ಏಷ್ಯಾ ಕಪ್ | ಪಾಕ್ ವಿರುದ್ಧ ಎರಡನೇ ಗೆಲುವು ಕಂಡ ಭಾರತದ ಫೈನಲ್‌ ಹಾದಿ ಸುಗಮ

ಆರಂಭಿಕರಾದ ರೋಹಿತ್ ಶರ್ಮಾ (೧೧೪*) ಮತ್ತು ಶಿಖರ್ ಧವನ್ (೧೧೧) ಜೋಡಿಯ ೨೧೦ ರನ್‌ಗಳ ಮೊದಲ ವಿಕೆಟ್ ದಾಖಲೆ ಆಟದೊಂದಿಗೆ ಭಾರತ ಏಷ್ಯಾ ಕಪ್‌ ಫೈನಲ್‌ ಸ್ಥಾನವನ್ನು ಸುಗಮಗೊಳಿತು. ಪಾಕ್ ಪಡೆಯನ್ನು ಎಲ್ಲ ವಿಭಾಗಗಳಲ್ಲೂ ಹಣಿದ ಭಾರತ, ೯ ವಿಕೆಟ್ ಭರ್ಜರಿ ಜಯ ಕಂಡಿತು

ಸರ್ಫರಾಜ್ ಅಹಮದ್ ಸಾರಥ್ಯದ ಪಾಕಿಸ್ತಾನ ತಂಡ, ಭಾರತದ ವಿರುದ್ಧ ಈ ಪರಿಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದೂ ಟೂರ್ನಿಯೊಂದರಲ್ಲಿ ಸತತ ಎರಡು ಸೋಲು ಅನುಭವಿಸಿದ ಪಾಕ್ ತಂಡ, ತನ್ನ ಆಟದ ವೈಖರಿಯ ಇಂಚಿಂಚನ್ನೂ ಪುನರ್ ಅವಲೋಕಿಸಿಕೊಳ್ಳಬೇಕಾಗಿಬಂದಿದೆ. ಒಂದು ಬಗೆಯಲ್ಲಿ, ಟೂರ್ನಿ ಪೂರ್ವದಲ್ಲಿ ಭಾರತದ ವಿರುದ್ಧ ಫೇವರಿಟ್ ಎನಿಸಿದ್ದ ಪಾಕ್ ಪಡೆಗೆ, ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಆಲ್ರೌಂಡ್ ಆಟದೊಂದಿಗೆ ಮರ್ಮಾಘಾತ ಉಂಟುಮಾಡಿತು. ಪಾಕ್ ವಿರುದ್ಧದ ಈ ಗೆಲುವಿನೊಂದಿಗೆ ಭಾರತ ಸತತ ನಾಲ್ಕು ಗೆಲುವು ಸಾಧಿಸಿದಂತಾಗಿದ್ದು, ಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿತು.

ಭಾನುವಾರ (ಸೆ.೨೩) ರಾತ್ರಿ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಫೋರ್ ಹಂತದ ಮೂರನೇ ಪಂದ್ಯದಲ್ಲಿ 238 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ, 39.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯ ಗಳಿಸಿತು. ಆರಂಭಿಕ ಜೋಡಿ ಶಿಖರ್ ಧವನ್ (114; 100 ಎಸೆತ, 2 ಸಿಕ್ಸರ್‌, 16 ಬೌಂಡರಿ) ಮತ್ತು ರೋಹಿತ್ ಶರ್ಮಾ (ಅಜೇಯ 111; 119 ಎಸೆತ, ೭ ಬೌಂಡರಿ, ೪ ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್‌ನಿಂದ ಭಾರತ, ಮತ್ತೊಮ್ಮೆ ಪಾಕ್ ವಿರುದ್ಧ ಜಯಭೇರಿ ಬಾರಿಸಿತು.

