ಏಷ್ಯಾ ಚಾಂಪಿಯನ್‌ಶಿಪ್ ಹಾಕಿ| ಮತ್ತೆ ನಾಯಕತ್ವದ ಹೊಣೆ ಮನ್‌ಪ್ರೀತ್ ಹೆಗಲಿಗೆ

ಮುಂದಿನ ತಿಂಗಳು ಮಸ್ಕಟ್‌ನಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್‌ಶಿಪ್ ಟ್ರೋಫಿ ಪಂದ್ಯಾವಳಿಗೆ ೧೮ ಮಂದಿ ಭಾರತ ತಂಡವನ್ನು ಆಯ್ಕೆಮಾಡಿದ್ದು, ಪಿ ಆರ್ ಶ್ರೀಜೇಶ್ ಬದಲಿಗೆ ಮನ್‌ಪ್ರೀತ್ ಸಿಂಗ್‌ಗೆ ಸಾರಥ್ಯ ವಹಿಸಲಾಗಿದೆ. ಹಾಲಿ ಚಾಂಪಿಯನ್ ಭಾರತಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು ಎದುರಾಗಿದೆ

ಮಾಜಿ ನಾಯಕ ಸರ್ದಾರ್ ಸಿಂಗ್ ನಿವೃತ್ತಿ ಘೋಷಿಸಿದ ಬಳಿಕ ಭಾರತ ತಂಡ ಆಡಲಿರುವ ಪ್ರಮುಖ ಟೂರ್ನಿಯೊಂದಕ್ಕೆ ಹಾಕಿ ಇಂಡಿಯಾ ಆಯ್ಕೆಸಮಿತಿ ತಂಡವನ್ನು ಆರಿಸಿದೆ. ಅಕ್ಟೋಬರ್ ೧೮ರಿಂದ ಶುರುವಾಗಲಿರುವ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ. ಮಲೇಷ್ಯಾದ ಕೌಂಟಾನ್‌ನಲ್ಲಿ ನಡೆದಿದ್ದ ೨೦೧೬ರ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡ, ಪಾಕಿಸ್ತಾನವನ್ನು ೩-೨ ಗೋಲುಗಳಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು.

ಹದಿನೆಂಟು ಆಟಗಾರರ ಭಾರತ ತಂಡದ ಉಪನಾಯಕನಾಗಿ ಚಿಂಗ್ಲೆನ್‌ಸಾನ ಸಿಂಗ್ ಆಯ್ಕೆಯಾಗಿದ್ದಾರೆ. ಅನುಭವಿ ಗೋಲ್‌ಕೀಪರ್ ಪಿ ಆರ್ ಶ್ರೀಜೇಶ್ ಜತೆಗೆ ಯುವ ಗೋಲ್‌ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್‌ಗೆ ಸ್ಥಾನ ಕಲ್ಪಿಸಿರುವ ಆಯ್ಕೆಸಮಿತಿ, ರಕ್ಷಣಾತ್ಮಕ ಪಡೆಗೆ ಕೊತಾಜಿತ್ ಸಿಂಗ್ ವಾಪಸಾಗಿದ್ದಾರೆ.

ಇನ್ನುಳಿದಂತೆ, ಹರ್ಮನ್ ಪ್ರೀತ್ ಸಿಂಗ್, ಗುರೀಂದರ್ ಸಿಂಗ್, ವರುಣ್ ಕುಮಾರ್, ಸುರೇಂದರ್ ಕುಮಾರ್ ಹಾಗೂ ಜರ್ಮನ್ಪ್ರೀತ್ ಸಿಂಗ್ ಡಿಫೆನ್ಸ್ ವಿಭಾಗದಲ್ಲಿದ್ದು, ೨೦ರ ಹರೆಯದ ಹಾರ್ದಿಕ್ ಸಿಂಗ್ ಹಿರಿಯರ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ದಿನದ ಹಿಂದಷ್ಟೇ ಮನ್‌ಪ್ರೀತ್ ಸಿಂಗ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.

ಇದನ್ನೂ ಓದಿ : ರಿಲೇ ತಂಡದ ಚಿನ್ನ-ಬೆಳ್ಳಿ ಸಾಧನೆಯ ಮಧ್ಯೆ ಕಾಡಿದ ಭಾರತ ಹಾಕಿ ತಂಡದ ಸೋಲು

ತಂಡದ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಕೋಚ್ ಹರೇಂದ್ರ ಸಿಂಗ್, “ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿರುವ ಸಂಪೂರ್ಣ ಸಮತೋಲನದಿದ ಕೂಡಿರುವ ಶಕ್ತಿಶಾಲಿ ತಂಡವನ್ನು ಆರಿಸಿರುವ ಬಗ್ಗೆ ಸಂತೃಪ್ತಿಯಿದೆ. ಈ ಪಂದ್ಯಾವಳಿಯು ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಸೂಕ್ತ ತಯಾರಿ ನೀಡುವುದರ ಜತೆಗೆ ಸಶಕ್ತ ಆಟಗಾರರನ್ನು ಆರಿಸಲು ನೆರವಾಗಲಿದೆ,’’ ಎಂದಿದ್ದಾರೆ.

ಏಷ್ಯಾ ಚಾಂಪಿಯನ್‌ಶಿಪ್‌ಗೆ ತೆರಳುವವರೆಗೂ ಭುವನೇಶ್ವರದಲ್ಲೇ ತರಬೇತಿ ಶಿಬಿರದಲ್ಲಿ ಭಾರತ ತಂಡ ತಯಾರಿ ನಡೆಸಲಿದೆ. ವಿಶ್ವದ ಐದನೇ ಶ್ರೇಯಾಂಕಿತ ಭಾರತ, ಈ ಪಂದ್ಯಾವಳಿಯಲ್ಲಿ ಮಲೇಷ್ಯಾ, ಪಾಕಿಸ್ತಾನ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಆತಿಥೇಯ ಓಮನ್ ತಂಡಗಳ ವಿರುದ್ಧ ಸೆಣಸಲಿದೆ.

ತಂಡ ಇಂತಿದೆ

ಗೋಲ್‌ಕೀಪರ್ಸ್: ಪಿ ಆರ್ ಶ್ರೀಜೇಶ್, ಬಹಾದ್ದೂರ್ ಪಾಠಕ್

ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ಗುರೀಂದರ್ ಸಿಂಗ್, ವರುಣ್ ಕುಮಾರ್, ಕೊತಾಜಿತ್ ಸಿಂಗ್, ಸುರೇಂದರ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್

ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್ (ನಾಯಕ), ಸುಮಿತ್ ನೀಲಕಂಠ ಶರ್ಮಾ, ಲಲಿತ್ ಕುಮಾರ್ ಉಪಾಧ್ಯಾಯ್, ಚಿಂಗ್ಲೆನ್‌ಸಾನ ಸಿಂಗ್ (ಉಪನಾಯಕ)

ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಗುರ್ಜಾಂತ್ ಸಿಂಗ್, ಮನ್‌ದೀಪ್ ಸಿಂಗ್ ಹಾಗೂ ದಿಲ್ಪ್ರೀತ್ ಸಿಂಗ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More