ಏಷ್ಯಾ ಕಪ್ | ಆಫ್ಘಾನಿಸ್ತಾನ ಇನ್ನಿಂಗ್ಸ್‌ಗೆ ಶತಕದ ಮೆರುಗು ನೀಡಿದ ಶೆಹಜಾದ್

ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ನಿಕೃಷ್ಟ ಮೊತ್ತಕ್ಕೆ ಕುಸಿಯತೊಡಗಿದ್ದ ಆಫ್ಘಾನಿಸ್ತಾನಕ್ಕೆ ಮೊಹಮದ್ ಶೆಹಜಾದ್ (೧೨೪) ಭರ್ಜರಿ ಶತಕ ಸಂಜೀವಿನಿಯಾಯಿತು. ಇವರೊಂದಿಗೆ ಮೊಹಮದ್ ನಬಿ (೬೪) ಕೂಡ ಭಾರತದ ಬೌಲರ್‌ಗಳನ್ನು ಕಾಡಿದರು

೬೫ ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಆಫ್ಘಾನಿಸ್ತಾನ, ಆನಂತರದಲ್ಲಿ ಕೇವಲ ಹದಿನೇಳು ರನ್ ಗಳಿಸುವಷ್ಟರಲ್ಲೇ ಇನ್ನೂ ಮೂರು ವಿಕೆಟ್ ಕಳೆದುಕೊಂಡಾಗ ಆಫ್ಘಾನಿಸ್ತಾನದ ಇನ್ನಿಂಗ್ಸ್‌ ೨೫೦ರ ಗಡಿ ದಾಟುತ್ತದೆ ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ, ಆರಂಭಿಕ ಮೊಹಮದ್ ಶೆಹಜಾದ್ (೧೨೪: ೧೧೬ ಎಸೆತ, ೧೧ ಬೌಂಡರಿ, ೭ ಸಿಕ್ಸರ್) ಆಕ್ರಮಣಕಾರಿ ಬ್ಯಾಟಿಂಗ್‌ ಆಫ್ಘಾನಿಸ್ತಾನದ ಇನ್ನಿಂಗ್ಸ್‌ ಅನ್ನು ಸ್ಪರ್ಧಾತ್ಮಕವಾಗಿಸಿತು.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ (ಸೆ ೨೫) ನಡೆದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ಆಫ್ಘಾನಿಸ್ತಾನ ೫೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೫೨ ರನ್ ಕಲೆಹಾಕಿ ಧೋನಿ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಮೊಹಮದ್ ಶೆಹಜಾದ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಮೊಹಮದ್ ನಬಿ (೬೪: ೫೬ ಎಸೆತ, ೩ ಬೌಂಡರಿ, ೪ ಸಿಕ್ಸರ್) ದಾಖಲಿಸಿದ ಅರ್ಧಶತಕ ಕೂಡ ಆಫ್ಘಾನಿಸ್ತಾನದ ಇನ್ನಿಂಗ್ಸ್‌ಗೆ ಬಲ ತುಂಬಿತು. ಭಾರತದ ಬೌಲರ್‌ಗಳ ಕಠಿಣ ದಾಳಿಯನ್ನು ಈ ಇಬ್ಬರು ಆಟಗಾರರು ನಿರ್ವಹಿಸಿದ ರೀತಿ ಮನೋಜ್ಞವಾಗಿತ್ತು.

ಇದನ್ನೂ ಓದಿ : ಅಫ್ರಿದಿ ಸಿಕ್ಸರ್ ದಾಖಲೆ ಸರಿಗಟ್ಟಿದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್!

ಭರ್ಜರಿ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಆಫ್ಘಾನಿಸ್ತಾನ ತಂಡ, ನಿರೀಕ್ಷೆಗೂ ಮೀರಿದ ಆರಂಭ ಕಂಡಿತು. ಜಾವೇದ್ ಅಹ್ಮದಿ (೫) ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ ಶೆಹಜಾದ್, ಸಹ ಆಟಗಾರನೊಂದಿಗೆ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು. ಅಂಜುತ್ತಲೇ ಬ್ಯಾಟಿಂಗ್ ನಡೆಸಿದ ಅಹ್ಮದಿ, ಎದುರಿಸಿದ ೩೦ ಎಸೆತಗಳಲ್ಲಿ ಎರಡಂಕಿ ದಾಟಲೂ ಸಾಧ್ಯವಾಗದೆ ೧೩ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಎಸೆತದಲ್ಲಿ ಧೋನಿಯಿಂದ ಸ್ಟಂಪೌಟ್ ಆಗಿ ಕ್ರೀಸ್ ತೊರೆದರು.

