ರೊನಾಲ್ಡೊ-ಮೆಸ್ಸಿಯ ದಶಕದ ಆಳ್ವಿಕೆಗೆ ತೆರೆ ಎಳೆದ ಲೂಕಾ ಮಾಡ್ರಿಚ್

ಫಿಫಾದ ಪ್ರತಿಷ್ಠಿತ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಕಳೆದೊಂದು ದಶಕದಿಂದ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಹಂಚಿಕೊಳ್ಳುತ್ತಿದ್ದ ದಾಖಲೆಗೆ ಈಗ ತೆರೆಬಿದ್ದಿದೆ. ವಿಶ್ವಕಪ್‌ನಲ್ಲಿ ಕ್ರೊವೇಷ್ಯಾ ತಂಡದ ಪರ ಮಿಂಚು ಹರಿಸಿದ ಲೂಕಾ ಮಾರ್ಡಿಚ್‌ಗೆ ಈ ಸಾಲಿನ ಗರಿಮೆ ಸಂದಿದೆ

ಬರೋಬ್ಬರಿ ಹತ್ತು ವರ್ಷಗಳ ಕಾಲ ಶಾಂತತೆಯಿಂದ ಕಾದಿದ್ದ ಲೂಕಾ ಮಾರ್ಡಿಚ್‌ ಕನಸು ಸೋಮವಾರ (ಸೆ.೨೪) ರಾತ್ರಿ ನನಸಾಯಿತು. ಫಿಫಾ ನೀಡುವ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ, ಲಯೋನೆಲ್ ಮೆಸ್ಸಿಯಂಥ ದಿಗ್ಗಜರನ್ನು ಹಿಂದಿಕ್ಕಿದ ಕ್ರೊವೇಷ್ಯಾ ಫುಟ್ಬಾಲ್ ತಂಡದ ನಾಯಕ ಲೂಕಾ ಮಾರ್ಡಿಚ್, ಪ್ರತಿಷ್ಠಿತ ಪ್ರಶಸ್ತಿ ಗಳಿಸಿ ಸಂಭ್ರಮಿಸಿದರು.

ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾರ್ಡಿಚ್, ಶೇ.೨೯.೦೫ ಮತ ಪಡೆದು ಜಯಶಾಲಿಯಾಗಿರುವುದು ಬೆಳಕಿಗೆ ಬಂದಿತು. ಜಗತ್ತಿನ ಫುಟ್ಬಾಲ್ ತಂಡಗಳ ನಾಯಕರು ಮತ್ತು ತರಬೇತುದಾರರನ್ನು ಮೂವರು ಅತ್ಯುತ್ತಮ ಅಟಗಾರರ ಆಯ್ಕೆಗೆ ಕೋರಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಲೂಕಾ ಮಾರ್ಡಿಚ್ ಎಲ್ಲರ ಮೆಚ್ಚುಗೆ ಗಳಿಸಿ ಶೇ.೧೦ಕ್ಕೂ ಹೆಚ್ಚು ಮತಗಳಿಂದ ರೊನಾಲ್ಡೊ ಮತ್ತು ಮೆಸ್ಸಿಯನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಈ ಬಾರಿಯ ವಿಶ್ವಕಪ್ ವಿಜೇತ ತಂಡದ ತರಬೇತುದಾರ ಡಿಡಿಯರ್ ಡೆಶೆಂಪ್ಸ್, ಆಟ್ಲೆಟಿಕೊ ಮ್ಯಾಡ್ರಿಡ್ ತಂಡದ ಸ್ಟ್ರೈಕರ್ ಹಾಗೂ ಫ್ರಾನ್ಸ್‌ ತಂಡದ ಸ್ಟಾರ್ ಆಟಗಾರ ಆ್ಯಂಟನಿ ಗ್ರೀಜ್ಮನ್, ರಫಾಯೆಲ್ ವರಾನೆ ಮತ್ತು ಕಲಿಯನ್ ಎಂಬಾಪೆಯನ್ನು ಆರಿಸಿದ್ದಾರೆ. ಅಂದಹಾಗೆ, ರಷ್ಯಾದಲ್ಲಿ ನಡೆದ ೨೧ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡವನ್ನು ಫೈನಲ್‌ನತ್ತ ಕೊಂಡೊಯ್ದ ಮಾರ್ಡಿಚ್, ಇದುವರೆಗೆ ೧೧೩ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ೧೪ ಗೋಲು ದಾಖಲಿಸಿದ್ದಾರೆ.

