ಲೇವರ್ ಕಪ್ | ವಿಶ್ವ ತಂಡದ ವಿರುದ್ಧ ಪ್ರಶಸ್ತಿ ಉಳಿಸಿಕೊಂಡ ಯೂರೋಪ್

20 ಗ್ರಾಂಡ್‌ಸ್ಲಾಮ್‌ ಪ್ರಶಸ್ತಿ ವಿಜೇತ ರೋಜರ್ ಫೆಡರರ್ ಮತ್ತು ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಸಿಂಗಲ್ಸ್ ಪಂದ್ಯಗಳ ಗೆಲುವಿನೊಂದಿಗೆ ಟೀಂ ಯೂರೋಪ್ ಲೇವರ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿತು. ವಿಶ್ವ ತಂಡ ಪ್ರಶಸ್ತಿ ಜಯಿಸಲು ಏನೆಲ್ಲ ಪ್ರಯತ್ನ ನಡೆಸಿದರೂ ಫಲಕಾರಿ ಆಗಲಿಲ್ಲ

ಅಮೆರಿಕದ ಜಾನ್ ಇಸ್ನೆರ್ ಒಡ್ಡಿದ ಕಠಿಣ ಪ್ರತಿರೋಧವನ್ನು ದಿಟ್ಟವಾಗಿ ಮೆಟ್ಟಿನಿಂತ ರೋಜರ್ ಫೆಡರರ್, ೬-೭ (೫), ೭-೬ (೮), ೧೦-೭ರಿಂದ ಗೆಲುವು ಸಾಧಿಸಿದರು. ಜಾನ್ ಇಸ್ನೆರ್ ಕೇವಲ ಮೂರು ಪಾಯಿಂಟ್ಸ್‌ಗಳ ಅಂತರದಿಂದ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವ ಅವಕಾಶ ಸೃಷ್ಟಿಸಿದರು. ಆದರೆ, ಜರ್ಮನಿಯ ಯುವ ಆಟಗಾರ ಜ್ವೆರೇವ್, ಕೆವಿನ್ ಆ್ಯಂಡರ್ಸನ್ ವಿರುದ್ಧ ೬-೭ (೩), ೭-೫, ೧೦-೭ ಸೆಟ್‌ಗಳಿಂದ ಗೆಲುವು ಸಾಧಿಸಿ ವಿಶ್ವ ತಂಡದ ಪ್ರಶಸ್ತಿ ಕನಸನ್ನು ಚಿವುಟಿದರು.

ಭಾನುವಾರ (ಸೆ.೨೩) ಚಿಕಾಗೋದಲ್ಲಿ ಮುಕ್ತಾಯ ಕಂಡ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿದ ಇತ್ತಂಡಗಳ ಪೈಕಿ ಟೀಂ ಯೂರೋಪ್ ಮೇಲುಗೈ ಸಾಧಿಸಿತು. ಕೆವಿನ್ ವಿರುದ್ಧ ಜ್ವೆರೇವ್ ನಿರ್ಣಾಯಕ ಪ್ರದರ್ಶನ ನೀಡಿದರು. ಗೆಲುವಿಗೆ ಬೇಕಿದ್ದ ಐದು ಪಾಯಿಂಟ್ಸ್‌ಗಳನ್ನು ಮೂರನೇ ಸೆಟ್‌ನ ಟೈಬ್ರೇಕರ್‌ನಲ್ಲಿ ಕಲೆಹಾಕಿದರು. ಅಂದಹಾಗೆ, ಪರಾಗ್ವೆಯಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿಯೂ ಟೀಂ ಯೂರೋಪ್ ಜಯಭೇರಿ ಬಾರಿಸಿತ್ತು.

“ಇದೊಂದು ಉದ್ವೇಗದಿಂದ ಕೂಡಿದ ರೋಚಕ ಸೆಣಸಾಟವಾಗಿತ್ತು. ಈ ಪಂದ್ಯ ಮಾತ್ರವಲ್ಲದೆ, ವಾರಾಂತ್ಯದಲ್ಲಿ ನಡೆದ ಎಲ್ಲ ಪಂದ್ಯಗಳೂ ಇಷ್ಟೇ ರೋಚಕತೆಯಿಂದ ಕೂಡಿದ್ದವು. ನಮ್ಮ ಮತ್ತು ಅವರ ನಡುವಣ ಕೆಲವೇ ಕೆಲವು ಪಾಯಿಂಟ್ಸ್‌ಗಳು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು,’’ ಎಂದು ಪಂದ್ಯ ಮುಗಿದ ಬಳಿಕ ಜ್ವೆರೇವ್ ಪ್ರತಿಕ್ರಿಯಿಸಿದರು.