ಅಹ್ಮದಿ ನಿರ್ಗಮನದ ನಂತರದಲ್ಲಿ ಆಫ್ಘಾನಿಸ್ತಾನ ಒಂದರ ಮೇಲೊಂದರಂತೆ ವಿಕೆಟ್ ಕಳೆದುಕೊಳ್ಳುತ್ತ ಸಾಗಿದಾಗ ಇಡೀ ಪಂದ್ಯ ಏಕಪಕ್ಷೀಯವಾಗಿರಲಿದೆ ಎಂಬ ವಾತಾವರಣ ಸೃಷ್ಟಿಯಾಯಿತು. ರಹಮದ್ ಶಾ (೩) ರವೀಂದ್ರ ಜಡೇಜಾಗೆ ಬೌಲ್ಡ್ ಆಗಿ ಹೊರನಡೆದರೆ, ಬಳಿಕ ಬಂದ ಹಶ್ಮತುಲ್ಲಾಹ್ ಶಾಹಿದಿ (೦) ನಾಯಕ ಅಸ್ಘರ್ ಅಫ್ಘನ್ (೦) ಕುಲದೀಪ್‌ ಯಾದವ್‌ ಸ್ಪಿನ್‌ ಬೌಲಿಂಗ್‌ಗೆ ನಲುಗಿದಾಗ ಆಫ್ಘಾನಿಸ್ತಾನ ತೀವ್ರ ಹಿನ್ನಡೆ ಅನುಭವಿಸಿತು.

ಒಂದರ ಹಿಂದೊಂದರಂತೆ ನಾಲ್ಕು ವಿಕೆಟ್‌ಗಳು ಪತನ ಕಂಡರೂ, ಧೃತಿಗೆಡದ ಶೆಹಜಾದ್, ಆಕ್ರಮಣಕಾರಿ ಆಟವನ್ನು ಕೈಬಿಡಲಿಲ್ಲ. ಸ್ಪಿನ್ ಮತ್ತು ವೇಗದ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದ ಶೆಹಜಾದ್, ಏಕದಿನ ಕ್ರಿಕೆಟ್‌ನಲ್ಲಿ ಐದನೇ ಶತಕ ದಾಖಲಿಸಿದರು. ಅಂತಿಮವಾಗಿ ಇನ್ನಿಂಗ್ಸ್‌ನ ೩೮ನೇ ಓವರ್‌ನಲ್ಲಿ ಕೇದಾರ್ ಜಾಧವ್ ಬೌಲಿಂಗ್‌ನಲ್ಲಿ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತ ಶೆಹಜಾದ್, ಇನ್ನೊಂದಷ್ಟು ಹೊತ್ತು ಕ್ರೀಸ್‌ನಲ್ಲಿದ್ದಿದ್ದರೆ ಆಫ್ಘಾನಿಸ್ತಾನದ ಮೊತ್ತ ೩೦೦ರ ಗಡಿ ಮುಟ್ಟುತ್ತಿದ್ದುದರಲ್ಲಿ ಸಂದೇಹವಿಲ್ಲ.

ಸಂಕ್ಷಿಪ್ತ ಸ್ಕೋರ್

ಆಫ್ಘಾನಿಸ್ತಾನ: ೫೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೨೫೨ (ಮೊಹಮದ್ ಶೆಹಜಾದ್ ೧೨೪, ಮೊಹಮದ್ ನಬಿ ೬೪; ರವೀಂದ್ರ ಜಡೇಜಾ ೪೬ಕ್ಕೆ ೩, ಕುಲದೀಪ್ ಯಾದವ್ ೩೮ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More