ವುಹಾನ್ ಓಪನ್ | ಏಂಜಲಿಕ್ ಕೆರ್ಬರ್, ವೋಜ್ನಿಯಾಕಿ ಗೆಲುವಿನ ಆರಂಭ

ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ ಮತ್ತು ವಿಶ್ವದ ಎರಡನೇ ಶ್ರೇಯಾಂಕಿತೆ ಕೆರೋಲಿನ್ ವೋಜ್ನಿಯಾಕಿ ವುಹಾನ್‌ ಓಪನ್‌ನಲ್ಲಿ ಜಯದ ಆರಂಭ ಕಂಡರು. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೋಜ್ನಿಯಾಕಿ, ಸ್ವೀಡನ್‌ ಆಟಗಾರ್ತಿ ರೆಬೆಕ್ಕಾ ಎದುರು ಪ್ರಯಾಸದ ಗೆಲುವು ಸಾಧಿಸಿದರು

ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಆದ ಆಸ್ಟ್ರೇಲಿಯಾ ಓಪನ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ತಿಣುಕುತ್ತಿರುವ ವೋಜ್ನಿಯಾಕಿ, ವುಹಾನ್ ಓಪನ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಈ ಡೆನ್ಮಾರ್ಕ್ ಆಟಗಾರ್ತಿ, ದ್ವಿತೀಯ ಸುತ್ತಿನಲ್ಲಿ ರೆಬೆಕ್ಕಾ ಪೀಟರ್ಸನ್ ಒಡ್ಡಿದ ಕಠಿಣ ಪ್ರತಿರೋಧವನ್ನು ೬-೪, ೬-೧ ನೇರ ಸೆಟ್‌ಗಳಲ್ಲಿ ಹತ್ತಿಕ್ಕಿದರು.

ಮೊದಲ ಸೆಟ್‌ನಲ್ಲಿಯೇ ತುಸು ಆತಂಕ ಎದುರಿಸಿದ ವೋಜ್ನಿಯಾಕಿ, ಹೇಗೂ ಅಪಾಯದಿಂದ ಪಾರಾದರು. ಆದರೆ, ಎರಡನೇ ಸೆಟ್‌ನಲ್ಲಿ ಆಕೆ ಹೆಚ್ಚು ಬಳಲದೆ ಕೇವಲ ಒಂದೇ ಒಂದು ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿ ಜಯಶಾಲಿಯಾದರು. ಇದೀಗ ತೃತೀಯ ಸುತ್ತಿನಲ್ಲಿ ವೋಜ್ನಿಯಾಕಿ, ಒಲಿಂಪಿಕ್ಸ್ ಚಾಂಪಿಯನ್ ಮೋನಿಕಾ ಪ್ಯುಗ್ ವಿರುದ್ಧ ಸೆಣಸಲಿದ್ದಾರೆ.

ಇನ್ನು, ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ ಈ ಬಾರಿಯ ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ ಕೂಡ ನಿರಾಯಾಸ ಗೆಲುವು ಸಾಧಿಸಿದರು. ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧದ ಪಂದ್ಯದಲ್ಲಿ ಕೆರ್ಬರ್, ೬-೦, ೪-೧ರಿಂದ ಮುನ್ನಡೆ ಸಾಧಿಸಿದ್ದಾಗ ಮ್ಯಾಡಿಸನ್ ಆಟದಿಂದ ಹಿಮ್ಮೆಟ್ಟಿದರು. ೨೦೧೭ರ ಯುಎಸ್ ಓಪನ್ ರನ್ನರ್‌ಅಪ್ ಮ್ಯಾಡಿಸನ್, ಪಂದ್ಯದಿಂದ ಹಿಂದೆ ಸರಿಯುತ್ತಿದ್ದಂತೆ ಕೆರ್ಬರ್ ಕೊನೆಯ ಎರಡು ಗೇಮ್‌ಗಳನ್ನು ಆಡುವ ಅಗತ್ಯವಿಲ್ಲದೆಯೇ ಮುಂದಿನ ಸುತ್ತಿಗೆ ಧಾವಿಸಿದರು.

ಇದನ್ನೂ ಓದಿ : ಸೆರೆನಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುದ್ದಿಟ್ಟ ಏಂಜಲಿಕ್ ಕೆರ್ಬರ್

ವಿಶ್ವದ ೧೦ ಅಗ್ರ ಕ್ರಮಾಂಕಿತ ಆಟಗಾರ್ತಿಯರ ಪೈಕಿ ಒಂಬತ್ತು ಮಂದಿ ವುಹಾನ್ ಓಪನ್‌ನಲ್ಲಿ ಭಾಗವಹಿಸಿದ್ದಾರೆ. ಆದಾಗ್ಯೂ, ೨.೭ ಮಿಲಿಯನ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಿಂದ ಈ ಋತುವಿನ ಯುಎಸ್ ಓಪನ್ ಚಾಂಪಿಯನ್ ನವೊಮಿ ಒಸಾಕ ಹಿಮ್ಮೆಟ್ಟಿದ್ದಾರೆ. ಎರಡು ದಿನಗಳ ಹಿಂದಷ್ಟೇ ನಡೆದ ಪ್ಯಾನ್ ಪೆಸಿಫಿಕ್ ಓಪನ್‌ ಫೈನಲ್ ನಲ್ಲಿ ಸೆಣಸಿದ್ದ ಒಸಾಕ, ಕೆರೊಲಿನಾ ಪ್ಲಿಸ್ಕೋವಾಗೆ ಮಣಿದು ರನ್ನರ್ ಅಪ್ ಆಗಿದ್ದರು.

ಅಂದಹಾಗೆ, ಪ್ರಸ್ತುತ ಟೂರ್ನಿಯ ಬಹುದೊಡ್ಡ ಅಚ್ಚರಿ ಎಂದರೆ, ಆರನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ ಸೋಲನುಭವಿಸಿ ಹೊರಬಿದ್ದಿರುವುದು. ಉಕ್ರೇನ್‌ನ ಎಲಿನಾ, ಮೂರು ಸೆಟ್‌ಗಳ ಕಠಿಣಕಾರಿ ಕಾದಾಟದಲ್ಲಿ ಬೆಲಾರಸ್‌ನ ೨೦ನೇ ಶ್ರೇಯಾಂಕಿತೆ ಅರಿನಾ ಸಬಾಲೆಂಕಾ ವಿರುದ್ಧ 4-6, 6-2, 1-6 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More