ಏಷ್ಯಾ ಕಪ್ | ಭಾರತ ವಿರುದ್ಧ ರೋಚಕ ಟೈ ಸಾಧಿಸಿದ ಆಫ್ಘಾನಿಸ್ತಾನ ನಿರ್ಗಮನ

ಬಲಿಷ್ಠ ಭಾರತ ತಂಡದ ೧೦ ವಿಕೆಟ್‌ಗಳನ್ನು ಪಡೆದ ಆಫ್ಘಾನಿಸ್ತಾನ ತಾನೆಷ್ಟು ಶಕ್ತಿಶಾಲಿ ಕ್ರಿಕೆಟ್ ರಾಷ್ಟ್ರವಾಗಿ ರೂಪುಗೊಳ್ಳುತ್ತಿದ್ದೇನೆ ಎಂಬುದನ್ನು ಸಾರಿದೆ. ಮಂಗಳವಾರ (ಸೆ ೨೫) ನಡೆದ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತದ ವಿರುದ್ದ ರೋಚಕ ಟೈ ಸಾಧಿಸಿದ ಆಫ್ಘಾನಿಸ್ತಾನ ಟೂರ್ನಿಯಿಂದ ನಿರ್ಗಮಿಸಿತು

ಪಾಕಿಸ್ತಾನ, ಬಾಂಗ್ಲಾದೇಶದಂಥ ರಾಷ್ಟ್ರಗಳೂ ಭಾರತವನ್ನು ಆಲೌಟ್ ಮಾಡುವ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಆದರೆ, ಆಫ್ಘಾನಿಸ್ತಾನದ ಆಟಗಾರರ ಹೋರಾಟ, ಕೆಚ್ಚೆದೆಯ ಪ್ರದರ್ಶನ ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಯ ವಿಶೇಷವೆಂದರೆ ತಪ್ಪಾಗದು. ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಭಾರತವನ್ನು ಕಟ್ಟಿಹಾಕಿದ ಆಫ್ಘಾನಿಸ್ತಾನ ನಿಸ್ಸಂಶಯವಾಗಿಯೂ ಕ್ರಿಕೆಟ್ ಲೋಕದ ಬಲಿಷ್ಠ ತಂಡಗಳ ಸಾಲಿನಲ್ಲಿ ನಿಲ್ಲುವಂಥ ತಂಡವಾಗಿ ರೂಪುಗೊಳ್ಳುತ್ತಿದೆ.

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಗೆಲ್ಲಲು ಆಫ್ಘಾನಿಸ್ತಾನ ತಂಡ ನೀಡಿದ್ದ ೨೫೩ ರನ್ ಗುರಿಯನ್ನು ಬೆನ್ನತ್ತಿದ ಭಾರತ ತಂಡ, ೪೯.೫ ಓವರ್‌ಗಳಲ್ಲಿ ೨೫೨ ರನ್‌ಗಳಿಗೇ ಆಲೌಟ್ ಆಗುವುದರೊಂದಿಗೆ ಟೂರ್ನಿಯಲ್ಲಿ ಮೊಟ್ಟಮೊದಲ ರೋಚಕ ಟೈ ದಾಖಲಾಯಿತು. ಶುಕ್ರವಾರ (ಸೆ ೨೮) ನಡೆಯಲಿರುವ ಫೈನಲ್‌ಗೆ ಈಗಾಗಲೇ ಭಾರತ ತಂಡ, ಅರ್ಹತೆ ಗಳಿಸಿತ್ತಾದರೂ, ಆಫ್ಘಾನಿಸ್ತಾನ ವಿರುದ್ಧದ ಗೆಲುವು ಅದರ ಅಜೇಯ ಓಟಕ್ಕೆ ಇನ್ನಷ್ಟು ಬಲ ತುಂಬುತ್ತಿತ್ತು.

