ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನ ಸ್ವೀಕರಿಸಿದ ಕ್ರಿಕೆಟಿಗ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ (ಸೆ.೨೫) ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ ಗಾಂಧಿ ಖೇಲ್‌ರತ್ನ ಸ್ವೀಕರಿಸಿದರು. ಅವರೊಂದಿಗೆ ಮೀರಾ ಬಾಯಿ ಚಾನು ಕೂಡ ಖೇಲ್ ರತ್ನ ಪಡೆದರೆ, ನೀರಜ್ ಚೋಪ್ರಾ, ಹಿಮಾ ದಾಸ್ ಅರ್ಜುನ ಪ್ರಶಸ್ತಿಗೆ ಪುರಸ್ಕೃತರಾದರು

ಸಾಮಾನ್ಯವಾಗಿ ಮೇಜರ್ ಧ್ಯಾನ್‌ಚಂದ್ ಹುಟ್ಟುಹಬ್ಬವಾದ ಆಗಸ್ಟ್ ೨೯ರಂದು ನೀಡಲಾಗುತ್ತಿದ್ದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿತರಣೆ ಈ ಬಾರಿ ಏಷ್ಯಾಡ್‌ನಿಂದಾಗಿ ಮುಂದೂಡಲ್ಪಟ್ಟಿತ್ತು. ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (೧೯೯೭-೧೯೯೮) ಮತ್ತು ಎಂ ಎಸ್ ಧೋನಿ (೨೦೦೭) ನಂತರ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ ರತ್ನಕ್ಕೆ ವಿರಾಟ್ ಕೊಹ್ಲಿ ಭಾಜನವಾಗುವ ಮೂಲಕ ಈ ಪುರಸ್ಕಾರ ಪಡೆದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು.

ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ವಾರ್ಷಿಕ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪತ್ನಿ ಅನುಷ್ಕಾ ಶರ್ಮಾ, ತಾಯಿ ಸರೋಜ್ ಕೊಹ್ಲಿ ಮತ್ತು ಹಿರಿಯ ಸೋದರ ವಿಕಾಸ್ ಅವರ ಸಮ್ಮುಖದಲ್ಲಿ ಕೊಹ್ಲಿ ಖೇಲ್ ರತ್ನ ಪ್ರಶಸ್ತಿ ಪಡೆದು ಸಂಭ್ರಮಿಸಿದರು.

ವಿಶ್ವ ನಂ.೧ ಟೆಸ್ಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ೨೦೧೬, ೨೦೧೭ರಲ್ಲಿ ಎರಡು ಬಾರಿ ನಾಮನಿರ್ದೇಶನಗೊಂಡಿದ್ದರೂ, ಈ ಪ್ರಶಸ್ತಿಯಿಂದ ವಂಚಿತವಾಗಿದ್ದರು. ೨೯ರ ಹರೆಯದ ಈ ದೆಹಲಿ ಬ್ಯಾಟ್ಸ್‌ಮನ್ ೭೧ ಟೆಸ್ಟ್ ಪಂದ್ಯಗಳಲ್ಲಿ ೨೩ ಶತಕ ಸೇರಿದ ೬೧೪೭ ರನ್ ಕಲೆಹಾಕಿದ್ದರೆ, ೨೧೧ ಏಕದಿನ ಪಂದ್ಯಗಳಲ್ಲಿ ೩೫ ಶತಕ ಸೇರಿದ ೯೭೭೯ ರನ್ ಪೇರಿಸಿದ್ದಾರೆ. ಅಂದಹಾಗೆ, ೨೦೧೩ರಲ್ಲಿ ಕೊಹ್ಲಿ ಅರ್ಜುನ ಪ್ರಶಸ್ತಿ ಪಡೆದರೆ, ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದರು.

ವೇಟ್‌ಲಿಫ್ಟರ್ ಮೀರಾ ಬಾಯಿ ಚಾನುಗೆ ಖೇಲ್ ರತ್ನ

ಇದನ್ನೂ ಓದಿ : ಕೊಹ್ಲಿ, ಮೀರಾ ಬಾಯಿ ಚಾನುಗೆ ಖೇಲ್ ರತ್ನ; ಕನ್ನಡಿಗ ಬೋಪಣ್ಣಗೆ ಅರ್ಜುನ

ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾಗೆ ಅರ್ಜುನ

ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್‌ಗೆ ಅರ್ಜುನ ಗರಿಮೆ

ಜಾವೆಲಿನ್ ಪಟು ನೀರಜ್ ಚೋಪ್ರಾಗೆ ಅರ್ಜುನ

ಅಂದಹಾಗೆ, ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿಯು ಈ ಮುನ್ನ ₹ ೫ ಲಕ್ಷ ನಗದು ಬಹುಮಾನ ಒಳಗೊಂಡಿತ್ತಾದರೂ, ೨೦೦೫ರಿಂದ ಈ ಮೊತ್ತವನ್ನು ₹ ೭.೫ ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಪದಕ ಹಾಗೂ ಉಲ್ಲೇಖ ಪತ್ರವನ್ನು ಒಳಗೊಂಡಿದೆ. ಇನ್ನುಳಿದಂತೆ, ಅರ್ಜುನ, ದ್ರೋಣಾಚಾರ್ಯ ಹಾಗೂ ಧ್ಯಾನ್‌ಚಂದ್ ಪ್ರಶಸ್ತಿಗಳಿಗೆ ₹ ೫ ಲಕ್ಷ ನಗದು ಪುರಸ್ಕಾರದ ಜತೆಗೆ ಪದಕ ಮತ್ತು ಉಲ್ಲೇಖ ಪತ್ರವನ್ನು ಕೇಂದ್ರದ ಕ್ರೀಡಾ ಸಚಿವಾಲಯ ನೀಡುತ್ತದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More