ಇದೇ ಡಿಸೆಂಬರ್ ತಿಂಗಳಲ್ಲಿ ಸೈನಾ ನೆಹ್ವಾಲ್, ಪರುಪಳ್ಳಿ ಕಶ್ಯಪ್ ಕಲ್ಯಾಣ 

ಭಾರತ ಬ್ಯಾಡ್ಮಿಂಟನ್‌ನ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಇದೇ ಡಿಸೆಂಬರ್ ತಿಂಗಳಲ್ಲಿ ವಿವಾಹವಾಗಲಿದ್ದಾರೆ. ಹೈದರಾಬಾದ್‌ನ ಯಶಸ್ವೀ ಶಟ್ಲರ್‌ಗಳಾದ ಈ ಇಬ್ಬರು ಕಳೆದೊಂದು ದಶಕದ ಸ್ನೇಹಕ್ಕೆ ವೈವಾಹಿಕ ಸ್ಪರ್ಶ ನೀಡಲು ಮುಂದಾಗಿದ್ದಾರೆ.

ಹೈದರಾಬಾದ್‌ನ ಯಶಸ್ವೀ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಮತ್ತು ಪಿ ಕಶ್ಯಪ್ ಕಳೆದೊಂದು ದಶಕದ ಸ್ನೇಹಕ್ಕೆ ವೈವಾಹಿಕ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಈ ಹಿಂದೆ ಹಲವಾರು ಬಾರಿ ಈ ಸ್ಟಾರ್ ಆಟಗಾರರು ಜತೆಜತೆಯಾಗಿ ಕಾಣಿಸಿಕೊಂಡಾಗ ಎದ್ದ ಗಾಸಿಪ್‌ಗೆ ಇಬ್ಬರೂ ತಮ್ಮ ನಡುವೆ ಪ್ರೇಮದ ಮಧುರ ಬಾಂಧವ್ಯ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಾಗಲೀ ಇಲ್ಲವೇ ತಿರಸ್ಕರಿಸಲಾಗಲೀ ಮಾಡಿರಲಿಲ್ಲ.

ಆದರೀಗ ಇದೇ ಡಿಸೆಂಬರ್ ೧೬ರಂದು ಹಸೆಮಣೆ ಏರಲು ಇಬ್ಬರೂ ನಿರ್ಧರಿಸಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯೊಂದು ತಿಳಿಸಿದೆ. ವಿವಾಹ ಕಾರ್ಯಕ್ರಮ ಸಂಪೂರ್ಣ ಖಾಸಗಿಯದ್ದಾಗಿರುವುದಲ್ಲದೆ, ಸ್ನೇಹಿತರು, ಕುಟುಂಬದ ಸರಿಸುಮಾರು ೧೦೦ ಮಂದಿಗಷ್ಟೇ ಪ್ರವೇಶ ಎಂದು ಹೇಳಲಾಗಿದೆ. ವಾರದ ಬಳಿಕ ಅಂದರೆ, ಡಿಸೆಂಬರ್ ೨೧ರಂದು ಆಡಂಬರದ ಆರತಕ್ಷತೆ ನಡೆಯಲಿದೆ ಎಂದು ವರದಿ ಹೇಳಿದೆ.

“ಎರಡೂ ಕುಟುಂಬದ ಹಿರಿಯರು, ಮದುವೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಅದರಂತೆ ಡಿಸೆಂಬರ್ ೧೬ರಂದು ಸೈನಾ ನೆಹ್ವಾಲ್ ಮತ್ತು ಪಿ ಕಶ್ಯಪ್ ಹಸೆಮಣೆ ಏರುವುದು ಖಚಿತ,’’ ಎಂದು ಭಾವೀ ದಂಪತಿಯ ಆಪ್ತ ಮೂಲಗಳು ಖಚಿತಪಡಿಸಿವೆ ಎಂದು ಕೂಡ ಪತ್ರಿಕೆ ಹೇಳಿದೆ. ಅಂದಹಾಗೆ, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಸೈನಾ ಮತ್ತು ಕಶ್ಯಪ್ ಕಳೆದ ೨೦೦೫ರಿಂದಲೂ ತರಬೇತಿ ಪಡೆಯುತ್ತಿದ್ದಾರೆ.

ದಶಕದ ಪ್ರೇಮಯಾನ!

ಇದನ್ನೂ ಓದಿ : ‘ಓ ಮರಿಯಾ, ವಿಲ್ ಯು ಮ್ಯಾರಿ ಮೀ’ ಎಂದವನಿಗೆ ಶರಪೋವಾ ಓಕೆ ಅನ್ನೋದೇ!