ರನ್ ಚೇಸಿಂಗ್‌ನಲ್ಲಿ ಭಾರತ ಸರಿದಿಸೆಯಲ್ಲಿಯೇ ಹೆಜ್ಜೆ ಇಟ್ಟಿತ್ತು. ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಕನ್ನಡಿಗ ಕೆ ಎಲ್ ರಾಹುಲ್ (೬೦: ೬೬ ಎಸೆತ, ೫ ಬೌಂಡರಿ, ೧ ಸಿಕ್ಸರ್) ಹಾಗೂ ಅಂಬಟಿ ರಾಯುಡು (೫೭: ೪೯ ಎಸೆತ, ೪ ಬೌಂಡರಿ, ೪ ಸಿಕ್ಸರ್) ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿ ತಂಡಕ್ಕೆ ಭದ್ರ ತಳಪಾಯ ಹಾಕಿಕೊಟ್ಟರಾದರೂ, ಆನಂತರದಲ್ಲಿ ಭಾರತ ತಂಡ ಸಂಪೂರ್ಣ ವಿಫಲವಾಯಿತು.

ಕೊನೆಯ ಓವರ್‌ನಲ್ಲಿ ಭಾರತಕ್ಕೆ ಏಳು ರನ್‌ಗಳು ಬೇಕಾದಾಗ ಪಂದ್ಯದ ತೀವ್ರತೆ ಹೆಚ್ಚಿತು. ಪ್ರೇಕ್ಷಕರಂತೂ ಉದ್ರೇಕಕ್ಕೆ ಒಳಗಾಗಿದ್ದರು. ಮೊದಲ ಎಸೆತದಲ್ಲಿ ಯಾವುದೇ ರನ್ ನೀಡದ ರಶೀದ್ ಖಾನ್, ಎರಡನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರು. ನಂತರದ ಎರಡೂ ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿದ ರಶೀದ್, ಮರು ಎಸೆತದಲ್ಲಿ ಭಾರತದ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದರು. ಒತ್ತಡದಲ್ಲಿದ್ದ ರವೀಂದ್ರ ಜಡೇಜಾ, ಭರ್ಜರಿ ಹೊಡೆತಕ್ಕೆ ಕೈಹಾಕಿ ಮಿಡ್‌ವಿಕೆಟ್‌ನಲ್ಲಿದ್ದ ನಜೀಬುಲ್ಲಾಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಇದನ್ನೂ ಓದಿ : ಏಷ್ಯಾ ಕಪ್ | ಆಫ್ಘಾನಿಸ್ತಾನ ಇನ್ನಿಂಗ್ಸ್‌ಗೆ ಶತಕದ ಮೆರುಗು ನೀಡಿದ ಶೆಹಜಾದ್

ಮಧ್ಯಮ ಕ್ರಮಾಂಕದ ವೈಫಲ್ಯ ಬಟಾಬಯಲು

ಹದಿನೆಂಟನೇ ಓವರ್‌ನಲ್ಲಿ ಬೌಲಿಂಗ್‌ಗಿಳಿದ ಮೊಹಮದ್ ನಬಿ ಮೊದಲ ಎಸೆತದಲ್ಲೇ ಅಂಬಟಿ ರಾಯುಡು ವಿಕೆಟ್ ಪಡೆದು ಮೊದಲ ಪೆಟ್ಟು ನೀಡಿದರು. ಬಳಿಕ ರಶೀದ್ ಖಾನ್ ನಿರ್ವಹಿಸಿದ ೨೧ನೇ ಓವರ್‌ನ ಮೂರನೇ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲೋದ ರಾಹುಲ್, ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ತದನಂತರದಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ಮಾಡಿದವರೆಂದರೆ ಅದು ದಿನೇಶ್ ಕಾರ್ತಿಕ್ (೪೪: ೬೬ ಎಸೆತ, ೪ ಬೌಂಡರಿ).