ರೊನಾಲ್ಡೊರನ್ನು ಮೆಚ್ಚಿದ ಮೆಸ್ಸಿ

ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ, ಅರ್ಜೆಂಟೀನಾ ನಾಯಕ ಹಾಗೂ ಬಾರ್ಸಿಲೋನಾ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿ, ರೊನಾಲ್ಡೊ ಆಟಕ್ಕೆ ಮಾರುಹೋಗಿರುವುದು. ೨೦೦೬ರ ನಂತರ ಇದೇ ಮೊದಲ ಬಾರಿಗೆ ಅಗ್ರ ಮೂವರು ಆಟಗಾರರ ಪೈಕಿ ಗುರುತಿಸಿಕೊಳ್ಳಲು ವಿಫಲವಾಗಿರುವ ಮೆಸ್ಸಿ, ಫುಟ್ಬಾಲ್ ಲೋಕದ ತನ್ನ ಕಡು ಪ್ರತಿಸ್ಪರ್ಧಿಯಾಗಿರುವ ರೊನಾಲ್ಡೊ ಹೆಸರನ್ನು ಸೂಚಿಸಿರುವುದು. ತನ್ನ ವೈಯಕ್ತಿಕ ಆಯ್ಕೆಪಟ್ಟಿಯಲ್ಲಿ ರೊನಾಲ್ಡೊ, ಮೆಸ್ಸಿಯನ್ನು ಮೂರನೇ ಸ್ಥಾನದಲ್ಲಿರಿಸಿದ್ದಾರೆ. ಮಾರ್ಡಿಚ್ ಪರ ಮತ ಚಲಾಯಿಸಿರುವ ಮೆಸ್ಸಿ, ತನ್ನನ್ನೂ ಕಡೆಗಣಿಸಿ ಕಲಿಯನ್ ಎಂಬಾಪೆಗೆ ಸ್ಥಾನ ಕಲ್ಪಿಸಿದ್ದಾರೆ.

ಇದನ್ನೂ ಓದಿ : ಕಂಬನಿ ಒರೆಸಿಕೊಂಡು ಸಂಭ್ರಮದಲ್ಲಿ ಮಿಂದೆದ್ದ ಕ್ರೊವೇಷ್ಯಾ ಅಭಿಮಾನಿಗಳು

ಯಾರಿಗೆ ಯಾರ್ಯಾರು ಅಚ್ಚುಮೆಚ್ಚು?

 • ಲಯೋನೆಲ್ ಮೆಸ್ಸಿ: ಲೂಕಾ ಮಾಡ್ರಿಚ್, ಕಲಿಯನ್ ಎಂಬಾಬೆ, ಕ್ರಿಶ್ಚಿಯಾನೊ ರೊನೊಲ್ಡೊ
 • ಕ್ರಿಶ್ಚಿಯಾನೊ ರೊನಾಲ್ಡೊ: ವರಾನೆ, ಲೂಕಾ ಮಾಡ್ರಿಚ್, ಕಲಿಯನ್ ಎಂಬಾಪೆ
 • ಡಿಡಿಯನ್ ಡೆಶೆಂಪ್ಸ್: ಆಂಟನಿ ಗ್ರೀಜ್ಮನ್, ವರಾನೆ, ಕಲಿಯನ್ ಎಂಬಾಪೆ
 • ಹ್ಯಾರಿ ಕೇನ್: ಕ್ರಿಶ್ಚಿಯಾನೊ ರೊನಾಲ್ಡೊ, ಲಯೋನೆಲ್ ಮೆಸ್ಸಿ, ಡಿ ಬ್ರ್ಯೂಯ್ನಿ
 • ಗರೆತ್ ಸೌತ್‌ಗೇಟ್: ಲೂಕಾ ಮಾಡ್ರಿಚ್, ವರಾನೆ, ಹಜಾರ್ಡ್
 • ಸರ್ಗಿಯೊ ರಾಮೋಸ್: ಲೂಕಾ ಮಾಡ್ರಿಚ್, ಕ್ರಿಶ್ಚಿಯಾನೊ ರೊನಾಲ್ಡೊ, ಲಯೋನೆಲ್ ಮೆಸ್ಸಿ
 • ರಿಯಾನ್ ಗಿಗ್ಸ್: ಲೂಕಾ ಮಾಡ್ರಿಚ್, ಕಲಿಯನ್ ಎಂಬಾಪೆ, ಕ್ರಿಶ್ಚಿಯಾನೊ ರೊನಾಲ್ಡೊ

