ ಸಮೀಪಿಸಿತು. ಮೊದಲ ಮೂರು ವಿಕೆಟ್‌ ಕಳೆದುಕೊಂಡು ಆರಂಭಿಕ ಸಂಕಷ್ಟಕ್ಕೆ ಸಿಲುಕಿದರೂ, ಒಂದು ಹಂತದಲ್ಲಿ ಹಶ್ಮತುಲ್ಲಾಹ್ (೭೧: ೯೯ ಎಸೆತ, ೫ ಬೌಂಡರಿ) ನಾಯಕ ಅಸ್ಫಗರ್ ಅಫ್ಘನ್ (೩೯) ಮತ್ತು ಮೊಹಮದ್ ನಬಿ (೩೮) ಅವರುಗಳ ಆಕರ್ಷಕ ಬ್ಯಾಟಿಂಗ್‌ನಲ್ಲಿ ಆಫ್ಘಾನಿಸ್ತಾನ ನಿಯಂತ್ರಣ ಸಾಧಿಸಿತ್ತು.

ಆದರೆ, ನಿರ್ಣಾಯಕ ಘಟ್ಟದಲ್ಲಿ ಹಶ್ಮತುಲ್ಲಾಹ್ ಅವರನ್ನು ಬಾಂಗ್ಲಾ ನಾಯಕ ಮಶ್ರಫೆ ಮೊರ್ತಜಾ ಬೌಲ್ಡ್ ಮಾಡಿದ್ದಲ್ಲದೆ, ಅಸ್ಘರ್ ಆಫ್ಘನ್ ವಿಕೆಟ್ ಎಗರಿಸಿ ಪಂದ್ಯಕ್ಕೆ ತಿರುವು ನೀಡಿದರು. ಎಲ್ಲಕ್ಕಿಂತ ಮಿಗಿಲಾಗಿ, ಆಫ್ಘಾನಿಸ್ತಾನ ಗೆಲುವಿನಿಂದ ವಂಚಿತವಾಗಲು ರಶೀದ್ ಖಾನ್ ವಿಕೆಟ್ ಕಳೆದುಕೊಂಡದ್ದೇ ಪ್ರಮುಖ ಕಾರಣ. ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಮುಸ್ತಾಫಿಜುರ್ ರೆಹಮಾನ್, ಈ ಅಪಾಯಕಾರಿ ಆಟಗಾರನನ್ನು ಕ್ರೀಸ್ ತೊರೆಯುವಂತೆ ಮಾಡಿ ತಂಡದ ರೋಚಕ ಗೆಲುವಿಗೆ ಕಾರಣರಾದರು. ಶಮೀವುಲ್ಲಾ ಶೆನ್ವಾರಿ ೧೯ ಎಸೆತಗಳಲ್ಲಿ ತಲಾ ಒಂದು ಬೌಂಡರಿ, ಸಿಕ್ಸರ್‌ ಸೇರಿದ ೨೩ ರನ್ ಗಳಿಸಿ ಅಜೇಯರಾಗುಳಿದರು.

ಇದನ್ನೂ ಓದಿ : ಬಣ್ಣದ ಲೋಕಕ್ಕೆ ಬರಲಿದ್ದಾರೆಯೇ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ?

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಭಾನುವಾರ (ಸೆ.೨೩) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ೫೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೨೪೯ ರನ್ ಗಳಿಸಿತು. ಲಿಟನ್ ದಾಸ್ (೪೧) ಮುಷ್ಪೀಕರ್ ರಹೀಮ್ (೩೩) ವಿಕೆಟ್ ಕಳೆದುಕೊಂಡ ಬಳಿಕ ಆಲ್ರೌಂಡರ್ ಶಕೀಬ್ ಅಲ್ ಹಸನ್ (೦) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದಾಗ ಬಾಂಗ್ಲಾದೇಶ ಸಂಕಷ್ಟ ಅನುಭವಿಸಿತು.

ಆದರೆ, ಇಮ್ರುಲ್ ಕಾಯೆಸ್ (೭೨: ೮೯ ಎಸೆತ, ೬ ಬೌಂಡರಿ) ಮತ್ತು ಮಹಮುದುಲ್ಲಾ (೭೪: ೮೧ ಎಸೆತ, ೩ ಬೌಂಡರಿ, ೨ ಸಿಕ್ಸರ್) ದಾಖಲಿಸಿದ ಅರ್ಧಶತಕವು ಬಾಂಗ್ಲಾದೇಶ ಇನ್ನಿಂಗ್ಸ್‌ಗೆ ಬಲ ತುಂಬಿತು. ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ ವಿಜೃಂಭಿಸಿದ ಈ ಜೋಡಿ, ಆಫ್ಘನ್ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸದಂತೆ ನೋಡಿಕೊಂಡಿತು. ಮಹಮುದುಲ್ಲಾ ಅಂತೂ ಆಲ್ರೌಂಡ್ ಆಟದಿಂದ ಮಿಂಚು ಹರಿಸಿದರು. ಆರಂಭಿಕ ಮೊಹಮದ್ ಶೆಹಜಾದ್ (೫೩) ವಿಕೆಟ್ ಎಗರಿಸಿ ಬಾಂಗ್ಲಾ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: ೫೦ ಓವರ್‌ಗಳಲ್ಲಿ ೨೪೯/೭ (ಲಿಟನ್ ದಾಸ್ ೪೧, ಇಮ್ರುಲ್ ಕಾಯೆಸ್ ೭೨, ಮಹಮುದುಲ್ಲಾ ೭೪; ಅಫ್ತಾಬ್ ಆಲಮ್ ೫೪ಕ್ಕೆ ೩) ಆಫ್ಘಾನಿಸ್ತಾನ: ೫೦ ಓವರ್‌ಗಳಲ್ಲಿ ೨೪೬/೭ (ಮೊಹಮದ್ ಶೆಹಜಾದ್ ೫೩, ಹಶ್ಮತುಲ್ಲಾಹ್ ಶಾಹಿದಿ ೭೧; ಮುಸ್ತಾಫಿಜುರ್ ರೆಹಮಾನ್ ೪೪ಕ್ಕೆ ೨, ಮಶ್ರಫೆ ಮೊರ್ತಜಾ ೬೨ಕ್ಕೆ ೨) ಫಲಿತಾಂಶ: ಬಾಂಗ್ಲಾದೇಶಕ್ಕೆ ೩ ರನ್ ಗೆಲುವು ಪಂದ್ಯಶ್ರೇಷ್ಠ: ಮಹಮುದುಲ್ಲಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More