ಪ್ರಚಂಡ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಮೊದಲ ವಿಕೆಟ್‌ಗೆ ೨೧೦ ರನ್ ಕಲೆಹಾಕುವುದರೊಂದಿಗೆ ಪಾಕ್ ಗೆಲುವಿನ ಆಸೆಯನ್ನು ಹೊಸಕಿಹಾಕಿತು. ಪಾಕ್ ಕಪ್ತಾನ ಸರ್ಫರಾಜ್, ಭಾರತದ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ನಾನಾ ಬಗೆಯಲ್ಲಿ ಯತ್ನಿಸಿದರಾದರೂ ಅವರಿಗೆ ನಿರಾಸೆಯಾಯಿತೇ ಹೊರತು ಫಲ ಸಿಗಲಿಲ್ಲ. ಪಾಕ್ ಬೌಲಿಂಗ್ ಪಡೆ ತನ್ನ ಮೊನಚು ಕಳೆದುಕೊಂಡಿದ್ದುದು ಮತ್ತೊಮ್ಮೆ ಅನಾವರಣಗೊಂಡಿತು. ಅಮೋಘ ಶತಕ ದಾಖಲಿಸಿದ ಬಳಿಕ ಧವನ್, ಶೋಯೆಬ್ ಮಲಿಕ್ ಮತ್ತು ಹಸನ್ ಅಲಿ ಅವರಿಂದ ರನೌಟ್ ಆಗಿ ಕ್ರೀಸ್ ತೊರೆದ ಬಳಿಕ ಅಂಬಟಿ ರಾಯುಡು (೧೨) ಜೊತೆಗೆ ರೋಹಿತ್ ಶರ್ಮಾ ಅಜೇಯರಾಗುಳಿದರು.

ಇದನ್ನೂ ಓದಿ : ಏಷ್ಯಾ ಕಪ್ | ಶೋಯೆಬ್ ಮಲಿಕ್ ಮೋಹಕ ಆಟದಲ್ಲೂ ಮತ್ತೆ ಕುಸಿದ ಪಾಕ್

ಇದಕ್ಕೂ ಮುನ್ನ, ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ, ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ನಡೆಸಿದ ಕರಾರುವಾಕ್ ಬೌಲಿಂಗ್‌ ಎದುರು ಪರದಾಡಿತು. ಆದಾಗ್ಯೂ, ಶೋಯಬ್ ಮಲಿಕ್ ದಾಖಲಿಸಿದ ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 237 ರನ್‌ ಗಳಿಸಿತು.

ಲೀಗ್ ಹಂತದ ಪಂದ್ಯದಲ್ಲಿ ಇದೇ ಪಾಕ್ ವಿರುದ್ಧ ೮ ವಿಕೆಟ್ ಗೆಲುವಿನೊಂದಿಗೆ ವಿಜೃಂಭಿಸಿದ್ದ ಭಾರತ ತಂಡ, ಸೂಪರ್ ಫೋರ್ ಹಂತದಲ್ಲೂ ಜಯಶಾಲಿಯಾಯಿತು. ಟಾಸ್ ಗೆದ್ದ ಪಾಕ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಮಾಮ್ ಉಲ್ ಹಕ್ ಮತ್ತು ಫಖ್ರ್ ಜಮಾನ್ ಎಚ್ಚರಿಕೆಯಿಂದ ಇನಿಂಗ್ಸ್‌ ಆರಂಭಿಸಿದರಾದರೂ, ಎಂಟನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಯಜುವೇಂದ್ರ ಚಾಹಲ್ ಅವರು ಬೀಸಿದ ಎಲ್‌ಬಿ ಬಲೆಗೆ ಇಮಾಮ್ ಔಟಾದರು.

ಆನಂತರದ ಎಂಟು ಓವರ್‌ಗಳ ಬಳಿಕ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮೋಡಿ ಮಾಡಿದರು. 31 ರನ್‌ ಗಳಿಸಿದ್ದ ಜಮಾನ್, ಕೆಳಹಂತದ ಎಸೆತವನ್ನು ಆಡುವ ಪ್ರಯತ್ನದಲ್ಲಿ ಎಲ್‌ಬಿ ಬಲೆಗೆ ಸಿಲುಕಿ ಕ್ರೀಸ್ ತೊರೆದರು. ನಂತರದ ಓವರ್‌ನಲ್ಲಿ ಬಾಬರ್ ಆಜಮ್ ರನ್‌ಔಟ್ ಆದಾಗ ತಂಡ ಇನ್ನಷ್ಟು ಸಂಕಷ್ಷಕ್ಕೆ ಸಿಲುಕಿಕೊಂಡಿತು.