ಯಾರ್ಯಾರಿಗೆ ಎಷ್ಟೆಷ್ಟು ಮತ?

 • ಲೂಕಾ ಮಾಡ್ರಿಚ್: ಶೇ.೨೯.೦೫
 • ಕ್ರಿಶ್ಚಿಯಾನೊ ರೊನಾಲ್ಡೊ: ಶೇ.೧೯.೦೮
 • ಮೊಹಮದ್ ಸಲಾ: ಶೇ.೧೧.೨೩
 • ಕಲಿಯನ್ ಎಂಬಾಪೆ: ಶೇ.೧೦.೫೨
 • ಲಯೋನೆಲ್ ಮೆಸ್ಸಿ: ಶೇ.೯.೮೧
 • ಆಂಟನಿ ಗ್ರೀಜ್ಮನ್: ಶೇ.೬.೬೯
 • ಏಡೆನ್ ಹಜಾರ್ಡ್: ಶೇ.೫.೬೫
 • ಕೆವಿನ್ ಡಿ ಬ್ರೂಯ್ನಿ: ಶೇ.೩.೫೪
 • ರಫಾಯೆಲ್ ವರಾನೆ: ಶೇ.೩.೪೫
 • ಹ್ಯಾರಿ ಕೇನ್: ಶೇ.೦.೯೮

ಮಾರ್ತಾಗೆ ಪ್ರಶಸ್ತಿ

ಇನ್ನು, ವನಿತೆಯರ ವಿಭಾಗದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಬ್ರೆಜಿಲ್ ಮತ್ತು ಓರ್ಲಾಂಡೋದ ಫಾರ್ವರ್ಡ್ ಆಟಗಾರ್ತಿ ಮಾರ್ತಾ ಭಾಜನರಾದರು. ೨೦೦೬ರಲ್ಲಿ ಮೊದಲ ಬಾರಿಗೆ ಫಿಫಾದಿಂದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದ ಮಾರ್ತಾ, ಆರನೇ ಬಾರಿಗೆ ಶ್ರೇಷ್ಠ ಆಟಗಾರ್ತಿ ಎನಿಸಿಕೊಂಡರು. ಏಪ್ರಿಲ್ ತಿಂಗಳಿನಲ್ಲಿ ಬ್ರೆಜಿಲ್ ಮಹಿಳಾ ತಂಡವನ್ನು ಕೊಪಾ ಅಮೆರಿಕ ಪ್ರಶಸ್ತಿಯತ್ತ ಮುನ್ನಡೆಸಿದ ಮಾರ್ತಾ, ಎಲ್ಲ ಏಳು ಪಂದ್ಯಗಳಲ್ಲೂ ತಂಡವನ್ನು ಜಯದತ್ತ ಮುನ್ನಡೆಸಿದ್ದರು. ಆದಾಗ್ಯೂ, ಆಕೆ ಒಂದೇ ಒಂದು ಗೋಲನ್ನು ಮಾತ್ರ ದಾಖಲಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More