ಟೂರ್ನಿಯ ಎರಡನೇ ದಿನದಂದು ಇದೇ ಕೆವಿನ್ ಆ್ಯಂಡರ್ಸನ್ ಮತ್ತು ಅಮೆರಿಕದ ಜಾಕ್ ಸಾಕ್ ಜೋಡಿ ಜೊತೆಯಾಗಿ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ಜೋಡಿಗೆ ಆಘಾತಕಾರಿ ಸೋಲುಣಿಸಿತ್ತು. ಆದರೆ, ಸಿಂಗಲ್ಸ್‌ನಲ್ಲಿ ಯೂರೋಪ್ ತಂಡ ಮುನ್ನಡೆ ಗಳಿಸಿದ್ದರಿಂದ ಈ ಗೆಲುವು ಫೆಡರರ್ ಇದ್ದ ತಂಡವನ್ನೇನೂ ಹೆಚ್ಚು ಬಾಧಿಸಲಿಲ್ಲ.

ಇನ್ನು, ಭಾನುವಾರ ನಡೆದ ಪಂದ್ಯದಲ್ಲಿ ಜಾನ್ ಮೆಕೆನ್ರೊ ಅವರ ಟೀಂ ವರ್ಲ್ಡ್ ೮-೭ರಿಂದ ಮುನ್ನಡೆ ಗಳಿಸಿತು. ಆರಂಭದ ಡಬಲ್ಸ್‌ನಲ್ಲಿ ಜಾಕ್ ಸಾಕ್ ಮತ್ತು ಜಾನ್ ಇಸ್ನೆರ್ ಜೋಡಿ, ಫೆಡರರ್ ಹಾಗೂ ಜ್ವೆರೇವ್ ಜೋಡಿಯನ್ನು ೪-೬, ೭-೬ (೨), ೧೧-೯ರಿಂದ ಮಣಿಸಿತು. ಇಸ್ನೆರ್ ಅವರ ಬಹುದೊಡ್ಡ ಸರ್ವ್‌ನಲ್ಲಿ ಫೆಡರರ್ ಮೂರು ಬ್ರೇಕ್ ಪಾಯಿಂಟ್ಸ್ ಗಳಿಸಬೇಕಿತ್ತು. ಅಂದಹಾಗೆ, ಶನಿವಾರದ ಹೊತ್ತಿಗೆ ೭-೫ ಮುನ್ನಡೆ ಕಂಡಿದ್ದ ಟೀಂ ಯೂರೋಪ್, ಗೆಲುವಿಗೆ ಇನ್ನು ಮೂರು ಪಾಯಿಂಟ್ಸ್‌ಗಳಿಂದ ದೂರವಿತ್ತು.

ಅಂತಿಮವಾಗಿ, ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಫೆಡರರ್ ಮತ್ತು ಜ್ವೆರೇವ್ ಎಚ್ಚರಿಕೆಯ ಆಟವಾಡುವುದರೊಂದಿಗೆ ಟೀಂ ಯೂರೋಪ್ ಜಯಭೇರಿ ಬಾರಿಸಿತು. ಅಂದಹಾಗೆ, ಈ ಪಂದ್ಯಾವಳಿಯಲ್ಲಿ ಈ ಋತುವಿನ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಚ್, ಶುಕ್ರವಾರ ಮತ್ತು ಶನಿವಾರ ನಡೆದ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲನುಭವಿಸಿದರು.

“ಇದೊಂದು ನಂಬಲಸಾಧ್ಯವಾದ ವಾರ. ನನ್ನ ತಂಡದ ಪ್ರದರ್ಶನ ನನ್ನಲ್ಲಿ ಹೆಮ್ಮೆ ತರಿಸಿದೆ. ವಿಶ್ವ ತಂಡವನ್ನು ಮಣಿಸುವುದು ಕಷ್ಟಸಾಧ್ಯ ಎಂಬುದು ನಮಗೆ ತಿಳಿದಿತ್ತು. ಆದರೆ, ನಮ್ಮ ಆಟಗಾರರು ಆತ್ಮವಿಶ್ವಾಸದಿಂದ ಸೆಣಸಿ ಎರಡನೇ ಬಾರಿಗೆ ಕಪ್ ಉಳಿಸಿಕೊಳ್ಳಲು ನೆರವಾದರು,’’ ಎಂದು ಟೀಂ ಯೂರೋಪ್ ಕೋಚ್ ಜಾನ್ ಬೋರ್ಗ್ ತಿಳಿಸಿದರು. ಅಂದಹಾಗೆ, ೨೦೨೦ರ ಲೇವರ್ ಕಪ್ ಪಂದ್ಯಾವಳಿಯು ಸೆ.೨೦ರಿಂದ ೨೨ರವರೆಗೆ ಜಿನೇವಾದಲ್ಲಿ ಜರುಗಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More