ಭಾರತ ಕಂಡ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ, ಹಲವಾರು ದಾಖಲೆಗಳನ್ನು ಬರೆದ ಸೈನಾ ನೆಹ್ವಾಲ್ ಬದುಕನ್ನಾಧರಿಸಿದ ಚಲನಚಿತ್ರ ನಟಿ ಶ್ರದ್ಧಾಕಪೂರ್ ನಾಯಕತ್ವದಲ್ಲಿ ಮೂಡಿಬರುತ್ತಿದೆ. ಕಿಡಾಂಬಿ ಶ್ರೀಕಾಂತ್, ಎಚ್ ಎಸ್ ಪ್ರಣಯ್ ಮತ್ತು ಗುರುಸಾಯಿದತ್ ಜತೆಗೆ ಸೈನಾ ಮತ್ತು ಕಶ್ಯಪ್ ಗೆಳೆತನ ಸುದೀರ್ಘ ಕಾಲದಿಂದ ಇದ್ದಿತಾದರೂ, ಸೈನಾ ಮತ್ತು ಕಶ್ಯಪ್ ಪ್ರೇಮಯಾನ ಸರಿಸುಮಾರು ಒಂದು ದಶಕದಷ್ಟು ಹಳೆಯದು.

ಸೈನಾ ಮತ್ತು ಕಶ್ಯಪ್ ವೈವಾಹಿಕ ಬದುಕಿಗೆ ಕಾಲಿರಿಸುವುದರೊಂದಿಗೆ ಭಾರತದ ಕೆಲವು ಕ್ರೀಡಾಪಟುಗಳ ಸಮ್ಮಿಲನದ ಮತ್ತೊಂದು ವಿಸ್ತರಣೆಯಂತಾಗಿದೆ. ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳೀಕಲ್ ಹಾಗೂ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಕ್ರಿಕೆಟಿಗ ಇಶಾಂತ್ ಶರ್ಮಾ ಮತ್ತು ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಕಳೆದ ವರ್ಷ ವಿವಾಹವಾದರೆ, ಕುಸ್ತಿಪಟುಗಳಾದ ಗೀತಾ ಫೋಗಟ್ ಮತ್ತು ಪವನ್ ಕುಮಾರ್, ಸಾಕ್ಷಿ ಮಲಿಕ್ ಹಾಗೂ ಸತ್ಯವರ್ತ್ ಕಡಿಯಾನ್ ಹಸೆಮಣೆ ಏರಲಿದ್ದಾರೆ.

ಬ್ಯಾಡ್ಮಿಂಟನ್ ಜೋಡಿ

View this post on Instagram

Yummmyyyyyyy😋😋😋 #supercheatday

A post shared by Parupalli Kashyap (@parupallikashyap) on

ಪಿ ಕಶ್ಯಪ್ ಮತ್ತು ಸೈನಾ ನೆಹ್ವಾಲ್ ವೈವಾಹಿಕ ಬದುಕಿಗೆ ಕಾಲಿರಿಸುತ್ತಿರುವುದರೊಂದಿಗೆ ಬ್ಯಾಡ್ಮಿಂಟನ್ ಲೋಕದಲ್ಲಿ ಮತ್ತೊಂದು ಅಧ್ಯಾಯ ತೆರೆದಂತಾಗಿದೆ. ಇಂಡೋನೇಷ್ಯಾದ ಸುಸಿ ಸುಸಾಂತಿ ಮತ್ತು ಅಲನ್ ಬುಡಿಕುಸುಮಾ, ಚೀನಾದ ಲಿನ್ ಡಾನ್ ಮತ್ತು ಕ್ಸಿ ಕ್ಸಿಂಗ್‌ಫ್ಯಾಂಗ್, ಬ್ರಿಟನ್‌ನ ಕ್ರಿಸ್ ಮತ್ತು ಗ್ಯಾಬಿ ಅಡ್ಕಾಕ್, ಮಧುಮಿತಾ ಗೋಸ್ವಾಮಿ ಮತ್ತು ವಿಕ್ರಮ್ ಸಿಂಗ್ ಬಿಸ್ತ್ ಮತ್ತು ಸೈಯದ್ ಮೋದಿ ಹಾಗೂ ಅಮೀತಾ ಕುಲಕರ್ಣಿ ಕೂಡಾ ಬ್ಯಾಡ್ಮಿಂಟನ್ ಜೋಡಿಯೆನಿಸಿದ್ದಾರೆ.

೩೨ರ ಹರೆಯದ ಕಶ್ಯಪ್ ೨೦೧೩ರಲ್ಲಿ ವಿಶ್ವದ ಆರನೇ ಶ್ರೇಯಾಂಕಕ್ಕೇರಿದ್ದು ಹಾಗೂ ೨೦೧೪ರ ಕಾಮನ್ವೆಲ್ತ್ ಕೂಟದಲ್ಲಿ ಸ್ವರ್ಣ ಗೆದ್ದದ್ದು ಕಶ್ಯಪ್ ವೃತ್ತಿಬದುಕಿನ ಶ್ರೇಷ್ಠ ಸಾಧನೆ. ಇನ್ನು, ೨೦೧೫ರಲ್ಲಿ ವಿಶ್ವದ ನಂ ೧ ಸ್ಥಾನಕ್ಕೇರಿದ್ದ ಸೈನಾ, ೨೦೧೦, ೨೦೧೮ರಲ್ಲಿ ಕಾಮನ್ವೆಲ್ತ್ ಸ್ವರ್ಣ ವಿಜೇತೆ ಮಾತ್ರವಲ್ಲದೆ, ೨೦೧ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದದ್ದು ವೃತ್ತಿಬದುಕಿನ ಉತ್ಕೃಷ್ಟ ಸಾಧನೆ ಎನಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More