ಈ ಹಂತದಲ್ಲಿ ನಾಯಕ ಸರ್ಫರಾಜ್ ಅಹಮದ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಶೋಯಬ್ ಮಲಿಕ್ ಪಾಕ್‌ ಇನ್ನಿಂಗ್ಸ್‌ಗೆ ಜೀವ ತುಂಬಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ಈ ಇಬ್ಬರೂ ತಂಡಕ್ಕೆ ಚೇತರಿಕೆ ನೀಡಿದರು. ಸರ್ಫರಾಜ್‌ ತಾಳ್ಮೆಯ ಆಟಕ್ಕೆ ಒತ್ತು ನೀಡಿದರೆ, ಮಲಿಕ್ ರಕ್ಷಣಾತ್ಮಕವಾಗಿ ಆಡುವುದರೊಂದಿಗೆ ಬಿರುಸಿನ ಆಟದಿಂದಲೂ ಮಿಂಚಿದರು. ಸರ್ಫರಾಜ್ (44; 66 ಎಸೆತ, ೨ ಬೌಂಡರಿ) 39ನೇ ಓವರ್‌ನಲ್ಲಿ ಕುಲದೀಪ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ರೋಹಿತ್ ಶರ್ಮಾಗೆ ಸುಲಭ ಕ್ಯಾಚ್ ನೀಡುವುದರೊಂದಿಗೆ 107 ರನ್‌ಗಳ ನಾಲ್ಕನೇ ವಿಕೆಟ್‌ ಜೊತೆಯಾಟವೂ ಮುರಿದುಬಿತ್ತು.

View this post on Instagram

She is back again #indiavspakistan

A post shared by Bollywood.Fever (@instant.bolly143) on

ಸರ್ಫರಾಜ್ ನಿರ್ಗಮನದ ಬಳಿಕ 44ನೇ ಓವರ್‌ನಲ್ಲಿ ಮಲಿಕ್ (78; 90 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಆಟಕ್ಕೆ ಬುಮ್ರಾ ತಡೆಯೊಡ್ಡಿದರು. ಅವರ ರಿವರ್ಸ್‌ ಸ್ವಿಂಗ್‌ ಕೆಣಕಿದ ಮಲಿಕ್ ಅವರು ವಿಕೆಟ್‌ ಕೀಪರ್ ಧೋನಿಗೆ ಕ್ಯಾಚಿತ್ತರು. ನಂತರ ಜೊತೆಗೂಡಿದ ಆಸಿಫ್ ಅಲಿ ಮತ್ತು ಶಾದಾಬ್ ಖಾನ್ ಅವರು ರನ್‌ ಗಳಿಸಲು ಯತ್ನಿಸಿದರು. ಈ ಜೊತೆಯಾಟವನ್ನೂ ಬುಮ್ರಾ ಮುರಿದರು; ಶಾದಾಬ್ ಕ್ಲೀನ್‌ಬೌಲ್ಡ್ ಆದರು. ಆಸಿಫ್ ಅವರ ವಿಕೆಟ್‌ ಅನ್ನು ಚಾಹಲ್ ಎಗರಿಸಿದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: ೫೦ ಓವರ್‌ಗಳಲ್ಲಿ ೨೩೭/೭ (ಫಖಾರ್ ಜಮಾನ್ ೩೧, ಸರ್ಫರಾಜ್ ಅಹಮದ್ ೪೪, ಶೋಯೆಬ್ ಮಲಿಕ್ ೭೮; ಜಸ್ಪ್ರೀತ್ ಬುಮ್ರಾ ೨೯ಕ್ಕೆ ೨, ಯಜುವೇಂದ್ರ ಚಾಹಲ್ ೪೬ಕ್ಕೆ ೨, ಕುಲದೀಪ್ ಯಾದವ್ ೪೧ಕ್ಕೆ ೨) ಭಾರತ: ೩೯.೩ ಓವರ್‌ಗಳಲ್ಲಿ ೨೩೮/೧ (ರೋಹಿತ್ ಶರ್ಮಾ ೧೧೧*, ಶಿಖರ್ ಧವನ್ ರನೌಟ್ ೧೧೪, ಅಂಬಟಿ ರಾಯುಡು ೧೮*) ಫಲಿತಾಂಶ: ಭಾರತಕ್ಕೆ ೯ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಶಿಖರ್ ಧವನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More