ವಾಸ್ತವವಾಗಿ, ಈ ಪಂದ್ಯವನ್ನು ಮಧ್ಯಮ ಕ್ರಮಾಂಕದ ಪರೀಕ್ಷೆಯನ್ನಾಗಿ ಭಾರತ ಪರಿಗಣಿಸಿತ್ತಾದರೂ, ಆಪ್ಘಾನಿಸ್ತಾನ ವಿರುದ್ಧ ಸಂಪೂರ್ಣ ಎಡವಿದ್ದು ಎದ್ದುಕಾಣಿತು. ಎಂ ಎಸ್ ಧೋನಿ (೮), ಮನೀಶ್ ಪಾಂಡೆ (೮), ಕೇದಾರ್ ಜಾಧವ್ (೧೯), ರವೀಂದ್ರ ಜಡೇಜಾರಂಥವರು (೨೫) ಸಂಪೂರ್ಣ ವೈಫಲ್ಯತೆ ಅನುಭವಿಸಿದರು. ಆರಂಭದಲ್ಲಿ ರನ್ ಬಿಟ್ಟುಕೊಟ್ಟ ಆಫ್ಘನ್ ಬೌಲರ್‌ಗಳು ನಿರ್ಣಾಯಕ ಹಂತದಲ್ಲಿ ಭಾರತ ಒಂದೊಂದು ರನ್‌ಗೂ ಪರದಾಡುವಂತೆ ಮಾಡಿದರು. ಆದಾಗ್ಯೂ, ಗೆಲುವಿನ ಅಂಚಿಗೆ ಬಂದುನಿಂತ ಭಾರತ, ರಶೀದ್ ಖಾನ್ ಚಮತ್ಕಾರಿ ಬೌಲಿಂಗ್‌ಗೆ ಶರಣಾಯಿತು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ನಿಗದಿತ ೫೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೫೨ ರನ್ ಕಲೆಹಾಕಿತು. ಆರಂಭಿಕ ಹಾಗೂ ವಿಕೆಟ್‌ಕೀಪರ್ ಮೊಹಮದ್ ಶೆಹಜಾದ್ (೧೨೪: ೧೧೬ ಎಸೆತ, ೧೧ ಬೌಂಡರಿ, ೭ ಸಿಕ್ಸರ್) ದಾಖಲಿಸಿದ ಭರ್ಜರಿ ಶತಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮೊಹಮದ್ ನಬಿ (೬೪: ೫೬ ಎಸೆತ, ೩ ಬೌಂಡರಿ, ೪ ಸಿಕ್ಸರ್) ಅರ್ಧಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಸಂಕ್ಷಿಪ್ತ ಸ್ಕೋರ್

ಆಫ್ಘಾನಿಸ್ತಾನ: ೫೦ ಓವರ್‌ಗಳಲ್ಲಿ ೨೫೨/೮ (ಮೊಹಮದ್ ಶೆಹಜಾದ್ ೧೨೪, ಮೊಹಮದ್ ನಬಿ ೬೪; ರವೀಂದ್ರ ಜಡೇಜಾ ೪೬ಕ್ಕೆ ೩, ಕುಲದೀಪ್ ಯಾದವ್ ೩೮ಕ್ಕೆ ೨); ಭಾರತ: ೪೯.೫ ಓವರ್‌ಗಳಲ್ಲಿ ೨೫೨ (ಕೆ ಎಲ್ ರಾಹುಲ್ ೬೦, ಅಂಬಟಿ ರಾಯುಡು ೫೭, ದಿನೇಶ್ ಕಾರ್ತಿಕ್ ೪೪; ಅಫ್ತಾಬ್ ಆಲಮ್ ೫೩ಕ್ಕೆ ೨, ಮೊಹಮದ್ ನಬಿ ೪೦ಕ್ಕೆ ೨, ರಶೀದ್‌ ಖಾನ್ ೪೧ಕ್ಕೆ ೨); ಫಲಿತಾಂಶ: ಪಂದ್ಯ ಟೈ; ಪಂದ್ಯಶ್ರೇಷ್ಠ: ಮೊಹಮದ್ ಶೆಹಜಾದ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More